ಪನ್ನಗಾಭರಣರ 'ಹ್ಯಾಪಿ ನ್ಯೂ ಇಯರ್' ಸೆಕೆಂಡ್ ಹಾಫ್ ಕಂಪ್ಲೀಟ್
ಪನ್ನಗಾಭರಣ ಚೊಚ್ಚಲ ನಿರ್ದೇಶನದ 'ಹ್ಯಾಪಿ ನ್ಯೂ ಇಯರ್' ಚಿತ್ರದ ಎರಡನೇ ಹಂತದ ಶೂಟಿಂಗ್ ಮುಕ್ತಾಯವಾಗಿದೆ. ಈ ಚಿತ್ರದ ಮೂಲಕ ಸೃಷ್ಟಿ ಪಾಟೀಲ್ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಿದ್ದು, ಬಹು ತಾರಾಗಣ ಈ ಚಿತ್ರದಲ್ಲಿದೆ.
ಸೌಮ್ಯ ಫಿಲ್ಮ್ಸ್ ಲಾಂಛನದಲ್ಲಿ ಮೂಡಿ ಬರುತ್ತಿರುವ, ವನಜ ಪಾಟೀಲ್ ನಿರ್ಮಾಣದ ಚಿತ್ರ 'ಹ್ಯಾಪಿ ನ್ಯೂ ಇಯರ್' ಇದೀಗ ಬೆಂಗಳೂರಿನಲ್ಲಿ, ಎರಡನೇ ಹಂತದ ಚಿತ್ರೀಕರಣವನ್ನು ಸಂಪೂರ್ಣಗೊಳಿಸಿದೆ.
ಈ ಚಿತ್ರದ ಮೂಲಕ ಹಿರಿಯ ನಟ ಕಮ್ ನಿರ್ಮಾಪಕ ಬಿ.ಸಿ ಪಾಟೀಲ್ ಅವರ ಮಗಳು ಸೃಷ್ಟಿ ಪಾಟೀಲ್ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.['ಈ' ಚೆಲುವೆ ಯಾರೂಂತ ನೀವು ಗುರುತಿಸಿ ಹೇಳಬಲ್ಲಿರಾ?]

ಜೊತೆಗೆ ಪನ್ನಗಾಭರಣ ಅವರು ಕೂಡ ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಹೊರ ಹೊಮ್ಮುತ್ತಿದ್ದಾರೆ. ಇನ್ನು 'ಹ್ಯಾಪಿ ನ್ಯೂ ಇಯರ್' ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಹಿರೇಕೆರೂರಿನ ಸುತ್ತ-ಮುತ್ತ ಚಿತ್ರೀಕರಣ ಮಾಡಲಾಗಿದೆ.
ಪನ್ನಗಾಭರಣರ ಪ್ರಕಾರ ಜೀವನ ಎಂಬುದು ಒಂದು ನಿರಂತರ ಪಯಣ. ಬದುಕಿನ ಪ್ರತಿ ಕ್ಷಣವೂ ನಮ್ಮ ಜೀವನದ ಗತಿಯನ್ನು ನಿರ್ಧರಿಸುತ್ತದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಮುಖವಾಡ ಧರಿಸಿ ಬದುಕುವುದೇ ಹೆಚ್ಚು. ಈ ಚಿತ್ರ ಕೂಡ ಇದೇ ಕಥಾಹಂದರವನ್ನು ಹೊಂದಿದ್ದು, ಅಂತಹ ಐದು ವ್ಯಕ್ತಿಗಳ ಚಿತ್ರಣವನ್ನು ಇಲ್ಲಿ ತೋರಿಸಲಾಗಿದೆ.[ಸ್ಯಾಂಡಲ್ ವುಡ್ ನಲ್ಲಿ ಮತ್ತೆ 'ಕೌರವ'ನ ಆರ್ಭಟ ಶುರು]

ಇದೊಂದು ಹಾಸ್ಯ ಸನ್ನಿವೇಶಗಳ ಮೂಲಕವೇ ಸಂಪೂರ್ಣ ಮನರಂಜನೆ ನೀಡುವ ಚಿತ್ರ ಜೊತೆಗೆ ಬಹು ತಾರಗಣದ ಚಿತ್ರ ಕೂಡ ಆಗಿದೆ.
ನಟ ವಿಜಯ ರಾಘವೇಂದ್ರ, ದೂದ್ ಪೇಡಾ ದಿಗಂತ್, ಧನಂಜಯ್, ಬಿ.ಸಿ ಪಾಟೀಲ್, ಸಾಯಿಕುಮಾರ್, ಶ್ರುತಿ ಹರಿಹರನ್, ಸೋನು ಗೌಡ, ಸುಧಾರಾಣಿ, ಸೃಷ್ಟಿ ಪಾಟೀಲ್, ಮಾಳವಿಕಾ ಅವಿನಾಶ್, ರಾಕ್ ಲೈನ್ ವೆಂಕಟೇಶ್, ಕಡ್ಡಿಪುಡಿ ಚಂದ್ರು, ತಬಲಾ ನಾಣಿ, ರಾಜು ತಾಳಿಕೋಟೆ, ರಾಜಶ್ರೀ ಪೊನ್ನಪ್ಪ, ಮಾರ್ಗರೀಟ ಮುಂತಾದವರ ಬಹು ತಾರಾಗಣ ಈ ಚಿತ್ರಕ್ಕಿದೆ.

ಶ್ರೀಶ ಕೂದುವಳ್ಳಿ ಛಾಯಾಗ್ರಹಣ, ರಘು ದೀಕ್ಷಿತ್ ಅವರ ಸಂಗೀತ, ಪನ್ನಗ ಭರಣ ಅವರಿಗೆ ಚಿತ್ರ ಕಥೆ 'ಹ್ಯಾಪಿ ನ್ಯೂ ಇಯರ್' ಚಿತ್ರಕ್ಕಿದೆ. ಇನ್ನು ಚಿತ್ರಕ್ಕೆ ಸಂಭಾಷಣೆಯನ್ನು ಸಿಂಪಲ್ ಸುನಿ, ಪ್ರತಿಭಾ ನಂದಕುಮಾರ್, ಸತ್ಯಪ್ರಕಾಶ್, ಆದಿ ಶಂಕರ್ ಹಾಗೂ ಅವಿನಾಶ್ ಬಲೆಕ್ಕಳ ಬರೆದಿದ್ದಾರೆ.


Click it and Unblock the Notifications











