»   » 'ಕಂಕಣ'ದ ಕವಿರಾಜ್ ಕಂಡಂಥ 'ದೇವತಾ ಮನುಷ್ಯ' ಇವರು!

'ಕಂಕಣ'ದ ಕವಿರಾಜ್ ಕಂಡಂಥ 'ದೇವತಾ ಮನುಷ್ಯ' ಇವರು!

By: ಕವಿರಾಜ್
Subscribe to Filmibeat Kannada

ಡಾ.ರಾಜ್ ಕುಮಾರ್........ಕನ್ನಡ ಚಿತ್ರರಂಗದ ಯಶಸ್ಸಿನ ಶಿಖರ. ಅದೇಷ್ಟೋ ಯುವ ಪ್ರತಿಭೆಗಳಿಗೆ ದಾರಿದೀಪ. ಅಭಿಮಾನಿಗಳ ಪಾಲಿನ ಅಣ್ಣಾವ್ರು. ಅದೇ ಅಭಿಮಾನಿಗಳು ಪ್ರೀತಿಯಿಂದ 'ಬಂಗಾರದ ಮನುಷ್ಯ', 'ದೇವತಾ ಮನುಷ್ಯ' ಅಂತಲೂ ಕರೆಯುತ್ತಾರೆ.

ಡಾ.ರಾಜ್ ಅವರನ್ನ 'ದೇವತಾ ಮನುಷ್ಯ' ಎನ್ನುವುದಕ್ಕೆ ಕಾರಣ ಹಲವು.. ಆದ್ರೆ, ಕನ್ನಡದ ಕವಿ ಕವಿರಾಜ್ ಅಣ್ಣಾವ್ರನ್ನ ಉದಾಹರಣೆ ಸಮೇತ 'ದೇವತಾ ಮನುಷ್ಯ' ಎಂದು ವರ್ಣಿಸಿದ್ದಾರೆ.[ಡಾ.ರಾಜ್ 'ಅಪರೂಪದ ಪ್ರತಿಮೆಗಳ ಹಿಂದಿನ ಅದ್ಭುತ ಶಿಲ್ಪಿ' ಈತ..]

ಹೌದು, ಡಾ.ರಾಜ್ ಅವರನ್ನ ಸಾಹಿತಿ ಕವಿರಾಜ್ ಮೊದಲ ಸಲ ಭೇಟಿ ಮಾಡಿದಾಗ ತಮಗಾದ ಅನುಭವವನ್ನ ತಮ್ಮದೇ ಪದಗಳಲ್ಲಿ ಬಣ್ಣಿಸಿದ್ದಾರೆ. ಮುಂದೆ ಓದಿ.......

ಅಣ್ಣಾವ್ರ ಬಗ್ಗೆ ತಿಳಿದುಕೊಳ್ಳುವ ಕುತೂಹಲ!

''ಅಣ್ಣಾವ್ರ ಹೃದಯವಂತಿಕೆಯ ಬಗ್ಗೆ ಕಥೆಗಳಂತ ಬಹಳಷ್ಟು ವಿಷಯಗಳನ್ನು ಕೇಳಿದ್ದ ನನಗೆ ಅವುಗಳ ಸತ್ಯಾಸತ್ಯತೆ ಬಗ್ಗೆ ಸಣ್ಣದೊಂದು ಅನುಮಾನ ಇತ್ತು. ಹಲವು ವಿಷ್ಯಗಳಲ್ಲಿ ಜನ ಇಲಿ ಹೋದ್ರೆ ಹುಲಿ ಹೋಯಿತು ಅನ್ನೋದನ್ನ ಗಮನಿಸಿದ್ದೆ'' - ಕವಿರಾಜ್, ಸಾಹಿತಿ ['ಮಜಾ ಟಾಕೀಸ್'ನಲ್ಲಿ ಅಣ್ಣಾವ್ರ ಅಭಿಮಾನ ಸಂಭ್ರಮಿಸಿದ ಸೃಜನ್ ಲೋಕೇಶ್]

'ದೇವತಾ ಮನುಷ್ಯ'ನ ಮೊದಲ ಭೇಟಿ

''2004-05 ರ ಸುಮಾರಿಗೆ ಅನ್ಸುತ್ತೆ ಒಂದು ದಿನ ಗುರುಕಿರಣ್ ಅವರ ಜೊತೆ ಅವರ ಮನೆಗೆ ಹೋಗಿ ಅಣ್ಣಾವ್ರನ್ನ ಭೇಟಿಯಾಗುವ ಮೊದಲ ಹಾಗೂ ಕೊನೆ ಅವಕಾಶ ಸಿಕ್ಕಿತ್ತು. ಮನೆ ಒಳಗೆ ಕಾಲಿಡುತ್ತಿದ್ದಂತೆ ಅವರೇ ಎದುರಿಗೆ ಸಿಕ್ಕರು. ಒಂದು ಕ್ಷಣ ಬ್ಲ್ಯಾಂಕ್ ಆಗಿಬಿಟ್ಟೆ'' - ಕವಿರಾಜ್, ಸಾಹಿತಿ [ಡಾ.ರಾಜ್ ಡಾಕ್ಟರೇಟ್ ಪಡೆದ ಅಪರೂಪದ ಕ್ಷಣ ನೋಡಿ! ]

ಡಾ.ರಾಜ್ ನೋಡಿದ ಮೊದಲ ಅನುಭವ

''ಶುಭ್ರ ಬಿಳಿ ಉಡುಗೆ.. ಅದಕ್ಕಿಂತ ಶುಭ್ರವಾದ ಪ್ರೀತಿ ಉಕ್ಕುವ ನಗು ಹೊತ್ತ ಮುಖ. ಹತ್ತಿರ ಹೋದಂತೆ ಯಾವುದೋ ಅವ್ಯಕ್ತ ಪ್ರಭಾವಳಿಯೊಳಗೆ ಪ್ರವೇಶಿಸಿದ ಅನುಭವ. ಕಾಲಿಗೆ ಬೀಳೋ ಸಂಸ್ಕೃತಿಯ ಕಡು ವಿರೋಧಿಯಾಗಿದ್ದ ನಾನು ಏನಾಗುತ್ತಿದೆ ಎಂದು ಅರಿವಾಗೋ ಮುನ್ನವೇ ಅವರ ಪಾದ ಸ್ಪರ್ಶಿಸಿ ಬಿಟ್ಟಿದ್ದೆ. ಮೊದಲ ಬಾರಿ ಮೆದುಳಿನ ಅರಿವಿಗೆ ಬರದೆ ಮನಸು ಕೆಲಸ ಮುಗಿಸಿ ಧನ್ಯ ಭಾವದಲ್ಲಿತ್ತು'' - ಕವಿರಾಜ್, ಸಾಹಿತಿ [ಕನ್ನಡದ ಯಾವ ನಟಿ ಡಾ.ರಾಜ್ ಗೆ ಅತ್ಯುತ್ತಮ ಜೋಡಿ ಆಗಿದ್ದರು?]

'ಸರಸ್ವತಿ ಪುತ್ರ' ಎಂದಿದ್ದ ಡಾ.ರಾಜ್

''ಗುರುಕಿರಣ್ ಅವರು ನನ್ನ ಹೆಸರು ಹೇಳಿ ಪರಿಚಯಿಸೋಕೆ ಹೊರಟಾಗ .."ಇವರು ಗೊತ್ತು.. ಸರಸ್ವತಿ ಪುತ್ರರು ಬಹಳ ಚನ್ನಾಗ್ ಬರೀತಾರೆ" ಎಂದು ಬೆನ್ನು ತಟ್ಟಿದರು. ಆಗಿನ್ನು ಹಾಡು ಬರೆಯಲು ಆರಂಭಿಸಿದ ನನ್ನ ಬಗ್ಗೆ ಸಾಧನೆಯ ಶಿಖರಾಗ್ರ ಏರಿ ನಿಂತಿರುವ ಈ ಮಹನೀಯರಿಗೆ ಗೊತ್ತು ಅನ್ನುವ ವಿಷಯವೇ ನನ್ನಲ್ಲಿ ಪುಳಕ ತಂದಿತ್ತು. ಆಮೇಲೆ ಹೇಳಿದ ಮಾತುಗಳಂತೂ ಇನ್ನೂ ನನಗೆ ಕನಸಲ್ಲಿ ಕೇಳಿದಂತಿವೆ'' - ಕವಿರಾಜ್, ಸಾಹಿತಿ

ಅಣ್ಣಾವ್ರ ಆಸೆ ಈಡೇರಲಿಲ್ಲ!

"ನಿನ್ನೆ ರಾತ್ರಿ ಅಷ್ಟೇ, ನಾನು ಪಾರ್ವತಿ ಮಾತಾಡ್ತಾ ಇದ್ವಿ.. ನಾವೊಂದು ಅಯ್ಯಪ್ಪ ಸ್ವಾಮಿ ಹಾಡುಗಳ ಆಲ್ಬಮ್ ಮಾಡ್ಬೇಕು ಅಂತ ಇದೀವಿ. ಆ ಹಾಡುಗಳನ್ನ ನಿಮ್ಮ್ ಹತ್ರಾನೇ ಬರಿಸ್ಬೇಕು ಅಂತಾ" ( ಆ ಸೌಭಾಗ್ಯ ಒದಗಿ ಬರಲೇ ಇಲ್ಲ) ನಂತರ ನೇರ ನಮ್ಮನ್ನ ಕರೆದೊಯ್ದಿದ್ದು ಊಟದ ಟೇಬಲ್ಲಿಗೆ. ನಾವು ಮೂರೇ ಜನ. ಅವರ ಮುಂದೆ ಕುಳಿತು ಊಟ ಮಾಡ್ತಾ ಇದ್ದಾಗ ಸಿನೆಮಾ ರಂಗಕ್ಕೆ ಬಂದಿದ್ದು ಸಾರ್ಥಕ ಆಯ್ತು ಅನ್ನಿಸ್ತಿತ್ತು. ಮದ್ಯೆ ಅವರೇ ನನ್ನ ತಟ್ಟೆಗೆ ಕೆಲವು ಚಿಕನ್ ತುಂಡುಗಳನ್ನು ಬಡಿಸಿ "ಯುವಕರು ನೀವು ಚನ್ನಾಗ್ ತಿನ್ಬೇಕು" ಅಂದಾಗ ಜನ ಹೇಳೋದಕ್ಕಿಂತ ಇವರು ಹೃದಯವಂತ ಅನ್ನಿಸ್ತು'' - ಕವಿರಾಜ್, ಸಾಹಿತಿ

ಅಣ್ಣಾವ್ರ ಮುಂದೆ 'ಸ್ಟಾರ್'ಗಿರಿಯಿಲ್ಲ

''ಇಷ್ಟೇ ಆಗಿದ್ದರೆ ಬಹುಶಃ ಇವತ್ತು ಇದೆಲ್ಲಾ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರಲಿಲ್ಲ ಅನ್ಸುತ್ತೆ. ಮುಂದೆ ಏನಾಯ್ತು ಅಂದ್ರೆ.. ಊಟ ಹಾಗೂ ಮಾತುಕತೆ ಮುಗಿಸಿ ನಾವು ಹೊರಟಾಗ ನಮ್ಮನ್ನು ಬೀಳ್ಕೊಡಲು ಗೇಟ್ ತನಕ ಬಂದರು. ಗೇಟ್ ಸ್ವಲ್ಪ ತೆರೆದ ಕೂಡಲೇ ನಮ್ಮ ಜೊತೆ ಬಂದಿದ್ದ ಗುರುಕಿರಣ್ ಅವರ ಕಾರ್ ಡ್ರೈವರ್ ಹೇಗಾದರೂ ಅಣ್ಣಾವ್ರನ್ನ ನೋಡ್ಬೇಕು ಅಂತ ಇಣುಕಿ ನಮಸ್ಕಾರ ಮಾಡಿದರು. ಪ್ರತಿ ವಂದನೆ ಮಾಡಿದ ಅಣ್ಣಾವ್ರು "ಇವರ್ ಯಾರು" ಅಂತ ನಮ್ಮತ್ತ ತಿರುಗಿ ಕೇಳಿದರು. ಅಗ ಗುರುಕಿರಣ್ ನಮ್ಮ ಡ್ರೈವರ್ ಅಂತ ಪರಿಚಯಿಸಿದ್ರು'' - ಕವಿರಾಜ್, ಸಾಹಿತಿ

ನಮಗೆ ಅಪರಾಧಿ ಭಾವ ಕಾಡಿತ್ತು

''ಆ ತಕ್ಷಣವೇ "ಓಹೋ..ಮತ್ತೆ ಇವರು ಊಟ ಮಾಡಿಲ್ಲಲ್ಲ.." ಎಂದು ಪ್ರಶ್ನಾರ್ಥಕವಾಗಿ ನಮ್ಮ ನ್ನು ಕೇಳಿದಾಗ ನಮ್ಮಲ್ಲಿ ಒಂದು ಸಣ್ಣ ಅಪರಾಧಿ ಭಾವ. ನಮ್ಮ ಜೊತೆ ಬಂದ, ನಮಗಾಗಿ ದುಡಿಯೋ ವ್ಯಕ್ತಿ ಊಟ ಮಾಡಿಲ್ಲ ಅಂತ ನಾವು ಯೋಚಿಸಲಿಲ್ಲ. ಆದ್ರೆ ತನಗೆ ಸಂಬಂಧವೇ ಇಲ್ಲದ ವ್ಯಕ್ತಿಯ ಬಗ್ಗೆ ಈ ಮನುಷ್ಯನ ಕಾಳಜಿ ಕಂಡು ನಮಗೆ ಮಾತೇ ಹೊರಡಲಿಲ್ಲ'' - ಕವಿರಾಜ್, ಸಾಹಿತಿ

ಇವರು ನಿಜವಾದ 'ದೇವತಾ ಮನುಷ್ಯ' !

''ಡ್ರೈವರ್ ಬೇಡ ಬೇಡ ಅಂದರೂ ಒತ್ತಾಯಿಸಿ ಒಳಗೆ ಕರೆದುಕೊಂಡು ಹೋಗಿ ಊಟ ಮಾಡಿಸಿಯೇ ಕಳಿಸಿದಾಗ ಈ ಮನುಷ್ಯನ್ನ ಯಾಕೇ 'ದೇವತಾ ಮನುಷ್ಯ' ಅಂತಾರೆ ಅನ್ನೋದಕ್ಕೆ ನಾವೇ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿದ್ದೆವು'' - ಕವಿರಾಜ್, ಸಾಹಿತಿ

English summary
Kannada lyricist Kaviraj Wrote A Good Words on Kannada Legend Actor Dr Rajkumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada