»   » 'ಪೋರ' ನಿಗೆ ಛೀಮಾರಿ ಹಾಕಿ ನೀರಿಳಿಸಿದ ಪೋರಿ

'ಪೋರ' ನಿಗೆ ಛೀಮಾರಿ ಹಾಕಿ ನೀರಿಳಿಸಿದ ಪೋರಿ

Posted By:
Subscribe to Filmibeat Kannada

'ಪೋರ' ಈ ಚಿತ್ರದ ಹೆಸರು ಕೇಳಿದಾಕ್ಷಣ ತುಂಟ, ತರಲೆ, ಹುಡುಗಾಟದ ಹುಡುಗ ಎಂದು ನಮಗೆಲ್ಲ ಹೊಳೆಯುವುದು ಸಹಜ. ಆದರೆ ಈ 'ಪೋರ' ಹಾಗಲ್ಲ ಈಗ ತುಂಟನೆಂಬುದೇನೋ ನಿಜ. ಅದರ ಜೊತೆ ದೊಡ್ಡದೊಂದು ಸಾಹಸ ಕೂಡ ಮಾಡುತ್ತಾನೆ. ಭಾರತದ ಪತ್ರಕರ್ತನಾಗಿ ಅಮೆರಿಕಾಗೆ ಹೋಗಿ ತನಿಖಾ ವರದಿ ಸಿದ್ಧಪಡಿಸುತ್ತಾನೆ.

ಈ ಹಿಂದೆ 'ಬಾಯ್ ಫ್ರೆಂಡ್' ಹಾಗೂ 'ಅಂಜದಿರು' ಚಿತ್ರಗಳನ್ನು ನಿರ್ದೇಶಿಸಿದ್ದ ಜನಾರ್ಧನ್ ಈ ಚಿತ್ರದ ನಾಯಕ 'ಪೋರ'ನಾಗಿ ಅಭಿನಯಿಸುತ್ತಿದ್ದಾರೆ. ಕಥೆ-ಚಿತ್ರಕಥೆ ಬರೆಯುವುದರೊಂದಿಗೆ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಈ ಚಿತ್ರದಿಂದ ತನ್ನ ಹೆಸರನ್ನು ಅಮೋಘ ಎಂದು ಬದಲಾಯಿಸಿಕೊಂಡಿದ್ದಾರೆ.


ಅಮೆರಿಕಾ ಮೂಲಕ ವ್ಯಾಲರಿ ನಾಯಕಿಯಾಗಿ ಅಭಿನಯಿಸುತ್ತಿರುವ 'ಪೋರ' ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣ ಕಳೆದವಾರ ನೆಲಮಂಗಲದ ಶ್ರೀನಿವಾಸ ಕಲ್ಯಾಣಮಂಟಪದಲ್ಲಿ ನಡೆಯಿತು. ವಧುವಿನ ಅಲಂಕಾರದಲ್ಲಿದ್ದ ನಾಯಕಿ ವ್ಯಾಲರಿ ಅಲ್ಲಿಗೆ ಬಂದ ನಾಯಕನಿಗೆ ಆತ ಹಿಂದೆ ಮಾಡಿದ ತಪ್ಪುಗಳನ್ನೆಲ್ಲ ಹೇಳಿ ಛೀಮಾರಿ ಹಾಕಿ ನೀರಿಳಿಸುವ ದೃಶ್ಯದ ಶೂಟಿಂಗ್ ವೀಕ್ಷಣೆಗೆ ಪತ್ರಕರ್ತರನ್ನು ಚಿತ್ರತಂಡ ಆಹ್ವಾನಿಸಿತ್ತು.

ಹಿರಿಯ ನಟ ಗಿರೀಶ್ ಕಾರ್ನಾಡ್ ಅವರು ಗೃಹಮಂತ್ರಿಯಾಗಿ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಹಿಂದಿನ ದಿನವಷ್ಟೇ ಮೆಟ್ಟಿಲಿಳಿಯುವಾಗ ಕಾಲುಜಾರಿ ಬಿದ್ದು ಏಟು ಮಾಡಿಕೊಂಡಿದ್ದರು. ಹಾಗಾಗಿ ಆದಿನ ಅವರ ಅನುಪಸ್ಥಿತಿಯಲ್ಲಿಯೇ ಪತ್ರಿಕಾಗೋಷ್ಠಿ ನಡೆಯಿತು.

'ಅಮೆರಿಕಾದ ನ್ಯೂಯಾರ್ಕ್, ವಾಷಿಂಗ್ಟನ್ ಮೊದಲಾದ ರಮ್ಯ ತಾಣಗಳಲ್ಲಿ 20ಕ್ಕೂ ಹೆಚ್ಚು ದಿನ ಹಾಡು ಹಾಗೂ ಕೆಲ ದೃಶ್ಯಗಳ ಚಿತ್ರೀಕರಣ ಮಾಡಿಕೊಂಡು ಬಂದಿದ್ದೆವು. ನಂತರ ಬೀದರ್ ಕೋಟೆ, ಹಾಗೂ ಬೆಂಗಳೂರು ಸುತ್ತಮುತ್ತ ಸುಮಾರು 38 ದಿನ ಮಾತಿನಭಾಗ ಹಾಗೂ ಹಾಡುಗಳನ್ನು ಶೂಟ್ ಮಾಡಿದ್ದೇವೆ. ಒಂದು ಹಾಡು ಹಾಗೂ ಸಾಹಸ ದೃಶ್ಯವೊಂದನ್ನು ಚಿತ್ರೀಕರಿಸಿದರೆ ಶೂಟಿಂಗ್ ಮುಗಿದಂತೆ ಎಂದಿದ್ದಾರೆ ಅಮೋಘ.

ಚಿತ್ರದಲ್ಲಿ ಅಮೋಘ, ಲಕ್ಕಿ ಶಂಕರ್, ತಬಲಾನಾಣಿ ಸೇರಿದಂತೆ 4 ಜನ ಸ್ನೇಹಿತರು ಪತ್ರಕರ್ತರಾಗಿ ಅಭಿನಯಿಸಿದ್ದಾರೆ. ಗಿರೀಶ್ ಕಾರ್ನಾಡ್ ಅವರ ಸರಳ ವ್ಯಕ್ತಿತ್ವದ ಬಗ್ಗೆ ಮಾತನಾಡುತ್ತಾ, "ಅವರು ಅಷ್ಟು ದೊಡ್ಡ ವ್ಯಕ್ತಿಯಾದರೂ ನಾವು ಹೇಳಿದ ಹಾಗೆ ಕೇಳುತ್ತಾರೆ. ನಮ್ಮೆಲ್ಲರ ಜೊತೆ ಸರಳವಾಗಿ ಬೆರೆಯುತ್ತಾರೆ. ಚಿತ್ರದಲ್ಲಿಯೂ ಅದೇ ಥರದ ಪಾತ್ರವಿದೆ. ಹೋಮ್ ಮಿನಿಸ್ಟರ್ ಆದರೂ ನಿಷ್ಠಾವಂತ ರಾಜಕಾರಣಿ. ತಮ್ಮ ಮನೆಯ ತೋಟದಲ್ಲಿ ತಾವೇ ಕೆಲಸ ಮಾಡುತ್ತಾರೆ. ಅವರ ಮಗಳಾಗಿ ವ್ಯಾಲರಿ (ನಾಯಕಿ) ಅಭಿನಯಿಸುತ್ತಿದ್ದಾರೆ ಎಂದು ಅಮೋಘ ವಿವರ ನೀಡಿದರು.

ನಿರ್ಮಾಪಕರಲ್ಲೊಬ್ಬರಾದ ದೇವರಾಜ್ ಶಿಡ್ಲಘಟ್ಟ ಮಾತನಾಡಿ, "ಅಮೆರಿಕಾದಲ್ಲಿ ಶೇ.40ರಷ್ಟು ಶೂಟ್ ಮಾಡಿದ್ದೇವೆ. ಕನ್ನಡ ಚಿತ್ರರಂಗ ಯಾವುದಕ್ಕೂ ಕಮ್ಮಿಯಿಲ್ಲ ಎಂದು ಹೇಳಿಕೊಳ್ಳುವಂಥ ಸಿನಿಮಾ ಮಾಡಿದ್ದೇವೆ. ಬೀದರ್, ಇನ್ನೋವೇಟಿವ್ ಫಿಲಂಸಿಟಿ ಮೊದಲಾದ ಕಡೆ ಹಾಡುಗಳನ್ನು ಮಾಡಿದ್ದೇವೆ. ಶೇ.95 ಶೂಟಿಂಗ್ ಮುಗಿದಿದೆ ಎಂದರು.

ಮತ್ತೊಬ್ಬ ನಿರ್ಮಾಪಕ ಡಾ.ಶೈಲೇಂದ್ರ ಬೆಳದಾಳೆ ಬೀದರ್ ನಲ್ಲಿ ಜಿ.ಪಂ.ಸದಸ್ಯರು, ನಾಯಕಿಯ ಅಣ್ಣನಾಗಿ ಚಿಕ್ಕ ಪಾತ್ರ ಕೂಡ ಮಾಡಿದ್ದಾರೆ. "ಕಥೆ ತುಂಬಾ ಚೆನ್ನಾಗಿತ್ತು, ವಿಶೇಷವಾಗಿತ್ತು. ಹಾಗಾಗಿ ಈ ಚಿತ್ರ ನಿರ್ಮಾಣಕ್ಕೆ ಮನಸ್ಸು ಮಾಡಿದೆ" ಎಂದು ಹೇಳಿಕೊಂಡರು.

ನಾಯಕಿ ವ್ಯಾಲರಿ, ಲಕ್ಕಿಶಂಕರ, ಹಿರಿಯನಟ ಮನದೀಪ್ ರಾಯ್, ತಬಲಾನಾಣಿ, ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದರು. ಹಿರಿಯ ಕಲಾವಿದರಾದ ಭವ್ಯಾ ಹಾಗೂ ಲಕ್ಷ್ಮಣ್ ಅವರೂ ಕೂಡ ಅಭಿನಯಿಸುತ್ತಿರುವುದು ಈ ಚಿತ್ರದ ವಿಶೇಷ. (ಒನ್ಇಂಡಿಯಾ ಕನ್ನಡ)

English summary
Kannada film 'Pora' has been completed by 90 percent of the shooting. The director cum hero of the film Amogh alias Janardhan plays a lead role in the film with Vyalari. Dr Girish Karnad playing Home Minister role in the film.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada