»   » ಹುಟ್ಟುಹಬ್ಬದ ವಿಶೇಷ: ಪಾರ್ವತಮ್ಮನವರ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯ

ಹುಟ್ಟುಹಬ್ಬದ ವಿಶೇಷ: ಪಾರ್ವತಮ್ಮನವರ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯ

Posted By:
Subscribe to Filmibeat Kannada
ಪಾರ್ವತಮ್ಮ ರಾಜ್ ಕುಮಾರ್ ರವರ 78ನೇ ಜನ್ಮದಿನ ಇಂದು | ಕೆಲವು ವಿಷಯಗಳು ನಿಮಗಾಗಿ

ಕನ್ನಡ ಚಿತ್ರರಂಗ ಕಂಡ ಮಹಾನ್‌ ನಿರ್ಮಾಪಕಿ, ಧೀರ ಮಹಿಳಾಮಣಿ, ಹೆಮ್ಮೆಯ ಕನ್ನಡತಿ ಡಾ.ರಾಜ್‌ಕುಮಾರ್‌ ಅಂತಹ ಧ್ರುವತಾರೆಯ ಹಿಂದೆ ನಿಂತು ಪ್ರಜ್ವಲಿಸಿದ ಜ್ಯೋತಿ, ಮಕ್ಕಳ ಬದುಕಿಗೆ ರಾಜಮಾರ್ಗವಾಗಿ ನಿಂತ ದಿವಂಗತ ಪಾರ್ವತಮ್ಮ ರಾಜ್ ಕುಮಾರ್ ರವರ 78 ವರ್ಷದ ಜನ್ಮದಿನೋತ್ಸವ ಇಂದು.

ಏಳು ತಿಂಗಳ ಹಿಂದೆಯಷ್ಟೇ ಕನ್ನಡ ಚಿತ್ರೋದ್ಯಮ ಹಾಗೂ ಅಪಾರ ಅಭಿಮಾನಿ ಬಳಗವನ್ನ ಬಿಟ್ಟು ಹೋದ ಪಾರ್ವತಮ್ಮ ಈಗ ನೆನಪು ಮಾತ್ರ.

ಕನ್ನಡ ಸಿನಿಮಾರಂಗದ ನಿರ್ಮಾಪಕಿ ಹಾಗೂ ವಿತರಕಿ ಪಾರ್ವತಮ್ಮ ರಾಜ್ ಕುಮಾರ್ ಬಗ್ಗೆ ತಿಳಿದುಕೊಳ್ಳುವಂತಹ ಅನೇಕ ವಿಚಾರಗಳಿವೆ. ಹುಟ್ಟುಹಬ್ಬದ ವಿಶೇಷವಾಗಿ ಸಾಮಾನ್ಯ ಜನರಿಗೆ ಪಾರ್ವತಮ್ಮ ನವರ ಬಗ್ಗೆ ಗೊತ್ತಿಲ್ಲದಂತಹ ವಿಚಾರಗಳನ್ನ ನಿಮ್ಮ ಮುಂದೆ ಇಡುತ್ತಿದ್ದೇವೆ, ಓದಿರಿ...

ಮನೆಯಲ್ಲಿ ಅತ್ಯುತ್ತಮ 'ಗೃಹಿಣಿ'

ಪಾರ್ವತಮ್ಮ ಅವರನ್ನ ಚಿತ್ರ ನಿರ್ಮಾಪಕಿ ಎನ್ನುವುದಕ್ಕಿಂತ ಹೆಚ್ಚಾಗಿ ಒಬ್ಬ ಒಳ್ಳೆ ಗೃಹಿಣಿ ಅಂದರೆ ತಪ್ಪಾಗಲ್ಲ.. ಸುಮಾರು 24 ಮಕ್ಕಳಿಗೆ ಒಂದೇ ರೀತಿ ಶಿಕ್ಷಣ, ಊಟ, ವಸತಿ ಕೊಟ್ಟು ಸಾಕಿದ ಕೀರ್ತಿ ಪಾರ್ವತಮ್ಮನವರಿಗೆ ಸಲ್ಲುತ್ತೆ. ಮಕ್ಕಳನ್ನಾಗಲಿ, ದೊಡ್ಡವರನ್ನಾಗಲಿ, ಬೇದಭಾವವಿಲ್ಲದೆ ನೋಡಿಕೊಂಡವರು ಅವರು.

ಒಗ್ಗಟ್ಟಿನ ಮಂತ್ರ ಜಪಿಸಿದ ನಿರ್ಮಾಪಕಿ

ಪಾರ್ವತಮ್ಮ ತಮ್ಮ ಮನೆಯನ್ನ ರಕ್ಷಣೆ ಮಾಡೋದ್ರ ಜೊತೆಯಲ್ಲಿ ತಮ್ಮ ಸಹೋದರರು ಹಾಗೂ ರಾಜ್ ಕುಮಾರ್ ಸಹೋದರರ ಮನೆಯನ್ನೂ ಬೆಳಗಿದರು. ಸ್ವಂತ ತಮ್ಮ ಚಿನ್ನೇಗೌಡರನ್ನ ಮೇಷ್ಟ್ರು ಕೆಲಸ ಬಿಡಿಸಿ, ವಜ್ರೇಶ್ವರಿ ಕಂಬೈನ್ಸ್ ನ ಮ್ಯಾನೇಜರ್ ಆಗಿ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತೆ. ಸಹೋದರ ಶ್ರೀನಿವಾಸ್ ಅವರನ್ನ ನಿರ್ಮಾಪಕರನ್ನಾಗಿ ಮಾಡಿದರು, ಮತ್ತೊಬ್ಬ ಸಹೋದರ ಗೋವಿಂದರಾಜು ಅವರನ್ನ ಮನೆ ಅಳಿಯನಾಗಿ ಮಾಡಿಕೊಂಡರು.

ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಅಪಾರ

ಪಾರ್ವತಮ್ಮ ರಾಜ್‌ಕುಮಾರ್ ಅನೇಕ ಪ್ರತಿಭೆಗಳನ್ನ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ರಮ್ಯ, ರಕ್ಷಿತಾ, ಜಯಮಾಲ, ಮಾಲಾಶ್ರೀ, ಸುಧಾರಾಣಿ, ಮಂಜುಳ, ಪ್ರೇಮ, ನಿವೇದಿತಾ ಜೈನ್... ಹೀಗೆ ಇನ್ನೂ ಅನೇಕರು ಚಿತ್ರರಂಗದಲ್ಲಿ ಮಿಂಚಿದ್ದು ಇವರಿಂದಲೇ.

ಕನ್ನಡದ ಕಲಾವಿದರಿಗೆ ಅವಕಾಶ

ಕನ್ನಡಿಗರೇ ಹೆಚ್ಚಾಗಿ ಸಿನಿಮಾದಲ್ಲಿ ನಟಿಸಬೇಕು ಅನ್ನೋ ಉದ್ದೇಶ ಪಾರ್ವತಮ್ಮ ನವರದ್ದು. ಇದೇ ಕಾರಣಕ್ಕೆ ಡಾ.ರಾಜ್ ಕುಮಾರ್ ಸಿನಿಮಾಗಳಲ್ಲಿ ನಾಲ್ಕರಿಂದ-ಐದು ಖಳನಟರು ಪಾತ್ರ ನಿರ್ವಹಿಸುತ್ತಿದ್ದರು. ಚಿಕ್ಕಪುಟ್ಟ ಪಾತ್ರಗಳಿಗೂ ಬಟ್ಟಿ ಮಹಾದೇವಪ್ಪ, ಶನಿಮಹಾದೇವಪ್ಪ, ಶಾಂತಮ್ಮ, ಪಾಪಮ್ಮ, ಆದವಾನಿ ಲಕ್ಷ್ಮಿ ಇವರುಗಳನ್ನ ಚೆನೈನಿಂದ ಕರೆಸಿ ಅವಕಾಶ ಕೊಡುತ್ತಿದ್ದರು.

ವಜ್ರೇಶ್ವರಿ ಕಂಬೈನ್ಸ್ ನಿಂದ ಬಂದ ಚಿತ್ರಗಳು

ಪಾರ್ವತಮ್ಮ ರಾಜ್‌ಕುಮಾರ್ ಬರೋಬ್ಬರಿ 83 ಸಿನಿಮಾಗಳನ್ನ ನಿರ್ಮಿಸಿದ್ದಾರೆ. ನೂರಾರು ಕುಟುಂಬಗಳಿಗೆ ಈ ಮೂಲಕ ದಾರಿ ದೀಪವಾಗಿದ್ದಾರೆ. ಸಿನಿಮಾ ಯಶಸ್ಸು ಕಂಡು ಶತದಿನೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಸಿನಿಮಾಗಾಗಿ ದುಡಿದ ಪ್ರತಿಯೊಬ್ಬರಿಗೂ ಬೆಳ್ಳಿ ವಸ್ತುಗಳ ಬಹುಮಾನವಾಗಿ ಕೊಡುತ್ತಿದ್ದರು.

ದೇಸಿ ಸೊಗಡಿಗೆ ಹೆಚ್ಚಿನ ಬೆಲೆ

ಕಾದಂಬರಿ ಆಧಾರಿತ ಚಿತ್ರಗಳನ್ನ ಪಾರ್ವತಮ್ಮನವರೇ ಆಯ್ಕೆ ಮಾಡುತ್ತಿದ್ದರು. ವಾರಪತ್ರಿಕೆಯಲ್ಲಿ ಬಂದ ಕತೆಯನ್ನ ಮಯೂರ ಸಿನಿಮಾವಾಗಿ ಮಾಡಿದರು. ಕಾದಂಬರಿಗಳು ಚೆನ್ನಾಗಿದ್ದರೆ ಬೇರೆ ನಿರ್ದೇಶಕರಿಗೆ ಮತ್ತು ನಟರಿಗೆ ಸಿನಿಮಾ ಮಾಡುವಂತೆ ಸಲಹೆ ನೀಡುತ್ತಿದ್ದರು. ಬಯಲುದಾರಿ ಚಿತ್ರವೂ ಕೂಡ ಪಾರ್ವತಮ್ಮ ನವರ ಸಲಹೆಯ ಮೇರೆಗೆ ಆಗಿದ್ದು.

ಹೆಣ್ಣು ಮಕ್ಕಳಿಗಾಗಿ ಪರಿಶ್ರಮ

ಪಾರ್ವತಮ್ಮನವರಿಗೆ ಸೇವಾ ಮನೋಭಾವ ಕೂಡ ಇತ್ತು. ರಾಜ್‌ಕುಮಾರ್‌ ಅವರ ಆಶಯದಂತೆ, ಬೀದಿಗೆ ಬಿದ್ದ ಅನಾಥ ಹೆಣ್ಣು ಮಕ್ಕಳಿಗಾಗಿ ಶಕ್ತಿಧಾಮ ಅನ್ನೋ ಫೌಂಡೇಶನ್‌ ನ ಹುಟ್ಟುಹಾಕಿದರು. ಆ ಸೂರಿನಡಿಯಲ್ಲಿ ಇಂದಿಗೂ ನೂರಾರು ಸಂತ್ರಸ್ತ ಮಹಿಳೆಯರಿಗೆ ಹಾಗೂ ಹೆಣ್ಣು ಮಕ್ಕಳಿಗೆ ಆಶ್ರಯ ಸಿಗುತ್ತಿದೆ.

English summary
Lesser Known facts about Kannada Producer Late Parvathamma Rajkumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada