»   » ಗಣೇಶ್ ಅಗ್ನಿಪರೀಕ್ಷೆಯ 'ರೋಮಿಯೋ' ಬಿಡುಗಡೆ

ಗಣೇಶ್ ಅಗ್ನಿಪರೀಕ್ಷೆಯ 'ರೋಮಿಯೋ' ಬಿಡುಗಡೆ

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ರೋಮಿಯೋ' ಚಿತ್ರ ಇಂದು (ಜುಲೈ 06, 2012) ಕರ್ನಾಟಕ ರಾಜ್ಯಾದ್ಯಂತ, ಬೆಂಗಳೂರಿನಲ್ಲಿ 25 ಚಿತ್ರಮಂದಿರಗಳೂ ಸೇರಿ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿವೆ. ಇಷ್ಟೇ ಅಲ್ಲ, ಅಮೆರಿಕಾದಲ್ಲಿ 3 ಚಿತ್ರಮಂದಿರಗಳಲ್ಲಿ ಕೂಡ ರೋಮಿಯೋ ಬಿಡುಗಡೆ ಕಂಡಿದೆ. ಗೋಲ್ಡನ್ ಸ್ಟಾರ್ ಗಣೇಶ್ ಪರೀಕ್ಷೆ ಬರೆದು ಮುಗಿಸಿ ರಿಸಲ್ಟ್ ಗೆ ಕಾಯುತ್ತಿರುವ ವಿದ್ಯಾರ್ಥಿಯಂತಾಗಿದ್ದಾರೆ.

ಕಾರಣ, ಇತ್ತೀಚಿನ ಗಣೇಶ್ ಚಿತ್ರಗಳು ಸಾಲಾಗಿ ಸೋತು ಸುಣ್ಣವಾಗಿರುವುದರಿಂದ ಸಹಜವಾಗಿಯೇ ಈ ಚಿತ್ರ ಗಣೇಶ್ ಹಣೆಬರಹ ಬರೆಯುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇಡೀ ಗಾಂಧಿನಗರ, ಸಿನಿಪ್ರೇಕ್ಷಕವರ್ಗ ಹಾಗೂ ಗಣೇಶ್ ಅಭಿಮಾನಿಗಳು ತೀವ್ರ ಕುತೂಹಲದಿಂದ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಈ ಚಿತ್ರ ಗೆಲ್ಲಲೇಬೇಕಾದ ಅನಿವಾರ್ಯತೆ ಗಣೇಶ್ ಪಾಲಿಗೆ ಎದುರಾಗಿದೆ.

ಗಣೇಶ್ ಅಭಿಮಾನಿಗಳಂತೂ ಈ ಚಿತ್ರದ ಯಶಸಸ್ಸಿಗಾಗಿ ದೇವರಿಗೆ ಮೊರೆ ಹೋಗಿದ್ದಾರಂತೆ. ಈ ಮೊದಲು ತೆರೆಗೆ ಬಂದಿದ್ದ ಮದುವೆ ಮನೆ, ಶೈಲೂ, ಹಾಗೂ ಮುಂಜಾನೆ ಚಿತ್ರಗಳು ಅದಕ್ಕೂ ಮೊದಲು ಬಂದಿದ್ದ ಗಣೇಶ್ ಚಿತ್ರಗಳಂತೆ ಸೋಲಿನ ದಾರಿ ಹಿಡಿದು ಗಣೇಶ್ ಅವರಿಗೆ ನಿರಾಸೆ ಮೂಡಿಸಿವೆ. ಮಳೆಯಲಿ ಜೊತೆಯಲಿ ನಂತರ ಗಣೇಶ್ ಪಾಲಿಗೆ ದಕ್ಕಿದ್ದು ಕೇವಲ ಸೋಲೊಂದೇ.

ಇವೆಲ್ಲಾ ಕಾರಣಗಳಿಂದ ಇಂದು ಬಿಡುಗಡೆಯಾಗಿರುವ ರೋಮಿಯೋ ಚಿತ್ರ ಗಣೇಶ್ ಪಾಲಿಗೆ ಅಗ್ನಿಪರೀಕ್ಷೆ ಎನ್ನಬಹುದು. ಎಸ್ ನಾರಾಯಣ್ ನಿರ್ಮಾಣ ಹಾಗೂ ನಿರ್ದೇಶನದ ಶೈಲೂ ಚಿತ್ರ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಪ್ರಶಂಸೆ ಪಡೆದಿತ್ತಾದರೂ ಅದು ಗಣೇಶ್ ನಟನೆಗೆ ಮಾತ್ರ ಬಂದ ಪ್ರಶಂಸೆ ಎಂಬಂತಾಗಿತ್ತು. ಆದರೆ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು.

ಪಿಸಿ ಶೇಖರ್ ನಿರ್ದೇಶನದ ರೋಮಿಯೋ ಚಿತ್ರಕ್ಕೆ ಜಾಕಿ ಖ್ಯಾತಿಯ ಭಾವನಾ ನಾಯಕಿ. ಕೆ.ಎಸ್.ಪಿಕ್ಚರ್ಸ್ ಲಾಂಛನದಲ್ಲಿ ನವೀನ್ (ನಾಯಕ) ಹಾಗೂ ರಮೇಶ್ ಕುಮಾರ್ ನಿರ್ಮಿಸಿರುವ ಚಿತ್ರ 'ರೋಮಿಯೋ'. ಚಿತ್ರದ ಪಾತ್ರವರ್ಗದಲ್ಲಿ ಅವಿನಾಶ್, ರಂಗಾಯಣ ರಘು, ಸುಧಾ ಬೆಳವಾಡಿ, ಸಾಧುಕೋಕಿಲಾ, ರಮೇಶ್ ಭಟ್, ಮಿತ್ರ, ವಿಶ್ವ, ಗಿರೀಶ್, ಮುಂತಾದ ಕಲಾವಿದರು ಅಭಿನಯಿಸಿದ್ದಾರೆ.

ಪಿ.ಸಿ.ಶೇಖರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ನಟರಾಜ್ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವೈದಿ ಅವರ ಛಾಯಾಗ್ರಹಣ, ಸರವಣನ್ ಸಂಕಲನ, ಬಾಬಾ ಭಾಸ್ಕರ್ ಹಾಗೂ ಲಕ್ಷ್ಮೀ ನೃತ್ಯ ನಿರ್ದೇಶನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಗುಣ ಅವರ ಕಲಾ ವಿನ್ಯಾಸ ಈ ಚಿತ್ರಕ್ಕಿದೆ.

ಒಟ್ಟಿನಲ್ಲಿ, ಇಂದು ಬಿಡುಗಡೆಯಾಗಿರುವ ರೋಮಿಯೋ ಚಿತ್ರ ಕನ್ನಡ ಚಿತ್ರರಂಗದ 'ಒಂದುಕಾಲದ ಗೋಲ್ಡನ್ ಸ್ಟಾರ್' ಗಣೇಶ್ ಅವರ ಹಣೆಬರಹ ನಿರ್ಧರಿಸುವ ಚಿತ್ರವಾಗಲಿದೆ ಎನ್ನಬಹುದು. ಗಣೇಶ್ ಹಾರ್ಟ್ ಬೀಟ್ ಗೆ ಪ್ರೇಕ್ಷಕರು ಸ್ಪಂದಿಸಲಿದ್ದಾರೆಯೇ ಎಂಬುದೊಂದೇ ಸದ್ಯಕ್ಕಿರುವ ಪ್ರಶ್ನೆ! ಇನ್ನೇನು ಕೆಲವೇ ಗಂಟೆಗಳಲ್ಲಿ ನಮ್ಮ 'ಒನ್ ಇಂಡಿಯಾ ಕನ್ನಡ'ದ ಚಿತ್ರವಿಮರ್ಶೆ ಬರಲಿದೆ, ಓದಿ... (ಒನ್ ಇಂಡಿಯಾ ಕನ್ನಡ)

English summary
Golden Star Ganesh movie 'Romeo' released on 06 July 2012, more than 100 theaters all over Karnataka including 25 in Bangalore. Jackie fame Bhavana is the fair for Ganesh in this movie. This movie created lots of expectation because, Ganesh recent all movies are flopped in Box-office. 
 
Please Wait while comments are loading...