For Quick Alerts
  ALLOW NOTIFICATIONS  
  For Daily Alerts

  'ಗಂಧದ ಗುಡಿ' ಸಿನಿಮಾ ನೋಡಿದ ಜಪಾನಿನ ಅಪ್ಪು ಅಭಿಮಾನಿಗಳು!

  |

  ಪುನೀತ್ ರಾಜ್‌ಕುಮಾರ್ ನಟನೆಯ 'ಗಂಧದ ಗುಡಿ' ಸಿನಿಮಾ ಬಿಡುಗಡೆ ಆಗಿ ತಿಂಗಳಾಗಲು ಕೆಲವೇ ದಿನಗಳು ಬಾಕಿ ಇದೆ. ಈಗಲೂ ಸಿನಿಮಾ ರಾಜ್ಯದಾದ್ಯಂತ ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಲೇ ಇದೆ.

  ಕರ್ನಾಟಕದ ಜನರು ಮಾತ್ರವೇ ಅಲ್ಲದೆ ಪರಭಾಷೆಯ ಜನರೂ ಸಹ ಅಪ್ಪುವಿನ ಈ ಅಪರೂಪದ ಸಿನಿಮಾವನ್ನು ನೋಡಿ ಖುಷಿ ಪಡುತ್ತಿದ್ದಾರೆ. ಇಂಥಹದ್ದೊಂದು ಅದ್ಭುತವಾದ ಪ್ರಯತ್ನ ಮಾಡಿದ್ದಕ್ಕೆ ಅಪ್ಪುವಿಗೆ ಹಾಗೂ 'ಗಂಧದ ಗುಡಿ' ತಂಡಕ್ಕೆ ಧನ್ಯವಾದ ಹೇಳುತ್ತಿದ್ದಾರೆ.

  ಇದೀಗ 'ಗಂಧದ ಗುಡಿ' ಸಿನಿಮಾವನ್ನು ಜಪಾನಿನ ಕೆಲವು ಅಪ್ಪು ಅಭಿಮಾನಿಗಳು ವೀಕ್ಷಿಸಿದ್ದು ಸಿನಿಮಾವನ್ನು ಮೆಚ್ಚಿ ರಾಘವೇಂದ್ರ ರಾಜ್‌ಕುಮಾರ್ ಅವರಿಗೆ ಅಭಿನಂದನೆ ಸಹ ಸಲ್ಲಿಸಿದ್ದಾರೆ. ಬೆಂಗಳೂರಿನಲ್ಲಿರುವ ಕೆಲವು ಜಪಾನಿನ ಕೆಲವು ಮಹಿಳಾ ಮಣಿಗಳು ಅಪ್ಪುವಿನ ಟಿ-ಶರ್ಟ್‌ಗಳನ್ನು ಧರಿಸಿ 'ಗಂಧದ ಗುಡಿ' ಸಿನಿಮಾ ವೀಕ್ಷಿಸಿದ್ದಾರೆ.

  ಬಳಿಕ ರಾಘವೇಂದ್ರ ರಾಜ್‌ಕುಮಾರ್ ಅವರ ನಿವಾಸಕ್ಕೆ ತೆರಳಿ ಅವರನ್ನು ಭೇಟಿಯಾಗಿ ತಮ್ಮ ಖುಷಿ ಹಂಚಿಕೊಂಡಿದ್ದಾರೆ. ಜಪಾನಿನ ಅಪ್ಪು ಪ್ರೇಮಿಗಳು ತಮ್ಮನ್ನು ಭೇಟಿಯಾದ ವಿಡಿಯೋ ಹಾಗೂ ಚಿತ್ರಗಳನ್ನು ರಾಘವೇಂದ್ರ ರಾಜ್‌ಕುಮಾರ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ರಾಘವೇಂದ್ರ ರಾಜ್‌ಕುಮಾರ್ ಹಂಚಿಕೊಂಡಿರುವ ವಿಡಿಯೋದಲ್ಲಿ ಜಪಾನಿನ ಪ್ರಜೆಗಳು, ರಾಘವೇಂದ್ರ ರಾಜ್‌ಕುಮಾರ್‌ಗೆ ಕೈ ಮುಗಿದು ನಮಸ್ಕಾರ ಮಾಡುತ್ತಾ, ನಗುತ್ತಾ ಮಾತನಾಡುತ್ತಿರುವ ದೃಶ್ಯಗಳು ಇವೆ. ರಾಘವೇಂದ್ರ ರಾಜ್‌ಕುಮಾರ್ ಅವರ ನಾಯಿಯೊಟ್ಟಿಗೆ ಆಟವಾಡುತ್ತಿರುವ ದೃಶ್ಯಗಳು ಇವೆ. ಕೊನೆಗೆ ಎಲ್ಲರೂ ಒಟ್ಟಿಗೆ ರಾಘವೇಂದ್ರ ರಾಜ್‌ಕುಮಾರ್ ಅವರೊಟ್ಟಿಗೆ ಫೋಟೊ ತೆಗೆಸಿಕೊಂಡಿದ್ದಾರೆ. ಅವರ ಪ್ರೀತಿಗೆ ಪ್ರತಿಯಾಗಿ ರಾಘವೇಂದ್ರ ರಾಜ್‌ಕುಮಾರ್ ಅವರು ಅವರಿಗೆ ಪುನೀತ್ ರಾಜ್‌ಕುಮಾರ್ ಅವರ ಪ್ರತಿಮೆಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

  'ಗಂಧದ ಗುಡಿ' ನೋಡಿ ಜಪಾನ್ ದೇಶದಿಂದ ಬಂದ ಪ್ರಜೆಗಳನ್ನು ನಮ್ಮ ನಿವಾಸದಲ್ಲಿ ಭೇಟಿಯಾದ ಕ್ಷಣಗಳು. ಒಳ್ಳೆಯ ಕೆಲಸ ಮಾಡಿದರೆ ಈ ಪ್ರಪಂಚವೇ ಗುರುತಿಸುವುದು ಎಂಬುದಕ್ಕೆ ಇದೇ ಉದಾಹರಣೆ' ಎಂದು ರಾಘವೇಂದ್ರ ರಾಜ್‌ಕುಮಾರ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

  'ಗಂಧದ ಗುಡಿ' ಸಿನಿಮಾ ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಸಿನಿಮಾ ಆಗಿದೆ. ಇದು ಸಾಮಾನ್ಯ ಕಮರ್ಷಿಯಲ್ ಸಿನಿಮಾ ಅಲ್ಲದೆ, ಪುನೀತ್ ರಾಜ್‌ಕುಮಾರ್ ಹಾಗೂ ಅಮೋಘವರ್ಷ ಅವರು ರಾಜ್ಯದ ಅರಣ್ಯಗಳನ್ನು ಸುತ್ತಿ ಅಲ್ಲಿನ ವನ್ಯಜೀವಿ, ಪ್ರಕೃತಿ ಸೌಂದರ್ಯವನ್ನು ಜನರ ಮುಂದಿಡಲು ಮಾಡಿದ ಯತ್ನವಾಗಿದೆ. ಸಿನಿಮಾ ಈಗಲೂ ರಾಜ್ಯದ ಹಲವೆಡೆ ಅದ್ಭುತ ಪ್ರದರ್ಶನ ಕಾಣುತ್ತಿದೆ. ಬೆಂಗಳೂರೊಂದರಲ್ಲಿಯೇ ಇನ್ನೂ ದಿನಕ್ಕೆ ಸುಮಾರು ನೂರು ಶೋಗಳು ಪ್ರದರ್ಶನಗೊಳ್ಳುತ್ತಿವೆ.

  ಸಿನಿಮಾಕ್ಕೆ ರಾಜ್ಯ ಸರ್ಕಾರವು ಸಂಪೂರ್ಣ ತೆರಿಗೆ ವಿನಾಯಿತಿ ಘೋಷಿಸಿದೆ. ಇದರ ಜೊತೆಗೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಹ, ರಾಜ್ಯದ ವಿದ್ಯಾರ್ಥಿಗಳು ಈ ಸಿನಿಮಾ ನೋಡಲೆಂದು ಟಿಕೆಟ್‌ ಬೆಲೆಯನ್ನು ಅರ್ಧದಷ್ಟು ಕಡಿಮೆ ಮಾಡಿದ್ದರು. ರಾಜ್ಯದ ಹಲವೆಡೆ ಸಂಘ ಸಂಸ್ಥೆಗಳು 'ಗಂಧದ ಗುಡಿ' ಸಿನಿಮಾವನ್ನು ಸ್ಥಳೀಯ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ತೋರಿಸುತ್ತಿದ್ದಾರೆ.

  English summary
  Some Japan citizen watched 'Gandhada Gudi' movie and met Raghavendra Rajkumar and express their joy about the movie.
  Tuesday, November 22, 2022, 21:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X