»   » ಬಾಬುವಿನಿಂದ 25 ಕೋಟಿ ರು. ಕೇಳಿದ್ದ ಹೇಮಶ್ರೀ

ಬಾಬುವಿನಿಂದ 25 ಕೋಟಿ ರು. ಕೇಳಿದ್ದ ಹೇಮಶ್ರೀ

Posted By:
Subscribe to Filmibeat Kannada
ಕಿರುತೆರೆ ನಟಿ ಹೇಮಶ್ರೀ ಸಾವಿಗೀಡಾಗಿದ್ದು ಆಕೆಯ ಗಂಡ ಸುರೇಂದ್ರ ಬಾಬು ಅವರು ನೀಡಿದ್ದ ಕ್ಲೋರೋಫಾರಂನ ಓವರ್‌ಡೋಸ್‌ನಿಂದ ಎಂದು ವರದಿ ಬಂದ ಮೇಲೆ ಮತ್ತೊಂದು ವಿಷಯ ಬಹಿರಂಗಗೊಂಡಿದೆ. ಅದೇನೆಂದರೆ, ಮದುವೆಯಿಂದ ಅತೃಪ್ತಗೊಂಡಿದ್ದ ಹೇಮಶ್ರೀ ಗಂಡನಿಂದ ವಿಚ್ಛೇದನ ಬಯಸಿ ಆತನಿಂದ 25 ಕೋಟಿ ರು. ಪರಿಹಾರ ಧನ ಕೊಡಿಸಬೇಕೆಂದು ಕೋರ್ಟನ್ನು ಆಗ್ರಹಿಸಿದ್ದರು.

ಅವರು ತಮ್ಮ ವಕೀಲ ಎಂ.ಟಿ.ನಾಣಯ್ಯ ಅವರ ಮುಖಾಂತರ ಪತಿ ಸುರೇಂದ್ರ ಬಾಬು ಅವರಿಗೆ ನೋಟೀಸ್ ಕಳಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. 2012ರ ಮಾರ್ಚ್ 27ರಂದು ಕಳುಹಿಸಲಾಗಿದ್ದ ನೋಟೀಸಿನಲ್ಲಿ, ತಮಗೆ ಸುರೇಂದ್ರ ಬಾಬುವಿನಿಂದ ವಿಚ್ಛೇದನ ಮಾತ್ರವಲ್ಲ, ಅವರಿಂದ ಪರಿಹಾರ ಧನ ಕೂಡ ಕೊಡಿಸಬೇಕೆಂದು ಆಗ್ರಹಿಸಿದ್ದರು.

ಆ ನೋಟೀಸಿನಲ್ಲಿ, "ಪತಿ ಸುರೇಂದ್ರ ಬಾಬು ಅವರು ವಿಪರೀತ ಕಿರುಕುಳ ನೀಡುತ್ತಿದ್ದಾರೆ. ಅವರು ಮದುವೆಯ ಸಮಯದಲ್ಲಿ ತಮ್ಮ ವಯಸ್ಸನ್ನೂ ಮುಚ್ಚಿಟ್ಟಿದ್ದರು. ಇದರಿಂದ ನನಗೆ ತುಂಬಾ ಬೇಸರವಾಗಿದೆ. ನೊಂದು ನಾನು ಆತ್ಮಹತ್ಯೆಗೆ ಕೂಡ ಯತ್ನಿಸಿದ್ದೆ. ಮದುವೆಯ ನಂತರ ನಾನು ಕಷ್ಟಪಟ್ಟು ದುಡಿದು ಸಂಪಾದಿಸಿದ್ದ 30 ಲಕ್ಷ ರು. ಮೌಲ್ಯದ ಬಂಗಾರದ ಒಡವೆಗಳನ್ನು ಕೂಡ ಅವರು ಕಸಿದುಕೊಂಡಿದ್ದಾರೆ" ಎಂದು ನೋಟೀಸಿನಲ್ಲಿ ತಿಳಿಸಿದ್ದರು.

ತನ್ನ ಒಡವೆಗಳನ್ನು ಮತ್ತು ಪರಿಹಾರ ಧನವಾಗಿ, ಮುಂದಿನ ಜೀವನಾಧಾರಕ್ಕೆ 25 ಕೋಟಿ ರು. ಸುರೇಂದ್ರ ಬಾಬು ನೀಡಬೇಕೆಂದು ಅವರು ನೋಟೀಸಿನಲ್ಲಿ ತಿಳಿಸಿದ್ದರು. ಅದರಲ್ಲಿ ಸುರೇಂದ್ರ ಬಾಬು ಅವರು ವಯಸ್ಸು ಮರೆಮಾಚಿ ತಮಗೆ ಮಾಡಿದ ವಂಚನೆ, ಮದುವೆಯಾದಂದಿನಿಂದ ನೀಡಿದ ಕಿರುಕುಳದ ಬಗ್ಗೆ ಪ್ರಸ್ತಾಪಿಸಿದ್ದಾರೆ. ತಮ್ಮ ಸ್ನೇಹಿತನೊಡನೆ ನಡೆಸಿದ ದೂರವಾಣಿ ಮಾತುಕತೆಯಲ್ಲಿ ಕೂಡ ತಮ್ಮ ಪ್ರವರವನ್ನು ಹೇಮಶ್ರೀ ಹೇಳಿಕೊಂಡಿದ್ದರು.

ಹೇಮಶ್ರೀ ಮತ್ತು ಜೆಡಿಎಸ್ ಮುಖಂಡ ಸುರೇಂದ್ರ ಬಾಬು ಅವರು ತಿರುಪತಿಯಲ್ಲಿ 2011ರ ಜೂನ್ 11ರಂದು ಸಾಂಪ್ರದಾಯಿಕವಾಗಿ ವಿವಾಹವಾಗಿದ್ದರು. ಮದುವೆಯಾದ ಮರುದಿನವೇ ತನ್ನ ಗಂಡನ ವಿರುದ್ಧ ಹೇಮಶ್ರೀ ಪೊಲೀಸರಿಗೆ ದೂರು ನೀಡಿದ್ದರು. ಸುಮಾರು ಒಂದು ವರ್ಷಗಳ ಕಾಲ ಜಟಾಪಟಿ ನಡೆದೇ ಇತ್ತು. ನಂತರ 2012ರ ಅಕ್ಟೋಬರ್ 9ರಂದು ಅನಂತಪುರದ ರೆಸಾರ್ಟಿನಲ್ಲಿ ಅವರಿಗೆ ಅಧಿಕವಾಗಿ ಕ್ಲೋರೋಫಾರಂ ನೀಡಿದ್ದರಿಂದ ಅವರು ಸಾವಿಗೀಡಾಗಿದ್ದರು.

English summary
Small screen actress Hemashree had sought alimony of Rs. 25 crores from her husband Surendra Babu and also annul their marriage, in a notice sent to Surendra Babu through her lawyers. She died on 9th October 2012 due to over-dosage of chloroform administered by her husband.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada