'ಸೀತಾರಾಮ ಕಲ್ಯಾಣ' ಚಿತ್ರದಲ್ಲಿ ನಿಖಿಲ್ ಅಭಿನಯ ಕಂಡು ಚಪ್ಪಾಳೆ ತಟ್ಟಿದ ಸುದೀಪ್.!
ಕಳೆದ ವಾರವಷ್ಟೇ ಬಿಡುಗಡೆ ಆದ 'ಸೀತಾರಾಮ ಕಲ್ಯಾಣ' ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಅಪ್ಪಟ ಫ್ಯಾಮಿಲಿ ಎಂಟರ್ ಟೇನರ್ ಆಗಿರುವ 'ಸೀತಾರಾಮ ಕಲ್ಯಾಣ' ಚಿತ್ರ ಬಹುತೇಕ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
'ಸೀತಾರಾಮ ಕಲ್ಯಾಣ' ಚಿತ್ರವನ್ನು ಕಣ್ತುಂಬಿಕೊಂಡ ರಾಜಕಾರಣಿಗಳಾದ ಸಿದ್ದರಾಮಯ್ಯ, ಕೆ.ಎಸ್.ಈಶ್ವರಪ್ಪ, ಎಚ್.ಡಿ.ದೇವೇಗೌಡ ಸೇರಿದಂತೆ ಅನೇಕರು ನಿಖಿಲ್ ಅಭಿನಯವನ್ನು ಕೊಂಡಾಡಿದ್ದರು.

ಇದೀಗ 'ಸೀತಾರಾಮ ಕಲ್ಯಾಣ' ಚಿತ್ರವನ್ನ ವೀಕ್ಷಿಸಿದ ಸುದೀಪ್ ಕೂಡ ನಟ ನಿಖಿಲ್ ಕುಮಾರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ''ನಿಖಿಲ್ ನಿಜಕ್ಕೂ ಭರವಸೆ ಮೂಡಿಸುತ್ತಾರೆ. ನಿಖಿಲ್ ಪರ್ಫಾಮೆನ್ಸ್ ನನಗೆ ತುಂಬಾ ಇಷ್ಟ ಆಯ್ತು. ಎಲ್ಲಾ ದೃಶ್ಯಗಳಿಗೂ ನಿಖಿಲ್ ಕುಮಾರ್ ನ್ಯಾಯ ಒದಗಿಸಿದ್ದಾರೆ. ಜನರ ಹೃದಯಕ್ಕೆ ಇನ್ನೂ ಹತ್ತಿರ ಆಗುವಂಥ ಸಿನಿಮಾಗಳಲ್ಲಿ ನಿಖಿಲ್ ಅಭಿನಯ ನೋಡಲು ಇಷ್ಟ ಪಡುವೆ. ಗೆಳೆಯ ನಿನಗೆ ಶುಭ ಹಾರೈಕೆಗಳು'' ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.
ಅಂದಹಾಗೆ ನಿಖಿಲ್, ರಚಿತಾ ರಾಮ್, ಮಧೂ, ಶರತ್ ಕುಮಾರ್ ಸೇರಿದಂತೆ ದೊಡ್ಡ ತಾರಾ ಬಳಗ ಹೊಂದಿರುವ 'ಸೀತಾರಾಮ ಕಲ್ಯಾಣ' ಚಿತ್ರಕ್ಕೆ ಎ.ಹರ್ಷ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಎಲ್ಲೂ ಕಾಂಪ್ರಮೈಸ್ ಆಗದಂತೆ ಎಚ್.ಡಿ.ಕುಮಾರಸ್ವಾಮಿ ಮತ್ತು ಪತ್ನಿ ಅನಿತಾ ಕುಮಾರಸ್ವಾಮಿ ಬಂಡವಾಳ ಹಾಕಿದ್ದಾರೆ. ಕುಟುಂಬ ಸಮೇತ ಕೂತು ನೋಡುವ 'ಸೀತಾರಾಮ ಕಲ್ಯಾಣ' ಸಿನಿಮಾ ಸದ್ಯ ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.


Click it and Unblock the Notifications











