For Quick Alerts
  ALLOW NOTIFICATIONS  
  For Daily Alerts

  ಮತ್ತೆ ಬಂದ ಹುಚ್ಚ ವೆಂಕಟ್: ಬದಲಾಗಿದ್ದೀನಿ ಎಂದ ನಟ

  |

  ಹುಚ್ಚ ವೆಂಕಟ್ ಮತ್ತೆ ಬಂದಿದ್ದಾರೆ. ಎಲ್ಲೆಲ್ಲೋ ಹೋಗಿ, ಜನರಿಂದ ಏಟು ತಿಂದು, ಪೊಲೀಸರ ಅತಿಥಿಯಾಗಿ ಏನೇನೋ ರಂಪ ಮಾಡಿಕೊಂಡಿದ್ದ ಹುಚ್ಚ ವೆಂಕಟ್ ಇದ್ದಕ್ಕಿದ್ದಂತೆ ಮಾಧ್ಯಮಗಳಿಂದ ಮರೆಯಾಗಿದ್ದರು. ಈಗ ಅಚಾನಕ್ಕಾಗಿ ಪ್ರತ್ಯಕ್ಷವಾಗಿದ್ದಾರೆ.

  ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಹುಚ್ಚ ವೆಂಕಟ್ ತಮ್ಮ ತಂದೆಯವರು ಕಾಲವಾದ ವಿಚಾರವನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡರು.

  ''ನಾನು ಬದಲಾಗಿದ್ದೇನೆ'' ಎಂದ ಹುಚ್ಚ ವೆಂಕಟ್ ತಂದೆಯವರ ಆಸೆಯಂತೆ ಸಿನಿಮಾಗಳನ್ನು ಮಾಡಿಕೊಂಡು ಹೋಗುತ್ತೇನೆ ಎಂದು ತಮ್ಮ ಹೊಸ ಸಿನಿಮಾದ ಹೆಸರು 'ತಿಕ್ಲ ಹುಚ್ಚ ವೆಂಕಟ್' ಆಗಿರಲಿದೆ ಎಂದು ಸಹ ಮಾಹಿತಿ ನೀಡಿದರು.

  ಸುದ್ದಿಗೋಷ್ಠಿ ಮುಗಿವವರೆಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಶಾಂತವಾಗಿ ಉತ್ತರಿಸಿದ ಹುಚ್ಚ ವೆಂಕಟ್ ಅವರ ವರ್ತನೆಯಲ್ಲಿ ತುಸು ಬದಲಾವಣೆಯೂ ಕಾಣಿಸಿತು.

  ಈ ಹಿಂದೆ ಹುಚ್ಚ ವೆಂಕಟ್‌ರ ವರ್ತನೆ, ಸಾರ್ವಜನಿಕರೊಟ್ಟಿಗೆ ಜಗಳ ಇತರೆ ವಿಷಯಗಳನ್ನು ಮಾಧ್ಯಮಗಳವರು ಕೆದಕಿದರು. ಆದರೆ ಅವುಗಳಿಗೆ ಉತ್ತರಿಸಲು ನಿರಾಕರಿಸಿದ ಹುಚ್ಚ ವೆಂಕಟ್, ''ನನ್ನ ವರ್ತನೆ ಕೆಟ್ಟದಾಗಿತ್ತು ಹಾಗಾಗಿ ಸಾರ್ವಜನಿಕರು ಸಹ ನನ್ನೊಟ್ಟಿಗೆ ಕೆಟ್ಟದಾಗಿ ವರ್ತಿಸಿದರು. ಆದರೆ ಅವುಗಳನ್ನೆಲ್ಲ ನೆನಪು ಮಾಡಿಕೊಳ್ಳಲು ನನಗೆ ಇಷ್ಟವಿಲ್ಲ'' ಎಂದರು.

  ''ತಪ್ಪು ಮಾಡುವವರ ಮುಂದೆ ಈ ಹಿಂದೆ ಇದ್ದಂತೆ ಒರಟಾಗಿಯೇ ಇರುತ್ತೇನೆ. ಆದರೆ ಪ್ರೀತಿಸುವವರ ಮುಂದೆ ಮಗುವಿನಂತೆ ಇರುತ್ತೇನೆ. ಜನರು ನನ್ನನ್ನು ಪ್ರೀತಿಸುತ್ತಿದ್ದಾರೆ. ಹಾಗಿರುವಾಗ ನಾನೇಕೆ ಯಾರ ಮೇಲಾದರೂ ಕೋಪ ಮಾಡಿಕೊಳ್ಳಲಿ'' ಎಂದರು. ''ಮನೆಯವರನ್ನು ಈ ಹಿಂದಿಗಿಂತ ಹೆಚ್ಚು ಪ್ರೀತಿಸುತ್ತಿರುವುದಾಗಿ ಹೇಳಿದ ಹುಚ್ಚು ವೆಂಕಟ್, ಲಾಕ್‌ಡೌನ್‌ನಿಂದಾಗಿ ಮನೆಯವರನ್ನು ಅರ್ಥ ಮಾಡಿಕೊಳ್ಳಲು ಸಹಾಯವಾಯಿತು ಎಂದರು.

  'ತಿಕ್ಲ ಹುಚ್ಚ ವೆಂಕಟ್' ಸಿನಿಮಾವನ್ನು ಕಡಿಮೆ ಬಜೆಟ್‌ನಲ್ಲಿ ಮಾಡುವುದಾಗಿ ಹೇಳಿದ ಹುಚ್ಚ ವೆಂಕಟ್ ಆ ಸಿನಿಮಾವನ್ನು ಒಟಿಟಿ ಹಾಗೂ ಚಿತ್ರಮಂದಿರ ಎರಡೂ ಕಡೆ ಬಿಡುಗಡೆ ಮಾಡುತ್ತೇನೆ ಎಂದರು.

  ಇಷ್ಟು ದಿನ ಏನೇನು ಮಾಡಿದೆ ಎಂಬ ಬಗ್ಗೆ ಮಾತನಾಡಿದ ಹುಚ್ಚ ವೆಂಕಟ್, ಜೈಜಗದೀಶ್ ಅವರೊಂದಿಗೆ 'ಯಾನ', 'ಮಾಯಾಬಜಾರ್', ಎಸ್ ನಾರಾಯಣ್ ಅವರ 'ನವಮಿ', 'ಅಂತಿಮ ಸತ್ಯ' ಈ ಎಲ್ಲಾ ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಖಾಸಗಿ ಚಾನೆಲ್​ನಲ್ಲಿ 'ಲೈಫ್ ಓಕೆ' ಎಂಬ ಶೋದಲ್ಲಿ ಕಾಣಿಸಿಕೊಂಡಿದ್ದೇನೆ ಎಂದಿದ್ದಾರೆ ಹುಚ್ಚ ವೆಂಕಟ್. ಯೂಟ್ಯೂಬ್ ಮಾಧ್ಯಮದವರು ಸಂದರ್ಶನಗಳನ್ನು ಮಾಡಿದ್ದಾರೆ. ಜನರು ತಮ್ಮ ಮನೆಯ ಕಾರ್ಯಕ್ರಮಗಳಿಗೆ ನನ್ನನ್ನು ಆಹ್ವಾನಿಸಿದ್ದಾರೆ. ನಾನು ಕೇಳದೇ ಹೋದರು ಅವರು ಹಣ ನೀಡಿದ್ದಾರೆ'' ಎಂದು ನೆನಪು ಮಾಡಿಕೊಂಡರು.

  2020ರ ಆರಂಭದ ಸಮಯದಲ್ಲಿ ಮಾನಸಿಕ ಅಸ್ವಸ್ಥರಂತೆ ಹುಚ್ಚ ವೆಂಕಟ್ ವರ್ತಿಸಿದ್ದರು. ಶ್ರೀರಂಗಪಟ್ಟಣ, ಮಡಿಕೇರಿ ಇನ್ನಿತರ ಕಡೆಗಳಲ್ಲಿ ಹಾದಿ-ಬೀದಿ ರಂಪ ಮಾಡಿ ಸಾರ್ವಜನಿಕರಿಂದ ಒದೆ ತಿಂದಿದ್ದರು. ಆ ಬಳಿಕ ನಟ ಜಗ್ಗೇಶ್, ದುನಿಯಾ ವಿಜಯ್ ಹಾಗೂ ಹಲವರು ಹುಚ್ಚ ವೆಂಕಟ್ ಅವರನ್ನು ಹೊಡೆಯಬೇಡಿರೆಂದು ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದರು. ಬಳಿಕ ಸುದೀಪ್ ಚಾರಿಟೇಬಲ್ ಟ್ರಸ್ಟ್‌ನವರು ಹುಚ್ಚ ವೆಂಕಟ್‌ಗೆ ಮನೋವೈದ್ಯಕೀಯ ಚಿಕಿತ್ಸೆ ಕೊಡಿಸುವುದಾಗಿಯೂ, ಅಗತ್ಯ ನೆರವು ನೀಡುವುದಾಗಿಯೂ ಪ್ರಕಟಿಸಿದರು. 2020 ರ ನವೆಂಬರ್‌ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹರಿಬಿಟ್ಟಿದ್ದ ಹುಚ್ಚ ವೆಂಕಟ್ ಆ ನಂತರ ಕಣ್ಮರೆಯಾಗಿದ್ದರು ಈಗ ಮತ್ತೆ ಪ್ರತ್ಯಕ್ಷವಾಗಿದ್ದಾರೆ.

  English summary
  Actor Huccha Venkat back in front of media after many days. He said He is completely changed man now and doing a new movie.
  Thursday, January 13, 2022, 9:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X