»   » ಬೆಳ್ಳಿತೆರೆಯಲ್ಲಿ 'ಶಿವನಾಮಸ್ಮರಣೆ' ಮಾಡಿದ ಟಾಪ್ ಚಿತ್ರಗಳು

ಬೆಳ್ಳಿತೆರೆಯಲ್ಲಿ 'ಶಿವನಾಮಸ್ಮರಣೆ' ಮಾಡಿದ ಟಾಪ್ ಚಿತ್ರಗಳು

Posted By:
Subscribe to Filmibeat Kannada

ನಾಡಿನಲ್ಲೆಡೆ ಮಹಾ ಶಿವರಾತ್ರಿ ಹಬ್ಬದ ಸಂಭ್ರಮ. ಉಪವಾಸ, ಜಾಗೂರಣೆ, ಧ್ಯಾನ ಎಂದು ಭಕ್ತರು 'ಪರಮೇಶ್ವರ'ನ ಭಕ್ತಿಯಲ್ಲಿ ಮುಳುಗಿರುತ್ತಾರೆ. ಇಡೀ ಭಕ್ತ ಸಮೂಹ ಪಾರ್ವತಿ ಪತಿಯ ಪೂಜೆ, ಪುನಸ್ಕಾರಗಳಲ್ಲಿ ತಲ್ಲಿನರಾಗಿರುತ್ತಾರೆ.

ಶಿವನ ಭಕ್ತಿ, ಪವಾಡ, ಮಹಾತ್ಮೆಯನ್ನ ಸ್ಯಾಂಡಲ್ ವುಡ್ ಕಲಾವಿದರು ಬೆಳ್ಳಿತೆರೆಯಲ್ಲಿ ಅತ್ಯಾದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಪರದೆ ಮೇಲೆ ''ಶಿವ ಶಿವ ಎಂದರೆ ಭಯವಿಲ್ಲ, ಶಿವ ನಾಮಕೆ ಸಾಟಿ ಬೇರಿಲ್ಲ'' ಎಂದು ಹಲವು ಚಿತ್ರಗಳು ಶಿವನಾಮಸ್ಮರಣೆ ಮಾಡಿವೆ.

ಚಂದನವನದ ಬೆಳ್ಳಿತೆರೆಯ ಮೇಲೆ 'ಈಶ್ವರ'ನ ಭಕ್ತಿ ಮೆರೆದ ಕೆಲವೊಂದು ಪ್ರಮುಖ ಚಿತ್ರಗಳು ಇಲ್ಲಿವೆ ನೋಡಿ.

ಬೇಡರ ಕಣ್ಣಪ್ಪ

ಬೇಡ ಭಕ್ತನೊಬ್ಬ ತನ್ನ ಆರಾಧ್ಯ ದೈವವಾದ ಶಿವನನ್ನು ಮೆಚ್ಚಿಸಲು ತನ್ನೆರಡು ಕಣ್ಣುಗಳನ್ನು ಕಿತ್ತುಕೊಡುವ ಕಥೆಯೇ 'ಬೇಡರ ಕಣ್ಣಪ್ಪ'. ಗುಬ್ಬಿ ಕಂಪೆನಿ ನಿರ್ಮಾಣವಾಗಿದ್ದ ಈ ಚಿತ್ರ 1954ರಲ್ಲಿ ತೆರೆ ಕಂಡಿತ್ತು. ಡಾ.ರಾಜ್ ಕುಮಾರ್ 'ಬೇಡರ ಕಣ್ಣಪ್ಪ'ನಾಗಿ ತೆರೆಮೇಲೆ ಅಭಿನಯಿಸಿದ್ದರು. ಈ ಚಿತ್ರದಲ್ಲಿ ಪಂಢರಿಬಾಯಿ ಮತ್ತು ನರಸಿಂಹರಾಜು ಕಾಣಿಸಿಕೊಂಡಿದ್ದರು. ಶಿವನ ಮಹಾತ್ಮೆಯನ್ನ ಹೇಳುವಂತಹ ‘ಶಿವಪ್ಪ ಕಾಯೋ ತಂದೆ, ಮೂರು ಲೋಕ ಸ್ವಾಮಿ ದೇವ...' ಹಾಡು ಇಂದಿಗೂ ಶಿವರಾತ್ರಿ ಹಬ್ಬದ ಮೊದಲ ಗೀತೆ.

ಶಿವ ಮೆಚ್ಚಿದ ಕಣ್ಣಪ್ಪ

ಡಾ.ರಾಜ್ ಕುಮಾರ್ ಅವರ 'ಬೇಡರ ಕಣ್ಣಪ್ಪ' ಚಿತ್ರದಂತೆ ಮೂಡಿಬಂದ ಮತ್ತೊಂದು ಚಿತ್ರ 'ಶಿವ ಮೆಚ್ಚಿದ ಕಣ್ಣಪ್ಪ' ಈ ಚಿತ್ರದಲ್ಲೂ ಭಕ್ತನೊಬ್ಬ ತನ್ನ ಎರಡು ಕಣ್ಣುಗಳನ್ನ ಶಿವನಿಗಾಗಿ ಕಿತ್ತು ಕೊಡುತ್ತಾನೆ. ಶಿವರಾಜ್ ಕುಮಾರ್, ರಾಜ್ ಕುಮಾರ್, ಗೀತಾ ಕಾಣಿಸಿಕೊಂಡಿದ್ದ ಈ ಚಿತ್ರ 1988 ರಲ್ಲಿ ಬಿಡುಗಡೆಯಾಗಿತ್ತು.

ಭಕ್ತ ಸಿರಿಯಾಳ

ಲೋಕೇಶ್ ಮತ್ತು ಆರತಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ ಚಿತ್ರ ‘ಭಕ್ತ ಸಿರಿಯಾಳ'. 1980ರಲ್ಲಿ ತೆರೆ ಕಂಡಿತ್ತು. ‘ದಾನವೇ ತಪ, ದಾನವೇ ಜಪ' ಎಂದು ನಂಬಿದ ಸಿರಿಯಾಳನ ಕತೆಯನ್ನು ಹಲವು ತತ್ವಪದಗಳು, ಹರಿಕಥೆಗಳ ಮೂಲಕ ಈ ಚಿತ್ರದಲ್ಲಿ ತೋರಿಸಲಾಗಿತ್ತು.

ಶ್ರೀ ಮಂಜುನಾಥ

ಶಿವನ ಲೀಲೆಯನ್ನ ಅರ್ಥಪೂರ್ಣವಾಗಿ ತೆರೆಮೇಲೆ ತಂದ ಚಿತ್ರ 'ಶ್ರೀ ಮಂಜುನಾಥ'. ಅರ್ಜುನ್ ಸರ್ಜಾ ಮತ್ತು ಸೌಂದರ್ಯ ಅವರ ತಮ್ಮ ಮನೋಜ್ಞ ಅಭಿನಯದಿಂದ ಪ್ರೇಕ್ಷಕರ ಮೆಚ್ಚುಗೆಗಳಿಸಿದರು. 'ಮಂಜುನಾಥ'ನ ಪಾತ್ರದಲ್ಲಿ ಚಿರಂಜೀವಿ, ಮತ್ತು ಪಾರ್ವತಿ ಪಾತ್ರದಲ್ಲಿ ಮೀನಾ ಕಾಣಿಸಿಕೊಂಡಿದ್ದು, ಸುಧಾರಾಣಿ, ಅಭಿಜಿತ್‌, ಅಂಬರೀಷ್, ಸುಮಲತಾ ತಾರಾಗಣದಲ್ಲಿ ಅಭಿನಯಿಸಿದ್ದರು. ಹಂಸಲೇಖ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದ್ದ ಹಾಡುಗಳ ಭಕ್ತರನ್ನು ಭಾವಪರವಶನ್ನಾಗಿಸಿದ್ದವು.

ಭಕ್ತ ಮಾರ್ಕಂಡೇಯ

1956ರಲ್ಲಿ ತೆರೆಕಂಡ ಸಿನಿಮಾ 'ಭಕ್ತ ಮಾರ್ಕಂಡೇಯ'. ಮುಗ್ಧ ಭಕ್ತಿಯ ಎದುರು ಸಾವೂ ಮಂಡಿಯೂರುವ ಅಪರೂಪದ ಕಥೆ ಮಾರ್ಕಂಡೇಯನದ್ದು. ಮುದ್ದು ಮಗುವೊಂದು ಸಾವು ಜಯಿಸುವ ಈ ಕಥೆ ಏಕಕಾಲಕ್ಕೆ ಮಕ್ಕಳಿಗೂ ಹಿರಿಯರಿಗೂ ಖುಷಿ ಕೊಡುತ್ತದೆ. ಶಿವನ ಭಕ್ತ ಮಾರ್ಕಂಡೇಯನ ಕುರಿತಾದ ಈ ಚಿತ್ರದಲ್ಲಿ ಅದ್ಭುತವಾದ ಭಕ್ತಿಗೀತೆಗಳು ಮೂಡಿದ್ದವು.

'ಶಿವ ಮಹಾತ್ಮೆ' ಚಿತ್ರಗಳಲ್ಲಿ ಡಾ.ರಾಜ್

1958 ರಲ್ಲಿ ತೆರೆಕಂಡ 'ಭೂಕೈಲಾಸ'. 1956 ರಲ್ಲಿ ತೆರೆಕಂಡ 'ಓಹಿಲೇಶ್ವರ'. 1964 ರಲ್ಲಿ ಬಿಡುಗಡೆಯಾದ 'ಶಿವರಾತ್ರಿ ಮಹಾತ್ಮೆ', ಅಂತಹ ಚಿತ್ರಗಳು ಪರಮೇಶ್ವರನ ಮಹಾತ್ಮೆಯನ್ನ ಒಳಗೊಂಡಿತ್ತು. ಈ ಮೂರು ಚಿತ್ರಗಳಲ್ಲೂ ಡಾ.ರಾಜ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದರು.

'ಈಶ್ವರ'ನ ಮತ್ತಷ್ಟು ಚಿತ್ರಗಳು

'ಪಾರ್ವತಿ ಕಲ್ಯಾಣ', 'ಶಿವಗಂಗೆ', 'ಶಿವಲಿಂಗ ಸಾಕ್ಷಿ', 'ಗಂಗೆ ಗೌರಿ', 'ಶಿವಭಕ್ತ' ಸೇರಿದಂತೆ ಇನ್ನೂ ಹಲವು ಚಿತ್ರಗಳು ಕನ್ನಡದ ಬೆಳ್ಳಿತೆರೆಯ ಮೇಲೆ ಮೂಡಿವೆ. ಈ ಎಲ್ಲ ಚಿತ್ರಗಳಲ್ಲೂ ಶಿವನ ಮಹಿಮೆ, ಶಿವಭಕ್ತರ ಶಕ್ತಿ, ಪವಾಡಗಳು ಹೀಗೆ ಈಶ್ವರನ ಮಂತ್ರಸ್ಮರಣೆ ಮಾಡಿದ್ದಾರೆ.

English summary
A special report about lord Shiva, on the occasion of the Maha Shivaratri festival. here is the Top Kannada Movies Based on Lord Shiva

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada