ವರದನಾಯಕ ಪೋಸ್ಟರಿನಲ್ಲಿ 'ಒನ್ ಅಂಡ್ ಓನ್ಲಿ' ಸುದೀಪ್!
'ವರದನಾಯಕ'ಚಿತ್ರದಲ್ಲಿ ನಾಯಕ ಚಿರಂಜೀವಿ ಸರ್ಜಾರಿಗೆ ನಾಯಕಿಯಾಗಿ ನಿಕೇಶಾ ಪಟೇಲ್ ಅಭಿನಯಿಸಿದ್ದಾರೆ. ಕಿಚ್ಚ ಸುದೀಪ್ ಅವರಿಗೆ ನಾಯಕಿಯಾಗಿ ದಕ್ಷಿಣ ಭಾರತದ ಹೆಸರಾಂತ ನಟಿ ಸಮೀರಾ ರೆಡ್ಡಿ ನಟಿಸಿದ್ದಾರೆ. ಆದರೆ 'ವರದನಾಯಕ' ಚಿತ್ರಕ್ಕೆ ಸುದೀಪ್ ಹಾಗೂ ಸಮೀರಾ ರೆಡ್ಡಿ ಅವರೇ ಪ್ರಚಾರ ಹಾಗೂ ಬಿಸಿನೆಸ್ ದೃಷ್ಟಿಯಿಂದ ಮುಖ್ಯ ಎಂಬುದು ಸತ್ಯ. ಸುದೀಪ್ ಅವರನ್ನೇ ಪ್ರಚಾರದಲ್ಲಿ ಬಳಸಿಕೊಂಡು ಚಿತ್ರ ತೆರೆಗೆ ಬರುತ್ತಿದೆ, ಯಶಸ್ಸಿಗಾಗಿ ಕಾಯುತ್ತಿದೆ.
ಸುದೀಪ್ ನಟಿಸಿರುವುದರಂತ ಚಿತ್ರಕ್ಕೆ ಬಿಡುಗಡೆಗೆ ಮೊದಲೇ ಸಾಕಷ್ಟು ಲಾಭವಾಗಿದೆ. ಈಗಾಗಲೇ ಚಿತ್ರದ ವಿತರಣೆ ಹಕ್ಕುಗಳು ಭಾರೀ ಮೊತ್ತಕ್ಕೆ ಮಾರಾಟವಾಗಿವೆ. ಬಿಕೆಟಿ ವಲಯದಲ್ಲಿ ರು. 3.5 ಕೋಟಿಗೆ ಮಾರಾಟವಾಗಿರುವ 'ವರದನಾಯಕ', ಇನ್ನೂ ಕೆಲವು ಕಡೆಯ ವಿತರಣೆ ಹಕ್ಕುಗಳಿಂದ ಸುಮಾರು ರು. 5 ಕೋಟಿ ಗಳಿಸಿದೆ. ಇಷ್ಟೇ ಅಲ್ಲ, ಚಿತ್ರದ ಸ್ಯಾಟಲೈಟ್ ಹಕ್ಕುಗಳು ರು. 2.25 ಕೋಟಿಗೆ ಮಾರಾಟವಾಗಿದೆ.
ಅಂದರೆ ಸರಿಸುಮಾರು ರು. 11 ಕೋಟಿಗಳಷ್ಟು ಮೊತ್ತವನ್ನು ಬಿಡುಗಡೆಗೆ ಮೊದಲೇ 'ವರದನಾಯಕ' ಚಿತ್ರ ಬಾಚಿಕೊಂಡಿದೆ. ಇನ್ನೂ ಸಾಕಷ್ಟು ಏರಿಯಾಗಳ ವಿತರಣೆ ಹಕ್ಕನ್ನು ನಿರ್ಮಾಪಕ ಶಂಕರೇಗೌಡರು ಉಳಿಸಿಕೊಂಡಿದ್ದಾರೆ. ಅವು ಬಿಡುಗಡೆಗೆ ಮುನ್ನ ಅಥವಾ ಬಿಡುಗಡೆ ನಂತರ ಅವರ ಜೇಬು ತುಂಬಿಸುವುದು ಗ್ಯಾರಂಟಿ. ಈ ಎಲ್ಲಾ ಬೆಳವಣಿಗೆಗೆ ಕಾರಣ 'ಒನ್ ಅಂಡ್ ಓನ್ಲಿ' ಸುದೀಪ್ ಎಂಬುದು ಯಾರಿಗಾದರೂ ಅರ್ಥವಾಗುವ ಸಂಗತಿ. (ಒನ್ ಇಂಡಿಯಾ ಕನ್ನಡ)


Click it and Unblock the Notifications












