twitter
    For Quick Alerts
    ALLOW NOTIFICATIONS  
    For Daily Alerts

    ಸರ್ಕಾರ ಡಬ್ಬಿಂಗ್ ಗೆ ಬಾಗಿಲು ತೆರೆಯಲಿ: ಕಮಲ್

    By Rajendra
    |

    ಭಾರತೀಯ ಚಿತ್ರರಂಗದ ಮಹಾನ್ ಕಲಾವಿದ, ಸರಳ ಸಜ್ಜನ ಸುಂದರ ನಟ ಕಮಲ್ ಹಾಸನ್ ಅವರ ಜೊತೆ ಸಂವಾದ ಎಂದರೆ ಕೇಳಬೇಕೆ. ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಶನಿವಾರ (ಅ.5) ಮಧ್ಯಾಹ್ನ ಹಮ್ಮಿಕೊಂಡಿದ್ದ ಪತ್ರಿಕಾ ಸಂವಾದಲ್ಲಿ ಮಾಧ್ಯಮ ಮಿತ್ರರು ಕಿಕ್ಕಿರಿದಿದ್ದರು. ಕಮಲ್ ಅವರಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ತೂರಿಬಂದವು.

    ಎಲ್ಲಾ ಪ್ರಶ್ನೆಗಳನ್ನು ಕಮಲ್ ಅವರು ಸಮಾಧಾನಚಿತ್ತದಿಂದ ಉತ್ತರಿಸಿದರು. ಕೆಲವು ಗಂಭೀರ ಪ್ರಶ್ನೆಗಳಿಗೆ ಹಾಸ್ಯದ ಲೇಪನ ಹಚ್ಚಿ ಸಿಂಪಡಿಸಿದರು. ಸರಿಸುಮಾರು ಅರ್ಧ ಗಂಟೆ ಕಾಲ ಮಾತನಾಡಿದರು. ತಮ್ಮ ವಿಶ್ವರೂಪಂ ಭಾಗ 2 ಚಿತ್ರ, ರಾಜಕೀಯ, ಬೆಂಗಳೂರು, ಪುಟ್ಟಣ್ಣ ಕಣಗಾಲ್, ರಜನಿಕಾಂತ್ ಹೀಗೆ ಅವರು ನಾನಾ ವಿಚಾರಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು.

    Kamal Haasan
    "ಡಾ.ರಾಜ್ ಕುಮಾರ್ ಅವರ ಮನೆಯಲ್ಲೇ ಕಮಲ್ ಅವರಿಗೆ ಅಭಿಮಾನಿಗಳಿದ್ದಾರೆ. ಕರ್ನಾಟಕ ಸಿನಿಮಾ ಜಗತ್ತಿನ ಪ್ರಥಮ ಪ್ರಜೆ ಡಾ.ರಾಜ್ ಕುಮಾರ್ ಅವರ ಮನೆಯಿಂದ ಹಿಡಿದು ರಾಜ್ಯದ ಮೂಲೆ ಮೂಲೆಗಳಲ್ಲಿ ಕಮಲ್ ಅವರಿಗೆ ಅಭಿಮಾನಿಗಳಿದ್ದಾರೆ" ಎಂದು ಶಿವರಾಜ್ ಕುಮಾರ್ ಅವರು ಅನೇಕ ಸಂದರ್ಶನಗಳಲ್ಲಿ ಹೇಳಿದ್ದಾರೆ ಎಂಬುದನ್ನು ಬೆಂಗಳೂರು ಪ್ರೆಸ್ ಕ್ಲಬ್ ನ ಪ್ರಧಾನ ಕಾರ್ಯದರ್ಶಿ ಹಾಗೂ ಪತ್ರಕರ್ತ ಸದಾಶಿವ ಶೆಣೈ ಪ್ರಸ್ತಾವಿಕ ಭಾಷಣದಲ್ಲಿ ಹೇಳಿದರು.

    ನೀವು ದೇಶ ಬಿಡಲು ಸಿದ್ಧರಿದ್ದೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಬೆದರಿಕೆ ಹಾಕಲಿಲ್ಲ. ನನಗೆ ನಿಜಕ್ಕೂ ನೋವಾಗಿತ್ತು. 'ವಿಶ್ವರೂಪಂ' ಚಿತ್ರಕ್ಕೆ ಎದುರಾದ ಸಮಸ್ಯೆಗಳಿಗೆ ಬೇಸತ್ತು ಆ ರೀತಿ ಹೇಳಿದ್ದೆ. ಒಂದು ವೇಳೆ ನಾನು ದೇಶ ಬಿಡ್ತೀನಿ ಎಂದರೂ ಜನ ನನ್ನನ್ನು ಬಿಡಬೇಕಲ್ಲಾ ಎಂದು ಪ್ರಶ್ನಿಸಿದರು.

