ಏಕ ವ್ಯಕ್ತಿ ಅಭಿನಯದ 'ನಾನು ಅವಳು ಮತ್ತು ಕನ್ನಡಿ'
ಕನ್ನಡದಲ್ಲಿ ಚಿಕ್ಕ ಬಜೆಟ್ ಚಿತ್ರಗಳನ್ನು ನಿರ್ಮಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿರುವ ನಟ, ನಿರ್ದೇಶಕ ಓಂಪ್ರಕಾಶ್ ನಾಯಕ್. ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಏಕ ವ್ಯಕ್ತಿ ಅಭಿನಯದ ಚಿತ್ರವೊಂದನ್ನು ನಿರ್ದೇಶಿಸಿರುವುದಲ್ಲದೆ ಛಾಯಾಗ್ರಹಣ ಮಾಡಿ, ನಾಯಕನಾಗಿಯೂ ನಟಿಸಿದ್ದಾರೆ.
'ನಾನು ಅವಳು ಮತ್ತು ಕನ್ನಡಿ' ಹೆಸರಿನ ಈ ಚಿತ್ರ ಒಬ್ಬನೇ ಕಲಾವಿದನ ಅಭಿನಯದಲ್ಲಿ ಆರಂಭವಾಗಿ ಕೊನೆಗೊಳ್ಳುತ್ತದೆ. ಈ ಹಿಂದೆ ಇಂಗ್ಲೀಷ್ ಹಾಗೂ ಹಿಂದಿಯಲ್ಲಿ ಒಂದೊಂದು ಹಾಗೂ ಕನ್ನಡದಲ್ಲಿ 'ಶಾಂತಿ' ಬಿಟ್ಟರೆ ಏಕ ವ್ಯಕ್ತಿ ಅಭಿನಯದ 4ನೇ ಚಿತ್ರ ಇದಾಗಿದೆ.

ಬೆಂಗಳೂರಿನ ಸಂಜಯನಗರ ಹಾಗೂ ಕಾರವಾರ ಬೀಚ್ ನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಕಾಲ್ ಸೆಂಟರ್ ಉದ್ಯೋಗಿಯಾದ ಹೆಂಡತಿ ಹೊರಗಡೆ ಹೋದಾಗ ನಾಯಕ ಕನ್ನಡ ಮುಂದೆ ನಿಂತು ಶೇವ್ ಮಾಡಿಕೊಳ್ಳುತ್ತಿರುವಾಗ ಕನ್ನಡಿ ಹೆಂಡತಿಯ ಪರವಹಿಸಿ ಮಾತನಾಡುತ್ತದೆ.
ನಾಯಕ ಆಕೆಯ ತಪ್ಪುಗಳನ್ನೆಲ್ಲ ಎತ್ತಿ ತೋರಿಸಿ ಹೋದಂತೆಲ್ಲಾ ಕನ್ನಡಿಯಲ್ಲಿನ ಆತನ ಪ್ರತಿಬಿಂಬ ನಾಯಕನ ತಪ್ಪುಗಳನ್ನು ಹೇಳಿ ಆಕೆಯ ಪರವಹಿಸಿ ಮಾತನಾಡುತ್ತದೆ. ಅದೇ ಸಂದರ್ಭದಲ್ಲಿ ಹೆಂಡತಿ ಫೋನ್ ಮಾಡಿ ತಾನು ಡೈವೋರ್ಸ್ ಕೊಡುತ್ತಿರುವುದಾಗಿ ಹೇಳಿದಾಗ ಹುಚ್ಚನಂತಾಗುವ ನಾಯಕ ನಂತರ ಏನು ಮಾಡುತ್ತಾನೆ ಎನ್ನುವುದೇ ಈ ಚಿತ್ರದ ಸಾರಾಂಶವಾಗಿದೆ. ಬಿ.ಟಿ.ಎಲ್. ಫಿಲಂಸ್ ಲಾಂಛನದಲ್ಲಿ ಮಾಜಿ ಸಚಿವೆ ಬಿ.ಟಿ.ಲಲಿತನಾಯಕ್ ನಿರ್ಮಿಸುತ್ತಿರುವ ಈ ಚಿತ್ರ ಇದೇ ತಿಂಗಳ ಸೆನ್ಸಾರ್ ಹೋಗಲಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











