For Quick Alerts
  ALLOW NOTIFICATIONS  
  For Daily Alerts

  ಹೋರಾಟ ನಿರಂತರ, ಡಬ್ಬಿಂಗ್ ಗೆ ಫುಲ್ ಸ್ಟಾಪ್ : ಶಿವಣ್ಣ

  By ಜೇಮ್ಸ್ ಮಾರ್ಟಿನ್
  |

  ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಭೂತ ಕಾಲಿಡದಂತೆ ಮೆಟ್ಟಿ ಹಾಕಲು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಕನ್ನಡ ಚಿತ್ರರಂಗ ತೊಡೆ ತಟ್ಟಿ ನಿಂತಿದೆ. ಡಬ್ಬಿಂಗ್ ವಿರೋಧಿಸಿ ಸೋಮವಾರ(ಜ.27) ದಂದು ನಡೆಯಲಿರುವ ಬೃಹತ್ ಮೆರಣಿಗೆ ಹಾಗೂ ಪ್ರತಿಭಟನೆಗೆ ಪೂರ್ವಭಾವಿಯಾಗಿ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಚಲನಚಿತ್ರ ತಾರೆ, ತಂತ್ರಜ್ಞರ ಬೃಹತ್ ಪತ್ರಿಕಾಗೋಷ್ಠಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು.

  ಕನ್ನಡ ಚಿತ್ರರಂಗ ಸೋತಿಲ್ಲ. ಕನ್ನಡ ಚಿತ್ರರಂಗದಲ್ಲಿ ಹೊಸ ನಟರು ಹುಟ್ಟಿಕೊಂಡಿದ್ದಾರೆ. ಸುದೀಪ್, ದರ್ಶನ್, ಯಶ್, ಪುನೀತ್ ಚಿತ್ರಗಳು ಹಿಟ್ ಆಗುತ್ತಿರುವುದೆ ಇದಕ್ಕೆ ಸಾಕ್ಷಿ. ಕನ್ನಡ ಚಿತ್ರೋದ್ಯಮ ಮತ್ತೊಮ್ಮ ಡಬ್ಬಿಂಗ್ ವಿರುದ್ಧ ಒಗ್ಗಟ್ಟಾಗಿ ನಿಲ್ಲಲಿದೆ. ಅಪ್ಪಾಜಿ ಕಾಲದಿಂದಲೂ ಡಬ್ಬಿಂಗ್ ಗೆ ವಿರೋಧ ಇತ್ತು. ಈಗ ಡಬ್ಬಿಂಗ್ ಗೆ ಫುಲ್ ಸ್ಟಾಪ್ ಹಾಕುವ ಕಾಲ ಬಂದಿದೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದರು.

  ಈಗ ಯಾರು ಡಬ್ಬಿಂಗ್ ತರಲು ಯತ್ನಿಸುತ್ತಿದ್ದಾರೋ ಅವರ ಬಳಿ 'ಪವರ್' ಇರಬಹುದು. ಅದರೆ, ನಮ್ಮ ಹಿಂದೆ 'ಟವರ್' ಇದೆ. ಜನರು ಟವರ್ ರೀತಿ ನಮ್ಮ ಹಿಂದೆ ಬಂದು ನಮ್ಮನ್ನು ಬೆಂಬಲಿಸುತ್ತಾರೆ. ನಾಳೆ ದಿನದ ಪ್ರತಿಭಟನೆಯಲ್ಲಿ ಎಲ್ಲರೂ ಬಂದು ಪಾಲ್ಗೊಳ್ಳಿ. ನಮ್ಮ ಮದರ್ ಟಂಗ್ ಉಳಿಸಿರಿ. ಪ್ರತಿಭಟನೆ ಎಂದರೆ ಕಲ್ಲು ಹೊಡೆಯುವುದು ಬೇರೊಬ್ಬರಿಗೆ ತೊಂದರೆ ಮಾಡುವುದಲ್ಲ. ನ್ಯಾಯಯುತವಾಗಿ ನಮ್ಮ ಹೋರಾಟ ಮುಂದುವರೆಸೋಣ ಎಂದು ಶಿವಣ್ಣ ಕರೆ ನೀಡಿದರು.

  ಸಾಹಿತಿಗಳು ಒಪ್ಪುತ್ತಾರೆ: ನಾವು ನಮ್ಮ ಹೆಂಡತಿ ಮಕ್ಕಳನ್ನು ಕೂಲಿ ಮಾಡಿಯಾದರೂ ಸಾಕಬೇಕು. ಅದೇ ಗಂಡಸುತನ. ಈಗ ಏನು ಸಾಹಿತಿಗಳು ಡಬ್ಬಿಂಗ್ ಪರ ಇದ್ದಾರೆ ಅವರನ್ನು ಒಪ್ಪಿಸಿ ಅವರು ಮಾಡಿದ್ದು ತಪ್ಪು ಎಂದು ಹೇಳಿಸುತ್ತೇವೆ. ಯಾವುದೇ ಕಾರಣಕ್ಕೂ ಡಬ್ಬಿಂಗ್ ಗೆ ಅವಕಾಶ ನೀಡುವುದಿಲ್ಲ ಎಂದು ಶಿವರಾಜ್ ಹೇಳಿದರು. ರವಿಚಂದ್ರನ್, ಭಾರತಿ ವಿಷ್ಣುವರ್ಧನ್, ಯಶ್, ಹೇಮಾಚೌಧುರಿ, ಸಾ.ರಾ ಗೋವಿಂದು, ಪೂಜಾ ಗಾಂಧಿ, ಶ್ರುತಿ, ಭಾವನಾ ಮುಂತಾದವರು ಪಾಲ್ಗೊಂಡಿದ್ದ ಸುದ್ದಿಗೋಷ್ಠಿಯ ಇನ್ನಷ್ಟು ವಿವರ ಮುಂದೆ ಓದಿ...

  ರಿಮೇಕ್ ಬೇಕಾದರೆ ಇರಲಿ, ಡಬ್ಬಿಂಗ್ ಬೇಡ: ಶಿವಣ್ಣ

  ರಿಮೇಕ್ ಬೇಕಾದರೆ ಇರಲಿ, ಡಬ್ಬಿಂಗ್ ಬೇಡ: ಶಿವಣ್ಣ

  ಸುದ್ದಿಗೋಷ್ಠಿಯ ಕೊನೆಯಲ್ಲಿ ಮಾತನಾಡಿದ ಶಿವರಾಜ್ ‌ಕುಮಾರ್ ಅವರು, ಸಾಹಿತಿಗಳೂ ತಪ್ಪು ಮಾಡಬಹುದಲ್ವಾ? ಅವರು ಮಾಡಿದ್ದು ತಪ್ಪು ಎಂದು ಅವರಿಗೆ ತಿಳಿಯುವುದೇ ಮಾಡುತ್ತೇವೆ. ಭಾಷೆಗಾಗಿ ಮೂರನೇ ಕಣ್ಣಲ್ಲಾ.. ನಾಲ್ಕನೇ ಕಣ್ಣು ತೆಗೀಬೇಕಾಗುತ್ತೆ. ಕನ್ನಡಿಗರು ಒಳ್ಳೆ ಸಿನಿಮಾ ಬಂದರೇ ನೋಡೇ ನೋಡುತ್ತಾರೆ. ರಿಮೇಕ್ ಬೇಕಾದರೆ ಇರಲಿ, ಡಬ್ಬಿಂಗ್ ಯಾವುದೇ ಕಾರಣಕ್ಕೂ ಕಾಲಿಡುವುದು ಬೇಡ. ಡಬ್ಬಿಂಗ್ ವಿರುದ್ಧ ಹಮ್ಮಿಕೊಂಡಿರುವ ಪ್ರತಿಭಟನೆಗೆ ಎಲ್ಲರ ಸಹಕಾರ ಬೇಕು ಎಂದರು

  ದುಶ್ಮನ್ ಕಹಾನ್ ಹೈ ಅಂದರೆ ಬಗಲ್ ಮೇ : ಭಾರತಿ

  ದುಶ್ಮನ್ ಕಹಾನ್ ಹೈ ಅಂದರೆ ಬಗಲ್ ಮೇ : ಭಾರತಿ

  ಕನ್ನಡ ಭಾಷೆ ಉಳಿಯಬೇಕು ಅಂದರೆ ಅದು ನಮ್ಮ ರಕ್ತದಲ್ಲಿ ಬೆರೆತಿರಬೇಕು. ಆಗ ಕನ್ನಡ ನಮ್ಮನ್ನು ಕಾಪಾಡುತ್ತದೆ. ಕನ್ನಡ ಬೆಳಿಸುತ್ತೀವಿ ಅಂತಾ ಒಂದು ದಿನಾ ಮಾತಾಡೊದಲ್ಲಾ. ಇಲ್ಲದಿದ್ದರೆ ತೊಂದರೆಗೆ ಸಿಕ್ಕೋತೀವಿ... ದುಶ್ಮನ್ ಕಹಾನ್ ಹೈ ಅಂದರೆ ಬಗಲ್ ಮೇ ಅಂದಂಗೆ. ನಮ್ಮವರೇ ನಮಗೆ ಶತ್ರುಗಳಿದ್ದಾರೆ.

  ಡಬ್ಬಿಂಗ್ ವಿರುದ್ಧ ನವರಸ ನಾಯಕ ಜಗ್ಗೇಶ್ ಗುಡುಗು

  ಡಬ್ಬಿಂಗ್ ವಿರುದ್ಧ ನವರಸ ನಾಯಕ ಜಗ್ಗೇಶ್ ಗುಡುಗು

  ಡಬ್ಬಿಂಗ್ ಬೇಕು ಅಂದೋರ ಎದೆ ಮೇಲೆ ನಮ್ಮ ಕಾಲು! ಡಬ್ಬಿಂಗ್ ತಡೀದೆ ಇದ್ರೆ ಕನ್ನಡದ ಅಸ್ತಿತ್ವಕ್ಕೆ ಧಕ್ಕೆ ಬರುತ್ತೆ. ನಿಮ್ಮ ಮಕ್ಕಳಿಗೆ ಕೆಲಸ ಸಿಗಲ್ಲಾ! ಇದು ಹೆಡೆ ಎತ್ತೋ ಮೊದಲು ಹೆಡೆಮುರಿ ಕಟ್ಟಬೇಕು! ಕನ್ನಡನಾಡಲ್ಲಿ 300-400 ಚಿತ್ರಮಂದಿರದಲ್ಲಿ ಬೇರೆ ಭಾಷೆ ಸಿನಿಮಾ ಓಡ್ತಿದೆ. ಅದು ಹಾಗೇ ಇರಲಿ. ನೋಡ್ಕೊಳಿ. ಏನೇ ಆದರೂ ಡಬ್ಬಿಂಗ್ ತಡೆದೇ ತಡೀತೀವಿ.

  ಡಬ್ಬಿಂಗ್ ಮಾಡಿದರೆ ಚಿತ್ರರಂಗ ನಾಶ : ರವಿಚಂದ್ರನ್

  ಡಬ್ಬಿಂಗ್ ಮಾಡಿದರೆ ಚಿತ್ರರಂಗ ನಾಶ : ರವಿಚಂದ್ರನ್

  ಡಬ್ಬಿಂಗ್ ಒಂದೇ ಅಲ್ಲಾ, ರಿಮೇಕ್ ಕೂಡಾ ತಡೆಗಟ್ಟಬೇಕು! ಡಬ್ಬಿಂಗ್ ಮಾಡಿದರೆ ಚಿತ್ರರಂಗ ನಾಶವಾಗುತ್ತೆ. ನಮ್ಮ ಚಿತ್ರರಂಗ ಉಳಿಸಲು ಡಬ್ಬಿಂಗ್ ವಿರೋಧಿಸಲೇ ಬೇಕಿದೆ. ನೂರು ಕೋಟಿ ಐನೂರು ಕೋಟಿ ಕ್ಲಬ್ ಚಿತ್ರಗಳಿಗೆ ಹೆದರಿಕೊಂಡು ಕನ್ನಡ ಚಿತ್ರಗಳಿಗೆ ಚಿತ್ರಮಂದಿರ ನೀಡಲು ಚಿತ್ರಮಂದಿರ ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ. ಎಲ್ಲಕ್ಕೂ ವ್ಯಾಪಾರ ಮುಖ್ಯವಾದರೆ ಹೇಗೆ

  ಹೋರಾಟಕ್ಕೆ ವಾಟಾಳ್ ನಾಗರಾಜ್ ಬೆಂಬಲ

  ಹೋರಾಟಕ್ಕೆ ವಾಟಾಳ್ ನಾಗರಾಜ್ ಬೆಂಬಲ

  ಕರ್ನಾಟಕದಲ್ಲಿ ಪರಭಾಷೆ ಚಿತ್ರಗಳಿಗೆ ಬೆಂಬಲ ಸಿಗುತ್ತಿದೆ. ನಮ್ಮ ಭಾಷೆ ಚಿತ್ರ ಪ್ರದರ್ಶನಕ್ಕೆ ಚಿತ್ರಮಂದಿರಗಳು ಸಿಗುತ್ತಿಲ್ಲ. ಕಳೆದ 50 ವರ್ಷಗಳಿಂದ ಡಬ್ಬಿಂಗ್ ವಿರುದ್ಧ ದನಿ ಎತ್ತಲಾಗಿದೆ. ಹೋರಾಟ ನಿರಂತರವಾಗಿ ಸಾಗಲಿದೆ. ಡಬ್ಬಿಂಗ್ ವಿರೋಧಿಸಿ ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಸಬೇಕು

  ಚಿತ್ರನಟ ಪ್ರಣಯ ರಾಜ ಶ್ರೀನಾಥ್ ಮಾತನಾಡಿ

  ಚಿತ್ರನಟ ಪ್ರಣಯ ರಾಜ ಶ್ರೀನಾಥ್ ಮಾತನಾಡಿ

  ನಾನು ಒಂದು ಲಕ್ಷ ರೂ. ಸಂಭಾವನೆ ಪಡೆಯುವ ಕಾಲದಿಂದಲೂ ಚಿತ್ರರಂಗದಲ್ಲಿ ಇದ್ದೇನೆ. ಈಗ ಕೋಟಿ ಕೋಟಿ ಬಂಡವಾಳ ಹಾಕಿ ಸಿನಿಮಾ ಮಾಡುತ್ತಿದ್ದಾರೆ. ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾಗಿರುವ ಡಬ್ಬಿಂಗ್ ನಮಗೆ ಬೇಡ ಎಂದರು.

  ಡಾ.ರಾಜ್ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು

  ಡಾ.ರಾಜ್ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು

  ಡಾ.ರಾಜ್ ‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ಇದು ಕನ್ನಡ ಮತ್ತು ಕನ್ನಡಿಗರ ಬದುಕಿನ ಪ್ರಶ್ನೆಯಾಗಿದೆ. ಈ ವಿಚಾರದಲ್ಲಿ ಎಲ್ಲರ ಅಭಿಪ್ರಾಯವೂ ಒಂದೇ ಆಗಿದೆ. ಡಬ್ಬಿಂಗ್ ವಿರುದ್ಧ ಹೋರಾಡುವುದು ರಾಜ್ ‌ಕುಮಾರ್ ಹಾಕಿಕೊಟ್ಟ ಮಾರ್ಗವಾಗಿದ್ದು, ಅವರ ಸ್ಫೂರ್ತಿಯಿಂದಲೇ ಡಬ್ಬಿಂಗ್ ವಿರುದ್ಧ ಹೋರಾಟ ಮಾಡುತ್ತೇನೆ ಎಂದರು.

  ಡಬ್ಬಿಂಗ್ ವಿರುದ್ಧ ನಿಂತಿರುವ ತಾರಾಪಡೆ

  ಡಬ್ಬಿಂಗ್ ವಿರುದ್ಧ ನಿಂತಿರುವ ತಾರಾಪಡೆ

  ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣ ಸೇರಿದಂತೆ ಅನೇಕ ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ನಟಿ ಪದ್ಮಾ ವಾಸಂತಿ, ಶಶಿಕುಮಾರ್, ಶರಣ್, ಕನ್ನಡ ಚಲನಚಿತ್ರ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಅಶೋಕ್, ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಎನ್.ಮೂರ್ತಿ, ಬ್ಯಾಂಕ್ ಜನಾರ್ದನ್, ಸುಧಾರಾಣಿ, ಶ್ರುತಿ, ಭಾವನಾ, ಪೂಜಾ ಗಾಂಧಿ, ಎಡಗಲ್ಲು ಗುಡ್ಡದ ಮೇಲೆ ಚಂದ್ರು, ಹೇಮಾ ಚೌಧರಿ ಸೇರಿದಂತೆ ಅನೇಕ ನಟ-ನಟಿಯರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದು ನಾಳೆಯ ಬಂದ್ ಗೆ ಸಂಪೂರ್ಣ ಸಹಕಾರ ನೀಡುವುದಾಗಿ ಘೋಷಿಸಿದರು.

  ಬಂದ್ ಎಲ್ಲಿಂದ ಎಲ್ಲಿವರೆಗೆ, ಹೇಗೆ

  ಬಂದ್ ಎಲ್ಲಿಂದ ಎಲ್ಲಿವರೆಗೆ, ಹೇಗೆ

  ಇದು ಕನ್ನಡಕ್ಕೆ ಆಗುತ್ತಿರುವ ಅನ್ಯಾಯ. ಆದ್ದರಿಂದ ವಿಷಯದ ಗಂಭೀರತೆ ಅರ್ಥ ಮಾಡಿಕೊಂಡು ಆರು ಕೋಟಿ ಕನ್ನಡಿಗರು ನಾಳಿನ ಬಂದ್ ಗೆ ಬೆಂಬಲ, ಪ್ರೋತ್ಸಾಹ ಕೊಡಬೇಕೆಂದು ಶಿವರಾಜ್ ಸೇರಿದಂತೆ ನೆರೆದಿದ್ದ ತಾರೆಗಳು ಕಳಕಳಿಯ ಮನವಿ ಮಾಡಿದರು.

  ಸೋಮವಾರ(ಜ.27) ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ನಿಂದ ಕಲಾವಿದರ ಬೃಹತ್ ಪ್ರತಿಭಟನಾ ಮೆರವಣಿಗೆ ಸೆಂಟ್ರಲ್ ಕಾಲೇಜು ಆವರಣದವರೆಗೆ ನಡೆಯಲಿದೆ. ನಂತರ ಕಾಲೇಜು ಆವರಣದ ಕ್ರಿಕೆಟ್ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಈ ಸಮಾವೇಶಕ್ಕೆ ಕನ್ನಡದ ಹೋರಾಟ-ಕರ್ನಾಟಕದ ಒಕ್ಕೂಟ ಎಂದು ಹೆಸರಿಡಲಾಗಿದೆ

  English summary
  All artistes of the Kannada film industry, including actors Shivaraj Kumar, Punith, Ravichandran, Jaggesh, Bharati Vishnuvardhan, TV artists decided to participate in the bandh by halting all related activities on Jan.27. KFI artists association announced this today at Bangalore press club.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X