»   » ಗಾಡ್ ಫಾದರ್ ಗಾಲಿಕುರ್ಚಿ ಅಂಗವಿಕಲನಿಗೆ ದಾನ

ಗಾಡ್ ಫಾದರ್ ಗಾಲಿಕುರ್ಚಿ ಅಂಗವಿಕಲನಿಗೆ ದಾನ

Posted By:
Subscribe to Filmibeat Kannada
ಗಾಡ್ ಫಾದರ್ ಕನ್ನಡ ಚಿತ್ರ ನೋಡಿದವರು ಆ ಕುರ್ಚಿಯನ್ನು ಮರೆಯಲು ಸಾಧ್ಯವೇ ಇಲ್ಲ. ಅದರಲ್ಲಿ ತಂದೆಯ ಪಾತ್ರಧಾರಿ ಉಪೇಂದ್ರ ಒಂದು ವೀಲ್‍ಚೇರ್ ಬಳಸುತ್ತಾರೆ. ಅದು ರಿಮೋಟ್ ಕುರ್ಚಿ. ಮೋಟಾರ್ ಚಾಲಿತ ಆ ಛೇರ್‍ಗೆ ರಿಮೋಟ್ ಮೂಲಕ ವೇಗ ಹಾಗೂ ಚಲನೆ ನಿರ್ಧರಿಸುವ ಸಾಮರ್ಥ್ಯವಿತ್ತು.

ಬಹಳಷ್ಟು ವಿಕಲಚೇತನರು ಉಪಯೋಗಿಸುವ ವೀಲ್‍ಚೇರ್‍ಗಳಿಗೆ ಅದರ ಮೇಲೆ ಕುಳಿತವರೇ ತೋಳ್ಬಲ ಪ್ರಯೋಗಿಸಿ ಮುಂದೆ ಚಲಿಸುವಂತೆ ಮಾಡಬೇಕು. ಎಲ್ಲೆಡೆ ಹೆಚ್ಚು ಬಳಕೆಯಲ್ಲಿರುವ ವೀಲ್‍ಚೇರ್‍ಗಳು ಇಂಥವೇ.

ಮೋಟಾರು ಚಾಲಿತ ವೀಲ್‍ಚೇರ್‍ಗಳಿವೆಯಾದರೂ, ಅವು ಶ್ರೀಮಂತರಿಗೆ ಮಾತ್ರ ಖರೀದಿಸಲು ಸಾಧ್ಯ. ಅನೇಕರು ಅಂಥದ್ದನ್ನ ಇನ್ನೂ ಕಣ್ಣಿನಿಂದ ನೋಡಿ ಕೂಡಾ ಇಲ್ಲ. ಹಾಗಾಗಿ ಗಾಡ್‍ಫಾದರ್‍ನಲ್ಲಿ ಉಪ್ಪಿ ಉಪಯೋಗಿಸುವ ಆ ವೀಲ್‍ಛೇರ್ ಎಲ್ಲರ ಗಮನ ಸೆಳೆದಿತ್ತು. ವಿಕಲಚೇತನರಲ್ಲಿ ಕೆಲವರಾದರೂ ಅದರ ವಿಶೇಷತೆಯಿಂದಾಗಿ ಅದರ ಕಡೆ ಆಕರ್ಷಿತರಾಗಿದ್ದಿರಲಿಕ್ಕೆ ಸಾಕು.

ಕೆ. ಮಂಜು ಈಗೊಂದು ನಿರ್ಣಯಕ್ಕೆ ಬಂದಿದ್ದಾರೆ. ಅದೇನೆಂದರೆ ಗಾಡ್‍ಫಾದರ್ ಚಿತ್ರದಲ್ಲಿ ಉಪೇಂದ್ರ ತನ್ನ ಪಾತ್ರ ನಿರ್ವಹಣೆಗೆ ಬಳಸಿದ್ದ ಆ ಚೇರನ್ನು ಬಡ ವಿಕಲಚೇತನರೊಬ್ಬರಿಗೆ ದಾನ ಮಾಡುವುದು. ಇದೇ ಹದಿನೆಂಟನೇ ತಾರೀಖು ವಿಷ್ಣುವರ್ಧನ್‍ರ ಜನ್ಮದಿನಾಚರಣೆ.

ಮಂಜು ವಿಷ್ಣುವರ್ಧನ್‍ರ ಸಿನಿಮಾಗಳ ನಿರ್ಮಾಣ ಮಾಡುವ ಮೂಲಕವೇ ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡವರು. ವಿಷ್ಣುವರ್ಧನ್ ಬದುಕಿರುವ ತನಕವೂ ಅವರ ಹಿಂದೆ ಮುಂದೆ ಓಡಾಡುತ್ತಿದ್ದ ಬಂಟರಲ್ಲಿ ಮಂಜು ಕೂಡಾ ಒಬ್ಬರು. ಹೀಗಾಗಿ ವಿಷ್ಣುವರ್ಧನ್ ಜನ್ಮ ದಿನಾಚರಣೆಯಂದು ಅವರ ಸ್ಮಾರಕದ ಬಳಿ ಬರುವ ಯಾರೋ ಒಬ್ಬ ಅದೃಷ್ಟಶಾಲಿ ವಿಕಲಚೇತನ ಅಭಿಮಾನಿಗೆ ಈ ವೀಲ್‍ಚೇರನ್ನು ದಾನವಾಗಿ ಕೊಡುವುದು ಕೊಬ್ರಿ ಮಂಜು ಯೋಜನೆ.

ಅದೇ ದಿನ ಉಪೇಂದ್ರ ಹುಟ್ಟುಹಬ್ಬ ಕೂಡ ಹೌದಾಗಿರುವುದರಿಂದ ಈ ಇಬ್ಬರು ನಟರ ಹೆಸರಿನಲ್ಲಿ ಮಂಜು ಅವತ್ತು ಈ ಚೇರ್ ದಾನ ಮಾಡಲಿದ್ದಾರಂತೆ. ಮಾರಿದರೆ ಹತ್ತಿರತ್ತಿರ ಒಂದು ಲಕ್ಷಕ್ಕೆ ಮಾರಾಟವಾಗುತ್ತಿದ್ದ ಈ ಕುರ್ಚಿಯನ್ನು ಮಂಜು ಯಾರೋ ಒಬ್ಬ ವಿಕಲಚೇತನನಿಗೆ ವಿತರಿಸುತ್ತಿರುವುದು ಶ್ಲಾಘನೀಯ. [ಪರಭಾಷಾ ವಿರೋಧಿ ಮಂಜು ತಮಿಳು ಚಿತ್ರದ ಡಿಸ್ಟ್ರಿಬ್ಯೂಟರ್]

English summary
Producer K Manju to gift remote WheelChair to a physically handicapped person on the on the occasion of Late Vishnuvardhans Bday, 18th Sept. The Chair was used in Kannada movie 'GodFather', starring Upendra and Soundarya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada