»   » ನಾವು ನೀವು ಅರಿಯದ ರಾಜ್ ಅಪರೂಪದ ಸಂಗತಿಗಳು

ನಾವು ನೀವು ಅರಿಯದ ರಾಜ್ ಅಪರೂಪದ ಸಂಗತಿಗಳು

Posted By:
Subscribe to Filmibeat Kannada

ನಾಳೆ ಗುರುವಾರ (ಏ 24) ರಾಯರ ದಿನ ಹಾಗೂ ರಾಯರ ಪರಮಭಕ್ತ ಮತ್ತು ಭಾರತೀಯ ಚಿತ್ರೋದ್ಯಮ ಕಂಡ ಮೇರು ಕಲಾವಿದ ಡಾ. ರಾಜಕುಮಾರ್ ಅವರ 85ನೇ ಹುಟ್ಟುಹಬ್ಬ. ಅವರ ಜನ್ಮದಿನದ ಮುನ್ನಾ ದಿನ ಅವರನ್ನು ನೆನಪಿಸಿಕೊಳ್ಳುತ್ತಾ, 'ಡಾ.ರಾಜ್ ವ್ಯಕ್ತಿತ್ವದ ಹಿಂದಿನ ವ್ಯಕ್ತಿ' ಎನ್ನುವ ಪುಸ್ತಕದಲ್ಲಿರುವ ಕೆಲವೊಂದು ಅಪರೂಪದ ಆಯ್ದ ಸಂಗತಿಗಳನ್ನು ಓದುಗರ ಮುಂದಿಡುತ್ತಿದ್ದೇವೆ.

1952ರಲ್ಲಿ ಬಿಡುಗಡೆಯಾದ ಶ್ರೀ ಶ್ರೀ ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿ ಡಾ. ರಾಜ್ ಒಂದು ಸಣ್ಣ ಪಾತ್ರದಲ್ಲಿ ನಟಿಸಿದ್ದರು. ಸಪ್ತ ಖುಷಿಗಳಲ್ಲಿ ಒಬ್ಬನಾದ ಪಾತ್ರದಲ್ಲಿ ನಟಿಸಿದ್ದ ಆ ಚಿತ್ರದ ಚಿತ್ರೀಕರಣ ಒಂದು ದಿನ ಮಾತ್ರವಿತ್ತು. ಆ ಪಾತ್ರಕ್ಕೆ ರಾಜ್ ಅವರಿಗೆ ಅಂದು ಸಿಕ್ಕಿದ್ದ ಸಂಭಾವನೆ ಐದು ರೂಪಾಯಿ. ಅದರಲ್ಲಿ ಎರಡುವರೆ ರೂಪಾಯಿ ವೆಚ್ಚಮಾಡಿ ತಾಯಿಗೆ ಕಂಬಳಿ ತಂದುಕೊಟ್ಟಿದ್ದರು.

1954ರಲ್ಲಿ ಗುಬ್ಬಿ ವೀರಣ್ಣನವರು ಕರ್ನಾಟಕ ಫಿಲಂಸ್ ಲಾಂಛನದಡಿ ಬೇಡರ ಕಣ್ಣಪ್ಪ ಚಿತ್ರ ನಿರ್ಮಿಸಿದರು. ರಾಜ್ ನಾಯಕನಾಗಿ ನಟಿಸಿದ್ದ ಆ ಚಿತ್ರ ಕನ್ನಡ ಚಿತ್ರೋದ್ಯಮದ 39ನೇ ಚಿತ್ರ. ರಾಜ್ ತನ್ನ ಮೊದಲ ಚಿತ್ರಕ್ಕೇ ರಾಷ್ಟ್ರೀಯ ಪುರಸ್ಕಾರ ಪಡೆಯುವ ಮೂಲಕ ಕರ್ನಾಟಕಕ್ಕೆ ಭಾರತದ ಚಲನಚಿತ್ರ ಜಗತ್ತಿನ ನಕಾಶೆಯಲ್ಲಿ ಸ್ಥಾನ ದೊರಕ್ಕಿಸಿಕೊಟ್ಟರು. ಸಂತ ತುಕಾರಾಂ ಚಿತ್ರದ ಚಿತ್ರೀಕರಣದ ವೇಳೆ ರಾಜ್ ಪಾತ್ರದಲ್ಲಿ ಎಷ್ಟು ತಲ್ಲೀನರಾಗಿದ್ದರೆಂದರೆ 'ವಿಠಲ ವಿಠಲ' ಎಂದು ಭಾವಪರವಶತೆಯಿಂದ ಸನ್ನಿವೇಶದ ಚಿತ್ರೀಕರಣ ಮುಗಿದಿದ್ದರೂ ಹಾಡುತ್ತಲ್ಲೇ ಇದ್ದರಂತೆ. ರಾಜ್ ಮೇಲೆ ನೀರು ಎರಚಿದಾಗಲೇ ಅವರು ನಟನೆಯ ಪಾತ್ರದಿಂದ ಹೊರಬಂದರು.

ರಾಜ್ ಬೆಳೆಯುತ್ತಾ ಸಾಗುತ್ತಿದ್ದಂತೆ ಚಿತ್ರೋದ್ಯಮವೂ ಬೆಳೆಯುತ್ತಾ ಸಾಗಿತು. 1954 ರಿಂದ 1963ರ ವರೆಗಿನ ಹತ್ತು ವರ್ಷಗಳ ಅವಧಿಯಲ್ಲಿ ರಾಜ್ 45 ಚಿತ್ರಗಳಲ್ಲಿ ನಟಿಸಿದ್ದರು. ಸತಿಶಕ್ತಿ ಎನ್ನುವ ಚಿತ್ರದಲ್ಲಿ ರಾಜ್ ದ್ವಿಪಾತ್ರದಲ್ಲಿ ನಟಿಸಿದ್ದರು. ಅದರಲ್ಲಿ ಕಳ್ಳನ ಪಾತ್ರವೂ ಒಂದು. ಅವರು ಆ ಪಾತ್ರಕ್ಕೆ ರಾಜ್ ಎಷ್ಟು ಹೊಂದಿಕೊಂಡಿದ್ದರೆಂದರೆ ತಂತ್ರಜ್ಞರೊಬ್ಬರನ್ನು 'ನಿಮ್ಮ ಕೆಲಸ ನೀವು ಮಾಡ್ಕೋ ಹೋಗಿ' ಎಂದು ಬೈದಿದ್ದರಂತೆ. (ಡಾ. ರಾಜ್ ಅಪರೂಪದ ಚಿತ್ರಗಳು)

ಇನ್ನೂ ಕುತೂಹಲಕಾರಿ ಸಂಗತಿಗಳು, ಸ್ಲೈಡಿನಲ್ಲಿ..

ಒಲವು ಗೆಲುವು ಚಿತ್ರದಲ್ಲಿ

ಒಲವು ಗೆಲುವು ಚಿತ್ರದಲ್ಲಿ ಇಂಗ್ಲಿಷ್ ಪ್ರೊಫೆಸರಿನ ಪಾತ್ರದಲ್ಲಿ ರೋಮಿಯೋ ಜ್ಯೂಲಿಯಟ್ ಬಗ್ಗೆ ಪಾಠ ಹೇಳಿ ಕೊಡಬೇಕಾದಾಗ ಎಲ್ಲವೂ ಅಚ್ಚುಕಟ್ಟಾಗಿ ಇರಬೇಕೆಂದು ಪಾತ್ರಕ್ಕೆ ಅಗತ್ಯವಿರುವ ಮುಖಭಾವಗಳು, ಧ್ವನಿಯ ಏರಿಳಿತಗಳಿಗಾಗಿ ಸಂಪತ್ ಎನ್ನುವವರ ಸಹಾಯ ಕೋರಿದ್ದರು.

ಆಕಸ್ಮಿಕ ಚಿತ್ರ

ಆಕಸ್ಮಿಕ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ನಟಿಸಿದ್ದ ರಾಜಕುಮಾರ್ ಅವರನ್ನು ಅಚ್ಚುಕಟ್ಟಾಗಿ ತೆರೆ ಮೇಲೆ ಮಂಡಿಸಿದ ಶ್ರೇಯಸ್ಸು ಪೊಲೀಸ್ ಅಧಿಕಾರಿ ಕೆಂಪಯ್ಯ ಅವರಿಗೆ ಸಲ್ಲಬೇಕು. " ಈ ಪೊಲೀಸ್ ಸಮವಸ್ತ್ರ ನಿಮ್ಮ ಮೇಲೆ ಶೋಭಿಸುವಷ್ಟು ನಮ್ಮ ಇಲಾಖೆಯಲ್ಲೂ ಯಾರಿಗೆ ಶೋಭಿಸುವುದಿಲ್ಲ ಎಂದು ಕೆಂಪಯ್ಯ ಹೇಳಿದ್ದನ್ನು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಹರಿಭಕ್ತ ಚಿತ್ರದಲ್ಲಿ ದಾರಿ ತಪ್ಪಿದ ಹರಿ

ಹರಿಭಕ್ತ ಚಿತ್ರದಲ್ಲಿ ದಾರಿ ತಪ್ಪಿದ ಹರಿ ಪಾತ್ರದಲ್ಲಿ ನಟಿಸಿದ್ದ ರಾಜ್, ಅನ್ನವನ್ನು ಬಿಸಾಕುವ ದೃಶ್ಯವಿತ್ತು. ಅಂದು ಅನ್ನ ಬಿಸಾಕಿದ್ದರಿಂದ ರಾಜ್ ತನ್ನ ಜೀವನದುದ್ದಕ್ಕೂ ಅನ್ನವನ್ನು ಪೂಜಿಸುತ್ತಿದ್ದರು.

ಸಂತ ತುಕಾರಾಂ ಚಿತ್ರದಲ್ಲಿ ಹೆಪ್ಪುಗಟ್ಟಿದ ನೀರಿನಲ್ಲಿ

ಸಂತ ತುಕಾರಾಂ ಚಿತ್ರದಲ್ಲಿ ಹೆಪ್ಪುಗಟ್ಟಿದ ನದಿಯಲ್ಲಿ ಸೊಂಟದವರೆಗೂ ನೀರಿನಲ್ಲಿ ನಿಲ್ಲಬೇಕಾದ ಪಾತ್ರವಿತ್ತು. ಪಾತ್ರದ ಬಗ್ಗೆ ರಾಜ್ ಅವರಿಗೆ ವಿವರಿಸಿದ ನಂತರ ನಿರ್ದೇಶಕರು ಬೇರೆ ತಾಂತ್ರಿಕ ವಿಚಾರದಲ್ಲಿ ಮಗ್ನರಾಗಿದ್ದರು. ನಿರ್ದೇಶಕರ ಸೂಚನೆಗೆ ಕಾಯುತ್ತಿದ್ದ ರಾಜ್ ಬಹಳಹೊತ್ತು ಕೊರೆಯುವ ನೀರಿನಲ್ಲೇ ನಿಂತಿದ್ದರು. ಅದನ್ನು ನಿರ್ದೇಶಕರು ಗಮನಿಸರಲಿಲ್ಲ, ನಂತರ ಆ ದೃಶ್ಯದ ಚಿತ್ರೀಕರಣ ನಡೆಯಿತು. ಚಿತ್ರೀಕರಣ ಮುಗಿದ ನಂತರ ಕೊರೆಯುವ ಚಳಿಯಲ್ಲಿ ನಿಂತಿದ್ದರಿಂದ ರಾಜ್ ಅವರಿಗೆ ನಡೆಯಲು ಅಶಕ್ತರಾಗಿದ್ದರಂತೆ.

ಸನಾದಿ ಅಪ್ಪಣ್ಣ ಮತ್ತು ಶಿವಾಜಿ ಗಣೇಶನ್ ಜೊತೆ

ಸನಾದಿ ಅಪ್ಪಣ್ಣ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಕ್ಕೆ ಸಿದ್ದರಾಗಿ ರಾಜ್ ಮದರಾಸಿನ ಎವಿಎಂ ಸ್ಟುಡಿಯೋದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಅಲ್ಲಿ ಚಿತ್ರೀಕರಣ ಮುಗಿಸಿ ಶಿವಾಜಿ ಗಣೇಶನ್ ಕೂಡಾ ಹೊರಟಿದ್ದರು. ಅಯ್ಯಪ್ಪ ಸ್ವಾಮಿ ವ್ರುತದಲ್ಲಿದ್ದ ಶಿವಾಜಿ ಅವರನ್ನು ಕಂಡಾಕ್ಷಣ ರಾಜ್ ಅವರ ಪಾದಮುಟ್ಟಿ ನಮಸ್ಕರಿಸಿದರು. ಶಿವಾಜಿ, ರಾಜ್ ಅವರನ್ನು ಹತ್ತಿರದಿಂದ ಗಮನಿಸಿ, 'ರಾಜ್ ಸ್ವಾಮಿ, ನಿಮ್ಮ ವೇಷವೇ ನೀವು ಮಾಡುವ ಕಷ್ಟದ ಕೆಲಸಗಳಿಗೆ ಸಾಕ್ಷಿ. ನಾವು ಯಾರೂ ನಿಮ್ಮ ಹಾಗೇ ಪ್ರಯತ್ನ ಮಾಡಲೂ ಸಾಧ್ಯವಿಲ್ಲ' ಎಂದರಂತೆ.

ಜೀವನಚೈತ್ರದಲ್ಲಿ ಕೇದಾರನಾಥದ ಬಳಿ

ಜೀವನಚೈತ್ರ ಚಿತ್ರದ ನಾದಮಯ ಹಾಡಿನ ಚಿತ್ರೀಕರಣದ ವೇಳೆ ಪಾತ್ರಕ್ಕೆ ಸಹಜತೆ ಇರಲಿ ಎಂದು ಬದರಿ ಕೇದಾರನಾಥದ ಬಳಿ ಮಲಗಿ, ಮೈಮೇಲೆ ಮಂಜುಗೆಡ್ಡೆಗಳ ರಾಶಿ ಸುರಿಸಿಕೊಂಡು ಪಾತ್ರಕ್ಕೆ ತಯಾರಾದರಂತೆ. ರಾಜ್ ಪಾತ್ರಕ್ಕೆ ತಯಾರಾಗುತ್ತಿರುವ ರೀತಿ ನೋಡಿ ಚಿತ್ರತಂಡದವರಲ್ಲದೇ ಅಲ್ಲಿದ್ದ ಯಾತ್ರಾರ್ಥಿಗಳೂ ಬೆಚ್ಚಿಬಿದ್ದರಂತೆ.

ಮಾಹಿತಿ ಮತ್ತು ಚಿತ್ರ ಕೃಪೆ : 'ಡಾ. ರಾಜಕುಮಾರ್ ವ್ಯಕ್ತಿತ್ವದ ಹಿಂದಿನ ವ್ಯಕ್ತಿ ಪುಸ್ತಕ' (ಪುಸ್ತಕದ ಪ್ರಕಾಶಕರು - ಪಾರ್ವತಮ್ಮ ಪ್ರಕಾಶನ, ಸಂಪಾದಕರು - ಪುನೀತ್ ರಾಜಕುಮಾರ್, ಪ್ರಕೃತಿ ಎನ್ ಬನವಾಸಿ )

English summary
Lesser known facts of legend Kannada actor Dr. Rajkumar on eve of his 85th Birthday. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada