»   » ಮಧ್ಯರಾತ್ರಿಯಲ್ಲಿ ಮತ್ತೆ ಸುದ್ದಿಯಾದ ನಟ ಕಾಶಿನಾಥ್

ಮಧ್ಯರಾತ್ರಿಯಲ್ಲಿ ಮತ್ತೆ ಸುದ್ದಿಯಾದ ನಟ ಕಾಶಿನಾಥ್

Posted By:
Subscribe to Filmibeat Kannada
Kashinath
ಕಾಶಿನಾಥ್ ಕನ್ನಡ ಚಿತ್ರರಂಗ ಕಂಡ ಒಬ್ಬ ಅಪರೂಪದ ನಟ, ನಿರ್ದೇಶಕ ಹಾಗೂ ನಿರ್ಮಾಪಕರು. ಇಂಥ ಕಾಶಿನಾಥ್ ಇದೀಗ ಮಧ್ಯರಾತ್ರಿಯಲ್ಲಿ ಸುದ್ದಿಯಲ್ಲಿದ್ದಾರೆ. ಅಂದರೆ, '12 AM ಮಧ್ಯರಾತ್ರಿ' ಚಿತ್ರದ ಮೂಲಕ ಕಾಶಿನಾಥ್ ಹೆಸರು ಬಹುದಿನಗಳ ನಂತರ ಮತ್ತೆ ಸ್ಯಾಂಡಲ್ ವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಅವರ ಮಗ ಅಭಿಮನ್ಯು ನಾಯಕರಾಗಿರುವ '12 AM ಮಧ್ಯರಾತ್ರಿ' ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರೂ ಆಗಿರುವ ಕಾಶಿನಾಥ್, ಇದರಲ್ಲೊಂದು ಮುಖ್ಯ ಪಾತ್ರದಲ್ಲೂ ಮಿಂಚಿದ್ದಾರೆ.

ಈಗ ವಿಷಯ ಅದಲ್ಲವೇ ಅಲ್ಲ. ಕೆಲ ದಶಕಗಳ ಹಿಂದೆ, ತಮ್ಮ ವಿಭಿನ್ನ ಮ್ಯಾನರಿಸಂ, ಡೈಲಾಗ್ ಹಾಗೂ ಕ್ರಿಯೆಟಿವಿಟಿಯಿಂದ ಕನ್ನಡಿಗರ ಮನಗೆದ್ದಿದ್ದ ಕಾಶಿನಾಥ್, ಇಂದು ಅಕ್ಷರಶಃ ಮೂಲೆಗೆ ತಳ್ಳಲ್ಪಟ್ಟಿದ್ದಾರೆ. ಅವರನ್ನು ಮೂಲೆಗೆ ತಳ್ಳಿರಬಹುದೇ ಹೊರತೂ ಅವರ ಪ್ರತಿಭೆಯನ್ನಲ್ಲ ಎಂಬುದನ್ನು ಇದೀಗ ಪ್ರದರ್ಶನ ಕಾಣುತ್ತಿರುವ ಮಧ್ಯರಾತ್ರಿ ಚಿತ್ರದ ಮೂಲಕ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ ಕಾಶಿನಾಥ್. ಈಗ ತಮ್ಮ ಮಗನನ್ನು ಸಿನಿಮಾ ಉದ್ಯಮದಲ್ಲಿ ನೆಲೆನಿಲ್ಲಿಸುವ ಪ್ರಯತ್ನದಲ್ಲಿರುವ ಇವರು, ಸದ್ಯಕ್ಕೆ ಸಾಕಷ್ಟು ನೋವುಣ್ಣುತ್ತಿದ್ದಾರೆಯೇ ಎಂಬ ಪ್ರಶ್ನೆ ಕಾಡುವುದು ಸಹಜ.

ತಮ್ಮ ಅಮೋಘ 'ಅನುಭವ'ದ ಮೂಲಕ ಕನ್ನಡ ಚಿತ್ರರಸಿಕರಿಗೆ ಹತ್ತಿರವಾಗಿರುವ 'ಅನುಭವಿ' ಕಾಶಿನಾಥ್, ತಮ್ಮ ಚಿತ್ರತಂಡವನ್ನು ಈ ಚಿತ್ರದ ಮೂಲಕ ಗೆಲ್ಲಿಸಿದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ. ಇದೀಗ ಪ್ರೇಕ್ಷಕರಿಗೆ ಪತ್ರಿಕಾ ಜಾಹೀರಾತಿನ ಮೂಲಕ ಈ ಚಿತ್ರತಂಡ ನೀಡಿರುವ ಸಂದೇಶ, ಇಂದಿನ ಕನ್ನಡ ಚಿತ್ರರಂಗದಲ್ಲಿರುವ ಪರಿಸ್ಥಿತಿಗೆ ಹಿಡಿದ ಕನ್ನಡಿ ಎನ್ನಬಹುದು. ಆದರೆ, ಕೆಲವರು ಇದನ್ನು ಇಂದಿನ ಪರಿಸ್ಥಿತಿಗೆ ಹೊಂದಿಕೊಳ್ಳಲಾಗದ 'ಹಳಬರ ಹಳಹಳಿ' ಎಂದು ಹೇಳುತ್ತಿದ್ದಾರೆ. ಆದರೆ ಹಾಗೆ ನಿರ್ಧರಿಸುವ ಮೊದಲು ಈ '12 AM ಮಧ್ಯರಾತ್ರಿ' ಜಾಹೀರಾತಿನ ಕಡೆಗೊಮ್ಮೆ ಕಣ್ಣುಹಾಯಿಸಿದರೆ ಒಳ್ಳೆಯದು.

ಹೀಗೊಂದು ಜಾಹೀರಾತು ಪತ್ರಿಕೆಯಲ್ಲಿ ಮೂಡಿಬಂದಿದೆ ಎಂದರೆ ಅದರ ಹಿಂದಿರುವ ನೋವನ್ನು ಯಾರಾದರೂ ಅರ್ಥಮಾಡಿಕೊಳ್ಳಬಹುದು. ಸಿಕ್ಕ ಚಿತ್ರಮಂದಿರದಲ್ಲೇ ಬಿಡುಗಡೆ ಮಾಡಿ, ಈಗಿನ ಜನರೇಶನ್ ಪ್ರೇಕ್ಷಕರಿಂದಲೂ ಅಪೂರ್ವ ಪ್ರಶಂಸೆ ಪಡೆದು, ಬಾಲಿವುಡ್ 'ರಾಮ್ ಗೋಪಾಲ್ ವರ್ಮಾ' ಸಿನಿಮಾ ರೇಂಜ್ ಗೆ ಮಾಡಿದ್ದಾರೆ ಎಂಬ ಮಾತನ್ನು ಗಳಿಸಿಕೊಳ್ಳುವುದು ಅಷ್ಟು ಸುಲಭವಲ್ಲ.

ಕನ್ನಡದ ಹಲವಾರು ಚಿತ್ರತಂಡಗಳಂತೆ ಇವರೂ ಕೂಡ ಭಾರಿ ನೋವುಂಡು ಚಿತ್ರ ಬಿಡುಗಡೆ ಮಾಡಿ ಇದೀಗ ಗೆಲುವಿನ ನಗೆಗೆ ಸಾಕ್ಷಿಯಾಗುತ್ತಿದ್ದಾರೆ. ಇಂಥ ವಿಭಿನ್ನ ಪ್ರಯತ್ನಗಳಿಗೆ ಇನ್ನಾದರೂ ಕನ್ನಡ ಚಿತ್ರೋದ್ಯಮದಲ್ಲಿ ಸಾಕಷ್ಟು ಸಹಕಾರ ಸಿಗಲಿ, ಪ್ರೇಕ್ಷಕರಿಗೆ ಇಂತಹ ಅಪರೂಪದ ಸಿನಿಮಾ ನೋಡುವ ಅವಕಾಶವನ್ನು ಥಿಯೇಟರ್ ಮಾಲೀಕರು ಮಾಡಲಿ ಎಂಬುದು ಕನ್ನಡ ಸಿನಿಪ್ರೇಕ್ಷಕರ ಆಶಯವಾಗಿದೆ.

ಈ ಅಭಿಪ್ರಾಯ ವೈಯಕ್ತಿಕವಾದುದಲ್ಲ, ಹಿರಿಯ ಕಲಾವಿದರೊಬ್ಬರ ತಂಡಕ್ಕೆ ನೋವನ್ನು ನೀಡಿರುವ ಬಗ್ಗೆ ಸಾರ್ವಜನಿಕ ಚರ್ಚೆಗಳಲ್ಲಿ ಮೂಡಿಬರುತ್ತಿರುವುದು. '12 AM ಮಧ್ಯರಾತ್ರಿ' ಚಿತ್ರದಂತಹ ವಿಭಿನ್ನ ಪ್ರಯತ್ನಗಳಿಗೆ ಕನ್ನಡ ಚಿತ್ರರಂಗ ಸಾಕ್ಷಿಯಾಗಲಿ. ಕಾಶಿನಾಥ್ ಅವರಂಥ ಇನ್ನೂ ಅದೆಷ್ಟೋ ಹಿರಿಯ ಕಲಾವಿದರನ್ನು ಕಡೆಗಣಿಸುವ ಕಾಲ ಇನ್ಮುಂದೆ ಕನ್ನಡ ಚಿತ್ರೋದ್ಯಮದಲ್ಲಿ ನಿಲ್ಲಲಿ ಎಂಬ ಮಾತೀಗ ಕೇಳಿಬರುತ್ತಿದೆ. (ಒನ್ ಇಂಡಿಯಾ ಕನ್ನಡ)

English summary
Senior Kannada Actor Kashinath is creative now also. He is the executive producer and acted also in the movie 12 AM Madhyarathri, which is screening Successfully now. Karthik directed this movie and Abhimanyu, Kashinath son is the Hero for this movie. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada