Don't Miss!
- News
ಬಿಬಿಎಂಪಿಯಿಂದ ಫೆಬ್ರುವರಿ. 2 ರಿಂದ 5 ರವರೆಗೆ 'ಖಾತಾ ಮೇಳ' ಆಯೋಜನೆ
- Lifestyle
ಈ ಚಿಕ್ಕ ಬದಲಾವಣೆ ಮಾಡಿದರೆ ಸಾಕು ತೂಕ ಕಡಿಮೆಯಾಗುವುದು
- Sports
ಟೆಸ್ಟ್ ಕ್ರಿಕೆಟ್ನಲ್ಲಿ ಈತನಿಗೆ ಅವಕಾಶ ಸಿಕ್ಕರೆ ಶತಕ, ದ್ವಿಶತಕ ಬಾರಿಸುತ್ತಾನೆ; ಸುರೇಶ್ ರೈನಾ
- Technology
WhatsApp: ವಾಟ್ಸಾಪ್ ಮ್ಯಾಕ್ಒಎಸ್ MacOS ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಗೋಲ್ ಮಾಲ್ ವಿಮರ್ಶೆ: ಗೋಲು ಡೀಲುಗಳ ನಡುವಿನ ಸವಾಲ್
ಚಿತ್ರ:
ಗೋಲ್
ಮಾಲ್
ತಾರಾಗಣ:
ಪೃಥ್ವಿ
ಅಂಬರ್,
ಶ್ರೇಯಾ
ಅಂಚನ್,
ನವೀನ್
ಡಿ
ಪಡೀಲ್
,
ಇಳಾ
ವಿಟ್ಲ,
ಸಾಯಿಕುಮಾರ್
ನಿರ್ದೇಶನ:
ರಮಾನಂದ
ನಾಯಕ್
ನಿರ್ಮಾಣ:
ಮಂಜುನಾಥ್
ನಾಯಕ್,
ಅಕ್ಷಯ್
ಪ್ರಭು
ತುಳು ಸಿನಿಮಾರಂಗದಲ್ಲಿ ಒಂದು ಸಿನಿಮಾ ಬಜೆಟ್ ಒಂದುಕೋಟಿ ತಲುಪುವುದು ತೀರ ಅಪರೂಪ. ಅಂಥದರಲ್ಲಿ ಒಂದೂವರೆ ಕೋಟಿ ವೆಚ್ಚದಲ್ಲಿ ತಯಾರಾದ ಚಿತ್ರ ಎನ್ನುವ ಕಾರಣದಿಂದಲೇ ಗಮನ ಸೆಳೆದ ಚಿತ್ರ 'ಗೋಲ್ ಮಾಲ್'. ಅದರಲ್ಲೂ ಕನ್ನಡದಲ್ಲಿ ಜನಪ್ರಿಯತೆ ಹೊಂದಿರುವ ಒಂದಷ್ಟು ಕಲಾವಿದರು ಕೂಡ ಈ ಚಿತ್ರದಲ್ಲಿರುವ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಮಾಡಿತ್ತು. ಇದೀಗ ಚಿತ್ರ ತೆರೆಕಂಡಿದ್ದು ಕರಾವಳಿಯಾದ್ಯಂತ ಉತ್ತಮ ಓಪನಿಂಗ್ ಪಡೆದುಕೊಂಡಿದೆ.
ತುಳುವಿನಲ್ಲೂ
ಬಂದಿದೆ
'ಗೋಲ್
ಮಾಲ್'
ಸಿನಿಮಾ
ಕತೆಯನ್ನು ವಿಶ್ಲೇಷಿಸುವುದಾದರೆ ಇದು ಮಕ್ಕಳ ಅಪಹರಣ ಮತ್ತು ಅದರ ಹಿಂದಿನ ಗೂಢಾಲೋಚನೆಗಳು ಏನು ಎನ್ನುವುದರ ಕುರಿತಾದ ವಿಚಾರ. ಆದರೆ ಅಷ್ಟು ಗಂಭೀರವಾದ ವಿಚಾರ ಆಗಿದ್ದರೂ ಎಲ್ಲ ತುಳು ಸಿನಿಮಾಗಳಂತೆ ಹಾಸ್ಯದ ಜೊತೆಯಲ್ಲೇ ಸಾಗುವಂತೆ ಚಿತ್ರಕತೆ ಹೆಣೆಯಲಾಗಿದೆ. ಮಧ್ಯಂತರ ಮತ್ತು ಕ್ಲೈಮ್ಯಾಕ್ಸ್ ನಲ್ಲಿನ ಎರಡು ಪ್ರಮುಖ ತಿರುವುಗಳು ಕತೆಯಲ್ಲಿ ಕುತೂಹಲದ ಅಂಶವನ್ನು ಮೂಡಿಸುವಲ್ಲಿ ಯಶಸ್ವಿಯಾಗಿವೆ. ಅಪಹರಣದ ಡೀಲ್ ಮತ್ತು ಅವನ್ನು ಭೇದಿಸುವ ನಾಯಕ ಗೋಲ್ ಮಧ್ಯೆ ಗೋಲ್ ಮಾಲ್ ಕತೆ ನಡೆಯುತ್ತದೆ.