    ಕರ್ನಾಟಕ ಜನರೊಂದಿಗಿನ ಸಂಬಂಧ ಸದಾ ಕಾಲವೂ ಉತ್ತಮವಾಗಿದೆ. ಇಲ್ಲಿನ ಜನ ನನ್ನ ಮೇಲೆ ಪ್ರೀತಿ ವಿಶ್ವಾಸವಿಟ್ಟಿದ್ದಾರೆ. ಅವರಿಗೆ ನಾನು ಆಭಾರಿಯಾಗಿದ್ದೇನೆ ಎಂದರು. ಪುಟ್ಟಣ್ಣ ಕಣಗಾಲ್ ಅವರ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂದು ಬಾಲಚಂದರ್ ಕಾತುರದಿಂದ ನಿರೀಕ್ಷಿಸುತ್ತಿದ್ದರು.

    ನಾನು ಮುಸ್ಲಿಂ ವಿರೋಧಿಯಲ್ಲ. ಗಾಂಧೀಜಿಯವರ ಅಹಿಂಸೆಯನ್ನು ನಾನು ಬೆಂಬಲಿಸುತ್ತೇನೆ. ಸಮಾಜದಲ್ಲಿ ಸದಾಕಾಲ ಶಾಂತಿ ನೆಮ್ಮದಿ ಇರಬೇಕೆಂದು ಬಯಸುವ ಒಬ್ಬ ಕ್ರಿಯಾಶೀಲ ಕಲಾವಿದ ಎಂದು ಹೇಳಿದರು.

    ರಜನಿಕಾಂತ್ ಹಾಗೂ ನಾನು ಒಂದೇ ಚಿತ್ರದಲ್ಲಿ ಅಭಿನಯಿಸಲು ಯಾವುದೇ ಅಭ್ಯಂತರವಿಲ್ಲ. ಇಬ್ಬರೂ ಒಂದೇ ಚಿತ್ರದಲ್ಲಿ ಅಭಿನಯಿಸುವುದರಿಂದ ನಮಗೂ ಲಾಭವಾಗಲ್ಲ. ಸರ್ಕಾರಕ್ಕೂ ಲಾಭವಾಗಲ್ಲ. ಕೇವಲ ಕೆಲವು ಜನರಿಗಷ್ಟೇ ಲಾಭವಾಗುತ್ತದೆ. ಹಾಗಾಗಿ ಇದು ವ್ಯವಹಾರಿಕ ದೃಷ್ಟಿಯಲ್ಲಿ ಅಷ್ಟು ಸರಿಬರಲ್ಲ ಎಂದರು.

    ಪೈರಸಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಯಾವುದೇ ರಾಜ್ಯಕ್ಕೂ ಸಂಪೂರ್ಣವಾಗಿ ಸಾಧ್ಯವಾಗಿಲ್ಲ. ಒಟ್ಟಾರೆ ಸಿಸ್ಟಂ ಇದರಲ್ಲಿ ಭಾಗಿಯಾಗಿದೆ. ಸರ್ಕಾರ ಏನು ಮಾಡಲಿಕ್ಕಾಗುತ್ತದೆ. ಚಿತ್ರ ನಿರ್ಮಾಪಕರು ಸೇರಿದಂತೆ ಪ್ರತಿಯೊಬ್ಬರೂ ಇದರಲ್ಲಿ ಭಾಗಿಯಾಗಿದ್ದಾರೆ. ಪೈರಸಿಯನ್ನು ನಮ್ಮ ದೇಶದಲ್ಲಿ ನಿಯಂತ್ರಿಸಲು ಸಾಧ್ಯವೇ ಇಲ್ಲ. ಮೊದಲು ನಮ್ಮಲ್ಲಿ ಆ ಬಗ್ಗೆ ಅವಗಾಹನೆ ಬರಬೇಕು.

    ಸೆನ್ಸಾರ್ ಮಂಡಳಿ ನಿಯಮಗಳ ಬಗ್ಗೆ ಸಮಾಧಾನವಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಈ ಪ್ರಶ್ನೆಯನ್ನು ಮೂವತ್ತು ವರ್ಷಗಳ ಹಿಂದೆ ಕೇಳಿದ್ದರೂ ನನಗೆ ಸಮಾಧಾನವಿಲ್ಲ ಎಂದೇ ಹೇಳುತ್ತಿದ್ದೆ. ಈಗ ಸಾಕಷ್ಟು ಸುಧಾರಿಸಿದೆ. ಈ ಬಗ್ಗೆ ತಮಗೆ ಸ್ವಲ್ಪ ಸಮಾಧಾನವಿದೆ ಎಂದರು.

    ಮೂಲ ಚಿತ್ರಕ್ಕೆ ಇರುವ ಬೆಲೆ, ಮೌಲ್ಯ ಇದ್ದೇ ಇರುತ್ತದೆ. ಆದರೂ ಇದು ಡಬ್ಬಿಂಗ್ ಚಿತ್ರ ಎಂಬ ಅರಿವು ಎಲ್ಲರಿಗೂ ಇರುತ್ತದೆ. ಡಬ್ಬಿಂಗ್ ನಿಂದ ಹೆಚ್ಚಿನ ಬಿಜಿನೆಸ್ ಗೂ ಸಾಧ್ಯವಾಗುತ್ತದೆ. ಸರ್ಕಾರ ಡಬ್ಬಿಂಗ್ ಗೆ ಅವಕಾಶ ಮಾಡಿಕೊಡಬೇಕು. ಡಬ್ಬಿಂಗ್ ಚಿತ್ರಗಳಿಗೆ ಬಾಗಿಲು ತೆರೆದರೆ ನಷ್ಟವೇನು ಸಂಭವಿಸಲ್ಲ. ಇದು ಕೇವಲ ತಮ್ಮ ವೈಯಕ್ತಿಕ ಅಭಿಪ್ರಾಯಷ್ಟೇ ಎಂದು ಹೇಳಿದರು.

    ಹಾಲಿವುಡನ್ನು ಭಾರತಕ್ಕೆ ತರುವ ಕನಸನ್ನು ನನಸು ಮಾಡಲು ನನ್ನ ಎಲ್ಲ ಶಕ್ತಿ, ಸಾಮರ್ಥ್ಯಗಳನ್ನು ಧಾರೆ ಎರೆಯುತ್ತೇನೆ. ಹಾಲಿವುಡ್ ಒಂದು ಸಣ್ಣ ಪ್ರದೇಶ. ಆದರೆ ಜಗತ್ತಿನ ಸಿನಿಮಾಗಳನ್ನು ನಿಯಂತ್ರಿಸುವಷ್ಟು ದೊಡ್ಡದಾಗಿ ಬೆಳೆದಿದೆ. ಭಾರತದಂತಹ ವಿಶಾಲ ದೇಶಕ್ಕೆ ಹಾಲಿವುಡ್ ಸ್ಥಳಾಂತರ ಮಾಡಬೇಕಾದ ದೊಡ್ಡ ಕನಸು ನನ್ನ ಮುಂದಿದೆ ಎಂದರು.

    ಇದಕ್ಕೂ ಮುನ್ನ FICCI Media ಏರ್ಪಡಿಸಿದ್ದ ಸರ್ಮಾರಂಭದಲ್ಲೂ ಅವರು ಮಾತನಾಡಿದರು. ಅನಿಮೇಷನ್ ಪಾಲಿಸಿ ತರಲು ಹಾಗೂ ಸಿನಿಮಾದಲ್ಲಿ ಹೊಸ ಡಿಜಿಟಲ್ ತಂತ್ರಜ್ಞಾನ ಅಳವಡಿಸುವ ಬಗ್ಗೆ ಬೆಂಗಳೂರಿನ ಐಟಿಸಿ ಗಾರ್ಡೇನಿಯಾ ಹೋಟೆಲ್ ನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕಮಲ್ ಅವರ ನಾಯಕತ್ವದಲ್ಲೇ ಈ ಸಮಾವೇಶ ನಡೆಯಲಿದೆ ಎಂದರು. (ಒನ್ಇಂಡಿಯಾ ಕನ್ನಡ)

    English summary
    Karnataka Should open the door for dubbing films, more business will come in that way says by Kamal Haasan in the Press Club of Bangalore and BRG organized a Meet the Press Programme with Kamal Hassan on 5th October 2013 at 12.00 pm.
    Saturday, October 5, 2013, 17:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X