For Quick Alerts
  ALLOW NOTIFICATIONS  
  For Daily Alerts

  ಏನೇ ಆದ್ರೂ ಸಾಯದ 'ಮಾನವ 2022' ಆವತ್ತು ಭಯಂಕರ ಭೀತಿ ಹುಟ್ಟಿಸಿದ್ದ!

  |

  'ನಾ ನೋಡಿದ ಮೊದಲ ಸಿನ್ಮಾ' ಲೇಖನ ಸರಣಿಯ ಈ ಲೇಖನವನ್ನು ಸದಾಶಿವ ಸಕಲೇಶಪುರ ಬರೆದಿದ್ದಾರೆ. ತಾವು ಮೊದಲ ಬಾರಿಗೆ ಚಿತ್ರಮಂದಿರಲ್ಲಿ ನೋಡಿದ 'ಮಾನವ 2022' ಚಿತ್ರದ ಅನುಭವವನ್ನು ಹಂಚಿಕೊಂಡಿದ್ದಾರೆ.

  ಇವತ್ತಿಗೂ ಸಿನಿಮಾಗಳ ವಿಧಗಳಲ್ಲಿ ಹಾರರ್, ಸೈನ್ಸ್ ಫಿಕ್ಷನ್ ಮತ್ತು ಆಕ್ಷನ್ ಸಿನಿಮಾಗಳೇ ಹೆಚ್ಚು ಇಷ್ಟ. ಅದರಲ್ಲೂ ಹಾರರ್ ಸಿನಿಮಾಗಳೆಂದರೆ ಈಗಲೂ ಮನೆಮಂದಿಯೆಲ್ಲರೂ ಟೀವಿಯೋ ಇಲ್ಲ ಲ್ಯಾಪ್ಟಾಪ್ ಪರದೆಯ ಮುಂದೆ ಕುಂತುಬಿಡೋರೆ. ಅಂದ್ಹಾಗೆ ನಂಗಂತೂ ಈ ಹಾರರ್ ಸಿನಿಮಾಗಳ ಗೀಳು ಹತ್ತಿದ್ದು 'ಮಾನವ 2022' ಸಿನಿಮಾದಿಂದ.

  ಅಮ್ಮನ ನೆನಪು ತರುವ ರಾಜ್ ಸಿನಿಮಾಗಳು : 'ಪರಶುರಾಮ' ತಂದ ಜ್ವರ

  ಆಗೆಲ್ಲ ಯಾರೆಂದರೆ ಅವರ ಮನೇಲಿ ಟಿವಿ ಇದ್ದಿರಲಿಲ್ಲ. ಇದ್ದ ಆ ಬ್ಲ್ಯಾಕ್ ಆಂಡ್ ವೈಟ್ ಟೀವಿಯ ಮೂತಿ ನೋಡೋಕೂ ನಾವು ನಾಲ್ಕಾರು ಮಂದಿ ಪೋಕರಿ ಕತ್ತೆಗಳು ಸಾಹುಕಾರರ ಮನೆ ಬಾಗಿಲಿಗೆ ಜೋತು ಬೀಳುತ್ತಿದ್ದೆವು. ಆ ದಿನಗಳ ಟೀವಿ ಚಾನೆಲ್ ಎಂದರೆ ಪೆಪ್ಸಿ ಸಿಂಬಲ್ಲಿನ ರೀತಿಯಲ್ಲೇ ಬರುವ ಚಂದನ ಚಾನೆಲ್‌ನ ಸಿಂಬಲ್ಲೇ ಕಣ್ಣ ಮುಂದೆ ತಿರುತಿರುಗಿ ಬರುತ್ತೆ. ಈಗಿನಂತೆ ದಿನಕ್ಕೆ ಸಾಲು ಸಾಲು ಮೂವಿ ಕೊಡುವ ಉದಯ ಮೂವೀಸ್‌ನಂತ ಚಾನೆಲ್‌ಗಳು ಆಗ ಇಲ್ಲದ್ದರಿಂದ ಮೂವಿ ಹುಚ್ಚಿರುವವರು ಥಿಯೇಟರ್‌ ಕಡೆಗೆ ಮುಖ ಮಾಡಬೇಕಿತ್ತು. ಇಲ್ಲದಿದ್ದರೆ ಮೂವಿ ಕ್ಯಾಸೆಟ್ಟೇ ಗತಿ.

  ನಾನಾಗ ಬಹುಶಃ 2ನೇ ಕ್ಲಾಸಿನಲ್ಲಿದ್ದೆ. ನಾವು ಬೇಲೂರು ಸಮೀಪ ಗೆಂಡೇಹಳ್ಳಿ ಎಂಬ ಊರಲ್ಲಿದ್ದೆವು. ನನ್ನಪ್ಪನಿಗೆ ಮೊದಲೇ ಒಂದ್ ಹಿಡಿ ಹೆಚ್ಚೇ ಅನ್ನೋ ಹಾಗೆ ಸಿನಿಮಾ ಹುಚ್ಚು. ಹೊಸದಾಗಿ ಬಿಡುಗಡೆಯಾಗಿದ್ದ 'ಮಾನವ 2022' ಕನ್ನಡ ಮೂವಿ ನೋಡಿ ಬಂದ ಅಪ್ಪನಿಗೆ ನಮಗೂ ಅಷ್ಟೊಳ್ಳೆ ಸಿನಿಮಾವನ್ನು ತೋರಿಸದೆ ಕೂರಲಾಗಲಿಲ್ಲ. ಒಂದಿನ 'ಒಂದೊಳ್ಳೆ ಸಿನಿಮಾ ಇದೆ. ಎಲ್ಲರೂ ಹೋಗೋಣ' ಅಂದೇಬಿಟ್ಟರು. ಸರಿ, ಅದೇ ಸಿನಿಮಾ ಬೇಕೆಂದು ಚಿಕ್ಕಮಗಳೂರು ವರೆಗೂ ಥಿಯೇಟರ್ ಹುಡುಕಿಕೊಂಡು ಬಂದು ನಾವೆಲ್ಲ ಥಿಯೇಟರ್ ಒಳಗೆ ಕೂತಿದ್ದೆವು.