ನಾಯಕನಾಗಿ ಕನ್ನಡ ಸಿನಿಮಾ, ಧಾರಾವಾಹಿಗಳಲ್ಲಿ ಗುರುತಿಸಿಕೊಂಡಿರುವ ಯುವನಟ ಪೃಥ್ವಿ ಅಂಬಾರ್ ಈ ಚಿತ್ರದ ನಾಯಕ. ಪೃಥ್ವಿ ಎನ್ನುವ ಹೆಸರಿನ ಪೊಲೀಸ್ ಅಧಿಕಾರಿಯಾಗಿದ್ದುಕೊಂಡು ಸಮಸ್ಯೆ ಇರುವ ಊರಲ್ಲೇ ಬಂದು ಗುಪ್ತವಾಗಿ ತನಿಖೆ ನಡೆಸುತ್ತಾನೆ. ಅವರ ನಟನೆಯಲ್ಲಿ ತಮಿಳಿನ ವಿಕ್ರಮ್, ಕನ್ನಡದ ಸುದೀಪ್ ಶೈಲಿ ಎದ್ದು ಕಾಣುತ್ತದೆ. ಸಹಜ ನಟನೆಯಿಂದ ಲೀಲಾಜಾಲವಾಗಿ ಸೆಳೆಯುವಂತೆ, ಹೊಡೆದಾಟ ಮತ್ತು ರೋಪ್ ಇಲ್ಲದೆ ಹಾರಿರುವ ಸಾಹಸ ದೃಶ್ಯಗಳಿಂದಲೂ ಅಚ್ಚರಿ ಮೂಡಿಸುತ್ತಾರೆ. ಪ್ರಕರಣ ನಡೆಯುವ ಮುತ್ತುಪ್ಪಾಡಿಯ ಶಾಸಕನಾಗಿ 'ಕುಸೇಲ್ದರಸೆ' ಖ್ಯಾತಿಯ ನವೀನ್ ಡಿ ಪಡೀಲ್ ನಟಿಸಿದ್ದಾರೆ. ಹೆಚ್ಚಿನ ದೃಶ್ಯಗಳಲ್ಲಿ ಒಂದೇ ಕಡೆ ಕುಳಿತು, ಒಂದೇ ಭಾವದಲ್ಲಿ ಕಾಣಿಸಿಕೊಂಡರೂ, ಫ್ಲ್ಯಾಶ್ ಬ್ಯಾಕ್ ಸನ್ನಿವೇಶವೊಂದರಲ್ಲಿ ಮನಮುಟ್ಟುವ ಅಭಿನಯ ನೀಡಿದ್ದಾರೆ. ಆ ದೃಶ್ಯದಲ್ಲಿ ಅವರ ತಂಗಿಯಾಗಿ ಕಿರುತೆರೆಯ ಖ್ಯಾತ ತಾರೆ ಇಳಾ ವಿಟ್ಲ ನಟಿಸಿದ್ದಾರೆ. ಆಕೆ ಪರದೆಯ ಮೇಲೆ ಕಾಣಿಸಿಕೊಳ್ಳುವ ಕಾಲಾವಧಿ ಕಡಿಮೆ ಆದರೂ ಕತೆಯ ಪ್ರಧಾನ ಪಾತ್ರಧಾರಿ ಆಕೆ ಎನ್ನುವುದನ್ನು ಚಿತ್ರದ ಅಂತ್ಯ ತಿಳಿಸುತ್ತದೆ. ಸಿನಿಮಾದಲ್ಲಿ ನಾಯಕನ ಸ್ನೇಹಿತೆಯಾಗಿ ಜೊತೆಯಾಗುವ ಎಂಎಲ್ ಎ ಮಗಳು ನಿಖಿತಾ ಪಾತ್ರದಲ್ಲಿ ಶ್ರೇಯಾ ಅಂಚನ್ ಕಾಣಿಸಿಕೊಂಡಿದ್ದಾರೆ. ಶಾಲಾ ಅಧ್ಯಾಪಿಕೆಯ ಈ ಪಾತ್ರಕ್ಕೂ ಅಮವಾಸ್ಯೆಯಂದು ಕಾಣೆಯಾಗುವ ಮಕ್ಕಳಿಗೂ ಸಂಬಂಧ ಹುಡುಕುತ್ತಾನೆ ಪೃಥ್ವಿ. ಆತನಿಂದ ತನಿಖೆಯ ಮಾಹಿತಿ ಪಡೆಯುವ ಮೇಲಾಧಿಕಾರಿಯಾಗಿ ಡೈಲಾಗ್ ಕಿಂಗ್ ಸಾಯಿಕುಮಾರ್ ನಟಿಸಿದ್ದಾರೆ. ವಿಶೇಷ ಎಂದರೆ ಇಬ್ಬರು ಪೊಲೀಸ್ ಅಧಿಕಾರಿಗಳು ಕೂಡ ಯುನಿಫಾರ್ಮ್ ನಲ್ಲಿ ಎಲ್ಲಿಯೂ ಕಾಣಿಸುವುದಿಲ್ಲ. ಆದರೆ ಸತೀಶ್ ಬಂಡಲೆ ಪೊಲೀಸ್ ಅಧಿಕಾರಿಯಾಗಿ ಪ್ರತ್ಯಕ್ಷವಾಗುತ್ತಾರೆ. ಆತ ಪ್ರತಿಬಾರಿ ಎಂಟ್ರಿ ಕೊಟ್ಟಾಗಲೂ ಅವರಿಂದ ಏಟು ತಿನ್ನುವ ಕಳ್ಳರಾಗಿ ಭೋಜರಾಜ್ ವಾಮಂಜೂರು ಮತ್ತು ಅರವಿಂದ್ ಬೋಳಾರ್ ಕಾಣಿಸಿಕೊಂಡಿದ್ದು ನಗು ತರಿಸುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ ಹಾಸ್ಯಕ್ಕೆಂದೇ ಬಳಸಲಾದ ಟ್ರ್ಯಾಕ್ ಒಂದರಲ್ಲಿ ಮಂಗಳೂರು ಮೂಲದ ಮುಂಬೈ ನಟಿ, ಆಕೆಯ ತಾಯಿ ಮೊದಲಾದ ಪಾತ್ರಗಳ ಮೂಲಕ ತೋರಿಸಿರುವ ಪ್ರತಿ ದೃಶ್ಯಗಳಲ್ಲಿಯೂ ದ್ವಯಾರ್ಥದ ಹಾಸ್ಯ ಇರುವುದು ಅಕ್ಷಮ್ಯ. ಆದರೆ ಇವೆಲ್ಲದರ ನಡುವೆಯೂ ಹಾಸ್ಯವನ್ನು ಕೂಡ ಗಂಭೀರವಾಗಿ ತಲುಪಿಸುವ ಯತ್ನದಲ್ಲಿ ಸುನೀಲ್ ನೆಲ್ಲಿಗುಡ್ಡೆ ನಿರ್ವಹಿಸಿರುವ ತಲ್ವಾರ್ ವಾಸು ನಟನೆ ಪ್ರಶಂಸಾರ್ಹ.
ಸರಣಿ ಅಪಹರಣಗೊಳ್ಳುವ ಮಕ್ಕಳ ನಡುವೆ ಡ್ರಾಮ ಜ್ಯೂನಿಯರ್ಸ್ ಖ್ಯಾತಿಯ ಚಿತ್ರಾಲಿ ನಿರ್ವಹಿಸಿರುವ ಪಾತ್ರ ಕೂಡ ಕಿಡ್ನಾಪ್ ಆದಾಗ ಕತೆ ತೀವ್ರ ಗಂಭೀರತೆ ಪಡೆದುಕೊಳ್ಳುತ್ತದೆ. ಅದಕ್ಕೆ ಚಿತ್ರಾಲಿ ಮತ್ತು ಆಕೆಯ ತಾಯಿಯ ಪಾತ್ರಕ್ಕೆ ಜೀವ ನೀಡಿರುವ ರೂಪ ಶ್ರೀ ವರ್ಕಾಡಿ ಕಾರಣ ಎಂದು ಧೈರ್ಯವಾಗಿ ಹೇಳಬಹುದು.

ಚಿತ್ರದ ಛಾಯಾಗ್ರಹಣ ಮತ್ತು ಸಂಗೀತ ಕೂಡ ಮೆಚ್ಚಬೇಕಾದ ಅಂಶ. 'ಅನಂತು ವರ್ಸಸ್ ನುಸ್ರತ್' ಖ್ಯಾತಿಯ ಸಂಗೀತ ನಿರ್ದೇಶಕ ಸುನಾದ್ ಗೌತಮ್ ಸಂಗೀತದಲ್ಲಿ 'ದಿನಲಾ..'ಹಾಡು ಸಂಯೋಜನೆ ತಲೆದೂಗುವಂತಿದೆ. ಛಾಯಾಗ್ರಹಣ ಕೂಡ ಸುನಾದ್ ರದ್ದೇ ಎನ್ನುವುದು ವಿಶೇಷ. ಒಟ್ಟಿನಲ್ಲಿ ತುಳುಚಿತ್ರರಂಗದಲ್ಲಿ ಕಾಣಿಸುತ್ತಿರುವ ಬದಲಾವಣೆಯ ದಾರಿಯಲ್ಲಿ ಒಂದು ಸಣ್ಣ ಮೈಲುಗಲ್ಲಾಗಿ ಈ ಚಿತ್ರವನ್ನು ಕೂಡ ಗುರುತಿಸಬಹುದಾಗಿದೆ.