Just In
Don't Miss!
- News
ಪೆಟ್ರೋಲ್, ಡೀಸೆಲ್ ದರ ಏರಿಕೆ: ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ
- Education
UAS Dharwad Recruitment 2021: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಮಾ.10ಕ್ಕೆ ನೇರ ಸಂದರ್ಶನ
- Automobiles
ಹೊಸ ರೂಪದೊಂದಿಗೆ ರಸ್ತೆಗಿಳಿಯಲಿವೆ ತೆರೆಮರೆಗೆ ಸರಿದ ಜಟಕಾ ಬಂಡಿ
- Sports
ಐಎಸ್ಎಲ್: ಫೈನಲ್ಗಾಗಿ ನಾರ್ಥ್ ಈಸ್ಟ್, ಬಾಗನ್ ನಡುವೆ ಫೈನಲ್ ಫೈಟ್
- Lifestyle
ಮಾ.11ಕ್ಕೆ ಕುಂಭ ರಾಶಿಗೆ ಬುಧನ ಪ್ರವೇಶ: ನಿಮ್ಮ ಬದುಕಿನಲ್ಲಿ ಆಗಲಿದೆ ಈ ಬದಲಾವಣೆ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನೆನಪಿನ ಗಣಿಯಿಂದ : ನಟ, ನಿರ್ದೇಶಕ ಕಾಶಿನಾಥ್ ವಿಶೇಷ ಸಂದರ್ಶನ
(ಕನ್ನಡ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾನ್ವಿತ ನಟ, ನಿರ್ದೇಶಕ ಮತ್ತು ಹೊಸ ಅಲೆಯನ್ನೇ ಎಬ್ಬಿಸಿದ ಕಾಶಿನಾಥ್ ಅವರು ಇಂದು (ಜನವರಿ 18ರಂದು) ನಮ್ಮನ್ನು ಅಗಲಿದ್ದಾರೆ. ಕೆಲ ವರ್ಷಗಳ ಹಿಂದೆ ಫಿಲ್ಮಿಬೀಟ್ ಮಾಡಿದ್ದ ಅವರ ಸಂದರ್ಶನವನ್ನು ಈಗ ಮರುಪ್ರಕಟಿಸುತ್ತಿದ್ದೇವೆ. ಅವರಿಗೆ ನಮ್ಮ ನುಡಿನಮನ - ಸಂಪಾದಕ.)
ಚಿತ್ರರಂಗದಿಂದ ಟ್ವಿಟ್ಟರ್ ನಲ್ಲಿ ಕಾಶಿನಾಥ್ ಗೆ ಅಶ್ರುತರ್ಪಣ
ಕನ್ನಡ ಚಿತ್ರರಂಗ ಕಂಡ ಒಬ್ಬ ಅಪರೂಪದ ನಟ, ನಿರ್ದೇಶಕ ಹಾಗೂ ನಿರ್ಮಾಪಕರು ಕಾಶಿನಾಥ್. ಇದೀಗ ಕಪಾಲಿ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನದ ಕಾಣುತ್ತಿರುವ ಅವರ ಮಗ ಅಭಿಮನ್ಯು ನಾಯಕತ್ವ ಹಾಗೂ ಕಾರ್ತಿಕ್ ನಿರ್ದೇಶನದ '12 AM ಮಧ್ಯರಾತ್ರಿ' ಚಿತ್ರದಲ್ಲಿ ಅವರೂ ಒಂದು ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಕಾಶಿನಾಥ್ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಪ್ರತ್ಯಕ್ಷರಾಗಿದ್ದಾರೆ. ಈ ಚಿತ್ರಕ್ಕೆ ಕಾಶಿನಾಥ್ ಕಾರ್ಯಕಾರಿ ನಿರ್ಮಾಪಕರು ಎಂಬುದು ವಿಶೇಷ.
ಇಂಥ ಕಾಶೀನಾಥ್, 'ಒನ್ ಇಂಡಿಯಾ ಕನ್ನಡ'ದ 'ರಾಜೇಂದ್ರ ಚಿಂತಾಮಣಿ' ಮತ್ತು 'ಶ್ರೀರಾಮ್ ಭಟ್' ಜೊತೆ ನಡೆಸಿದ ಮಾತುಕತೆಯಲ್ಲಿ 'ನೇರ' ಹಾಗೂ 'ದಿಟ್ಟ' ಮಾತಿನಲ್ಲಿ ತಮಗಿರುವ ಚಿತ್ರೋದ್ಯಮದ ಬಗೆಗಿನ 'ನಿರಂತರ' ಕಾಳಜಿಯನ್ನು ಹಂಚಿಕೊಂಡಿದ್ದಾರೆ. ಅವರ ಮನದಾಳದ ಮಾತುಗಳು ಇಲ್ಲಿವೆ, ಓದಿ...
* ಕನ್ನಡ ಚಿತ್ರರಂಗದ ಸೀನಿಯರ್ ನಟ, ನಿರ್ದೇಶಕರಾಗಿರುವ ನಿಮಗೇ ಚಿತ್ರ ಬಿಡುಗಡೆಗೆ ಅಷ್ಟೊಂದು ಕಷ್ಟವಾಗಿದ್ದು ಹೇಗೆ?
ಇಲ್ಲಿ 'ಸೀನಿಯರ್' ಅಥವಾ 'ಜೂನಿಯರ್' ಎಂಬ ಮಾತೇ ಅಪ್ರಸ್ತುತ. ಈಗಿರುವ ಪರಿಸ್ಥಿತಯಲ್ಲಿ ಸಹಜ ಎಂಬಂತೆ ಥಿಯೇಟರ್ ಮಾಲೀಕರಿಗೆ ಬಿಸಿನೆಸ್ ಮುಖ್ಯವಾಗಿದೆ ಅಷ್ಟೇ. ಈ ಕ್ಷಣಕ್ಕೆ ದುಡ್ಡು ಬೇಕು ಎಂಬುದನ್ನೇ ಚಿತ್ರಮಂದಿರದ ಮಾಲೀಕರು ಮನಸ್ಸಿನಲ್ಲಿಟ್ಟುಕೊಂಡಿರುವಾಗ ಹೀಗಾಗುವುದು ಸಹಜ.
ಆಗ ನಿರ್ಮಾಪಕರು ಯಾವ ಭಾಷೆಯವರು, ಯಾವ ಭಾಷೆಯ ಚಿತ್ರ ಎಂಬ ಯಾವ ಅಂಶಗಳೂ ಮುಖ್ಯವಾಗುವುದಿಲ್ಲ. "ಆ ಚಿತ್ರಕ್ಕೆ ಅಷ್ಟು ಬಾಡಿಗೆ ಕೊಡುತ್ತಾರೆ, ನೀವೂ ಕೊಡಿ. ನಿಮ್ಮ ಚಿತ್ರವನ್ನೇ ಪ್ರದರ್ಶಿಸುತ್ತೇವೆ. ಇಲ್ಲದಿದ್ದರೆ ಹೆಚ್ಚು ಕೊಟ್ಟವರಿಗೆ ಆದ್ಯತೆ ನೀಡುತ್ತೇವೆ" ಎಂಬ ಥಿಯೇಟರ್ ಮಾಲೀಕರ ಮಾತುಗಳನ್ನು ವಿಶ್ಲೇಷಿಸಿದಾಗ ಆಳದಲ್ಲಿ ಅವರ ಬದುಕುವ ದಾರಿಯೇ ನಮಗೆ ಗೋಚರಿಸುತ್ತದೆ.
ಇಲ್ಲಿ ನಾವು ಸರ್ಕಾರದ ನೀತಿ-ನಿಯಮಗಳ ಬಗ್ಗೆಯೇ ಪ್ರಶ್ನಿಸಬೇಕಾಗುತ್ತದೆ. ಭಾಷಾವಾರು ಪ್ರಾಂತ್ಯದ ಮೂಲಕ ರಾಜ್ಯಗಳ ರಚನೆ ಆಗಿರುವಾಗ ಸರ್ಕಾರಕ್ಕೆ ತನ್ನ ರಾಜ್ಯದ ಹಿತದೃಷ್ಟಿ ಮೊದಲಿಗೆ ಮುಖ್ಯವಾಗಬೇಕು. ಕೇವಲ ಸಿನಿಮಾ ಮಾತ್ರವಲ್ಲ, ಇಲ್ಲಿನ ಎಲ್ಲಾ ಕಲೆ ಹಾಗೂ ಸಂಸ್ಕೃತಿಗಳ ಉಳಿವಿಗೆ ಸರ್ಕಾರ ಶ್ರಮಿಸಬೇಕು, ನೀತಿ ನಿಯಮಗಳು ಇದಕ್ಕೆ ಪೂರಕವಾಗಿರಬೇಕು.
ಸಿನಿಮಾ ವಿಷಯಕ್ಕೆ ಬರುವುದಾದರೆ ಇಲ್ಲಿನ ಲಿಮಿಟೆಡ್ ಮಾರ್ಕೆಟ್ ನಲ್ಲಿ ಕನ್ನಡ ಸಿನಿಮಾ ಉದ್ಯಮ ಉಳಿಯಬೇಕಿದ್ದರೆ, ಬೆಳೆಯಬೇಕಿದ್ದರೆ ಪರಭಾಷೆಯ ಚಿತ್ರಗಳಿಗೆ ಕೆಲವೊಂದು ಪ್ರತ್ಯೇಕ ನೀತಿ-ನಿಯಮಗಳನ್ನು ಮಾಡಿ ಕನ್ನಡ ಚಿತ್ರಗಳಿಗೆ ಹೆಚ್ಚಿನ ಅನುಕೂಲ, ಆದ್ಯತೆ ಕಲ್ಪಿಸಬೇಕು. ಅದಕ್ಕೆ ಇಲ್ಲಿನ ನಿರ್ಮಾಪಕರು, ಚಿತ್ರಮಂದರಿಗಳ ಮಾಲೀಕರು, ವಿತರಕರು ಸೇರಿದಂತೆ ಎಲ್ಲರೂ ಸಹಕರಿಸಬೇಕು. ಆಗ ಕನ್ನಡ ಚಿತ್ರಗಳ ಬಿಡುಗಡೆಗೆ ಈಗಿನಂತೆ ಸಮಸ್ಯೆಗಳು ಉದ್ಭವಿಸುವುದಿಲ್ಲ.
ಈ ಕ್ಷಣಕ್ಕೆ ದುಡ್ಡು ಮಾಡಿಬಿಡಬೇಕೆನ್ನುವ ಮನೋಭಾವವನ್ನು ತ್ಯಜಿಸಿ ದೂರದೃಷ್ಟಿ ಹಾಗೂ ಉದ್ಯಮದ ಹಿತದೃಷ್ಟಿಯಿಂದ ಎಲ್ಲರೂ ಯೋಚಿಸಿದಾಗ ಈಗಿನ ಪರಿಸ್ಥಿತಿ ಬದಲಾಗುವುದು ಖಂಡಿತ. ಹಾಗಾಗದಿದ್ದರೆ ನಿಧಾನವಾಗಿ ಕನ್ನಡ ಚಿತ್ರಗಳು ನಶಿಸಿ ಹೋಗುವ ದಿನಗಳು ದೂರವಿಲ್ಲ. ಹಾಗಾಗದಿರಲಿ ಎಂಬ ಕಾಳಜಿ ನನ್ನದು ಅಷ್ಟೇ.
* ಇತ್ತೀಚಿಗೆ ಜನರು ಕನ್ನಡ ಸಿನಿಮಾಗಳನ್ನು ಹೆಚ್ಚಾಗಿ ನೊಡದೇ ಪರಭಾಷೆಯ ಚಿತ್ರಗಳಿಗೇ ಹೆಚ್ಚು ಆಕರ್ಷಿತರಾಗಲು ಕಾರಣವೇನು?
ಮೊದಲನೆಯದು ಕ್ವಾಲಿಟಿ. ಇಲ್ಲಿನ ಲಿಮಿಟೆಡ್ ಮಾರುಕಟ್ಟೆಯಲ್ಲಿ ಬಿಗ್ ಬಜೆಟ್ ಚಿತ್ರಗಳು ಬರುವುದು ಕಡಿಮೆ. ಬಜೆಟ್ ಕಡಿಮೆಯಿರುವಾಗ ಸಹಜವಾಗಿಯೇ ಚಿತ್ರದ ಗುಣಮಟ್ಟ ಕಡಿಮೆಯಾಗಿರುತ್ತದೆ. ಆದರೆ ಇದು ಅರ್ಧಸತ್ಯ. ಕಾರಣ, ಇಲ್ಲಿಯೇ ಸುತ್ತಮುತ್ತಲೂ ಇರುವ ಸುಂದರ ಪರಿಸರವನ್ನು ಬಿಟ್ಟು ಚಿತ್ರತಂಡ ಅನಾವಶ್ಯಕವಾಗಿ ಎಲ್ಲೆಲ್ಲೋ ಸುತ್ತಿ ಹಣ ಪೋಲಾಗಿಸುವುದನ್ನು ಮೊದಲು ತಡೆಗಟ್ಟಬೇಕು.
ಜೊತೆಗೆ ಹಾಡಿಗಾಗಿ ವಿದೇಶಕ್ಕೆ ಹೋಗುವ ವಿಚಾರದಲ್ಲಿಯೂ ಸಾಕಷ್ಟು ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲಿನ ನೆಟಿವಿಟಿಗೆ ತಕ್ಕಂತಿರುವ ಸಿನಿಮಾ ಹಾಡುಗಳ ಲೊಕೇಶನ್ ಎಲ್ಲಿಯದೋ ಆಗಿದ್ದರೆ ಸಮಂಜಸವೆನಿಸುವುದಿಲ್ಲ. ಹೀಗಾಗಿ, ನಮ್ಮಲಿಯೇ ಇರುವ ಅನುಕೂಲತೆಗಳನ್ನು ಬಳಸಿಕೊಂಡು ಆದಷ್ಟೂ 'ರಿಚ್' ಆಗಿ ಸಿನಿಮಾ ಮಾಡಿ ಜನರ ಮುಂದಿಟ್ಟರೆ 'ಕನ್ನಡ ಸಿನಿಮಾಗಳನ್ನು ಇಲ್ಲಿನವರು ನೋಡುವುದಿಲ್ಲ' ಎಂಬ ಮಾತು ಸುಳ್ಳಾಗುವುದು ಖಂಡಿತ ಎಂಬುದು ನನ್ನ ಅಭಿಪ್ರಾಯ.
ಇನ್ನೊಂದು ವಿಷಯವೆಂದರೆ, ಪರಭಾಷೆಯ ಮಸಾಲೆ ಚಿತ್ರಗಳಿಗೆ ಪ್ರೇಕ್ಷಕರು ತಕ್ಷಣ ಮನಸೋಲುವುದು ಸಹಜ. ಅದೊಂದು ಟ್ರೆಂಡ್ ಈಗ ಬೆಳೆದಿದೆ. ಆದರೆ ನಾವು ದೂರದೃಷ್ಟಿಯಂದ ಕೂಡಿದ ಒಳ್ಳೆಯ ಕನ್ನಡ ಚಿತ್ರಗಳನ್ನು ಮಾಡಿ ಪ್ರೇಕ್ಷಕರ ಮುಂದಿಟ್ಟು ಅವರನ್ನು ಆಕರ್ಷಿಸಿದರೆ ಚಿಕ್ಕ ಬಜೆಟ್ ಚಿತ್ರವಾದರೂ ಜನರು ನೋಡುತ್ತಾರೆ. ನಮ್ಮತನ, ನಮ್ಮ ಚಿತ್ರಗಳು ಹಾಗೂ ಮಾರುಕಟ್ಟೆ ಉಳಿಯುವುದಷ್ಟೇ ಅಲ್ಲ, ಬೆಳೆಯುತ್ತವೆ.
* ಹಾಗಿದ್ದರೆ ಈಗಿನ ವಿಷಮ ಪರಿಸ್ಥಿತಿಯಲ್ಲಿ ಕನ್ನಡ ಚಿತ್ರಗಳನ್ನು ಬಿಡುಗಡೆ ಮಾಡುವುದು ಹೇಗೆ?
ಬುದ್ಧಿವಂತಿಕೆ ಬಳಸಬೇಕು. ಚಿತ್ರೋದ್ಯಮದ ಎಲ್ಲರೂ ಒಗ್ಗಟ್ಟಾಗಿ ಕನ್ನಡ ಚಿತ್ರಗಳ ಬಿಡುಗಡೆಗೆ ಪೂರಕ ವಾತಾವರಣ ನಿರ್ಮಾಣವಾಗುವವರೆಗೆ ನಾವು ಸಾಕಷ್ಟು ಯೋಚಿಸಿಯೇ 'ನಿರ್ಮಾಣ' ಹಾಗೂ 'ಬಿಡುಗಡೆ' ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ನಮ್ಮದು ಸ್ಮಾಲ್ ಬಜೆಟ್ ಚಿತ್ರವಾಗಿದ್ದರೆ, ಪರಭಾಷೆಯ ಬಿಗ್ ಬಜೆಟ್ ಚಿತ್ರಗಳಿಲ್ಲದಿರುವಾಗ ನಮ್ಮ ಚಿತ್ರಗಳನ್ನು ಬಿಡುಗಡೆ ಮಾಡಿದರಷ್ಟೇ ಸ್ವಲ್ಪ ದುಡ್ಡು ದುಡಿಯಬಹುದು. ಬುದ್ಧಿವಂತಿಕೆ ಬಳಸದಿದ್ದರೆ ಗೋವಿಂದನೇ ಗತಿ!
* ಕನ್ನಡದ ಸಿನಿಮಾ ಒಂದನ್ನು ನಿರ್ಮಿಸಲು ನಿಮ್ಮ ಪ್ರಕಾರ ಕನಿಷ್ಟ ಎಷ್ಟು ಬಜೆಟ್ ಬೇಕು?
ಮೊದಲನೆಯದಾಗಿ ಅದು ಚಿತ್ರದ ಕಥೆಯನ್ನು ಅವಲಂಬಿಸಿದೆ ಎಂದೇ ಹೇಳಬೇಕಾಗುತ್ತದೆ. ಆದರೂ ಈಗಿನ ಪರಿಸ್ಥಿತಿಯಲ್ಲಿ ಕನಿಷ್ಟ ರು. 1.50 ಕೋಟಿ ಬೇಕು. ಇಲ್ಲಿದಿದ್ದರೆ ಜನರು ಇಷ್ಟಪಡುವಂತಹ ಸಿನಿಮಾ ಕೊಡುವುದು ಕಷ್ಟ.
*ನಿಮ್ಮ ಚಿತ್ರಗಳೆಲ್ಲಾ ಹೆಚ್ಚಾಗಿ 'ಅ' ಕಾರಗಳಿಂದಲೇ ಪ್ರಾರಂಭವಾಗಿವೆ. 'ಅ' ಕಾರದ ರಹಸ್ಯವೇನು?
ಅದರಲ್ಲಿ ಯಾವುದೇ ರಹಸ್ಯವಿಲ್ಲ. ಕಥೆಗೆ ಸೂಟ್ ಆಗುವಂತಹ ಹೆಸರು ಅಷ್ಟೇ. ಜೊತೆಗೆ 'ಟೈಟಲ್' ಜನರನ್ನು ಅದು ಆಕರ್ಷಿಸಬೇಕೆಂಬ ಸಹಜವಾದ ಉದ್ದೇಶವಷ್ಟೇ ಅದರ ಹಿಂದಿದೆ, ಬೇರೇನಿಲ್ಲ. ಅಂದಹಾಗೆ, ಈಗಿನ ನಮ್ಮ ಸಿನಮಾದ ಹೆಸರು ನಿಮಗೇ ತಿಳಿದಿರುವಂತೆ '12 AM ಮಧ್ಯರಾತ್ರಿ'. ಇದು ಹಾಲಿವುಡ್ ಚಿತ್ರದ ಹೆಸರಿರುವಂತೆ ಇದೆ ಅಲ್ಲವೇ?!
* ಹೆಚ್ಚಾಗಿ ನಿಮ್ಮ ಸಿನಿಮಾಗಳು ಹಾರರ್, ಸಸ್ಪೆನ್ಸ್ ಅಥವಾ ಥ್ರಿಲ್ಲರ್ ಸಬ್ಜೆಕ್ಟ್ ಗಳನ್ನೇ ಒಳಗೊಂಡಿರುತ್ತವೆ. ಅದೇ ಯಾಕೆ?
(ನಗು...) ಜನರು ಹೆಚ್ಚಾಗಿ ಮಾಮೂಲಿ ಕತೆಗಳಿಗಿಂತ ಆ ರೀತಿಯ ಕಥೆಗಳನ್ನೇ ಓದುವುದು, ಕೇಳುವುದು ಹೆಚ್ಚು. ಪುಸ್ತಕಗಳೂ ಅಷ್ಟೇ, ಈ ವಿಷಯಗಳಿಗೆ ಸಂಬಂಧಿಸಿ ಬರೆದವುಗಳೇ ಹೆಚ್ಚು ಸೇಲ್ ಆಗುವುದು. ಮನುಷ್ಯರ ಮೆಂಟಾಲಿಟಿಗೆ ತಕ್ಕಂತೆ ನಮ್ಮ ಚಿತ್ರದ ಕತೆಗಳ ಆಯ್ಕೆಯೂ ನಡೆದಿದೆ.
ಇನ್ನೊಂದು ವಿಷಯವೆಂದರೆ ಚಿತ್ರಕಥೆಯಲ್ಲಿ 'ಹಾರರ್' ಜೊತೆ 'ಕಾಮಿಡಿ' ಮಿಕ್ಸ್ ಮಾಡುವುದು ತುಂಬಾ ಕಷ್ಟದ ಕೆಲಸ. ಅವು ಒಂದಕ್ಕೊಂದು ವಿರುದ್ಧ ದಿಕ್ಕಿನವು. ಆದರೆ ಅಂಥ ಕಷ್ಟದ ಕೆಲಸವನ್ನೂ ನಾವು ನಮ್ಮ ಹಲವು ಚಿತ್ರಗಳಲ್ಲಿ ಮಾಡಿದ್ದೇವೆ. ನಮ್ಮ ಚಿತ್ರಗಳಲ್ಲಿ 'ಹಾರರ್ + ಕಾಮಿಡಿ'ಯನ್ನು ನೋಡಬಹುದು.
*ಡಬ್ಬಿಂಗ್ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಈಗಿರುವ ನೀತಿ-ನಿಯಮಗಳಿಂದಲೇ ನಿಧಾನವಾಗಿ ಕನ್ನಡ ಚಿತ್ರರಂಗ ನಶಿಸಬಹುದೆಂಬ ಭೀತಿ ಉಂಟಾಗಿದೆ. ಇನ್ನು ಡಬ್ಬಿಂಗ್ ಬಂದರೆ, ಕೇಳುವುದೇ ಬೇಡ..., ನಿಧಾನವಾಗಿ ಆಗುವಂತಾದ್ದು ಬಹುಬೇಗನೆ ಆಗುತ್ತದೆ. ಡಬ್ಬಿಂಗ್ ಕಲಾವಿದರನ್ನು ಹೊರತುಪಡಿಸಿ ಉಳಿದವರೆಲ್ಲಾ ನಿರುದ್ಯೋಗದ ಭೀತಿ ಎದುರಿಸಬೇಕಾಗುತ್ತದೆ.
ಬಾಷೆ, ರಾಜ್ಯಗಳ ಹಂಗಿಲ್ಲದೇ ದುಡ್ಡಿದ್ದವರು ಸಿನಿಮಾ ಮಾಡಿ ದುಡ್ಡು ಬಾಚಿಕೊಳ್ಳುತ್ತಾರೆ. ದುಡ್ಡಿದ್ದವರ ದಬ್ಬಾಳಿಕೆ ಆಗ ನಿರಂತರವಾಗಿರುತ್ತದೆ. ಸಹಜವಾಗಿ ಬಿಗ್ ಬಜೆಟ್ ಚಿತ್ರಗಳನ್ನು ನಿರ್ಮಿಸುವ ಪರಭಾಷಿಗರ ಕೈ ಮೇಲಾಗುತ್ತದೆ. ಒಟ್ಟಿನಲ್ಲಿ ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ತಕ್ಷಣದ ವಿಷವಿದ್ದಂತೆ ಎನ್ನಬಹುದು.
*ನಿಮ್ಮ ಹೆಸರಿನ ಜತೆ ಎಲ್ಲರೂ ಉಪೇಂದ್ರರನ್ನೂ ನೆನಪಿಸಿಕೊಳ್ಳುತ್ತಾರೆ. ಭವಿಷ್ಯದಲ್ಲಿ ನೀವಿಬ್ಬರೂ ಸೇರಿ ಮತ್ತೆ ಸಿನಿಮಾ ಮಾಡುವ ಪ್ಲಾನ್ ಏನಾದರೂ ಇದೆಯೇ?
ಆ ಬಗ್ಗೆ ಸದ್ಯಕ್ಕೆ ಏನೂ ಹೇಳಲಾರೆ. ನಮ್ಮಿಬ್ಬರಿಗೂ ಇಷ್ಟವಾಗುವಂತ ಕಥೆಯನ್ನು ನಾವಿಬ್ಬರೂ ಒಟ್ಟಿಗೆ ಕುಳಿತು ಚರ್ಚಿಸಿ ಮಾಡಲು ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಹಾಗೇ, ಬೇರೆಯವರಿಂದಲೂ ಆ ಬಗ್ಗೆ ಯಾವುದೇ ಅಪ್ರೋಚ್ ಬಂದಿಲ್ಲ. ಹೀಗಾಗಿ ಸದ್ಯದಲ್ಲಿ ನಮ್ಮಿಬ್ಬರ ಸಿನಿಮಾ ಯಾವುದೂ ಇಲ್ಲ, ಅವರೂ ಸಾಕಷ್ಟು ಬಿಜಿ ಇದ್ದಾರೆ.
ಆದರೆ ಭವಿಷ್ಯದಲ್ಲಿ ಯಾಕಾಗಬಾರದು? ನಮ್ಮಿಬ್ಬರಿಗೂ ಒಪ್ಪಿಗೆಯಾದ ಕಥೆ ಸಿಕ್ಕರೆ ಮತ್ತೆ ನಾವಿಬ್ಬರೂ ಒಂದಾಗಿ ಸಿನಿಮಾ ಮಾಡುವುದು ತುಂಬಾ ಖುಷಿಯ ಸಂಗತಿ.
***