»   » ಖಾಸಗಿ ನ್ಯೂಸ್ ಚಾನೆಲ್ ವಿರುದ್ಧ ತೊಡೆ ತಟ್ಟಿ ನಿಂತ ಯಶ್

ಖಾಸಗಿ ನ್ಯೂಸ್ ಚಾನೆಲ್ ವಿರುದ್ಧ ತೊಡೆ ತಟ್ಟಿ ನಿಂತ ಯಶ್

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಕರ್ನಾಟಕದಲ್ಲಿ ಕಾವೇರಿ ಕಿಚ್ಚು ಹೊತ್ತು ಉರಿಯುತ್ತಿದ್ದರೂ, 'ಅಣ್ತಮ್ಮ' ಖ್ಯಾತಿಯ ರಾಕಿಂಗ್ ಸ್ಟಾರ್ ಯಶ್ ಮಾತ್ರ ತುಟಿಕ್ ಪಿಟಿಕ್ ಎಂದಿರಲಿಲ್ಲ. ಕಾವೇರಿಗಾಗಿ ಕರ್ನಾಟಕ ಬಂದ್ ಇದ್ದಾಗಲೂ ಯಾವುದೇ ಹೇಳಿಕೆ ನೀಡಿರಲಿಲ್ಲ.

  ಸೆಪ್ಟೆಂಬರ್ ಮೊದಲ ವಾರದಲ್ಲಿ ನಡೆದ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲು ಅಮೆರಿಕಾಗೆ ತೆರಳಿದ್ದ ಯಶ್, ಅಲ್ಲಿಂದ 'ಸಂತು ಸ್ಟ್ರೇಟ್ ಫಾರ್ವರ್ಡ್' ಚಿತ್ರದ ಹಾಡಿನ ಚಿತ್ರೀಕರಣಕ್ಕಾಗಿ ಯೂರೋಪ್ ಗೆ ಫ್ಲೈಟ್ ಹತ್ತಿದ್ದರು.[ಕಡೆಗೂ ಕಾವೇರಿ ಹೋರಾಟದ ಬಗ್ಗೆ ತುಟ್ಟಿ ಬಿಚ್ಚಿದ ಮಂಡ್ಯದ 'ಅಣ್ತಮ್ಮ' ಯಶ್]

  ಬೆಂಗಳೂರಿನಲ್ಲಿ ಗಲಭೆ ಆದಾಗ, ಯೂರೋಪ್ ನಿಂದ 'ಶಾಂತಿ ಸಂದೇಶ' ಕಳುಹಿಸಿದ್ದು ಬಿಟ್ಟರೆ, ಮಂಡ್ಯದ ರೈತರಿಗೆ ಯಶ್ ರಿಂದ ಆದ ಸಹಾಯ ಶೂನ್ಯ ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿತ್ತು. ಇದನ್ನೇ ಮಾಧ್ಯಮಗಳು ವರದಿ ಮಾಡಿತ್ತು.

  ಈ ಬಗ್ಗೆ ಸಿಕ್ಕಾಪಟ್ಟೆ ಗರಂ ಆಗಿದ್ದ ಯಶ್, ಎಲ್ಲಾ ಸುದ್ದಿ ವಾಹಿನಿಗಳ ವಿರುದ್ಧ ತೊಡೆ ತಟ್ಟಿ ನಿಂತು ಓಪನ್ ಚಾಲೆಂಜ್ ಹಾಕಿದರು. ಆ ಚಾಲೆಂಜ್ ಸ್ವೀಕರಿಸಿದ ಎಚ್.ಆರ್.ರಂಗನಾಥ್ ಸಾರಥ್ಯದ ಪಬ್ಲಿಕ್ ಟಿವಿ, ಯಶ್ ಗೆ ಟ್ವಿಟ್ಟರ್ ಮೂಲಕವೇ ಸಂದೇಶ ರವಾನಿಸಿತ್ತು.[ಗೋವಾ, ನೀರಿನ ಹೋರಾಟ ಮತ್ತು ನಿಶ್ಚಿತಾರ್ಥ: ಯಶ್ ಹೇಳಿದ 'ಕತ್ತೆ' ಕತೆ]

  ಪಬ್ಲಿಕ್ ಟಿವಿ ನೀಡಿದ ಸಂದೇಶದ ಕುರಿತು ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ 'ನಿಮ್ಮ ಯಶ್' ಒಂದು ವಿಡಿಯೋ ಮೂಲಕ ಉತ್ತರ ನೀಡಿದ್ದಾರೆ. ವಿಡಿಯೋದಲ್ಲಿ ಯಶ್ ಏನೆಲ್ಲಾ ಹೇಳಿದ್ದಾರೆ ಅಂತ ಅವರ ಮಾತುಗಳಲ್ಲೇ ಓದಿರಿ....

  ಯಶ್ ಏನಂತಾರೆ?

  'ನಮಸ್ಕಾರ ಶಬಾಶ್ ಪಬ್ಲಿಕ್ ಟಿವಿ, ನೀವು ಒಂದು ಸವಾಲು ನನಗೂ ಕೊಟ್ಟಿದ್ದೀರಾ. ನಾನು ಮೊನ್ನೆ ಹೇಳಿಕೆ ಕೊಟ್ಟಿದ್ದೆ, ಕಾವೇರಿ ನೀರು ವಿವಾದ ಆದಾಗ. ಒಬ್ಬ ನಟನಾದವನು ಈ ತರದ ಸಂದರ್ಭ ಬಂದಾಗ ಅವನ ಜವಾಬ್ದಾರಿ ಎಷ್ಟಿರುತ್ತೆ ಅನ್ನೋ ಪ್ರಶ್ನೆಗೆ ನಾನು ಹೇಳಿಕೆ ನೀಡಿದ್ದೆ". -ಯಶ್.[ಫೋಟೋ ಆಲ್ಬಂ: ರಾಜ-ರಾಣಿಯ ನಿಶ್ಚಿತಾರ್ಥದ ಅದ್ಭುತ ಕ್ಷಣಗಳು]

  ಭಾಷೆಯನ್ನು ಉಳಿಸಿಕೊಳ್ಳೋದು ನನ್ನ ಕರ್ತವ್ಯ: ಯಶ್

  'ನಾನೊಬ್ಬ ಸಿನಿಮಾ ಕಲಾವಿದ, ನನ್ನ ವಿಭಾಗದಲ್ಲಿ ನಾನು ಎಷ್ಟು ಸರಿಯಾಗಿ ಕೆಲಸ ಮಾಡಬೇಕು ಅನ್ನೋದು ಚೆನ್ನಾಗಿ ಗೊತ್ತು. ನಾಡಿನ ಸಂಸ್ಕೃತಿಯ ರಾಯಭಾರಿಗಳು ನಾವಾಗಿರ್ತೀವಿ. ಸಿನಿಮಾ ಅನ್ನೋದು ಭಾಷೆ ಜೊತೆಗೆ ಭಾವನೆಗಳು ಮತ್ತು ಜೀವನಶೈಲಿಯನ್ನು ಹೊತ್ತೊಯ್ಯುತ್ತದೆ. ಅದನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ, ಬೇರೆ ಭಾಷೆಯ ಮುಂದೆ ಅಥವಾ ಬೇರೆಯವರ ಮುಂದೆ ನಮ್ಮ ಭಾಷೆಯನ್ನು ಎತ್ತಿ ಹಿಡಿಯೋದು ನನ್ನ ಕರ್ತವ್ಯ ಅಂತ ಭಾವಿಸಿ, ಅದರ ಬಗ್ಗೆ ಶ್ರದ್ಧೆಯಿಂದ ಬದುಕುತ್ತಿರೋ ವ್ಯಕ್ತಿ ನಾನು'. -ಯಶ್.[ಯಶ್-ಶಿವಣ್ಣ ಅಭಿಮಾನಿಗಳಿಗೆ ಅಚ್ಚರಿಯ ಮೇಲೆ ಅಚ್ಚರಿ]

  ನನಗೆ ಸಾಮಾಜಿಕ ಕಳಕಳಿ ಇದೆ: ಯಶ್

  'ಸಾಮಾಜಿಕ ಕಳಕಳಿ, ಜವಾಬ್ದಾರಿ ಮತ್ತು ಅರಿವು ನನಗೆ ಇದೆ. ಏನು ಮಾಡಬೇಕು, ನಮ್ಮ ಜನಗಳಿಗೋಸ್ಕರ ಬದುಕಿರಬೇಕು ಹಾಗೂ ಅವರಿಗೆ ಸ್ಪಂದಿಸಬೇಕು, ಅವರ ಕಷ್ಟಗಳ ಜೊತೆ ನಾವೂ ಬಾಗಿಯಾಗಬೇಕು ಅನ್ನೋ ಜವಾಬ್ದಾರಿ ನನಗೆ 100% ಇದೆ.

  ಮಾಧ್ಯಮಗಳ ವಿರುದ್ಧ ಯಶ್ ಬೇಸರ

  'ಆದ್ರೆ ಯಾವುದೇ ಒಂದು ಘಟನೆ ನಡೆದಾಗ, ಯಾವುದೇ ಒಂದು ಹೋರಾಟ ಆದಾಗ, ಎಲ್ಲಿದ್ದಾರೆ ಸಿನಿಮಾ ನಟರು?, ತೆರೆ ಮೇಲೆ ಡೈಲಾಗ್ ಹೊಡಿತಾರೆ. ತೆರೆ ಮೇಲೆ ಡೈಲಾಗ್ ಹೊಡೆದವರು ಬರೀ ತೆರೆ ಮೇಲೇನಾ?, ಅವರಿಗೆ ಏನೂ ಜವಾಬ್ದಾರಿ ಇಲ್ವಾ?. ಮಜಾ ಮಾಡ್ತಾ ಇದ್ದಾರೆ. ಶೂಟಿಂಗ್ ಅಂದ್ರೆ ಮಜಾ, ಶೂಟಿಂಗ್ ಅಂದ್ರೆ ಶೋಕಿ. ಅನ್ನೋ ಕೆಲವರ ಬಗ್ಗೆ ನನ್ನ ಮನಸ್ಸಿಗೆ ಬೇಸರ ಆಗಿದೆ'. -ಯಶ್

  ಶೂಟಿಂಗ್ ಅನ್ನೋದು ಕೆಲಸ: ಯಶ್

  'ಶೂಟಿಂಗ್ ಅನ್ನೋದು ಕೂಡ ಒಂದು ಕೆಲಸ. ನಾವು ಕೂಡ ಅದಕ್ಕಾಗಿ ನಿದ್ದೆಗೆಟ್ಟು ಕೆಲಸ ಮಾಡುತ್ತೇವೆ. ನಾವೂ ಕೂಡ ದಿನಗೂಲಿ ತರ ದುಡಿದು, ಸಂಪಾದನೆ ಮಾಡುತ್ತೇವೆ. ಅನ್ನೋದರ ಬಗ್ಗೆ ಜನಕ್ಕೆ ಅರಿವು ಮೂಡಿಸಬೇಕಾದಂತಹ ಮಾಧ್ಯಮಗಳು, ನಾವು ಶೋಕಿ ಮಾಡ್ತೀವಿ, ಅಂತ ಕೆಲವು ಮಾಧ್ಯಮಗಳು ಕಾರ್ಯಕ್ರಮ ಮಾಡಿದ್ದು, ನನ್ನ ಗಮನಕ್ಕೆ ಬಂದು, ಅದು ತುಂಬಾ ನೋವು ಮಾಡಿದೆ'. -ಯಶ್

  ಯಶ್ ಹೇಳಿಕೆ

  'ಮಾಧ್ಯಮದವರು ಮಾಡಿದ ಕಾರ್ಯಕ್ರಮಕ್ಕೆ ನಾನು ಪ್ರತಿಯಾಗಿ ಒಂದು ಹೇಳಿಕೆ ಕೊಟ್ಟೆ. ಆದರೆ ಈಗ ನೀವು ಅದನ್ನು ಸವಾಲು ಅಂತ ಸ್ವೀಕರಿಸಿದ್ದೀರಾ, ಸೂಪರ್. ಇದರಿಂದ ನನಗೆ ಬಹಳ ಖುಷಿ ಇದೆ, ಹೆಮ್ಮೆ ಇದೆ. ಇಡೀ ಕರ್ನಾಟಕದಲ್ಲಿ ಎಷ್ಟು ಕೋಟಿ ವ್ಯವಹಾರ ಮಾಧ್ಯಮಗಳು ಮಾಡ್ತಾ ಇವೆ. ಎಷ್ಟು ಸಿನಿಮಾಗಳು ಮಾಡ್ತಾ ಇವೆ ಅಂತ ನೋಡಿದ್ರೆ, ಸಿನಿಮಾಗಳಿಗಿಂತ ಹೆಚ್ಚಾಗಿ ಮಾಧ್ಯಮಗಳು ಅಥವಾ ಮನರಂಜನಾ ಚಾನೆಲ್ ಗಳು ಕೋಟ್ಯಾಂತರ ರೂಪಾಯಿ ವ್ಯವಹಾರ ಮಾಡ್ತಾ ಇದ್ದಾರೆ. ಆದ್ರಿಂದ ನಿಮಗೆ ಸಾಮಾಜಿಕ ಕಳಕಳಿ ಎಷ್ಟಿದೆ ಅನ್ನೋದನ್ನು ನಾನು ಪರೀಕ್ಷೆ ಮಾಡಬೇಕಿತ್ತು ಅದಕ್ಕೋಸ್ಕರ ನಾನು 'ಆ' ಸವಾಲು ಹಾಕಿದೆ'. -ಯಶ್

  ಬರೀ ಒಂದು ದಿನದ ಚರ್ಚೆ ಅಲ್ಲ:ಯಶ್

  'ಕಾರ್ಯಕ್ರಮ ಅಂದ ತಕ್ಷಣ, ಎಲ್ಲೋ ಒಂದು ದಿನದ ಚರ್ಚೆ ಅಲ್ಲ, ಒಂದಿನಾ 1 ಗಂಟೆ ಚರ್ಚೆ, ಎರಡು ದಿನ 1 ಗಂಟೆ ಚರ್ಚೆ ಅಲ್ಲ. ನಿಮ್ಮ ಸವಾಲಿಗೆ ನಾನು ರೆಡಿ ಇದ್ದೀನಿ. ಮತ್ತೆ ನಾನು ಸ್ಪಷ್ಟನೆ ಕೊಡುತ್ತೇನೆ, ಕ್ಲೀಯರ್ ಆಗಿ ಹೇಳ್ತಾ ಇದ್ದೀನಿ, ಕಾರ್ಯಕ್ರಮ ಅಂದ್ರೆ ಒಂದು ದಿನ, ಒಂದು ಗಂಟೆ ಚರ್ಚೆ, ಯಾರನ್ನೋ ಕರೆಸಿ, ಅವರು ಸರಿ ಇಲ್ಲಾ, ಇವರು ಸರಿ ಇಲ್ಲಾ, ಅವರು ಕೆಲ್ಸಾ ಮಾಡಿಲ್ಲ, ಇವರು ಕೆಲ್ಸಾ ಮಾಡಿಲ್ಲ ಅಂತ ಪ್ರಶ್ನೆ ಮಾಡಿ, ನಮ್ಮ ಜವಾಬ್ದಾರಿ ಏನೂ ಇಲ್ಲ ಅಂತ ಸುಮ್ಮನೆ ಕೈ ಚೆಲ್ಲಿ ಕುತ್ಕೊಳ್ಳೋ ಕಾರ್ಯಕ್ರಮ ಆದ್ರೆ ನಾನು ಬರಲ್ಲ'. -ಯಶ್.

  ಮಾಧ್ಯಮಕ್ಕೆ ಯಶ್ ಪ್ರಶ್ನೆ

  'ಅಕಸ್ಮಾತ್ ನಿಜವಾದ ಕಾಳಜಿ ನಿಮಗೂ ಇತ್ತು ಅಂದ್ರೆ, ಜನಗಳ ಪರವಾಗಿ ಯಾವ ಹಂತಕ್ಕೂ ನೀವು ಇಳಿತೀರಿ ಅಂತಾದ್ರೆ, ರೈತರಿಗೋಸ್ಕರ ಏನೂ ಬೇಕಾದ್ರೂ ಮಾಡೋಕೆ ಸಿದ್ಧ ಅನ್ನೋದಾದ್ರೆ, ನಾನು ನನ್ನೆಲ್ಲಾ ಕೆಲಸ ಕಾರ್ಯಗಳನ್ನು ಬಿಟ್ಟು ಅಥವಾ ದಿನದಲ್ಲಿ ನಾನು ಹೇಗಾದ್ರು ಸಮಯ ಮಾಡಿಕೊಂಡು ಬಂದೇ ಬರುತ್ತೇನೆ. ಒಂದು ದಿನ, ಎರಡು ದಿನ ಅಂತ ಅಲ್ಲ, ಯಾವಾಗ ಬೇಕಾದ್ರೂ ಅನ್ ಲಿಮಿಟೆಡ್. ಬೇಕಾದ್ರೆ ಅದಕ್ಕೂ ಒಂದು ಲಿಮಿಟ್ ಹಾಕೋಣ. ಎಲ್ಲಾ ಪ್ರೈಮ್ ಟೈಮ್ ನಲ್ಲಿ ನನಗೆ ಟೈಮ್ ಕೊಡಿ. ರೈತರ ಸಮಸ್ಯೆ ಏನೇನಿದೆ ಅದರ ಬಗ್ಗೆ ಚರ್ಚೆ ಮಾಡೋಣ. ಬರೀ ಚರ್ಚೆ ಮಾತ್ರ ಅಲ್ಲ, ಪರಿಹಾರ ಕೂಡ ಕಂಡು ಹಿಡಿಯೋಣ. ಯಾವಾಗಲೂ ಏನ್ ಜವಾಬ್ದಾರಿ ಇದೆ ಅಂತ ಪ್ರಶ್ನೆ ಮಾಡ್ತೀರಲ್ವಾ?, ನಾನು ತೋರಿಸೋಕೆ ರೆಡಿ ಇದ್ದೀನಿ'.-ಯಶ್.

  ಒಂದು ಕೈ ನೋಡೇ ಬಿಡೋಣ: ಯಶ್

  'ಒಂದು ಕೈ ನೋಡೇ ಬಿಡೋಣ, ಅದೇನೆ ಸಮಸ್ಯೆ ಇದೆ ಅಂತ. ಯಾಕೆಂದರೆ ನಾನು ಎಲ್ಲಾ ಹೋರಾಟದಲ್ಲಿ ಭಾಗವಹಿಸಿದ್ದೇನೆ. ಮಹದಾಯಿ, ಕೋಲಾರ ಎಲ್ಲಾ ಕಡೆ ಹೋಗಿದ್ದೇನೆ, ಮಾತಾಡಿದ್ದೇನೆ. ಆದ್ರೆ ನಾವು ಬರೀ ಮಾತಾಡಿದ್ರೆ ರೈತರಿಗೆ ಏನು ಸಿಗ್ತಾ ಇದೆ. ನಮ್ಮ ಮಾತಿಗೆ ಬರೀ ಚಪ್ಪಾಳೆ-ಶಿಳ್ಳೆ ಬೀಳುತ್ತೆ ಹೊರತು ಬೇರೆನಿಲ್ಲ. ನೀವಾದ್ರೆ ಅವರ-ಇವರ ಮೇಲೆ ಬೆರಳು ತೋರಿಸುತ್ತೀರಲ್ಲಾ. ನಾನು ಹಾಗೆ ಬೆರಳು ತೋರಿಸಲ್ಲ, ಮಾಡೋಣ ಬನ್ನಿ ಕೆಲಸ. ರೈತರ ಬಗ್ಗೆ ನಿಜವಾದ ಕಾಳಜಿ ಇದ್ರೆ, ನೀವಿಗ ಕೊಟ್ಟ ಸವಾಲಿಗೆ ನಾನು ರೆಡಿ ಇದ್ದೀನಿ'. -ಯಶ್.

  ಕಮರ್ಷಿಯಲ್ ಕೊಡಬೇಕು

  'ಟಿವಿಯಲ್ಲಿ ಕಮರ್ಷಿಯಲ್ ಕೊಡಬೇಕು ನೀವು. ಮತ್ತೊಮ್ಮೆ ಸ್ಪಷ್ಟವಾಗಿ ಹೇಳುತ್ತೇನೆ, ಬರೀ ಕಾರ್ಯಕ್ರಮ ಮಾತ್ರ ಅಲ್ಲ, ರೈತರ ಬಗ್ಗೆ ಜಾಹೀರಾತು ಕೂಡ ಕೊಡಬೇಕು. ನೀವು ಇದಕ್ಕೆ ರೆಡಿ ಇದ್ರೆ, ಅದೂ ಕೂಡ ಪ್ರೈಮ್ ಟೈಮ್ ನಲ್ಲಿ. ಓಕೆ ಬೇಕಾದ್ರೆ ಫಿಕ್ಸ್ ಮಾಡೋಣ, ಒಂದು ತಿಂಗಳೋ, ಎರಡು ತಿಂಗಳೋ ಕಾರ್ಯಕ್ರಮ ಮಾಡೋದು ಅಂತ. ಆದ್ರೆ ಜಾಹೀರಾತು ಕೊಡಲೇಬೇಕು. 15-20 ಸೆಕೆಂಡ್ ಜಾಹೀರಾತು ಕೊಟ್ಟು, ರೈತರ ಬಗ್ಗೆ ಅಭಿಯಾನ ಮಾಡಬೇಕು. ಇದಕ್ಕೆಲ್ಲಾ ನೀವು ರೆಡಿ ಅಂತಾದ್ರೆ, ರಂಗನಾಥ್ ಸರ್ ನನಗೆ ಭರವಸೆ ಕೊಟ್ರೆ, ನಾನು ರೆಡಿ, ಬರ್ತೀನಿ ನೋಡೇ ಬಿಡೋಣ'. -ಯಶ್.

  ಬೆಂಕಿ ಹಚ್ಚೋ ಕೆಲಸಕ್ಕೆ ಬರಲ್ಲ: ಯಶ್

  'ಕಾವೇರಿ ನೀರು ಹೋರಾಟದ ಬಗ್ಗೆ ಇಡೀ ಊರಿಗೆ ಊರೇ ಬೆಂಕಿ ಹಚ್ಚುವಷ್ಟು ನಮ್ಮ ಯುವಕರಲ್ಲಿ ಕಿಚ್ಚಿದೆ ಅಂದ್ರೆ, ಆ ಬೆಂಕಿಯಲ್ಲಿ ರೈತರ ಮನೆಯ ದೀಪ ಬೆಳಗೋವಷ್ಟು ಕಾಳಜಿನೂ ಇದೆ. ಆ ಶಕ್ತಿನೂ ಇದೆ ಅಂತ ನಾನು ನಂಬ್ತೀನಿ. ಆ ದೀಪ ಬೆಳಗಿಸೋ ಕೆಲ್ಸಾ ಆದ್ರೆ ನಾನು ರೆಡಿ. ಬೆಂಕಿ ಹಚ್ಚೋ ಕೆಲ್ಸಕ್ಕೆ ನಾನು ಯಾವತ್ತೂ ಬರಲ್ಲ. ದೀಪ ಹಚ್ಚೋ ಕೆಲಸಕ್ಕೆ ನೀವು ರೆಡಿ ಅಂದ್ರೆ, ರಂಗನಾಥ್ ಸರ್ ನನಗೆ ಭರವಸೆ ಕೊಟ್ರೆ ನಾನು ರೆಡಿ. ಮತ್ತೊಮ್ಮೆ ಸವಾಲು ಹಾಕ್ತೀನಿ, ಬರೀ ಪಬ್ಲಿಕ್ ಟಿವಿ ಮಾತ್ರ ಅಲ್ಲ, ಟಿವಿ9, ಬಿಟಿವಿ, ಪ್ರಜಾ ಟಿವಿ ಯಾವ ಟಿವಿ ಇದ್ಯೋ ಎಲ್ಲರ ಜೊತೆ ಮಾತಾಡೋಕೆ ನಾನು ರೆಡಿ ಇದ್ದೀನಿ. ಬರೀ ಮಾತಲ್ಲಿ ರೈತರ ಬಗ್ಗೆ ಕಾಳಜಿ, Rally ಮಾಡಿದ್ರೆ, ಅವರ ಸಮಸ್ಯೆ ಬಗೆ ಹರಿಯೋಲ್ಲಾ, ಅವರಿಗೆ ಒಂದು ಹೊತ್ತು ಊಟನೂ ಸಿಗಲ್ಲ'. -ಯಶ್

  ಅಹಂಕಾರದ ಮಾತಲ್ಲ: ಯಶ್

  ರೈತರ ಬಗ್ಗೆ ಏನಾದ್ರೂ ಒಳ್ಳೆ ಕೆಲಸ ಮಾಡೋದಕ್ಕೆ ನೀವು ರೆಡಿ ಇದ್ರೆ, ಎಲ್ಲಾ ಮಾಧ್ಯಮಕ್ಕೆ ನಾನು ಹೇಳ್ತಾ ಇದ್ದೀನಿ. ಇದು ಅಹಂಕಾರದ ಮಾತಲ್ಲ, ಒಬ್ಬ ಕನ್ನಡಿಗನಾಗಿ, ಸ್ವಾಭಿಮಾನಿಯಾಗಿ ಮತ್ತು ಒಬ್ಬ ರೈತಾಪಿ ಕುಟುಂಬದಿಂದ ಬಂದವನಾಗಿ ಹೇಳ್ತಾ ಇದ್ದೀನಿ. ನನ್ನ ನೈತಿಕತೆಯ ಬಗ್ಗೆ ಪ್ರಶ್ನೆ ಮಾಡಿರೋ ಎಲ್ಲರಿಗೂ ಇದೊಂದು ಸವಾಲು ಹಾಕ್ತಾ ಇದ್ದೀನಿ ಬನ್ನಿ ಎಲ್ಲರೂ ನಿಂತು ಮಾಡೋಣ. ರೈತರ ಸಮಸ್ಯೆಗೆ ಹೋರಾಡೋಣ, ಬರೀ ಬಾಯಿ ಮಾತಲ್ಲಿ ಅಲ್ಲ, ನೀವು ಈಗ ಹೆಂಗೆ ಓಪನ್ ಸವಾಲು ಹಾಕಿದ್ದಿರೋ ಹಾಗೆ ನಾನು ಕೊಟ್ಟಿದ್ದೀನಿ, ನಿಂತು ಹೋರಾಡೋಣ'.-ಯಶ್.

  ಯಶ್ ಗೆ 'ಪಬ್ಲಿಕ್ ಟಿವಿ'ಯಿಂದ ಪತ್ರ

  ಯಶ್ ಅವರು ಎಲ್ಲಾ ಮಾಧ್ಯಮಕ್ಕೆ ಹಾಕಿರುವ ಸವಾಲನ್ನು ಸ್ವೀಕರಿಸಿದ ಪಬ್ಲಿಕ್ ಟಿವಿಯವರು, ಸಭೆ ನಡೆಸಿ ಚರ್ಚೆಗೆ ಆಹ್ವಾನ ನೀಡಿದ್ದಾರೆ. ಈ ವಿಚಾರವನ್ನು ಟ್ವಿಟ್ಟರ್ ನಲ್ಲಿ ಒಂದು ಪತ್ರದ ರೀತಿಯಲ್ಲಿ ಬರೆಯುವ ಮೂಲಕ, 'ನಿಮ್ಮ ಜೊತೆ ಚರ್ಚೆಗೆ ಪಬ್ಲಿಕ್ ಟಿವಿ ಸಿದ್ಧವಿದ್ದು, ನೀವು ಪಬ್ಲಿಕ್ ಟಿವಿಯ ಚರ್ಚೆಗೆ ಸಮಯ ಮತ್ತು ದಿನಾಂಕ ನಿಗದಿಪಡಿಸಿ', ಅಂತ ಪಬ್ಲಿಕ್ ಟಿವಿಯವರು ಯಶ್ ಅವರನ್ನು ಸ್ವಾಗತಿಸಿದ್ದಾರೆ.

  ವಿಡಿಯೋ ನೋಡಿ

  ಮಾಧ್ಯಮದ ವಿರುದ್ಧ ನಿಂತ ಯಶ್ ಅವರ ಮಾತುಗಳನ್ನು ಅವರ ಬಾಯಲ್ಲೇ ಕೇಳಲು ವಿಡಿಯೋ ಲಿಂಕ್ ಇಲ್ಲಿದೆ ಕ್ಲಿಕ್ ಮಾಡಿ....

  English summary
  Kannada Actor Yash had challenged Kannada News Channels to air Programmes which will facilitate Farmers during Prime slot. Popular Kannada News Channel, Public TV has accepted Yash's challenge. In response, Yash has taken his Facebook and Twitter account to express his opinion. Watch the video.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more