»   » 'ಸಿಟಿ ಮಾರ್ಕೆಟ್' ಗುಲಾಬಿ ಚಿಟ್ಟೆ ಹಿಂದೆ ಪನ್ನಗಾ ಭರಣ

'ಸಿಟಿ ಮಾರ್ಕೆಟ್' ಗುಲಾಬಿ ಚಿಟ್ಟೆ ಹಿಂದೆ ಪನ್ನಗಾ ಭರಣ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಟಿ ಎಸ್ ನಾಗಾಭರಣ ಅವರ ಪುತ್ರ ಪನ್ನಗಾ ಭರಣ ಅವರು ಚಿತ್ರವೊಂದನ್ನು ಕೈಗೆತ್ತಿಕೊಂಡಿರುವ ಸುದ್ದಿ ಕೇಳಿರುತ್ತೀರಿ. ಒಂದು ವೇಳೆ ಕೇಳಿಲ್ಲ ಅಂದ್ರೂ ನೋ ಪ್ರಾಬ್ಲಂ! ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರಕ್ಕೆ 'ಸಿಟಿ ಮಾರ್ಕೆಟ್' ಎಂದು ಹೆಸರಿಡಲಾಗಿದೆ.

ತನ್ವಿ ಫಿಲಂಸ್ ಲಾಂಛನದಲ್ಲಿ ಡಾ.ಸಿ.ಆರ್. ಮನೋಹರ್ ಅವರು ನಿರ್ಮಿಸುತ್ತಿರುವ ಚಿತ್ರ ಇದು. ಈ ಚಿತ್ರದ ಟೈಟಲ್ ಕೇಳಿ ಇದು ಆ ತರಹದ, ಈ ತರಹದ ಚಿತ್ರವಿರಬಹುದೇ ಎಂದು ತಲೆಕೆಡಿಸಿಕೊಳ್ಳುವುದಕ್ಕೂ ಮುನ್ನ ಕಥೆಯ ಸಾರಾಂಶ ಕೇಳಿ.

ಕೆಲವು ಸತ್ಯ ಘಟನೆಗಳನ್ನು ಆಧರಿಸಿ ಸಾಗುವ ಈ ಕಥೆ ನಡೆಯುವುದು ನಾಳಿನ ಚಿಂತೆ ಇರದ, ಒಂದು ದಿನದ ಸುಲ್ತಾನರ ಸಂತೆಯಾದ ಮಾರುಕಟ್ಟೆಯ ಹಿನ್ನೆಲೆಯಲ್ಲಿ. [ನಾಗಾಭರಣ ಪುತ್ರನ ನಿರ್ದೇಶನದಲ್ಲಿ ಹ್ಯಾಟ್ರಿಕ್ ಹೀರೋ]

T_S_Nagabharana

ಕಪಟವನ್ನರಿಯದ, ಮನದಲ್ಲಿ ತೋಚಿದ್ದನ್ನು ಆಡುವ ಮಾರುಕಟ್ಟೆಯ ಜನರ ಮುಗ್ಧತೆಗೋ ಅಥವಾ ಈ ಬಣ್ಣದ ಜಗತಿನ ಹಿಂದೆ ಅಡಗಿರುವ ಕರಾಳ ಲೋಕಕ್ಕೋ ಹೆದರಿ ವಿಧಿಯೂ ಕೂಡ ಈ ಜನರ ಹಣೆಬರವನ್ನು ಬರೆಯಲು ತಿಣುಕಾಡುತ್ತದೆ. ವಿಧಿಯ ಈ ತಿಣುಕಾಟದ ಕಥೆಯೇ ಸಿಟಿ ಮಾರ್ಕೆಟ್.

ಈ ಮಾರುಕಟೇಯಲ್ಲೇ ಹುಟ್ಟಿ ಬೆಳೆದ ಒಬ್ಬ ಅನಾಥ ಹುಡುಗ ಚಿಟ್ಟೆ. ಬಾಲ್ಯದಿಂದಲೇ ಇವನನ್ನು ಸಾಕಿ ಬೆಳೆಸಿದ ಜಯಲಕ್ಷ್ಮಿ, ಒಂದು ಕಾಲದಲ್ಲಿ ಮಾರುಕಟ್ಟೆಯಲ್ಲೇ ಖ್ಯಾತಿವೆತ್ತ ಬೆಲೆವೆಣ್ಣು. ಚಿಟ್ಟೆಗೂ ಅವಳೆಂದರೆ ಅಪಾರ ಗೌರವ. ಮಾರುಕಟ್ಟೆಯಲ್ಲಿ ಹುಟ್ಟಿ ಬೆಳೆದುದರಿಂದ ಅಲ್ಲಿ ನಡೆಯುವ ಎಲ್ಲ ಕೆಲಸಗಳಲ್ಲೂ ಚಿಟ್ಟೆ ನಿಸ್ಸೀಮನಾಗಿರುತ್ತಾನೆ. ಹೀಗೆ ಎಲ್ಲರಿಗೂ ಬೇಕಾದವನಾಗಿ ತನ್ನ ಜೀವನವನ್ನು ಸಾಗಿಸುತ್ತಿರುವ ಚಿಟ್ಟೆಗೆ ಜೀವನದಲ್ಲಿ ಇರುವ ಒಂದೇ ಒಂದು ಆಸೆಯ ಹೆಸರೇ 'ಗುಲಾಬಿ'.

ಮಾರುಕಟ್ಟೆಯ ಪಕ್ಕದಲ್ಲೇ ತನ್ನ ಅಜ್ಜಿಯ ಜೊತೆಗೆ ವಾಸವಾಗಿರುವ ಗುಲಾಬಿಗೂ ಚಿಟ್ಟೆಗೆ ತನ್ನ ಮೇಲಿರುವ ಇಷ್ಟದ ಬಗ್ಗೆ ಅರಿವಿರುತ್ತದೆಯಾದರೂ ಇಬರಲ್ಲೂ ಇರುವ ವಯೋಸಹಜ ಭಯದಿಂದ ಇಬ್ಬರೂ ಒಬ್ಬರಲ್ಲೊಬ್ಬರು ಮಾತನಾಡಲು ನಾಚಿಕೊಳ್ಳುತ್ತಿರುತ್ತಾರೆ. ಚಿಟ್ಟೆಯ ಆತ್ಮೀಯ ಗೆಳೆಯ ಹಂಜ. ತನ್ನೆಲ್ಲ ತೊಂದರೆಗಳನ್ನು ಮರೆತು ಚಿಟ್ಟೆಗೆ ಸಹಾಯ ಮಾಡುವಷ್ಟು ಸನ್ಮನಸ್ಸುಳ್ಳವನು.

ಹೀಗಿರುವಾಗ ಗುಲಾಬಿಯ ಮನಗೆಲ್ಲಲು ವಿಧಿ ಚಿಟ್ಟೆಗೆ ಹಲವರು ಅವಕಾಶಗಳನ್ನು ಒದಗಿಸುತ್ತದೆ. ಕೆಲವೊಮ್ಮೆ ಸಫಲನಾಗಿ ಇನ್ನೂ ಕೆಲವೊಮ್ಮೆ ವಿಫಲನಾದರೂ ಚಿಟ್ಟೆಗೆ ಪ್ರಯತ್ನಗಳೇ ಫಲಿತಾಂಶಕ್ಕಿಂತ ಹೆಚ್ಚು ಮುದನೀಡುತ್ತವೆ. ಗುಲಾಬಿ ಚಿಟ್ಟೆಯ ಗೆಳೆತನ ಪ್ರೀತಿಯಾಗಿ ಮಾಗುವ ಸಮಯದಲ್ಲೇ ಕಥೆ ತಿರುವುಗಳನ್ನು ಪಡೆದು ಮಾರುಕಟ್ಟೆಯ ಇನ್ನೊಂದು ಮುಖದ ಪರಿಚಯ ಮಾಡಿಸುತ್ತದೆ. ಚಿಟ್ಟೆಯ ಜೀವನದಲ್ಲಿ ನಡೆಯುವ ಏರುಪೇರುಗಳ ಹಲವಾರು ಕರಾಳ ಸತ್ಯಗಳನ್ನು ಅನಾವರಣಗೊಳಿಸುತ್ತವೆ.

ಈ ಕಥೆಯು ತಮ್ಮ ತಮ್ಮ ಉಳಿವಿಗಾಗಿ ಹೋರಾಡುತ್ತ ಬಗೆಬಗೆಯ ವೇಷಗಳನ್ನು ಧರಿಸಿಯೂ ಧರಿದಲಾರದ ಬಡಜೀವಗಳ ಬದುಕಿಗೆ ಹಿಡಿತ ಕನ್ನಡಿಯಂತೆ ಕಾಣುತ್ತದೆ. ಮನುಷ್ಯನ ಭಾವನೆಗಳನ್ನು ಹಾಗೂ ಮನೋವಿಕಾರಗಳನ್ನು ನೈಜತೆಗೆ ಬಹು ಹತ್ತಿರದಿಂದ ತೋರಿಸುತ್ತಾ ಸಾಗುವ ಸಿಟಿ ಮಾರ್ಕೆಟ್ ಆ ಕಾರಣಕ್ಕಾಗಿ ಮನದಲ್ಲಿ ಉಳಿಯುತ್ತದೆ.

ಚಿತ್ರದ ನಿರ್ದೇಶನದ ಜೊತೆಗೆ ಕಥೆ ಚಿತ್ರಕಥೆಯನ್ನೂ ಪನ್ನಗಾ ಭರಣ ಅವರೇ ಹೊತ್ತಿದ್ದಾರೆ. ಈ ಚಿತ್ರದ ಸಂಕಲನ ಸಂತೋಷ್ ರಾಧಾಕೃಷ್ಣನ್, ಛಾಯಾಗ್ರಹಣ ಪ್ರದೀಪ್ ಪದ್ಮ ಕುಮಾರ್, ಸಂಗೀತ ನೊಬಿನ್ ಪೌಲ್. ಈ ಚಿತ್ರದ ಅಡಿಬರಹ 'ಅಧ್ಯಾಯ 1 ಗುಲಾಬಿ ಚಿಟ್ಟೆ ಕಥೆ'. (ಫಿಲ್ಮಿಬೀಟ್ ಕನ್ನಡ)

English summary
Kannada movie 'City Market' is based on true story. The movie is directed by renowned filmmaker TS Nagabharana son Pannaga Bharana. Read the storyline of the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada