For Quick Alerts
  ALLOW NOTIFICATIONS  
  For Daily Alerts

  "ನನ್ ಮುಖ ಯಾರ್ರೀ ನೋಡ್ತಾರೆ..?" ಎಂದಿದ್ದರು ಅಂಬರೀಷ್..!

  |
  Ambareesh: ಇದು ಅಂಬರೀಶ್ ಬಗೆಗಿನ ರೋಚಕ ಕಥೆ | FILMIBEAT KANNADA

  "ಪದೇ ಪದೆ ಇದೇ ಮುಖ ನೋಡಿ ಬೇಜಾರು ಅನಿಸಿದ್ಯಾ ಸರ್?" ಈ ಪ್ರಶ್ನೆ ಬಂದಿದ್ದು ಪತ್ರಕರ್ತರ ಕಡೆಯಿಂದ. ಪ್ರಶ್ನೆ ಕೇಳಿದ್ದು ಖ್ಯಾತ ಕಾದಂಬರಿಕಾರ ಬಿ ಎಲ್ ವೇಣು ಅವರಲ್ಲಿ. ಅದಕ್ಕೆ ಸರಿಯಾದ ಕಾರಣವೂ ಇತ್ತು. ಸಾಹಿತಿ ಬಿ ಎಲ್ ವೇಣು ಅವರು ಇತ್ತೀಚೆಗೆ ಹೆಚ್ಚು ಹೆಚ್ಚು ಸಿನಿಮಾ ಪತ್ರಿಕಾಗೋಷ್ಠಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಅವರ ಒಂದಷ್ಟು ಕಾದಂಬರಿಗಳು ಸಾಲು ಸಾಲಾಗಿ ‌ಸಿನಿಮಾಗಳಾಗುತ್ತಿವೆ. ವೇಣು ಅವರ ಕಾದಂಬರಿಗಳು ಈ ಹಿಂದೆಯೂ ಹಲವಾರು ಬಾರಿ ಸಿನಿಮಾಗಳಾಗಿ ಅದ್ಭುತ ಯಶಸ್ಸು ಕಂಡಿವೆ. ಆದರೆ ಆವಾಗೆಲ್ಲ ಇವರು ಮಾಧ್ಯಮಗಳ ಮುಂದೆ ಹಾಜರಾಗಿದ್ದೇ ಅಪರೂಪ.

  ಅದಕ್ಕೆ ಪ್ರಮುಖ ಕಾರಣ ಬಿ ಎಲ್ ವೇಣು ಅವರು ಸರ್ಕಾರಿ ಕೆಲಸದಲ್ಲಿ ಇದ್ದಂಥವರು. ಸಿನಿಮಾ ವಿಚಾರಗಳಿಗಾಗಿ ಮನ ಬಂದಂತೆ ರಜ ಹಾಕುವ ಅವಕಾಶವಾಗಲೀ, ಕೆಲಸದ ವೇಳೆಯನ್ನು ಹಾಗೆ ಬಳಸುವ ಉದ್ದೇಶ ವೇಣು ಅವರಿಗಾಗಲೀ ಇರಲಿಲ್ಲ. ಆದರೆ ಈಗ ವೇಣು ನಿವೃತ್ತ ಬದುಕು ಸಾಗಿಸುತ್ತಿರುವವರು. ಅದಕ್ಕೆ ಸರಿಯಾಗಿ ಕನ್ನಡದಲ್ಲಿ ಒಂದಷ್ಟು ಚಾರಿತ್ರಿಕ ಚಿತ್ರಗಳು ಬೇರೆ ಸೆಟ್ಟೇರಿವೆ. ವಿಶೇಷ ಎನ್ನುವಂತೆ ಅವುಗಳಲ್ಲಿ ಹೆಚ್ಚಿನವುಗಳಿಗೆ ಬಿಲ್ ವೇಣು ಅವರ ಕಾದಂಬರಿಯೇ ಆಧಾರ. ಹಾಗಾಗಿ ವೇಣು ಅವರು ಪತ್ರಕರ್ತರನ್ನೆಲ್ಲ ಚೆನ್ನಾಗಿ ನೆನಪಿರಿಸಿಕೊಂಡಿದ್ದಾರೆ.

  ಅಂಬರೀಶ್ ಕೇಳಿದ್ದ ಈ ವಸ್ತುವನ್ನ ಕೊನೆಗೂ ದರ್ಶನ್ ತಂದುಕೊಡಲು ಆಗಲಿಲ್ಲ

  ಹಾಗೆ ಅವರು ಆತ್ಮೀಯವಾಗಿ ಮಾತಿಗೆ ಕುಳಿತಾಗಲೇ ಮೇಲಿನ ಈ ಪ್ರಶ್ನೆ ಉದ್ಭವವಾಗಿದ್ದು. ಅದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಅವರು, "ಛೇ.. ಎಲ್ಲಾದರೂ ಉಂಟೇ..? ಇದು ನಿಮ್ಮ ವೃತ್ತಿ ಕ್ಷೇತ್ರ. ನಿಮ್ಮನ್ನು ಭೇಟಿಯಾಗುವುದು ನಮ್ಮ ಅಗತ್ಯವೂ ಹೌದಲ್ಲ?" ಎಂದರು. ಅದಕ್ಕೆ ಸಮಜಾಯಿಷಿ ನೀಡಿದ ಪತ್ರಕರ್ತರು "ಇದು ನಮ್ಮ ಮಾತಲ್ಲ, ರೆಬಲ್ ಸ್ಟಾರ್ ಅಂಬರೀಷ್ ಅವರು ಹೇಳುತ್ತಿದ್ದಂಥ ಮಾತು. "ಏನ್ರಯ್ಯ.. ಏನೋ ಹೊಸ ಸಿನಿಮಾ ಪ್ರೆಸ್ಮೀಟ್ ಇದೆ, ಇನ್ನೇನೋ ಹೊಸದಾಗಿ ಇರುತ್ತೆ ಅಂತ ಬಂದ್ರೆ, ಅದೇ ಹಳೇ ಮುಖ ಹೊತ್ಕೊಂಡಿರೋ ನಿಮ್ಮನ್ನೇ ನೋಡ್ಬೇಕಲ್ರಯ್ಯಾ.." ಎಂದು ಅಂಬರೀಷ್ ಅವರು ತಮಾಷೆ ಮಾಡುತ್ತಿದ್ದರು. ಅದೇ ನೆನಪಲ್ಲಿ ಹಾಗೆ ಕೇಳಿದ್ವಿ" ಎಂದರು ಪತ್ರಕರ್ತರು.

  ಅದಕ್ಕೆ ಜೋರಾಗಿ ನಕ್ಕ ವೇಣು ಅವರು "ಅಂಥ ಮಾತುಗಳು ಅಂಬರೀಷ್ ಅವರಿಗಷ್ಟೇ ಹೊಂದುತ್ತವೆ. ಅವರಿಂದ ಮಾತ್ರ ಹೇಳಲು ಸಾಧ್ಯ.." ಎಂದು ಮತ್ತೆ ನಕ್ಕರು. ಇದೇ ಸಂದರ್ಭದಲ್ಲಿ ಅಂಬರೀಷ್ ಅವರು ತಮ್ಮನ್ನು ತಾವೇ ಲೇವಡಿ ಮಾಡಿಕೊಳ್ಳುತ್ತಿದ್ದರು ಎನ್ನುವುದನ್ನು ಕೂಡ ಘಟನೆಯೊಂದರ ಮೂಲಕ ನೆನಪಿಸಿಕೊಂಡರು. ಆ ಘಟನೆ ನಿಜಕ್ಕೂ ಸ್ವಾರಸ್ಯಪೂರ್ಣವಾಗಿತ್ತು. ಮುಂದೆ ಓದಿ.....

   ಒಲವಿನ ಉಡುಗೊರೆಯ ವಿಚಾರ

  ಒಲವಿನ ಉಡುಗೊರೆಯ ವಿಚಾರ

  ಅಂಬರೀಷ್ ಅವರ ಸಿನಿಮಾ ಬದುಕಿನಲ್ಲಿ ಮರೆಯಲಾಗದ ಯಶಸ್ವಿ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಂಥ ಸಿನಿಮಾ ಒಲವಿನ ಉಡುಗೊರೆ. ಆದರೆ ಅದು ಆರಂಭಗೊಂಡಿದ್ದು ಮಾತ್ರ ಸ್ವಲ್ಪ ಕಷ್ಟದಿಂದಲೇ. ಯಾಕೆಂದರೆ ಅದು ಕಾದಂಬರಿ ಆಧಾರಿತ ಚಿತ್ರ. ವಿಶೇಷ ಏನೆಂದರೆ ಆ ಕಾದಂಬರಿಯನ್ನು ಸ್ವತಃ ಬಿ ಎಕ್ ವೇಣು ಅವರೇ ರಚಿಸಿದ್ದರು. ವೇಣು ಹೇಳುವ ಪ್ರಕಾರ ಅಂಬರೀಷ್ ಅವರು ಸಾಮಾನ್ಯವಾಗಿ ಸಿನಿಮಾಗಳ ಕತೆಯನ್ನು ಪೂರ್ತಿಯಾಗಿ ಕೇಳುವುದು ಅಪರೂಪ. ಒಂದಷ್ಟು ಕೇಳುತ್ತಲೇ ಮಾಡೋದ, ಬೇಡ್ವಾ ಎಂಬ ತೀರ್ಮಾನ ಮಾಡಿರುತ್ತಿದ್ದರು.

  ಆಫ್ ದಿ ರೆಕಾರ್ಡ್ : ಯಾವಾಗಲೂ ಗದರುತ್ತಿದ್ದ ಅಂಬಿ ಆ ದಿನ ಬಿಕ್ಕಿ ಬಿಕ್ಕಿ ಅತ್ತಿದ್ದರು

  ಚಿತ್ರೀಕರಣದಲ್ಲೊಂದು ಸಮಸ್ಯೆ ಎದುರಾಗಿತ್ತು

  ಚಿತ್ರೀಕರಣದಲ್ಲೊಂದು ಸಮಸ್ಯೆ ಎದುರಾಗಿತ್ತು

  ಅದೇ ರೀತಿ ನಿರ್ದೇಶಕ ಡಿ. ರಾಜೇಂದ್ರ ಬಾಬು ಅವರಿಂದ ಒಂದಷ್ಟು ಕತೆ ಕೇಳಿದ್ದ ಅಂಬರೀಷ್ ಅವರು ವೇಣು ಅವರನ್ನು ‌ನೋಡಿದರಂತೆ. ಬಳಿಕ ವೇಣು ಅವರು ಕೂಡ ಕತೆಯ ಬಗ್ಗೆ ಮಾತನಾಡುವುದನ್ನು ಕೇಳಿ "ಇದು ಯಾರ ಕತೆ?" ಎಂದು ಬಾಬು ಅವರನ್ನು ಪ್ರಶ್ನಿಸಿದರಂತೆ ಅಂಬರೀಷ್. "ಇದು ಬಿ ಎಲ್ ವೇಣು ಅವರದ್ದು" ಎನ್ನುವುದು ಅದಕ್ಕೆ ಬಾಬು ಅವರು ನೀಡಿದ ಪ್ರತಿಕ್ರಿಯೆ ಆಗಿತ್ತು. ಸರಿ ಹಾಗಾದ್ರೆ ಮಾಡೋದಾಗಿ ಒಪ್ಪಿಕೊಂಡರಂತೆ ಅಂಬರೀಷ್. ಅದಾಗಲೇ ವೇಣು ಅವರ ಕೆಲವೊಂದು ಕಾದಂಬರಿಗಳು ಚಿತ್ರಗಳಾಗಿ ಸಾಕಷ್ಟು ಜನಪ್ರಿಯತೆ ಪಡೆದಿದ್ದ ಕಾರಣ, ವೇಣು ಅವರ ಕತೆ ಎಂದೊಡನೆ ಕಣ್ಣುಮುಚ್ಚಿ ಒಪ್ಪಿಗೆ ನೀಡಿದ್ದರು. ಆದರೆ ನಿಜವಾದ ತೊಂದರೆ ಎದುರಾಗಿದ್ದೇ ಚಿತ್ರೀಕರಣ ಶುರುವಾದ ಬಳಿಕ!

   ನನ್ ಮುಖ ಯಾರ್ ನೋಡ್ತಾರೆ ಅಂದ್ರು ಅಂಬರೀಷ್!

  ನನ್ ಮುಖ ಯಾರ್ ನೋಡ್ತಾರೆ ಅಂದ್ರು ಅಂಬರೀಷ್!

  ಲವ್ ಸ್ಟೋರಿಯೊಂದಿಗೆ ಚೆನ್ನಾಗಿ ಸಾಗುವ ಚಿತ್ರದಲ್ಲಿ ಮುಖಕ್ಕೆ ಆಸಿಡ್ ಸಿಡಿಯುವ ದೃಶ್ಯ ಬಳಿಕ‌, ಮುಖದ ಒಂದು ಭಾಗವನ್ನು ಕೆಟ್ಟು ಹೋದಂತೆ ತೋರಿಸುವ ಏರ್ಪಾಟು ನಡೆದಿತ್ತು. ಈ‌ ವಿಚಾರ ಅರಿವಾದೊಡನೆ ಅಂಬರೀಷ್ ಬೆಚ್ಚಿ ಬಿದ್ದರು! ಅದಕ್ಕೆ ಅವರು ನೀಡಿದ ಕಾರಣ ಹೀಗಿತ್ತು, " ಮೊದಲೇ ನನ್ನ ಮುಖಾನ ಜನಗಳು ಕಷ್ಟದಿಂದ ನೋಡ್ತಾರೆ. ಇನ್ನು ಅದರಲ್ಲಿ ಬೇರೆ ಆಸಿಡ್ ಎರಚಿರೋ ಥರ ಬೇರೆ ತೋರಿಸಿದ್ರೆ ಈ ಮೂತೀನ ಯಾರು ನೋಡುತ್ತಾರೆ? ಅದೆಲ್ಲ ಬೇಡ" ಎಂದು ಆ ಸನ್ನಿವೇಶವೇ ಚಿತ್ರದಲ್ಲಿ ಬೇಡ ಎಂದಿದ್ದರಂತೆ.

  'ಆಫ್ ದಿ ರೆಕಾರ್ಡ್' : ಅಂಬಿ ಕುರಿತು ಸುಗುಣ ಸ್ಟ್ರೈಟ್ ಮಾತುಗಳು

  ತಮ್ಮ ಪರಿಮಿತಿಗಳ ಬಗ್ಗೆ ಪರಿಜ್ಞಾನವಿತ್ತು

  ತಮ್ಮ ಪರಿಮಿತಿಗಳ ಬಗ್ಗೆ ಪರಿಜ್ಞಾನವಿತ್ತು

  ಅಂಬರೀಷ್ ಅವರ ಈ ಮಾತು ಕೇಳಿ ಬೆದರದವರಿಲ್ಲ.‌ ಯಾಕೆಂದರೆ ಸಿನಿಮಾ ನಾಯಕ ನಟನಾದರೆ ಸಾಕು, ಜಗತ್ತೇ ನನ್ನ ಕಾಲ ಕೆಳಗೆ ಎಂದು ವರ್ತಿಸುವವರ ನಡುವೆ ಸ್ಟಾರ್ ಆದಮೇಲೆಯೂ ತಮ್ಮ ಪರಿಮಿತಿಗಳ ಬಗ್ಗೆ ಪರಿಜ್ಞಾನ ಇರಿಸಿಕೊಂಡು ಮಾತನಾಡಬಲ್ಲ ಶಕ್ತಿ ಅವರಿಗೆ ಮಾತ್ರ ಇದ್ದಿದ್ದು ಅನಿಸುತ್ತದೆ. ಆದರೆ ಹಾಗಂತ ಅವರು ಕತೆಯನ್ನು ಬದಲಿಸಲು ಒತ್ತಾಯವನ್ನೇನೂ ಮಾಡಲಿಲ್ಲ. ಚಿತ್ರವನ್ನು ಚೆನ್ನಾಗಿಯೇ ಪೂರ್ತಿ ಮಾಡಿಕೊಟ್ಟಿದ್ದರು. ಆದರೆ ಆಮೇಲೆ ನಡೆದಿದ್ದು ಮಾತ್ರ ಇತಿಹಾಸ!

   ಪ್ರಶಸ್ತಿ ತಂದು‌ಕೊಟ್ಟಿತು ಪಾತ್ರ!

  ಪ್ರಶಸ್ತಿ ತಂದು‌ಕೊಟ್ಟಿತು ಪಾತ್ರ!

  ಒಲವಿನ ಉಡುಗೊರೆ ಸಿನಿಮಾ ಎಲ್ಲ ಕಡೆ ಚಿತ್ರ ಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣಲಾರಂಭಿಸಿತು. ಜನ ಮೆಚ್ಚುಗೆ ಮಾತ್ರವಲ್ಲ, ಚಿತ್ರಕ್ಕೆ ವಿಮರ್ಶಕರ ಪ್ರೋತ್ಸಾಹವೂ ದೊರಕಿತ್ತು. ಅಂಥದೊಂದು ಪಾತ್ರವನ್ನು ನಿರ್ವಹಿಸಿದ್ದಕ್ಕಾಗಿ ಅಂಬರೀಷ್ ಅವರಿಗೆ ಪ್ರಶಂಸೆಗಳ‌ ಸುರಿಮಳೆಯೂ ಆಯಿತು.‌ ಅಷ್ಟೇ ಅಲ್ಲ, ವರ್ಷದ ಶ್ರೇಷ್ಠ ನಟನಾಗಿ ಫಿಲ್ಮ್ ಫೇರ್ ಅವಾರ್ಡ್ ಕೂಡ ಅಂಬರೀಷ್ ಅವರ ಮುಡಿಗೇರಿತು. ಅಂದಹಾಗೆ ಇದನ್ನೆಲ್ಲ ಸ್ಮರಿಸಿಕೊಂಡ ಕಾದಂಬರಿಕಾರ ಬಿ ಎಲ್ ವೇಣು ಅವರಿಗೂ ಚಿತ್ರ ಪ್ರಶಸ್ತಿ ತಂದುಕೊಟ್ಟಿತ್ತು.‌ ಒಟ್ಟಿನಲ್ಲಿ ಅಂಬರೀಷ್ ಅವರ ದಿಟ್ಟ, ನೇರ ಮಾತುಗಳ ಬಗ್ಗೆ ಚಿತ್ರರಂಗದ ಪ್ರತಿಯೊಬ್ಬ ಗಣ್ಯರಲ್ಲಿಯೂ ಒಂದೊಂದು ಕತೆ ಇರುವುದು ಮಾತ್ರ ನಿಜ

  English summary
  B L Venu shared Interesting story about ambarish and olavina udugore movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X