  ಬೆರಗುಗಣ್ಣಿನಿಂದ ಮೊದಲ ಬಾರಿ ಬೆಳ್ಳಿ ಪರದೆ ನೋಡಿದ ಕ್ಷಣ

  'ಭಯದ ಸಿನಿಮಾ' ಅಂತ ಅಪ್ಪ ಬೇರೆ ಮೊದಲೇ ಸುಳಿವು ನೀಡಿದ್ದರಿಂದ ಕುತೂಹಲದಿಂದ ಬೆಳ್ಳಿ ಪರದೆ ದಿಟ್ಟಿಸುತ್ತಿದ್ದೆ. ಸಿನಿಮಾ ಶುರುವಾಯ್ತು. ಅದರೊಳಗೆ ಸತ್ತು ಬದುಕುವ ಮನುಷ್ಯನೊಬ್ಬ ಸಿನಿಮಾದುದ್ದಕ್ಕೂ ಸಾಯದೆ ಆವತ್ತು ನಿಜಕ್ಕೂ ಭಯಂಕರ ಭೀತಿ-ಬೆರಗು ಮೂಡಿಸಿದ್ದ. 'ಈ ಹುಚ್ಚಮಂಗ್ಯಾಗಳು (ವಿಜ್ಞಾನಿಗಳು) ಯಾಕಾದ್ರೂ ಇವ್ನನ್ನ ಬದುಕಿಸಿದ್ರಪ್ಪ..' ಅಂತ ಮನಸಿನೊಳಗೆ ಅಂದುಕೊಳ್ಳುತ್ತಲೇ ಸಿನಿಮಾ ನೋಡಿ ಮುಗಿಸಿದೆ. ಅಂತೂ ಸಿನಿಮಾದ ಕೊನೆಯಲ್ಲೂ ಆ ವಿಲನ್ ಸತ್ತಂತೆ ನನಗನ್ನಿಸಲೇಯಿಲ್ಲ!

  1997ರಲ್ಲಿ ತೆರೆ ಕಂಡಿರುವ 'ಮಾನವ 2022' ಕಲ್ಪನೆಯ ಕುಸುರಿಯಲ್ಲಿರುವ ಡ್ರಾಮಾ, ಸೈನ್ಸ್ ಫಿಕ್ಷನ್ ಸಾಲಿನ ಸಿನಿಮಾ. ಭವಿಷ್ಯದ ದಿನಗಳನ್ನು ಊಹಿಸಿ 2009ರಲ್ಲಿ '2012' ಹಾಲಿವುಡ್ ಸಿನಿಮಾ ತೆರೆ ಕಂಡಿತ್ತಲ್ಲ? ಅಂತದ್ದೇ ಚಲನಚಿತ್ರವಿದು. ಸಿ ವಾಸು ನಿರ್ದೇಶಿಸಿ, ಪಿವಿ ಬಾಲಸುಬ್ರಮಣ್ಯನ್ ಮತ್ತು ಕೆಎಸ್ ಮಹಾಲಿಂಗಮ್ ನಿರ್ಮಿಸಿರುವ ಈ ಚಿತ್ರದಲ್ಲಿ ಡೈನಾಮಿಕ್ ಹೀರೋ ದೇವರಾಜ್, ವಿನೀತಾ, ಕಲ್ಯಾಣ್ ಕುಮಾರ್, ಟೆನಿಸ್ ಕೃಷ್ಣ ಮೊದಲಾದವರಿದ್ದಾರೆ.

  ಬಿಡುವಾದಾಗೊಮ್ಮೆ ನೋಡಿ, ಕಬ್ಬಿಣದ ಸರಳುಗಳು ದೇಹ ಹೊಕ್ಕು ಸತ್ತಂತೆ ಬಿದ್ದಿರುವ ಆ 'ಮಾನವ 2022', ಸಿನಿಮಾ ಇನ್ನೇನು ಮುಗೀತು ಅನ್ನುವಾಗ ಚಕ್ಕನೆ ಕಣ್ಣುಬಿಡುವ ಕಡೇ ದೃಶ್ಯವಂತೂ ನಿಮ್ಮನ್ನು ಖಂಡಿತಾ ಕೊಂಚ ದಿನಗಳ ಕಾಲ ಕಾಡಿಸೀತು.

  English summary
  What is the first Kannada movie watched? Sadahiva Sakaleshapura has written that his first Kannada cinema was Manava 2022. the movie starring Devaraj.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X