ರೆಬೆಲ್ ಸ್ಟಾರ್, ಪಂಕಜ್ 'ರಣ' ಬಿಡುಗಡೆ ಕನ್ಫರ್ಮ್
ಚಿತ್ರದಲ್ಲಿದ್ದ ಖಳನಟ ಪಾತ್ರದ ಬಹಳಷ್ಟು ದೃಶ್ಯಗಳಿಗೆ ಹಾಗೂ ಕೆಲವು ಸಂಭಾಷಣೆಗಳಿಗೆ ಕತ್ತರಿ ಪ್ರಯೋಗ ನಡೆದಿದೆ. ಈ ಹಿಂದೆ ಸೆನ್ಸಾರ್ ಮಾಡಿ ಪ್ರಮಾಣ ಪತ್ರ ನೀಡಲು ಸಾಧ್ಯವೇ ಇಲ್ಲ ಎಂದಿದ್ದ ಸೆನ್ಸಾರ್ ಮಂಡಳಿ, ಕತ್ತರಿ ಪ್ರಯೋಗ ಮಾಡಿ ಈಗ ಅಸ್ತು ಎಂದಿದೆ.
ಎಲ್ಲಾ ಮುಗಿಸಿ ಕೇವಲ ಸೆನ್ಸಾರ್ ಪ್ರಮಾಣಪತ್ರಕ್ಕಾಗಿ ಕಾಯುತ್ತಿದ್ದ ಚಿತ್ರತಂಡವೀಗ ಖುಷಿಗೊಂಡು ಬಿಡುಗಡೆ ಘೋಷಿಸಿದೆ. ಜೂನ್ 7, ಗುರುವಾರ ತೆರೆಗೆ ಬರಲಿರುವ ರಣ, ಪಂಕಜ್ ಅವರಿಗೆ ಅಗ್ನಿಪರೀಕ್ಷೆಯಾದರೆ ಅಂಬರೀಷ್ ಅವರಿಗೆ ಬೋನಸ್. ಪಂಕಜ್ ಅವರಿಗೆ ನಾಯಕಿಯಾಗಿ ಸುಪ್ರೀತಾ ಇದ್ದಾರೆ.
ಶಿವಾನಂದ ಮಾದಶೆಟ್ಟಿ ನಿರ್ಮಾಣದ ರಣಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆದಿರುವವರು ಲಕ್ಷ್ಮಣ್. ಶ್ರೀನಿವಾಸ್ ಮೂರ್ತಿ ಜಿ ನಿರ್ದೇಶನದ ಈ ಚಿತ್ರಕ್ಕೆ ಜಯಂತ್ ಕಾಯ್ಕಿಣಿ, ಕವಿರಾಜ್, ವಿ ಮನೋಹರ್ ಹಾಗೂ ಶಶಾಂಕ್ ಸಾಹಿತ್ಯ ಬರೆದಿದ್ದಾರೆ. ವಿ ಶ್ರೀಧರ್ ಸಂಗೀತ ನೀಡಿದ್ದಾರೆ.
ಥ್ರಿಲ್ಲರ್ ಮಂಜು ಹಾಗೂ ಡಿಫರೆಂಟ್ ಡ್ಯಾನಿ ಸಾಹಸ, ಕೆಂಪರಾಜು ಸಂಕಲನ, ರಾಜರತ್ನರ ಛಾಯಾಗ್ರಹಣ ಚಿತ್ರಕ್ಕಿದೆ. ಅಂಬರೀಷ್ ಜೊತೆ ತೆರೆಗೆ ಬರುತ್ತಿರುವ ಪಂಕಜ್, ಈ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟಿದ್ದಾರೆ. ಸಂಪೂರ್ಣ ಸಾಹಸ ಪ್ರಧಾನವಾಗಿರುವ ಈ ಚಿತ್ರ, ಚಿತ್ರತಂಡದ ನಿರೀಕ್ಷೆಯನ್ನು ಸುಳ್ಳುಮಾಡುವುದಿಲ್ಲ ಎಂದು ಗಾಂಧಿನಗರ ಹೇಳುತ್ತಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications












