For Quick Alerts
  ALLOW NOTIFICATIONS  
  For Daily Alerts

  ಕನ್ನಡದ ಈ ತಾರೆಯರ ಅಕಾಲಿಕ ಸಾವು ನ್ಯಾಯವೇ?

  |

  "ಈ ದೇಹದಿಂದ ದೂರನಾದೆ ಏಕೆ ಆತ್ಮನೇ ಈ ಸಾವು ನ್ಯಾಯವೇ" ಎನ್ನುವ ಓಹಿಲೇಶ್ವರ ಚಿತ್ರದ ಹಾಡನ್ನು ಮತ್ತೆ ಮತ್ತೆ ನೆನಪಿಸುವಂತೆ ಮಾಡುತ್ತದೆ ನಮ್ಮ ಕನ್ನಡದ ಈ ಸಿನಿಮಾ ತಾರೆಯರ ಅಕಾಲಿಕ ಸಾವು.

  ಬಣ್ಣದಲೋಕದಲ್ಲಿ ಮಿಂಚ ಬೇಕಾಗಿದ್ದ ನಮ್ಮ ನಟ, ನಟಿಯರು ವಯಸ್ಸಲ್ಲದ ವಯಸ್ಸಿನಲ್ಲಿ ದುರ್ಮರಣಕ್ಕೀಡಾಗಿದ್ದು ಚಿತ್ರರಂಗಕ್ಕೆ ಮತ್ತು ಸಮಸ್ತ ಕನ್ನಡ ಕುಲಕೋಟಿಗಳಿಗಾದ ಅಪಾರ ನಷ್ಟ.

  ಜೀವನದಲ್ಲಿ ನೊಂದಿದ್ದ ಸಿನಿಪ್ರೇಮಿಗಳಿಗೆ ತಮ್ಮ ತಮ್ಮ ಚಿತ್ರ ಮತ್ತು ಪಾತ್ರಗಳ ಮೂಲಕ ರಂಜಿಸುವ ಈ ತಾರೆಯರ ಪರದೆಯ ಹಿಂದಿನ ಕಥೆಯೇ ವಿಭಿನ್ನ/ವಿಚಿತ್ರ/ಅಸ್ಪಷ್ಟ

  ಪರದೆಯ ಮೇಲೆ/ಹಿಂದೆ ಬಾಳಿ ಬದುಕಬೇಕಾಗಿದ್ದ ಮತ್ತು ಸಣ್ಣ ವಯಸ್ಸಲ್ಲೇ ಸಾವನ್ನಪ್ಪಿದ ನಮ್ಮ ತಾರೆಯರು ಯಾರು? ಸ್ಲೈಡಿನಲ್ಲಿ ನೋಡಿ (ಕೆಲವೊಂದು ತಾರೆಯರ ಬಗ್ಗೆ)

  ಕಲ್ಪನಾ

  ಕಲ್ಪನಾ

  08.07.1943 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿದ ಶರತ್ ಲತಾ ಯಾನೆ ಕಲ್ಪನಾ ಸಾಕು ಮಗಳು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಸುಮಾರು ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಕಲ್ಪನಾ ಫಿಲಂಫೇರ್ ಮತ್ತು ರಾಜ್ಯ ಪ್ರಶಸ್ತಿಯನ್ನೂ ಪಡೆದಿದ್ದರು. ಬೆಳ್ಳಿಮೋಡ, ಕಪ್ಪುಬಿಳುಪು, ಗೆಜ್ಜೆಪೂಜೆ, ಶರಪಂಜರ, ಗಂಧದಗುಡಿ, ಬಯಲುದಾರಿ ಮುಂತಾದ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಕಲ್ಪನಾ 03.05.1979ರಲ್ಲಿ (36ನೇ ವಯುಸ್ಸಿನಲ್ಲಿ) ಆತ್ಮಹತ್ಯೆ ಮಾಡಿಕೊಂಡರು. ತನ್ನ ಮದುವೆ ಸಂಬಂಧ ಮುರಿದು ಬಿದ್ದ ಕಾರಣ ಸಂಕೇಶ್ವರದ ಬಳಿ ಕಲ್ಪನಾ ಆತ್ಮಹತ್ಯೆಗೆ ಶರಣಾದರು.

  ಮಂಜುಳಾ

  ಮಂಜುಳಾ

  ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿ ಮಂಜುಳಾ ಹುಟ್ಟಿದ್ದು 05.04.1951 ತುಮಕೂರಿನಲ್ಲಿ. 'ಯಾರ ಸಾಕ್ಷಿ; ಚಿತ್ರದ ಮೂಲಕ ನಾಯಕಿಯಾದ ಮಂಜುಳಾ 55 ಚಿತ್ರಗಳಲ್ಲಿ ನಟಿಸಿದ್ದಾರೆ. ಶ್ರೀನಾಥ್ ಮತ್ತು ಮಂಜುಳಾ ಜೋಡಿ ಅಂದಿನ ಕಾಲದಲ್ಲಿ ಪ್ರಣಯ ಜೋಡಿ ಎಂದೇ ಪ್ರಸಿಧ್ಧವಾಗಿತ್ತು. ನಿರ್ಮಾಪಕ ಅಮೃತಂ ಅವರನ್ನು ವಿವಾಹವಾಗಿದ್ದ ಮಂಜುಳಾರವರ ಖಾಸಗಿ ಜೀವನ ಸುಖಮಯವಾಗಿರಲಿಲ್ಲ. ಒಂದು ಗಂಡು ಮಗುವಿಗೆ ಜನನ ನೀಡಿದ ನಂತರ ಒಂದು ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡಿದ್ದರು. ಬಣ್ಣದ ಜಗತ್ತಿನಿಂದ ದೂರ ಉಳಿದು ತಾನಾಯಿತು ತನ್ನ ಸಂಸಾರವಾಯಿತೆಂದು ಇದ್ದ ಸಮಯದಲ್ಲಿ ಬೆಂಕಿ ಆಕಸ್ಮಿಕದಲ್ಲಿ ನಿಗೂಢ ರೀತಿಯಲ್ಲಿ ಮಂಜುಳಾ ತನ್ನ 35ನೇ ವಯಸ್ಸಿನಲ್ಲಿ ಮರಣ ಹೊಂದಿದರು.

  ಶಂಕರ್ ನಾಗ್

  ಶಂಕರ್ ನಾಗ್

  ಹೊನ್ನಾವರ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಜನಿಸಿದ ಶಂಕರ್ ನಾಗರಕಟ್ಟೆ ಆಲಿಯಾಸ್ ಶಂಕರ್ ನಾಗ್ 09.11.1954ರಲ್ಲಿ ಜನಿಸಿದರು. ಶಂಕರ್ ನಾಗ್ ತನ್ನ ವಿದ್ಯಾಬ್ಯಾಸದ ನಂತರ ಮುಂಬೈಗೆ ತೆರಳಿ, ಮರಾಠಿ ರಂಗಭೂಮಿಯಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದರು. ಗಿರೀಶ್ ಕಾರ್ನಾಡರ 'ಒಂದಾನೊಂದು ಕಾಲದಲ್ಲಿ' ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶಂಕರ್ ನಾಗ್ 90ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಸೆಪ್ಟೆಂಬರ್ 30, 1990ರಂದು (36ನೇ ವಯಸ್ಸಿನಲ್ಲಿ) ದಾವಣಗೆರೆಯ ಅನಗೋಡು ಹಳ್ಳಿಯಲ್ಲಿ ಜೋಕುರಸ್ವಾಮಿ ಚಿತ್ರದ ಚಿತ್ರೀಕರಣಕ್ಕೆ ಧಾರವಾಡದಿಂದ ತೆರಳುತ್ತಿದ್ದ ವೇಳೆ ಶಂಕರ್ ನಾಗ್ ಅವರು ಕಾರು ಅಪಘಾತದಿಂದ ತಮ್ಮ ಕೊನೆಯುಸಿರೆಳೆದರು. ಶಂಕರ್ ನಾಗ್ ಅವರ ದುರ್ಮರಣ ಇಡೀ ಭಾರತೀಯ ಚಿತ್ರರಂಗವನ್ನು ದಂಗುಬಡಿಸಿತ್ತು.

  ನವೀನ್ ಮಯೂರ್

  ನವೀನ್ ಮಯೂರ್

  ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಸ್ಪರ್ಶ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನವೀನ್ ಲವಲವಿಕೆ, ಉಪ್ಪಿದಾದ ಎಂಬಿಬಿಎಸ್, ನೀಲಾ ಮುಂತಾದ ಚಿತ್ರದಲ್ಲಿ ಸಹನಟನಾಗಿ ನಟಿಸಿದ್ದರು. 03.10.2010ರಲ್ಲಿ ಜಾಂಡೀಸ್ ಕಾಯಿಲೆಯಿಂದ ತನ್ನ 32 ವಯಸ್ಸಿನಲ್ಲಿ ಸಾವನ್ನಪ್ಪಿದರು.

  ಸೌಂದರ್ಯ

  ಸೌಂದರ್ಯ

  ಸೌಮ್ಯಾ ಯಾನೆ ಸೌಂದರ್ಯ 18.07.1972ರಲ್ಲಿ ಕೋಲಾರದ ಮುಳಬಾಗಿಲಿನಲ್ಲಿ ಜನಿಸಿದರು. ಕನ್ನಡ ಸೇರಿ ನಾಲ್ಕು ಭಾಷೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಸೌಂದರ್ಯ ಗಂಧರ್ವ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. 17.04.2004ರಲ್ಲಿ ಬಿಜೆಪಿ ಪರ ಚುನಾವಣಾ ಪ್ರಚಾರದ ವೇಳೆ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದರು. ಅವರಿಗೆ 32 ವರ್ಷ ವಯಸ್ಸಾಗಿತ್ತು.

