»   » ನಟಿ ಪೂಜಾ ಗಾಂಧಿ ನಸೀಬು ನೆಟ್ಟಗಿಲ್ಲ ಕಣ್ರೀ..

ನಟಿ ಪೂಜಾ ಗಾಂಧಿ ನಸೀಬು ನೆಟ್ಟಗಿಲ್ಲ ಕಣ್ರೀ..

By: ಹರಾ
Subscribe to Filmibeat Kannada

ನಟಿ ಪೂಜಾ ಗಾಂಧಿಗೆ ನಸೀಬು ನೆಟ್ಟಗಿದ್ದ ಹಾಗಿಲ್ಲ. ವಿವಾದಗಳ ಕೇಂದ್ರಬಿಂದು ಆಗಿದ್ದ 'ಅಭಿನೇತ್ರಿ' ಸಿನಿಮಾ ಹೇಳ ಹೆಸರಿಲ್ಲದಂತೆ ಮಾಯವಾಗಿದೆ. ಅದರ ಬೆನ್ನಲ್ಲೇ ಆಕ್ಸಿಡೆಂಟ್ ಕೇಸ್ ನಲ್ಲಿ ತಗಲಾಕೊಂಡಿದ್ದ ಮಳೆ ಹುಡುಗಿಗೆ ಇದೀಗ ಮತ್ತೊಂದು ಕಂಟಕ ಎದುರಾಗಿದೆ.

ಪೂಜಾ ಗಾಂಧಿ ನಟಿಸಿ, ನಿರ್ಮಿಸಬೇಕಿದ್ದ 'ಮುತ್ತುಲಕ್ಷಿ' ಸಿನಿಮಾ ನಿಂತುಹೋಗಿದೆ. ಹೀಗಂತ ನಿನ್ನೆ ಇದ್ದಿಕ್ಕಿದ್ದ ಹಾಗೆ ಗಾಂಧಿನಗರದಲ್ಲಿ ಸುದ್ದಿಯಾಗಿದೆ. ನೈಜಕಥೆ ಆಧರಿಸಿದ ಸಿನಿಮಾಗಳಲ್ಲೇ ಹೆಚ್ಚಾಗಿ ಮಿಂಚುತ್ತಿರುವ ಪೂಜಾ, 'ಮುತ್ತುಲಕ್ಷಿ' ಆಗುವ ಮುನ್ನವೇ ಮುಗ್ಗರಿಸಿ ಬಿದ್ದಿದ್ದಾರೆ.

ಅಸಲಿಗೆ ಈ ಸುದ್ದಿ ನಿಜವೇ? 'ಮುತ್ತುಲಕ್ಷಿ' ಚಿತ್ರ ನಿಂತುಹೋಗುವುದಕ್ಕೆ ಕಾರಣವೇನು? 'ಅಭಿನೇತ್ರಿ' ಮುಳುಗಿಹೋಗಿದ್ದಕ್ಕೆ ಪೂಜಾ ಈ ನಿರ್ಧಾರ ಕೈಗೊಂಡರೇ.? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಮುಂದೆ ಓದಿ.....

ಹೊಸ ಕ್ಯಾತೆ ತೆಗೆದಿದ್ದಾರಂತೆ ಮುತ್ತುಲಕ್ಷ್ಮಿ

ಮೂಲಗಳ ಪ್ರಕಾರ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಹೊಸ ರಾಗ ಎಳೆದಿರುವುದು ಚಿತ್ರ ನಿಂತುಹೋಗುವುದಕ್ಕೆ ಕಾರಣವಂತೆ. ಸಿನಿಮಾ ಶುರುವಾಗುವುದಕ್ಕೂ ಮುನ್ನವೇ 'ಮುತ್ತುಲಕ್ಷ್ಮಿ' ಚಿತ್ರತಂಡ ಕಾಡುಗಳ್ಳನ ಪತ್ನಿಗೆ 10 ಲಕ್ಷ ರೂಪಾಯಿ ನೀಡಿದ್ದರಂತೆ. ಇದು ಸಾಲದು ಅಂತ ಪೂಜಾ ಗಾಂಧಿ ಹೆಚ್ಚುವರಿಯಾಗಿ 3 ಲಕ್ಷ ರೂಪಾಯಿಯನ್ನ ಮುತ್ತುಲಕ್ಷ್ಮಿಗೆ ಕೊಟ್ಟಿದ್ದರು. ಹೀಗಿದ್ದರೂ, ''ನನ್ನ ಟೈಟಲ್ ಇಡುವುದಕ್ಕೆ ಬಿಡುವುದಿಲ್ಲ. ಇಷ್ಟು ದಿನವಾದರೂ ಶೂಟಿಂಗ್ ಶುರುಮಾಡಿಲ್ಲ. ಇನ್ಮುಂದೆ ಈ ಸಿನಿಮಾ ಮಾಡುವುದಕ್ಕೆ ಬಿಡಲ್ಲ'' ಅಂತ ಹೊಸ ಕ್ಯಾತೆ ತೆಗೆದಿದ್ದಾರಂತೆ ಮುತ್ತುಲಕ್ಷ್ಮಿ.

'ಅಟ್ಟಹಾಸ' ಚಿತ್ರತಂಡಕ್ಕೂ ಇದೇ ಕಿರಿಕಿರಿ

ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಕಾಂಟ್ರವರ್ಸಿ ಡ್ರಾಮಾ ಇದೇ ಮೊದಲಲ್ಲ. ನಿರ್ದೇಶಕ ಎ.ಎಮ್.ಆರ್.ರಮೇಶ್ 'ಅಟ್ಟಹಾಸ' ಸಿನಿಮಾ ಮಾಡುವುದಕ್ಕೆ ಹೊರಟಾಗಲೂ ಮುತ್ತುಲಕ್ಷ್ಮಿ ಇದೇ ರೀತಿ ಕಿರಿಕಿರಿ ಉಂಟುಮಾಡಿದ್ದರು. ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಪೂಜಾ ಗಾಂಧಿ ನಟಿಸುತ್ತಿರುವ 'ಮುತ್ತುಲಕ್ಷ್ಮಿ' ಸಿನಿಮಾದ ಸರದಿ ಅಷ್ಟೆ. [ಅಟ್ಟಹಾಸ : ನಿಸ್ಸಂದೇಹವಾಗಿ ಒಳ್ಳೆ ಸಿನಿಮಾ]

''ಅಭ್ಯಂತರ ಇಲ್ಲ'' ಅಂದಿದ್ದ ಮುತ್ತುಲಕ್ಷ್ಮಿ

ಹಾಗ್ನೋಡಿದರೆ, 'ಮುತ್ತುಲಕ್ಷ್ಮಿ' ಚಿತ್ರದ ಮೊದಲ ಪತ್ರಿಕಾಗೋಷ್ಠಿ ನಡೆದಾಗ ಖುದ್ದು ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಭಾಗವಹಿಸಿ 'ಮುತ್ತುಲಕ್ಷ್ಮಿ' ಚಿತ್ರದ ಬಗ್ಗೆ ತಮಗೆ ಯಾವುದೇ ಆಕ್ಷೇಪ ಇಲ್ಲ ಅಂತ ತಿಳಿಸಿದ್ದರು. ಇದಲ್ಲದೇ ಚಿತ್ರದಲ್ಲಿ ಅವರೂ ಅಭಿನಯಿಸುತ್ತಿರುವ ಸಂಗತಿಯನ್ನೂ ಹೊರಹಾಕಿದ್ದರು. ಪೂಜಾ ಗಾಂಧಿ ಪಕ್ಕದಲ್ಲಿ ನಿಂತು ಅಂದು ಪೋಸ್ ಕೊಟ್ಟಿದ್ದ ಮುತ್ತುಲಕ್ಷ್ಮಿ, ಇದೀಗ ತಿರುಗಿ ಬಿದ್ದಿದ್ದಾರೆ. [ಪೂಜಾಗಾಂಧಿ 'ಮುತ್ತುಲಕ್ಷ್ಮಿ'ಯ ಅಸಲಿ ಕಥೆ ಏನು?]

ಮುತ್ತುಲಕ್ಷ್ಮಿಗೆ ಮುನಿಸು ಏಕೆ?

'ಮುತ್ತುಲಕ್ಷ್ಮಿ' ಚಿತ್ರದ ಮೊದಲ ಪತ್ರಿಕಾಗೋಷ್ಠಿ ನಡೆದದ್ದು ಕಳೆದ ವರ್ಷ. ಅಂದೇ ಸೆಟ್ಟೇರಬೇಕಿದ್ದ ಈ ಸಿನಿಮಾ ಈ ವರೆಗೂ ಮುಹೂರ್ತ ಕಂಡಿಲ್ಲ. ಇದಕ್ಕೆ ಕಾರಣ ಪೂಜಾ ಗಾಂಧಿ ಅನ್ನುತ್ತಿವೆ ಮೂಲಗಳು. 'ಅಭಿನೇತ್ರಿ' ಚಿತ್ರದಲ್ಲೇ ಮುಳುಗಿದ್ದ ಪೂಜಾ ಗಾಂಧಿ, ಇಲ್ಲಿಯವರೆಗೂ 'ಮುತ್ತುಲಕ್ಷ್ಮಿ' ಚಿತ್ರಕ್ಕೆ ಡೇಟ್ಸ್ ಕೊಟ್ಟಿಲ್ಲವಂತೆ. ಇಷ್ಟು ತಡವಾಗುತ್ತಿರುವುದನ್ನ ಕಂಡ ವೀರಪ್ಪನ್ ಪತ್ನಿ ಸಿನಿಮಾ ಮಾಡಲೇಬೇಡಿ ಅಂತ ಪಟ್ಟು ಹಿಡಿದಿದ್ದಾರಂತೆ.

ನಿರ್ದೇಶಕ ಜಗದೀಶ್ ಹೇಳುವುದೇನು?

'ಮುತ್ತುಲಕ್ಷ್ಮಿ' ಚಿತ್ರದ ನಿರ್ದೇಶಕ ಜಗದೀಶ್ ಹೇಳುವ ಪ್ರಕಾರ 'ಮುತ್ತುಲಕ್ಷ್ಮಿ' ಚಿತ್ರ ನಿಂತಿಲ್ಲ. ''ಇದೆಲ್ಲಾ ಸುಳ್ಳು ಸುದ್ದಿ. ವೀರಪ್ಪನ್ ಪತ್ನಿ ಕಡೆಯಿಂದ ಉಂಟಾಗಿರುವ ಸಮಸ್ಯೆ ಬಗೆಹರಿಯಲಿದೆ. ನೈಜ ಕಥೆ ಆಧಾರಿತ ಚಿತ್ರವಾದ್ದರಿಂದ ಕಾಡಿನಲ್ಲೇ ನಾವು ಶೂಟಿಂಗ್ ಮಾಡಬೇಕು. ಅದಕ್ಕೆ ಪರ್ಮಿಷನ್ ಗಾಗಿ ಕಾಯುತ್ತಿದ್ದೇವೆ. ಈ ವಾರದೊಳಗೆ ಪರ್ಮಿಷನ್ ಸಿಗುತ್ತದೆ. ಸದ್ಯದಲ್ಲೇ 'ಮುತ್ತುಲಕ್ಷ್ಮಿ' ಸೆಟ್ಟೇರಲಿದೆ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ಜಗದೀಶ್ ತಿಳಿಸಿದ್ದಾರೆ.

'ಮುತ್ತುಲಕ್ಷ್ಮಿ' ಚಿತ್ರದ ಕಥಾಹಂದರ....

ಹೆಸರೇ ಹೇಳುವ ಹಾಗೆ, ಇದು ವೀರಪನ್ ಪತ್ನಿ ಮುತ್ತುಲಕ್ಷ್ಮಿ ಜೀವನಾಧಾರಿತ ಚಿತ್ರ. ಮುತ್ತುಲಕ್ಷ್ಮಿ ಪಾತ್ರದಲ್ಲಿ ನಟಿ ಪೂಜಾ ಗಾಂಧಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಪಾತ್ರವೊಂದರಲ್ಲಿ 'ರಿಯಲ್' ಮುತ್ತುಲಕ್ಷ್ಮಿ ಕೂಡ ಮಿಂಚಲಿದ್ದಾರೆ. ''ಅಟ್ಟಹಾಸ' ಚಿತ್ರದಲ್ಲಿ ವೀರಪ್ಪನ್ ಬಗ್ಗೆ ಅವಹೇಳನ ಮಾಡಲಾಗಿದೆ. ನನ್ನ ಕಥೆಯನ್ನ ಹೊತ್ತು ಒಂದು ಸಿನಿಮಾ ಮಾಡುವೆ'' ಅಂತ ಈ ಹಿಂದೆ ಎ.ಎಮ್.ಆರ್.ರಮೇಶ್ ಗೆ ಸವಾಲು ಹಾಕಿದ್ದ ವೀರಪ್ಪನ್ ಪತ್ನಿ 'ಮುತ್ತುಲಕ್ಷ್ಮಿ' ಸಿನಿಮಾ ಮೂಲಕ ಎಲ್ಲರ ಮುಂದೆ ಬರುವುದಕ್ಕೆ ನಿರ್ಧರಿಸಿದ್ದರು.

ನಿಂತ ಮಳೆ ಹುಡುಗಿಯ ಅಬ್ಬರ

ಬೇಡದ ವಿಷಯಗಳಿಗೆ ಸುದ್ದಿಯಾಗುತ್ತಾ ಸೋಲಿನ ಸುಳಿಯಲ್ಲೇ ಸಿಲುಕಿರುವ ಪೂಜಾ ಗಾಂಧಿ 'ಅಭಿನೇತ್ರಿ' ಚಿತ್ರದಿಂದ ಮತ್ತಷ್ಟು ಸೊರಗಿ ಹೋಗಿದ್ದಾರೆ. ಹಾಗೊಂದು ವೇಳೆ 'ಮುತ್ತುಲಕ್ಷ್ಮಿ' ಚಿತ್ರ ಸೆಟ್ಟೇರಿದರೆ, ಅದರಿಂದ ಮತ್ತೊಂದು ವಿವಾದ, ಗದ್ದಲ, ಕುತೂಹಲಗಳು ಹೆಚ್ಚಾಗಿ ಪೂಜಾಗೆ ಮತ್ತಷ್ಟು ಮೈಲೇಜ್ ಸಿಗಬಹುದು. ಇಲ್ಲಾಂದ್ರೆ, ಕೊಟ್ಟ ಮೂರು ಲಕ್ಷದ ಜೊತೆ ಒಂದು ಸಿನಿಮಾ ಲಾಸ್. ಅಲ್ಲಿಗೆ, ಗಾಂಧಿನಗರದಲ್ಲಿ ಮಳೆ ಹುಡುಗಿಯ ಅಬ್ಬರ ನಿಂತಹಾಗೆ. [ಪೂಜಾಗಾಂಧಿಗಿರುವಷ್ಟು ಎದೆಗಾರಿಕೆ ಇನ್ಯಾರಿಗಿದೆ?]

English summary
Pooja Gandhi starrer 'Muthulakshmi' is not shelved. Director Jagadish has made it clear to 'Filmibeat Kannada' that the film will go on floors shortly.
Please Wait while comments are loading...