twitter
    For Quick Alerts
    ALLOW NOTIFICATIONS  
    For Daily Alerts

    ಕರ್ನಾಟಕ ಬಜೆಟ್: ಚಿತ್ರರಂಗದ ಬೆಟ್ಟದಷ್ಟು ನಿರೀಕ್ಷೆಗೆ, ಸಿಕ್ಕಿದ್ದು ಸಾಸಿವೆಯಷ್ಟೆ

    |

    ಪ್ರತಿ ಬಾರಿಯೂ ಇದು ಹೀಗೆಯೇ ಆಗುತ್ತದೆ. ಇದು ಹೀಗೆಯೇ ಆಗುತ್ತದೆ ಎಂದು ಪ್ರತಿ ಬಾರಿಯೂ ಗೊತ್ತಿರುತ್ತದೆ ಆದರೂ ನಿರೀಕ್ಷೆ ಮಾತ್ರ ಬಿಡುವುದಿಲ್ಲ. ಪ್ರತಿ ಬಜೆಟ್ ಸಂದರ್ಭದಲ್ಲಿ ಚಿತ್ರರಂಗದ ಪರಿಸ್ಥಿತಿ ಇದು.

    ಕೊರೊನಾ ಕಾರಣದಿಂದ ತತ್ತರಿಸಿದ್ದ ಚಿತ್ರರಂಗ ಸಾಕಷ್ಟು ನಿರೀಕ್ಷೆಗಳನ್ನು ಬಜೆಟ್ ಮೇಲಿರಿಸಿತ್ತು. ಬಸವರಾಜ ಬೊಮ್ಮಾಯಿ ಅವರು ಚಿತ್ರರಂಗದ ಬಗ್ಗೆ ಪ್ರೀತಿ, ಗೌರವ ಹೊಂದಿರುವುದು ಚಿತ್ರರಂಗದ ನಿರೀಕ್ಷೆ ಹೆಚ್ಚಾಗಲು ಪ್ರಮುಖ ಕಾರಣವಾಗಿತ್ತು. ಆದರೆ ಈ ಬಾರಿಯೂ ನಿರೀಕ್ಷೆ ಹುಸಿಯಾಗಿದೆ.

    ಕೇಂದ್ರ ಬಜೆಟ್ 2022: ಚಿತ್ರರಂಗದ ನಿರೀಕ್ಷೆಗಳೇನು? ಕೇಂದ್ರ ಬಜೆಟ್ 2022: ಚಿತ್ರರಂಗದ ನಿರೀಕ್ಷೆಗಳೇನು?

    ನಶಿಸುತ್ತಿರುವ ಚಿತ್ರಮಂದಿರಗಳು, ಏರಿ ಕೂತಿರುವ ಮನರಂಜನಾ ತೆರಿಗೆ, ವಾಣಿಜ್ಯ ತೆರಿಗೆಗಳು, ಸಬ್ಸಿಡಿ ನೆರವಿಲ್ಲದೆ ಕೈ ಸುಟ್ಟುಕೊಂಡಿರುವ ನಿರ್ಮಾಪಕರು, ಸಿನಿಮಾಕ್ಕೆ ಹೂಡಲು ಬಂಡವಾಳ ತರಲು ಪೀಕಲಾಟ, ಹೀಗೆ ಹಲವು ಸಮಸ್ಯೆಗಳ ನಡುವೆ ಚಿತ್ರರಂಗ ಸಾಗುತ್ತಿತ್ತು. ಇವುಗಳಲ್ಲಿ ಕೆಲವಕ್ಕಾದರೂ ಪರಿಹಾರ ದೊರೆಯುವುದೆಂಬ ನಿರೀಕ್ಷೆ ಚಿತ್ರರಂಗಕ್ಕೆ ಇತ್ತು. ಫಿಲಂ ಸಿಟಿ ನಿರ್ಮಾಣ, ಸಿನಿಮಾ ಕಾರ್ಮಿಕರಿಗೆ ಪ್ಯಾಕೇಜ್ ಘೋಷಣೆ, ಹೋಬಳಿ ಮಟ್ಟದಲ್ಲಿ ಮಿನಿ ಚಿತ್ರಮಂದಿರ ನಿರ್ಮಾಣ ಇನ್ನೂ ಹಲವಾರು ಬೇಡಿಕೆಗಳು ಇದ್ದವು, ಆದರೆ ಬಜೆಟ್‌ನಲ್ಲಿ ಆಗಿರುವುದು ಬೇರೆ.

    ನಿನ್ನೆ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ್ದ ಸಚಿವ ಮುನಿರತ್ನ 'ಈ ಬಾರಿಯ ಬಜೆಟ್ ಅನ್ನು ಕನ್ನಡ ಚಿತ್ರರಂಗ ಮರೆಯಲು ಸಾಧ್ಯವೇ ಇಲ್ಲ'' ಎಂದಿದ್ದರು. ಅದು ಒಂದರ್ಥದಲ್ಲಿ ನಿಜವೂ ಆಗಿದೆ. ಏಕೆಂದರೆ ಈ ಬಾರಿ ಚಿತ್ರರಂಗವನ್ನು ನಾಮ್‌ ಕೆ ವಾಸ್ತೆ ಅಷ್ಟೆ ಬಜೆಟ್‌ನಲ್ಲಿ ನೆನಪಿಸಿಕೊಳ್ಳಲಾಗಿದೆ.

    ಕೇವಲ ಒಂದೇ ಘೋಷಣೆ

    ಕೇವಲ ಒಂದೇ ಘೋಷಣೆ

    ಇಡೀಯ ಬಜೆಟ್‌ನಲ್ಲಿ ಚಿತ್ರರಂಗಕ್ಕೆ ದೊರಕಿರುವುದು ಕೇವಲ ಒಂದು ಹೊಸ ಘೋಷಣೆಯಷ್ಟೆ. ಪ್ರತಿ ವರ್ಷ ಸರ್ಕಾರದಿಂದ 120 ಸಿನಿಮಾಗಳಿಗೆ ಸಬ್ಸಿಡಿ ನೀಡಲಾಗುತ್ತಿತ್ತು. ಆ ಸಂಖ್ಯೆಯನ್ನು 200 ಕ್ಕೆ ಹೆಚ್ಚಿಸಲಾಗಿದೆ. ಇದು ಉತ್ತಮ ಘೋಷಣೆಯಾಗಿದ್ದರೂ ಸಹ ಈ ಒಂದು ಘೋಷಣೆ ಬಿಟ್ಟರೆ ಇನ್ನಾವ ಹೊಸ ಕಾರ್ಯಕ್ರಮ, ಘೋಷಣೆ, ಕೊಡುಗೆಗಳು ಚಿತ್ರರಂಗದ ಪಾಲಿಗಿಲ್ಲ.

    ಕಳೆದ ಬಜೆಟ್‌ನಲ್ಲಿಯೂ ನಿರೀಕ್ಷೆಗಳು ಹುಸಿಯಾಗಿದ್ದವು

    ಕಳೆದ ಬಜೆಟ್‌ನಲ್ಲಿಯೂ ನಿರೀಕ್ಷೆಗಳು ಹುಸಿಯಾಗಿದ್ದವು

    ಕಳೆದ ವರ್ಷ ಯಡಿಯೂರಪ್ಪನವರು ಬಜೆಟ್‌ ಮಂಡಿಸಿದ್ದಾಗಲೂ ಚಿತ್ರರಂಗಕ್ಕೆ ಏನೂ ಸಿಕ್ಕಿರಲಿಲ್ಲ. ಇನ್ನು ಮುಂದೆ ವಿವಿಧ ಇಲಾಖೆಗಳಿಗೆ ಚಿತ್ರೀಕರಣಕ್ಕೆ ಅನುಮತಿ ಕೋರಿ ಅಲೆಯಬೇಕಾಗಿಲ್ಲ ಬದಲಿಗೆ ಏಕಗವಾಕ್ಷಿ ಮಾದರಿಯಲ್ಲಿ ಸರಳಗೊಳಿಸಿ ಸೇವಾ ಸಿಂಧು ಪೋರ್ಟಲ್ ಮೂಲಕ ಅನುಮತಿ ಪಡೆಯಬಹುದು' ಎಂಬ ಒಂದು ವಾಕ್ಯದ ಘೋಷಣೆಯಷ್ಟೆ ಕಳೆದ ಬಜೆಟ್‌ನಲ್ಲಿ ಮಾಡಲಾಗಿತ್ತು. ಕಳೆದ ಬಾರಿಗಿಂತ ಈ ಬಾರಿ ತುಸು ಉತ್ತಮ ಎಂಬುದಷ್ಟೆ ಚಿತ್ರರಂಗದ ಸಮಾಧಾನ.

    ಪುನೀತ್, ಸಂಚಾರಿ ವಿಜಯ್ ಹೆಸರು ಪ್ರಸ್ತಾಪ

    ಪುನೀತ್, ಸಂಚಾರಿ ವಿಜಯ್ ಹೆಸರು ಪ್ರಸ್ತಾಪ

    ಇಂದಿನ ಬಜೆಟ್‌ನಲ್ಲಿ ಸಿಎಂ ಅವರು ಪುನೀತ್ ರಾಜ್‌ಕುಮಾರ್ ಹಾಗೂ ಸಂಚಾರಿ ವಿಜಯ್ ಅವರನ್ನು ನೆನಪಿಸಿಕೊಂಡರು. ಆದರೆ ಅದು ಸಿನಿಮಾ ಕಾರಣಕ್ಕೆ ಅಲ್ಲ, ಬದಲಿಗೆ ಸಾರ್ವಜನಿಕರು ಹೆಚ್ಚು ಸಂಖ್ಯೆಯಲ್ಲಿ ಅಂಗಾಂಗ ದಾನ ಮಾಡುವಂತೆ ಪ್ರೇರೇಪಿಸಲು ಹಾಗೂ ನಿಮ್ಹಾನ್ಸ್ ಮೂಲಕ ಅಂಗಾಂಗ ಸಂಗ್ರಹ ಕೇಂದ್ರ ಸ್ಥಾಪಿಸುವ ಘೋಷಣೆಗಾಗಿ ಸಿಎಂ ಅವರು ಇಬ್ಬರು ನಟರ ಹೆಸರನ್ನು ಉಲ್ಲೇಖಿಸಿದರು.

    ಈಡೇರದ ಬೇಡಿಕೆಗಳಿವು

    ಈಡೇರದ ಬೇಡಿಕೆಗಳಿವು

    ಕೊರೊನಾದಿಂದಾಗಿ ಸಿನಿ ಕಾರ್ಮಿಕರು ಬಹುವಾಗಿ ಸಂಕಷ್ಟ ಪಟ್ಟಿದ್ದರು, ಅವರ ಸಹಾಯಕ್ಕೆ ಪ್ಯಾಕೇಜ್ ಘೋಷಣೆಗೆ ಮನವಿ ಸಲ್ಲಿಸಲಾಗಿತ್ತು. ಸಿನಿ ಕಾರ್ಮಿಕರ ಕಲ್ಯಾಣಾಭಿವೃದ್ಧಿಗೆ ವಿಶೇಷ ಅನುದಾನ, ಮಕ್ಕಳ ಸಿನಿಮಾಕ್ಕೆ ನೀಡಲಾಗುತ್ತಿರುವ ಸಬ್ಸಿಡಿ ಮೊತ್ತದಲ್ಲಿ ಹೆಚ್ಚಳ. ಮಹಿಳೆಯರು ನಿರ್ದೇಶಿಸುವ ಸಿನಿಮಾಕ್ಕೆ ಸಬ್ಸಿಡಿ. ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಬಹುಮಾನ ಮೊತ್ತ ಏರಿಕೆ, ಹೋಬಳಿ-ತಾಲ್ಲೂಕು ಮಟ್ಟದಲ್ಲಿ ಸರ್ಕಾರದಿಂದಲೇ ಮಿನಿ ಚಿತ್ರಮಂದಿರ ನಿರ್ಮಾಣ, ನೆನೆಗುದಿಗೆ ಬಿದ್ದಿರುವ ಫಿಲಂ ಸಿಟಿ ನಿರ್ಮಾಣ ಯೋಜನೆಗೆ ಅನುದಾನ, ಸ್ಥಳೀಯ ತೆರಿಗೆ, ಶುಲ್ಕಗಳಲ್ಲಿ ಕಡಿತ. ಕೊರೊನಾ ಕಾಲದಲ್ಲಿ ಬಂದಿರುವ ವಿದ್ಯುತ್ ಬಿಲ್ ಮಾಫಿ. ಭಾರಿ ಏರಿಕೆ ಆಗಿರುವ ನವೀಕರಣ ಶುಲ್ಕವನ್ನು ಕಡಿತಗೊಳಿಸುವುದು, ಏಸಿ ಉಳ್ಳ ಚಿತ್ರಮಂದಿರಗಳು ಸೇವಾಶುಲ್ಕ ವಸೂಲಿಗೆ ಅವಕಾಶ ನೀಡಬೇಕು. ಚಿತ್ರಮಂದಿರಗಳಿಗೆ ಬಳಸಲಾಗುವ ವಿದ್ಯುತ್ ಅನ್ನು 'ವಾಣಿಜ್ಯ' ಎಂದು ಪರಿಗಣಿಸದೆ 'ಉದ್ಯಮ' ವಿಭಾಗದಡಿ ಬಿಲ್ ವಿಧಿಸಬೇಕು. 2021 ರ ಪೂರ್ಣ ಆಸ್ತಿ ತೆರಿಗೆಯನ್ನು ರದ್ದು ಮಾಡಬೇಕು ಇನ್ನೂ ಹಲವು ಬೇಡಿಕೆಗಳು ಚಿತ್ರರಂಗ ಹೊಂದಿತ್ತು ಈ ಬೇಡಿಕೆಗಳ ಈಡೇರಿಕೆಗೆ ಬೇರೆ ಬೇರೆ ಸಮಯದಲ್ಲಿ ಸಿಎಂ ಅವರನ್ನು ಭೇಟಿ ಮಾಡಿ ಮನವಿ ಸಹ ಸಲ್ಲಿಸಲಾಗಿತ್ತು ಆದರೆ ಯಾವೊಂದು ಭರವಸೆಯೂ ಈ ಬಜೆಟ್‌ನಲ್ಲಿ ಈಡೇರಿಲ್ಲ.

    English summary
    Kannada movie industry neglected by state government as usual. In this budget only one program allocated to Movie industry.
    Friday, March 4, 2022, 17:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X