  ಸಿಲ್ಕ್ ಸ್ಮಿತಾ

  ಸಿಲ್ಕ್ ಸ್ಮಿತಾ

  ವಿಜಯಲಕ್ಷ್ಮಿ ಎಂಬ ಹೆಸರಿನ ಸಿಲ್ಕ್ ಸ್ಮಿತಾ ಆಂಧ್ರದ ಎಲೂರು ಪ್ರದೇಶದಲ್ಲಿ ಒಂದು ಬಡ ಕುಟಿಂಬದಲ್ಲಿ ಜನಿಸಿದರು. 1979ರಲ್ಲಿ ವಂದಿಚಕ್ರಂ ಎನ್ನುವ ಚಿತ್ರದ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟ ಸಿಲ್ಕ್ ಕನ್ನಡ ಸೇರಿ ನಾಲ್ಕು ಭಾಷೆಯಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ/ಕುಣಿದಿದ್ದಾರೆ. 23.09.1996ರಲ್ಲಿ (35ನೇ ವಯಸ್ಸಿನಲ್ಲಿ) ಸಿಲ್ಕ್ ಸ್ಮಿತಾ ಚೆನ್ನೈನ ಅಪಾರ್ಟ್ಮೆಂಟ್ ಒಂದರಲ್ಲಿ ಶವವಾಗಿ ದೊರೆತರು.

  ರಾಜು ಅನಂತಸ್ವಾಮಿ

  ರಾಜು ಅನಂತಸ್ವಾಮಿ

  ತಮ್ಮ ಮಧುರ ಕಂಠದಿಂದ ಎದೆ ತುಂಬಿ ಹಾಡಿದ್ದ ಗಾಯಕ ಮೈಸೂರು ಅನಂತಸ್ವಾಮಿ ಪುತ್ರ ರಾಜು ಅನಂತಸ್ವಾಮಿ 17.01.2009ರ ಮಧ್ಯಾಹ್ನ 12.15ಕ್ಕೆ ನಿಧನರಾದರು. 250ಕ್ಕೂ ಹೆಚ್ಚು ಭಾವಗೀತೆಗಳಿಗೆ ರಾಗ ಸಂಯೋಜಿಸಿ ಹಾಡಿದ್ದ ರಾಜು, ಸುಮಾರು ಸಿನಿಮಾ-ಟಿವಿ ಧಾರಾವಾಹಿಗಳಲ್ಲಿ ಅಭಿನಯವನ್ನೂ ಮಾಡಿದ್ದರು. ಕಿಡ್ನಿ ವೈಫಲ್ಯದಿಂದ ಬೆಂಗಳೂರಿನ ಸಾಗರ್ ಅಪೊಲೋ ಆಸ್ಪತ್ರೆಯಲ್ಲಿ ತನ್ನ 38ನೇ ವಯಸ್ಸಿನಲ್ಲಿ ನಿಧನರಾದರು.

  ಸುನಿಲ್

  ಸುನಿಲ್

  ಸ್ಪುರದ್ರೂಪಿ ನಟ ಸುನಿಲ್ ಮಂಗಳೂರು ಮೂಲದವರು. ನಟ, ನಿರ್ಮಾಪಕ ದ್ವಾರಕೀಶ್ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸುನಿಲ್ ಮತ್ತು ಮಾಲಾಶ್ರೀ ಜೋಡಿ ಆ ದಶಕದಲ್ಲಿ ಬಹಳ ಹೆಸರುವಾಸಿಯಾಗಿತ್ತು. ಸುನಿಲ್ ರಸ್ತೆ ಅಪಘಾತದಲ್ಲಿ ನಿಧನರಾದರು.

  ನಿವೇದಿತಾ ಜೈನ್

  ನಿವೇದಿತಾ ಜೈನ್

  17.05.1979ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ನಿವೇದಿತಾ ಜೈನ್ ಡಾ. ರಾಜಕುಮಾರ್ ಹೋಂ ಬ್ಯಾನರಿನ ಮೂಲಕ ಚಿತ್ರರಂಗ ಪ್ರವೇಶಿಸಿದರು. ಆರು ಚಿತ್ರಗಳಲ್ಲಿ ನಟಿಸಿದ್ದ ನಿವೇದಿತಾ 11.06.1998 ರಲ್ಲಿ ಕಟ್ಟಡದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದರು. ಅವರಿಗೆ 19 ವರ್ಷ ವಯಸ್ಸಾಗಿತ್ತು.

  English summary
  List of some of the leading Kannada cine stars who died in young age.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X