»   » ವಿಷ್ಣುವಿನ ಇಬ್ಬರು ಅಭಿಮಾನಿಗಳ ಕಣ್ಣೀರ ಕಥೆ

ವಿಷ್ಣುವಿನ ಇಬ್ಬರು ಅಭಿಮಾನಿಗಳ ಕಣ್ಣೀರ ಕಥೆ

By Prasad
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಅಭಿಮಾನ್ ಸ್ಟುಡಿಯೋದ ಎಲ್ಲೆಡೆ ವಿಷ್ಣುವರ್ಧನ್ ಅಭಿಮಾನದ ಮಹಾಪೂರವೇ ಹರಿದು ಎಲ್ಲೆಲ್ಲೂ ಸಂತೋಷದ ಹೊನಲು ಹರಿಯುತ್ತಿದ್ದರೆ, ಒಂದು ಬದಿಯಲ್ಲಿ ಓರ್ವ ಕಟ್ಟಾ ಅಭಿಮಾನಿಯ ಕಣ್ಣಲ್ಲಿ ಅಶ್ರುಧಾರೆ! ವೇದಿಕೆಯ ಮೇಲಿದ್ದವರು ವಿಷ್ಣು ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡುತ್ತಿದ್ದರೆ, ಅದೇ ವೇದಿಕೆಯ ಬಲಬದಿಯಲ್ಲಿ ನೆಲದ ಮೇಲೆ ಕುಳಿತಿದ್ದ ಈ ವ್ಯಕ್ತಿ ತದೇಕಚಿತ್ತದಿಂದ ಆ ಮಾತುಗಳನ್ನು ಕೇಳುತ್ತ ಸೈಲೆಂಟ್ ಆಗಿಯೇ ಕಣ್ಣೀರು ಒರೆಸಿಕೊಳ್ಳುತ್ತಿದ್ದ.

  ಆತ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಿವಾಸಿ ನರಸಿಂಹಮೂರ್ತಿ. ವಿಷ್ಣು ಅಭಿನಯಿಸಿರುವ ಬಹುತೇಕ ಎಲ್ಲ ಚಿತ್ರಗಳನ್ನೂ ನೋಡಿರುವ ನರಸಿಂಹಮೂರ್ತಿ ಅಷ್ಟು ದೂರದಿಂದ 'ಅಪ್ಪಾಜಿ'ಯವರಿಗೆ ನಮನ ಸಲ್ಲಿಸಲು ಬಂದಿದ್ದ. ಅಡ್ಡಡ್ಡ ಬರುತ್ತಿದ್ದ ಛಾಯಾಗ್ರಾಹಕರನ್ನು, ಪೊಲೀಸಿನವರನ್ನು ಬದಿಗೆ ಸರಿಸುತ್ತ ಕುಳಿತಲ್ಲಿಂದಲೇ ವೇದಿಕೆಯಲ್ಲಿ ಕುಳಿತವರನ್ನು ನೋಡಲು ತಾನೇ ಅವಕಾಶ ಮಾಡಿಕೊಳ್ಳುತ್ತಿದ್ದ.

  ಆತ ಅಲ್ಲೇ, ನೆಲದ ಮೇಲೆಯೇ ಏಕೆ ಕುಳಿತಿದ್ದನೆಂದರೆ ಆತನಿಗೆ ಎರಡೂ ಕಾಲಿರಲಿಲ್ಲ. ಎರಡೂ ಕಾಲುಗಳನ್ನು ಕಳೆದುಕೊಂಡಿರುವ ನರಸಿಂಹಮೂರ್ತಿ ಈ ಕಾರ್ಯಕ್ರಮಕ್ಕೆ ಬರಲೂ ಒಂದು ಉದಾತ್ತ ಉದ್ದೇಶವಿತ್ತು. ಅದೇನೆಂದರೆ, ವಿಕಲಾಂಗರಿಗೆ ಗಾಲಿಕುರ್ಚಿಯನ್ನು ನೀಡುವ ಕಾರ್ಯಕ್ರಮ. ಆತ ಕುಳಿತ ಜಾಗದ ಪಕ್ಕದಲ್ಲಿಯೇ ಮೂರು ಗಾಲಿಕುರ್ಚಿಗಳನ್ನು ಇರಿಸಲಾಗಿತ್ತು.

  ಅತಿಥಿಗಳು ಬಂದರು, ಮೂರ್ನಾಲ್ಕು ನಿಮಿಷ ಭಾಷಣಗಳನ್ನು ಹೊಡೆದರು, ಬಂದ ಗಣ್ಯರಿಗೆಲ್ಲ ಸ್ಮರಣಿಕೆಗಳನ್ನು ಕೊಡಲಾಯಿತು, ಛಾಯಾಗ್ರಾಹಕರು ಅತ್ತಿಂದಿತ್ತ ಓಡಾಡುತ್ತ ಫೋಟೋಗಳನ್ನು, ವಿಡಿಯೋ ತೆಗೆಯುತ್ತಿದ್ದರು. ವಂದನಾರ್ಪಣೆಯ ನಂತರ ಕಾರ್ಯಕ್ರಮ ಮುಗಿದೇ ಹೋಯಿತು. ಕೊನೆಗೂ ನರಸಿಂಹಮೂರ್ತಿಗೆ ಗಾಲಿಕುರ್ಚಿ ಕೊಡಲೇ ಇಲ್ಲ. ಈ ಬಗ್ಗೆ ಸಂಘಟಕರಲ್ಲಿ ವಿಚಾರಿಸಲಾಗಿ, ಇನ್ನೂ ಇಬ್ಬರು ವಿಕಲಾಂಗರು ಬಂದಿಲ್ಲ, ಈಗ ಇವರಿಗೆ ಕೊಡುತ್ತೇವೆ ಎಂದು ಕೈಜಾಡಿಸಿಕೊಂಡು ಹೊರಟೇಬಿಟ್ಟ. [ಗ್ಯಾಲರಿ]

  ಎಲ್ಲ ಮುಗಿದ ಮೇಲೆ ಕೊಟ್ಟರೇನು ಪ್ರಯೋಜನ

  ಕಾರ್ಯಕ್ರಮ ಮುಗಿದ ಮೇಲೆ, ಎಲ್ಲ ಅಭಿಮಾನಿಗಳು ಮನೆಕಡೆಗೆ ಹೆಜ್ಜೆ ಹಾಕಿದ ಮೇಲೆ, ವೇದಿಕೆ ಖಾಲಿಯಾದ ಮೇಲೆ ಗೌರಿಬಿದನೂರಿನ ನರಸಿಂಹಮೂರ್ತಿಗೆ ಗಾಲಿಕುರ್ಚಿ ಕೊಡ್ತಾರಂತೆ! ಕೊಟ್ಟ ಮೇಲೆ ಆತ ಮತ್ತೆರಡು ಹೆಚ್ಚಿಗೆ ಕಣ್ಣೀರು ಸುರಿಸಬಹುದು, ವಿಭಾ ಚಾರಿಟೇಬಲ್ ಟ್ರಸ್ಟ್ ನ ಉದ್ದೇಶವೂ ಸಾರ್ಥಕವಾಗಬಹುದು ಬಿಡಿ. ಆದರೆ, ಈ ಸಂಭ್ರಮದ ಭರದಲ್ಲಿ, ಮುಖ್ಯ ಕಾರ್ಯಕ್ರಮದ ನಡುವೆಯೇ ಗಾಲಿಕುರ್ಚಿ ವಿತರಿಸಬೇಕೆಂಬ ನೆನಪು ಇವರಿಗೇಕೆ ಇರಲಿಲ್ಲ.

  ಮೂರ್ತಿ ಕಣ್ಣೀರಿನ ಕಾರಣವೂ ಇದೇ ಇರಬಹುದಾ

  ನರಸಿಂಹಮೂರ್ತಿ ಕಣ್ಣೀರು ಸುರಿಸುತ್ತಿದ್ದ ಕಾರಣವೂ ಇದೇ ಆಗಿರಬಹುದಾ? ಒಂದು ವೇಳೆ ವಿಷ್ಣು ಬದುಕಿದ್ದು, ಅವರ 63ನೇ ಹುಟ್ಟುಹಬ್ಬ ಆಚರಿಸುತ್ತಿದ್ದರೆ ಇಂಥ ಆಭಾಸ ಆಗುವುದನ್ನು ಅವರು ಸಹಿಸುತ್ತಿದ್ದರೆ. ಬಹುಶಃ ಈ ವಿಕಲಾಂಗ ನರಸಿಂಹಮೂರ್ತಿಯನ್ನು ತಾವೇ ಸ್ವತಃ ಎತ್ತಿಕೊಂಡು ವೇದಿಕೆಯ ಮೇಲೆ ಕೂಡಿಸುತ್ತಿದ್ದರೋ ಏನೋ? ಒಟ್ಟಿನಲ್ಲಿ ಅಚಾತುರ್ಯ ನಡೆದುಹೋಗಿತ್ತು.

  ಇದು ಅಭಿಮಾನದ ಪರಾಕಾಷ್ಠೆಯಲ್ಲದೆ ಇನ್ನೇನು?

  ಬೆನ್ನ ತುಂಬ ವಿಷ್ಣುವರ್ಧನ್ ಅಭಿನಯಿಸಿರುವ ಬೆಂಕಿ ಬಿರುಗಾಳಿ, ಆಪ್ತರಕ್ಷಕ, ಒಂದೇ ಗುರಿ, ಅವಳಹೆಜ್ಜೆ, ಅಂಬಿ ವಿಷ್ಣು ದಿಗ್ಗಜರು, ಹಬ್ಬ, ಯಮಕಿಂಕರ ಚಿತ್ರಗಳ ಹಚ್ಚೆಗಳು. ತೋಳ ಮೇಲೆ, ಹೊಟ್ಟೆಯ ಮೇಲೆ, ಕಡೆಗೆ ಹಣೆಯ ಮೇಲೆ ಕೂಡ ವಿಷ್ಣು ಅಭಿನಯದ ಚಿತ್ರದ ಹಚ್ಚೆ! ಇದು ಅಭಿಮಾನದ ಪರಾಕಾಷ್ಠೆಯಲ್ಲದೆ ಇನ್ನೇನು?

  ವಿಷ್ಣುವಿನ ಅಪ್ಪಟ ಅಭಿಮಾನಿ

  ಈ ವ್ಯಕ್ತಿ ಕೂಡ ವಿಷ್ಣು ಅಭಿನಯದ ಎಲ್ಲ 200 ಚಿತ್ರಗಳನ್ನು ಮನೆಯಲ್ಲಿ ಅಲ್ಲ, ಥಿಯೇಟರಿನಲ್ಲಿ ನೋಡಿದ್ದಾರೆ. ನೋಡಿದರೆ, ಗಜನಿ ಚಿತ್ರದಲ್ಲಿ ಅಮೀರ್ ಖಾನ್ ತನ್ನ ಮೈತುಂಬ ಹಚ್ಚೆ ಹಾಕಿಸಿಕೊಂಡಂತೆ ಭಾಸವಾಗುತ್ತದೆ. ಆದರೆ, ಈತ ಮಾತ್ರ ವಿಷ್ಣುವಿನ ಅಪ್ಪಟ ಅಭಿಮಾನಿ. ಚನ್ನಪಟ್ಟಣ ಬಳಿಯ ಹಳ್ಳಿಯಿಂದ ಮನೆಯವರಿಗೆ ಹೇಳದೆ ಕೇಳದೆ ಬೆಂಗಳೂರಿಗೆ ಬಂದಿದ್ದರು.

  ಚನ್ನಪಟ್ಟಣ ಬಳಿ ಹಳ್ಳಿಯ ನಂಜುಂಡ

  ಅಚ್ಚರಿಯ ಸಂಗತಿಯೆಂದರೆ, ನಂಜುಂಡ ಎಂಬ ಹೆಸರಿನ ಇವರೂ ವಿಕಲಾಂಗರು. ಯಾವನೋ ಬೈಕ್ ಗುದ್ದಿದ್ದರಿಂದ ಕಾಲು ಊನವಾಗಿದೆ. ಅಡ್ಡಾಡಲೂ ಆಗದಂತಹ ಸ್ಥಿತಿ. ಮಾಡಲು ಕೆಲಸವೂ ಇಲ್ಲ, ಮನೆಯವರಿಂದಲೂ ತಿರಸ್ಕಾರ. ಆದರೆ, ವಿಷ್ಣು ಮೇಲಿನ ಅಭಿಮಾನ ಮಾತ್ರ ಎಳ್ಳಷ್ಟೂ ಕುಗ್ಗಿಲ್ಲ. ವಿಕಲಾಂಗರಿಗೆ ವಿತರಿಸಬೇಕಿದ್ದ ಗಾಲಿಕುರ್ಚಿಯ ಬಗ್ಗೆ ವಿಚಾರಿಸಿದಾಗ, ಅದರ ಬಗ್ಗೆ ನನಗೇನೂ ಗೊತ್ತಿಲ್ಲ ಸ್ವಾಮಿ ಎಂದು ಹುಳ್ಳಗೆ ನಕ್ಕರು.

  English summary
  Human interest story of two Vishnuvardhan fans. On the occasion of 63rd birth anniversary of legendary actor Vishnuvardhan Vibha charitable trust had organized lots of humanitarian activities at Abhiman Studio in Bangalore. But, the function was not complete.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more