ಕಮಲ್ ಹಾಸನ್ ಇಲ್ಲದ 'ಪುಷ್ಪಕ ವಿಮಾನ' ಹಾರಾಟಕ್ಕೆ ಸಿದ್ಧ!

ಬರಲಿರುವ ಹೊಸ ಚಿತ್ರ 'ಪುಷ್ಪಕ ವಿಮಾನ'ವು ರಿಮೇಕ್ ಚಿತ್ರವೋ ಅಥವಾ ಸ್ವಮೇಕೋ ಎಂಬುದು ಸದ್ಯಕ್ಕೆ ಸ್ಪಷ್ಟವಿಲ್ಲ. ಆ ಬಗ್ಗೆ ಮಾತನಾಡದ ಚಿತ್ರತಂಡ "ಈ ಚಿತ್ರಕ್ಕೆ ಆ ಹೆಸರು ಮಾತ್ರ ಬಳಸಿಕೊಳ್ಳಲಾಗಿದೆ'" ಎಂದಿದೆ. ಇನ್ನೊಂದು ಮಾಹಿತಿಯೆಂದರೆ ಚಿತ್ರವನ್ನು 48 ಗಂಟೆಗಳಲ್ಲಿ ಒಂದೇ ಕ್ಯಾಮರಾ ಬಳಸಿ ಸಂಪೂರ್ಣ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಇಂತಹ ಚಿತ್ರ ಹೇಗೆ ಮೂಡಿಬಂದಿದೆ ಎಂಬುದು ಬಿಡುಡಗೆ ನಂತರ ತಿಳಿಯಬೇಕಷ್ಟೇ!
ಚಿತ್ರಕ್ಕೆ ನಾಯಕರಾಗಿರುವ ಓಂ ಪ್ರಕಾಶ್ ನಾಯಕ್ ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ರಚಿಸಿದ್ದಾರೆ. ನಿರ್ದೇಶನ ಕೂಡ ಅವರದ್ದೇ. ಆದರೆ ಸಂಭಾಷಣೆ ಯಾರದ್ದು ಎಂಬ ಮಾಹಿತಿಯಲ್ಲ. ಓಂ ಪ್ರಕಾಶ್ ನಾಯಕ್ ಮತ್ತು ಕುಮಾರ್ ಗೌಡ ಸೇರಿಕೊಂಡು ನಿರ್ಮಿಸಿರುವ ಈ ಚಿತ್ರಕ್ಕೆ ದತ್ತಾತ್ರೇಯ ಹಾಗೂ ವಿಶ್ವನಾಥ್ ಚೌಧರಿ ಕ್ಯಾಮರಾ ಕೆಲಸ ನಿರ್ವಹಿಸಿದ್ದಾರೆ. ಸಂಗೀತ ಹಾಗೂ ಸಂಕಲನ ಕುಮಾರ್ ಅವರದು.
ಈ ಚಿತ್ರದಲ್ಲಿ ಲಲಿತಾ ನಾಯಕ್ ಕೂಡ ಕಾಣಿಸಿಕೊಂಡಿದ್ದಾರೆ. ಚಿತ್ರದ ಮೊದಲ ಪ್ರತಿ ಬಂದಿದ್ದು ಚಿತ್ರ ಪ್ರದರ್ಶನಕ್ಕೆ ಸಿದ್ಧವಾಗಿ ನಿಂತಿದೆ. ಇದು 2012ರ ಕೊನೆಯಲ್ಲಿ ಬಿಡುಗಡೆಯಾಗಲಿದ್ದು ಚಿತ್ರವನ್ನು ಕನ್ನಡ, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದಿದೆ ಚಿತ್ರತಂಡ. ಕಮಲ್ ಹಾಸನ್ ಇಲ್ಲದ ಈ ಪುಷ್ಪಕ ವಿಮಾನ ಹೇಗೆ ಹಾರುತ್ತದೆ ಎಂಬುದನ್ನು ಕಾದು ನೋಡೋಣ! (ಒನ್ ಇಂಡಿಯಾ ಕನ್ನಡ)


Click it and Unblock the Notifications











