»   » ಮೂರಕ್ಷರದ ಬಿರುದಿಗೆ ಪಾತ್ರರಾದ ಖ್ಯಾತ ತಾರೆಗಳು

ಮೂರಕ್ಷರದ ಬಿರುದಿಗೆ ಪಾತ್ರರಾದ ಖ್ಯಾತ ತಾರೆಗಳು

Posted By:
Subscribe to Filmibeat Kannada

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ, ಸಲ್ಲಿಸುತ್ತಿರುವ ಮಹನೀಯರಿಗೆ ಗೌರವ ಡಾಕ್ಷರೇಟ್ ನೀಡುವ ಪರಿಪಾಠ ಬ್ರಿಟೀಷರ ಕಾಲದಿಂದಲೂ ಇದೆ. ಈ ಗೌರವ ಡಾಕ್ಟರೇಟ್ ಎಂಬುದು ಪದವಿ ಎಂಬುದಕ್ಕಿಂತಲೂ ಹೆಚ್ಚಾಗಿ ಪ್ರಶಸ್ತಿಯಾಗಿಯೇ ಪರಿಗಣಿಸಲಾಗುತ್ತಿದೆ.

ಪ್ರತಿ ವರ್ಷ ಹಲವಾರು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡುತ್ತಾ ಬಂದಿವೆ. ಗೌರವ ಡಾಕ್ಟರೇಟ್ ಪದವಿಯನ್ನು ಸೀಮಿತಗೊಳಿಸಬೇಕು ಎಂಬ ಸೂಚನೆ, ಸಲಹೆಗಳು ಆಗಾಗ ಕೇಳಿಬರುತ್ತಿವೆ. ಆದರೂ ವಿಶ್ವವಿದ್ಯಾಲಯಗಳು ಈ ಬಗ್ಗೆ ಕಿಂಚಿತ್ತೂ ಗಮನ ಕೊಡುತ್ತಿಲ್ಲ ಎಂಬ ಆರೋಪಗಳು ಇವೆ. [ಹ್ಯಾಟ್ರಿಕ್ ಹೀರೋ ಇನ್ನು ಡಾ.ಶಿವರಾಜ್ ಕುಮಾರ್]

ಯಾರಿಗೇ ಗೌರವ ಡಾಕ್ಟರೇಟ್ ನೀಡಿದರೂ ಅದರಿಂದ ಆ ವಿಶ್ವವಿದ್ಯಾನಿಲಯದ ಗೌರವ, ಘನತೆ ಮತ್ತು ಪ್ರತಿಷ್ಠೆಯನ್ನು ಹೆಚ್ಚುವಂತಿರಬೇಕು ಎಂಬುದು ತಜ್ಞರ ಅಭಿಮತ. ಕನ್ನಡದ ಹಲವಾರು ಸಿನಿಮಾ ತಾರೆಗಳು ಗೌರವ ಡಾಕ್ಟರೇಟ್ ಪದವಿಗೆ ಪಾತ್ರರಾಗಿದ್ದಾರೆ. ಸ್ಲೈಡ್ ನಲ್ಲಿ ನೋಡೋಣ ಬನ್ನಿ ಡಾಕ್ಟರ್ ಆಕ್ಟರ್ ಗಳನ್ನು...

ಮೂರನೇ ಕ್ಲಾಸ್ ಓದಿದ್ದಕ್ಕೆ ಮೂರಕ್ಷದ ಬಿರುದು

ತಾನು ಓದಿದ್ದು ಮೂರನೇ ಕ್ಲಾಸ್ ಅಷ್ಟೆ, ಅದಕ್ಕೇ ಏನೋ ಈ ಮಹಾನುಭಾವರು ನನಗೆ ಮೂರಕ್ಷರದ 'ಡಾಕ್ಟರ್' ಪದವಿಯನ್ನು ಕೊಟ್ಟರು ಎಂದು ಆಗಾಗ ಅಣ್ಣಾವ್ರು ತಮಾಷೆಯಾಗಿ ಹೇಳುತ್ತಿದ್ದರು. ವರನಟ ಡಾ.ರಾಜ್ ಕುಮಾರ್ ಅವರು ಗೌರವ ಡಾಕ್ಟರೇಟ್ ಗೆ ನೂರಕ್ಕೆ ನೂರರಷ್ಟು ಅರ್ಹರಾದ ಮಹಾನ್ ನಟ. ಮೈಸೂರು ವಿಶ್ವವಿದ್ಯಾಲಯ ರಾಜ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಡಾ.ರಾಜ್ ಕುಮಾರ್ ಎಂದು ಕರೆಯುವಂತೆ ಮಾಡಿತು.

ಸಾಹಸಸಿಂಹ ವಿಷ್ಣುವರ್ಧನ್ ಡಾಕ್ಟರ್ ಆಗಿದ್ದು

ಬಂಧನ ಚಿತ್ರದಲ್ಲಿ ಅವರು ಪೋಷಿಸಿದ್ದ ಡಾ.ಹರೀಷ್ ಪಾತ್ರವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಆ ರೀತಿಯ ಅದೆಷ್ಟೋ ವೈವಿಧ್ಯಮಯ ಪಾತ್ರಗಳನ್ನು ಪೋಷಿಸಿ ಅಭಿಮಾನಿಗಳ ಹೃದಯ ಸಾಮ್ರಾಜ್ಯದಲ್ಲಿ ಅರಮನೆ ಕಟ್ಟಿದ ನಟ. 205ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ವಿಷ್ಣುವರ್ಧನ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು.

ಬಿ.ಸರೋಜಾದೇವಿ ಗೌರವ ಪದವಿ ಪಡೆದದ್ದು

ಕಿತ್ತೂರು ರಾಣಿ ಚೆನ್ನಮ್ಮ ಎಂದರೆ ಹೀಗೇ ಇದ್ದರೇನೋ ಎಂಬಷ್ಟು ಭಾವಪೂರ್ಣವಾಗಿ ಅಭಿನಯಿಸಿ ತೋರಿಸಿದ ಅಭಿನೇತ್ರಿ ಸರೋಜಾದೇವಿ. ಅವರು ಚಿತ್ರರಂಗಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ 2006ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿತು.

ಲೀಲಾವತಿ ಅವರನ್ನೂ ಹುಡುಕಿಕೊಂಡು ಬಂದ ಪದವಿ

ಕನ್ನಡ ಚಿತ್ರರಂಗದ ಸ್ವಾಭಿಮಾನದ ನಲ್ಲೆ ಲೀಲಾವತಿ ಅವರನ್ನೂ ಡಾಕ್ಟರೇಟ್ ಪದವಿ ಹುಡುಕಿಕೊಂಡು ಬಂತು. ದಕ್ಷಿಣ ಭಾರತದ ಚಿತ್ರರಂಗಕ್ಕೆ ಐದು ದಶಕಗಳ ಕಾಲ ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ ತುಮಕೂರು ವಿಶ್ವವಿದ್ಯಾಲಯ ಲೀಲಾವತಿ ಅವರಿಗೆ 2008ರಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿತು.

ಅಭಿನಯ ಶಾರದೆ ಜಯಂತಿ ಅವರಿಗೆ ಗೌರವ

ಜಯಂತಿ ಅವರ ವೃತ್ತಿಬದುಕಿನಲ್ಲಿ ಅಮರವಾಗಿ ಉಳಿದ ಪಾತ್ರಗಳಲ್ಲಿ ಪ್ರಮುಖವಾಗಿ ನಿಲ್ಲುವುದು ನಾಗರಹಾವು ಚಿತ್ರದಲ್ಲಿ ಒನಕೆ ಓಬವ್ವ ಪಾತ್ರ. ಹಲವಾರು ಪಾತ್ರಗಳ ಮೂಲಕ ತಮ್ಮ ಜೀವವನ್ನು ತೇಯ್ದ ಜಯಂತಿ ಅವರಿಗೆ ಮೈಸೂರು ವಿಶ್ವವಿದ್ಯಾಲಯ 2012ರಲ್ಲಿ ಗೌರವ ಡಾಕ್ಟರೇಟ್ ನೀಡಿದೆ.

ಭಾರತಿ ವಿಷ್ಣುವರ್ಧನ್ ಮುಕ್ತ ವಿವಿ ಗೌರವ

ಬಂಗಾರದ ಮನುಷ್ಯ, ದೂರದ ಬೆಟ್ಟ, ಗಂಡೊಂದು ಹೆಣ್ಣಾರು, ಬಂಗಾರದ ಜಿಂಕೆ, ಭಾಗ್ಯ ಜ್ಯೋತಿ, ಮೇಯರ್ ಮುತ್ತಣ್ಣ ಸೇರಿದಂತೆ 100ಕ್ಕೂ ಹೆಚ್ಚು ಸದಭಿರುಚಿಯ ಚಿತ್ರಗಳ ಮೂಲಕ ಚಿತ್ರರಸಿಕರ ಮನಸೂರೆಗೊಂಡ ತಾರೆ ಭಾರತಿ ವಿಷ್ಣುವರ್ಧನ್. ಚಿತ್ರರಂಗಕ್ಕೆ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ 2010ರಲ್ಲಿ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ನೀಡಿತು.

ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದ ಗಿರಿಕನ್ಯೆ

ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಡಾ.ಎಂ.ಜಿ.ಕೃಷ್ಣನ್ ಮಾರ್ಗದರ್ಶನದಲ್ಲಿ ಜಯಮಾಲಾ ಪ್ರಬಂಧ ಸಲ್ಲಿಸಿದ್ದರು. ಅವರು ಆಯ್ದುಕೊಂಡಿದ್ದ ವಿಷಯ :ಕರ್ನಾಟಕ ರಾಜ್ಯದ ನಿರಾಶ್ರಿತ ಮಹಿಳೆಯರ ಪುನರ್ವಸತಿ ಆಡಳಿತ ವ್ಯವಸ್ಥೆ,ಒಂದು ಅಧ್ಯಯನ. ಜಯಂತಿ ಹೆಸರಲ್ಲಿ ಪ್ರಬಂಧ ಸಲ್ಲಿಸಿ ಡಾಕ್ಟರೇಟ್ ಪಡೆದಿರುವ ಜಯಮಾಲಾ, ಈಗ ರಾಣಿ ಅಬ್ಬಕ್ಕನ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ಜೊತೆಗೆ ರಾಣಿ ಅಬ್ಬಕ್ಕನ ಸಿನಿಮಾ ತಯಾರಿಸುವ ಹಂಬಲವೂ ಇದೆ ಎಂದಿದ್ದರು. ಮಂಗಳೂರು ಹೆಣ್ಣು ಮಗಳಾದ ಜಯಮಾಲಾ, ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ತುಳು, ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಇಂಗ್ಲಿಷ್ ಸೇರಿದಂತೆ ಒಟ್ಟು 75ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ಐದು ಚಿತ್ರಗಳನ್ನು ನಿರ್ಮಿಸಿದ್ದಾರೆ.

ಡಾಕ್ಟರ್ ಆದ ಕಲಾತಪಸ್ವಿ ರಾಜೇಶ್

ಅರುವತ್ತು ಮತ್ತು ಎಪ್ಪತ್ತರ ದಶಕದಲ್ಲಿ ನಟ ರಾಜೇಶ್ ತಮ್ಮದೇ ಆದಂತಹ ವಿಲಕ್ಷಣ ಪಾತ್ರಗಳಿಗೆ ಹೆಸರಾಗಿದ್ದರು. ಇದುವರೆಗೂ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ರಾಜೇಶ್ ಪೋಷಿಸಿದ್ದಾರೆ. 2012ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ.

ಗಿರೀಶ್ ಕಾಸರವಳ್ಳಿ ಅವರಿಗೆ ಡಾಕ್ಟರೇಟ್

ಕನ್ನಡದ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರಾದ ಗಿರೀಶ್ ಕಾಸರವಳ್ಳಿ ಅವರು ಹಲವಾರು ಪ್ರಶಸ್ತಿ, ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ನಾಲ್ಕು ಬಾರಿ ಸ್ವರ್ಣ ಕಮಲ ಪ್ರಶಸ್ತಿ ಪುರಸ್ಕೃತರಾದ ಗಿರೀಶ್ ಕಾಸರವಳ್ಳಿ ಅವರಿಗೆ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದೆ.

ಚಾಮಯ್ಯ ಮೇಷ್ಟ್ರಿಗೆ ಡಾಕ್ಟರೇಟ್ ಬಂದದ್ದು

ಚಿತ್ರರಂಗಕ್ಕೆ ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ ತುಮಕೂರು ವಿಶ್ವವಿದ್ಯಾಲಯ ಕೆಎಸ್ ಅಶ್ವತ್ಥ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದೆ. ತನ್ನಲ್ಲಿನ ನಟನನ್ನು ಹೊರ ಜಗತ್ತಿಗೆ ಪರಿಚಯಿಸಿದ ನಿರ್ದೇಶಕರಿಗೆ ಗೌರವ ಡಾಕ್ಟರೇಟ್ ಅಶ್ವತ್ಥ್ ಅರ್ಪಿಸಿದ್ದಾರೆ.

ವಿದೇಶದಿಂದ ಗೌರವ ಡಾಕ್ಟರೇಟ್ ಪಡೆದ ಸುಂದರ್ ರಾಜ್

ಕನ್ನಡ ಚಿತ್ರರಂಗದ ಪೋಷಕ ನಟ, ಕಿರುತೆರೆ ಕಲಾವಿದ ಸುಂದರ್ ರಾಜ್‌ ಅವರಿಗೆ ಕೊಲಂಬೋದ ಓಪನ್ ಯೂನಿವರ್ಸಿಟಿ ಫಾರ್ ಕಾಂಪ್ಲಿಮೆಂಟರಿ ಮೆಡಿಸಿನ್ಸ್ ಡಾಕ್ಟರೇಟ್ ಪದವಿ ನೀಡಿದೆ.

English summary
Here is the list of Kannada actors who got Honorary Doctorate from different universities for their contribution to movie industry. Dr.Rajkumar, Dr.Vishnuvardhan, Dr.Jayanthi, Dr.B Saroja Devi and many more.
Please Wait while comments are loading...