Tejaswini Prakash Wedding: ಹಸೆಮಣೆ ಏರಿದ ಕನ್ನಡದ ನಟಿ ತೇಜಸ್ವಿನಿ ಪ್ರಕಾಶ್: ವರ ಯಾರು?
ವಿನಯಾ ಪ್ರಕಾಶ್ ಪುತ್ರಿ, ಕನ್ನಡದ ನಟಿ ತೇಜಸ್ವಿನಿ ಪ್ರಕಾಶ್ ವಿವಾಹವಾಗಿದ್ದಾರೆ. ಕುಟುಂಬದವರು, ಸ್ನೇಹಿತರ ಸಮ್ಮುಖದಲ್ಲಿ ಅವರು ಗೆಳೆಯ ಫಲಿ ವರ್ಮಾ ನದೀಮ್‌ಪಳ್ಳಿ ಅವರ ಕೈ ಹಿಡಿದಿದ್ದಾರೆ.
ಮಾರ್ಚ್ 20 ರಂದು ತೇಜಸ್ವಿನಿ ಪ್ರಕಾಶ್ ಅವರ ವಿವಾಹವಾಗಿದ್ದು, ಮದುವೆಯಲ್ಲಿ ಭಾಗಿಯಾಗಿದ್ದ ಅವರ ಗೆಳತಿಯರು ನವ ವಧು-ವರರ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ನಟಿ ಕಾರುಣ್ಯ ರಾಮ್ ಸೇರಿದಂತೆ ಹಲವರು ತೇಜಸ್ವಿನಿ ಪ್ರಕಾಶ್ ಮದುವೆಯಲ್ಲಿ ಭಾಗಿಯಾಗಿದ್ದಾರೆ. ತೇಜಸ್ವನಿ ಅವರ ವಿವಾಹದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಟಿ ಕಾರುಣ್ಯ, ''ಕೊನೆಗೂ ಎರಡು ಹೃದಯಗಳು ಒಂದಾದವು. ಎರಡು ಹೃದಯಗಳು ಒಂದೇ ತಾಳದಲ್ಲಿ ಮಿಡಿಯಲಿವೆ. ನಿಮ್ಮ ಭವಿಷ್ಯ ಸುಖಕರವಾಗಿರಲಿ, ಎಲ್ಲವೂ ಒಳಿತಾಗಲಿ. ನಿಮ್ಮ ಮೇಲೆ ಆ ದೇವರು ಆಶೀರ್ವಾದದ ಮಳೆಗರೆಯಲಿ'' ಎಂದು ಹಾರೈಸಿದ್ದಾರೆ.

ತೇಜಸ್ವಿನಿ ಪ್ರಕಾಶ್ ಅವರ ಮದುವೆಯ ಕೆಲವು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅರಿಶಿಣ ಶಾಸ್ತ್ರದ ಚಿತ್ರಗಳು, ಮದುವೆ ಮುಹೂರ್ತ, ಮೆಹಂದಿಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದ್ಭುತವಾದ ಎಂಬ್ರೈಡರಿ ವರ್ಕ್ ಇರುವ ಸೀರೆ ಉಟ್ಟು, ಆಭರಣಗಳನ್ನು ತೊಟ್ಟು ಸುಂದರವಾಗಿ ಕಾಣುತ್ತಿದ್ದಾರೆ ತೇಜಸ್ವಿನಿ, ಮೈಸೂರು ಪೇಟ, ಪಂಚೆ ತೊಟ್ಟು ಸಂಪ್ರದಾಯಿಕ ಲುಕ್‌ನಲ್ಲಿ ವರ ಫಲಿ ವರ್ಮಾ ನದೀಮ್‌ಪಳ್ಳಿ ಇದ್ದಾರೆ.
ತೇಜಸ್ವಿನಿ ಪ್ರಕಾಶ್ 2008 ರಲ್ಲಿ ಬಿಡುಗಡೆ ಆದ ದರ್ಶನ್‌ರ 'ಗಜ' ಸಿನಿಮಾದ ಮೂಲಕ ನಟನೆ ಆರಂಭಿಸಿದರು. ಆ ನಂತರ ಹಲವು ಸಿನಿಮಾಗಳಲ್ಲಿ ನಟಿಸಿದ ತೇಜಸ್ವಿನಿ ಕಿರುತೆರೆಯಲ್ಲಿ ಪ್ರಮುಖ ನಟಿಯಾಗಿ ಹಲವು ಧಾರಾವಾಹಿಗಳಲ್ಲಿ ನಟಿಸಿದರು. 'ಮಾತಾಡ್ ಮಾತಾಡ್ ಮಲ್ಲಿಗೆ', 'ಪ್ರೀತಿ ಏಕೆ ಭೂಮಿ ಮೇಲಿದೆ', 'ಅರಮನೆ', 'ರಾಬರ್ಟ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ತೇಜಸ್ವಿನಿ ನಟಿಸಿದ್ದಾರೆ.


Click it and Unblock the Notifications











