»   » ಶರಣ್ 'ಅಧ್ಯಕ್ಷ' ಚಿತ್ರದ ವಿಶೇಷಗಳ ಒಂದು ಝಲಕ್

ಶರಣ್ 'ಅಧ್ಯಕ್ಷ' ಚಿತ್ರದ ವಿಶೇಷಗಳ ಒಂದು ಝಲಕ್

By: ಉದಯರವಿ
Subscribe to Filmibeat Kannada

'ಜೈಲಲಿತಾ' ಚಿತ್ರದ ಬಳಿಕ ಹಾಸ್ಯನಟ ಶರಣ್ ಇನ್ನೊಂದು ಚಿತ್ರದ ಮೂಲಕ ಪ್ರೇಕ್ಷಕರಿಗೆ ಕಚಗುಳಿ ಇಡಲು ಬರುತ್ತಿದ್ದಾರೆ. ಈ ಸಲ ಅವರು 'ಅಧ್ಯಕ್ಷ'ರಾಗಿ ರಂಜಿಸಲು ಇದೇ ಶುಕ್ರವಾರದಂದು (ಆ.15) ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

'ವಿಕ್ಟರಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ನಂದಕಿಶೋರ್ ನಿರ್ದೇಶನದ ಚಿತ್ರ ಇದು. ಅರ್ಜುನ್ ಜನ್ಯಾ ಸಂಗೀತದ ಹಾಡುಗಳು ಈಗಾಗಲೆ ಗೀತಪ್ರಿಯರ ಗಮನಸೆಳೆದಿವೆ. ಶರಣ್ ಜೊತೆ ರಕ್ಷಾ ನಾಯಕಿ. ಪಾತ್ರವರ್ಗದಲ್ಲಿ ರವಿಶಂಕರ್, ಮಾಳವಿಕಾ ಅವಿನಾಶ್, ಚಿಕ್ಕಣ್ಣ ಹಾಗೂ ರಮೇಶ್ ಭಟ್ ಸೇರಿದಂತೆ ಮುಂತಾದವರಿದ್ದಾರೆ.

ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. ಅಧ್ಯಕ್ಷ ಚಿತ್ರ ರಾಜ್ಯಾದ್ಯಂತ ಐವತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ಬಿ.ಕೆ.ಗಂಗಾಧರ್ ಮತ್ತು ಬಿ. ಬಸವರಾಜ್ ನಿರ್ಮಿಸಿರುವ ಚಿತ್ರವಿದು. 'ಅಧ್ಯಕ್ಷ' ಚಿತ್ರದಲ್ಲಿ ಏನಿವೆ ಅಂತಹಾ ವಿಶೇಷಗಳು. ಬನ್ನಿ ನೋಡೋಣ ಚಿತ್ರದ ಝಲಕ್.

ಕೋರ್ಟ್ ಮೆಟ್ಟಿಲೇರಿದ್ದ ಅಧ್ಯಕ್ಷರು

ಈ ಚಿತ್ರದ ಹಾಡೊಂದರಲ್ಲಿ ಶ್ರೀಕೃಷ್ಣನನ್ನು ಅವಹೇಳನ ಮಾಡಲಾಗಿದೆ. ಈ ಮೂಲಕ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಪ್ರಣವಾನಂದಸ್ವಾಮಿ ಎಂಬುವವರು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಚಿತ್ರದ ಬಿಡುಗಡೆಗೆ ಅವರು ತಡೆಯಾಜ್ಞೆ ನೀಡುವಂತೆ ಕೋರಿದ್ದರು.

ಅಧ್ಯಕ್ಷರ ಬಿಡುಗಡೆಗೆ ಕೋರ್ಟ್ ಗ್ರೀನ್ ಸಿಗ್ನಲ್

ಹಾಗಾಗಿ ಅಧ್ಯಕ್ಷ ಚಿತ್ರ ಬಿಡುಗಡೆಯಾಗುವುದೇ ಅನುಮಾನವಾಗಿತ್ತು. ಇದೀಗ ಆ ಹಾಡಿನ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕುವುದಾಗಿ ಚಿತ್ರತಂಡ ಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದೆ. ಈ ಮೂಲಕ ನಗರ 45ನೇ ಎಸಿಎಂಎಂ ನ್ಯಾಯಾಲಯ ಅಧ್ಯಕ್ಷ ಚಿತ್ರ ಬಿಡುಗಡೆಗೆ ಹಸಿರು ನಿಶಾನೆ ತೋರಿದೆ.

ವಿಚಾರಣೆ ಆ.19ಕ್ಕೆ ಮುಂದೂಡಿಕೆ

ಒಂದು ವೇಳೆ ಪ್ರಮಾಣಪತ್ರದಲ್ಲಿ ತಿಳಿಸಿರುವಂತೆ ಆಕ್ಷೇಪಾರ್ಹ ದೃಶ್ಯಗಳು ತೆಗೆದುಹಾಕದೆ ಇದ್ದರೆ ಚಿತ್ರದ ಪ್ರದರ್ಶನಕ್ಕೆ ತಡೆ ನೀಡುವುದಾಗಿ ಕೋರ್ಟ್ ಎಚ್ಚರಿಸಿದೆ. ಚಿತ್ರವನ್ನು ವೀಕ್ಷಿಸಿ ಆಕ್ಷೇಪಾರ್ಹ ದೃಶ್ಯಗಳಿದ್ದರೆ ನ್ಯಾಯಾಲಯದ ಗಮನಕ್ಕೆ ತರಬೇಕು ಎಂದು ಫಿರ್ಯಾದುದಾರರು ಹಾಗೂ ಅವರ ಪರ ವಕೀಲರಿಗೆ ಕೋರ್ಟ್ ಸೂಚಿಸಿದ್ದು ವಿಚಾರಣೆಯನ್ನು ಆ.19ಕ್ಕೆ ಮುಂದೂಡಿದೆ.

ತಮಿಳು ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದ್ದ ಚಿತ್ರ

ಅಲ್ಲಿಗೆ 'ಅಧ್ಯಕ್ಷ' ಚಿತ್ರದ ವಿವಾದ ಸುಖಾಂತ್ಯ ಕಂಡಿದೆ. ಈ ಚಿತ್ರ ತಮಿಳಿನ ಯಶಸ್ವಿ ಚಿತ್ರ 'ವರುಥಪಡತ ವಾಲಿಬಾರ್ ಸಂಘಂ' ಚಿತ್ರದ ರೀಮೇಕ್. ಹಾಗೆಂದರೆ 'ಚಿಂತೆಯಿಲ್ಲದ ಯುವಕರ ಸಂಘ' ಎಂದರ್ಥ. ಈ ರೊಮ್ಯಾಂಟಿಕ್ ಕಾಮಿಡಿ ಚಿತ್ರ ತಮಿಳಿನ ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿತ್ತು.

ಚಿತ್ರ ರು.38 ಕೋಟಿ ಬಾಚಿತ್ತು

ಕಥೆ, ಚಿತ್ರಕಥೆ ಮತ್ತು ನಿರ್ದೇಶನ ಮಾಡಿದ್ದ ಪೊನ್ ರಾಮ್ ಅವರ ಈ ಚಿತ್ರಕ್ಕೆ ಪಿ.ಮಧನ್ ರು.7 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ್ದರು. ಬಾಕ್ಸ್ ಆಫೀಸಲ್ಲಿ ಈ ಚಿತ್ರ ರು.38 ಕೋಟಿ ಬಾಚುವ ಮೂಲಕ ಎಲ್ಲರ ಗಮನಸೆಳೆದಿತ್ತು.

ರವಿವರ್ಮಾ ಅವರ ಸಾಹಸ ಚಿತ್ರಕ್ಕಿದೆ

ಮೂಲ ಚಿತ್ರದಲ್ಲಿ ಶಿವಕಾರ್ತಿಕೇಯನ್, ಸತ್ಯರಾಜ್, ಶ್ರೀದಿವ್ಯಾ, ಸೂರಿ ಮುಂತಾದವರಿದ್ದಾರೆ. ಸತ್ಯರಾಜ್ ಪಾತ್ರವನ್ನು ಕನ್ನಡದಲ್ಲಿ ರವಿಶಂಕರ್ ಅವರು ಪೋಷಿಸಿದ್ದು ಚಿತ್ರವನ್ನು ನಿರೀಕ್ಷಿಸುವಂತಾಗಿದೆ. ರವಿವರ್ಮಾ ಅವರ ಸಾಹಸ ಚಿತ್ರಕ್ಕಿದೆ.

ಶೀರ್ಷಿಕೆ ವಿವಾದಕ್ಕೂ 'ಅಧ್ಯಕ್ಷ'ರು ಗುರಿ

ಅಧ್ಯಕ್ಷ ಶೀರ್ಷಿಕೆ ವಿವಾದಕ್ಕೂ ಗುರಿಯಾಗಿದ್ದು ಈಗಾಗಲೆ 'ಅಧ್ಯಕ್ಷರು' ಎಂಬ ಶೀರ್ಷಿಕೆ ಫಿಲಂ ಚೇಂಬರ್ ನಲ್ಲಿ ನೋಂದಾಯಿಸಿಕೊಳ್ಳಲಾಗಿದೆ. ಹಾಗಾಗಿ ಅಧ್ಯಕ್ಷ ಚಿತ್ರದ ಶೀರ್ಷಿಕೆ ಬದಲಾಯಿಸುವಂತೆ 'ಅಧ್ಯಕ್ಷರು' ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಮುಕ್ತಾರ್ ಆರೋಪಿಸಿದ್ದರು. ಹಾಗಾಗಿ ಈಗ ಚಿತ್ರ ಶರಣ್ 'ಅಧ್ಯಕ್ಷ' ಎಂದು ಬದಲಾಗಿದೆ.

ಚಿತ್ರದಲ್ಲಿ ರೂಪಶ್ರೀ ಸ್ಪೆಷಲ್ ಸಾಂಗ್

ಚಡ್ಡಿದೋಸ್ತ್, ಸಂಕ್ರಾಂತಿ, ಸಿಗರೇಟ್ ಹಾಗೂ ಜಟಾಯು ಚಿತ್ರಗಳಲ್ಲಿ ಅಭಿನಯಿಸಿರುವ ರೂಪಶ್ರೀ ಅವರು ಈ ಚಿತ್ರದ ವಿಶೇಷ ಗೀತೆಯೊಂದರಲ್ಲಿ ಅಭಿನಯಿಸಿದ್ದಾರೆ. ಈ ಹಾಡಿನಲ್ಲಿ ಶರಣ್ ಹಾಗೂ ರವಿಶಂಕರ್ ಅವರು ಹೆಜ್ಜೆ ಹಾಕಿದ್ದಾರೆ.

English summary
Kannada movie 'Adyaksha' highlights. It stars Sharan, Raksha, Ravi Shankar, Malavika Avinash, Chikanna and Ramesh Bhat. The audio released in the first week of May 2014 and film is to be released on August 15, 2014. The film is a remake of Tamil film Varuthapadatha Valibar Sangam.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada