»   » ಚಾರ್ ಮಿನಾರ್ ಚಿತ್ರಕ್ಕೀಗ ನಿರ್ದೇಶಕರೇ ನಿರ್ಮಾಪಕರು

ಚಾರ್ ಮಿನಾರ್ ಚಿತ್ರಕ್ಕೀಗ ನಿರ್ದೇಶಕರೇ ನಿರ್ಮಾಪಕರು

Posted By:
Subscribe to Filmibeat Kannada
ಲವ್ಲಿ ಸ್ಟಾರ್ ಪ್ರೇಮ್ ನಾಯಕತ್ವದ 'ಚಾರ್ ಮಿನಾರ್' ಚಿತ್ರದ ನಿರ್ಮಾಪಕರು ಬದಲಾಗಿದ್ದಾರೆ. ಈ ಮೊದಲು ಚಾರ್ ಮಿನಾರ್ ಚಿತ್ರವನ್ನು ಚಂದ್ರು ಗೆಳೆಯ ಮಂಜುನಾಥ್ ನಿರ್ಮಿಸುತ್ತಿದ್ದರು. ಈಗ, ಸ್ವತಃ ಚಂದ್ರು ನಿರ್ಮಾಪಕನ ಜಾಗಕ್ಕೆ ಬಂದು ಕುಳಿತುಕೊಳ್ಳುವಂತಾಗಿದೆ. ಆಶ್ಚರ್ಯವೆಂದರೆ ನಟ ಪ್ರೇಮ್ ಅವರ ಮತ್ತೊಂದು ಚಿತ್ರ 'ಚಂದ್ರ'ಕ್ಕೂ ನಿರ್ಮಾಪಕರು ಬದಲಾಗಿದ್ದಾರೆ.

ಆರ್ ಚಂದ್ರು ಈಗ ನಿರ್ಮಾಪಕರಾಗಿ ಬದಲಾಗಿರುವ 'ಚಂದ್ರ' ಚಿತ್ರಕ್ಕೆ ನಿರ್ಮಾಪಕರಾಗಿದ್ದ ಮಂಜುನಾಥ್, ಸ್ವತಃ ತಾವೇ ಚಂದ್ರು ಜೊತೆಗೂಡಿ ಈ ಮೊದಲು ಹೈದ್ರಾಬಾದಿಗೆ ಹೋಗಿ 'ಲೊಕೇಶನ್' ನೋಡಿಯೂ ಬಂದಿದ್ದರು. ಆದರೆ ಅರ್ಧ ಚಿತ್ರ ಮುಗಿಯುವ ಹೊತ್ತಿಗೆ ನಿರ್ಮಾಪಕರು ಸುಸ್ತಾದರೋ ಏನೋ, 'ಆಗಲ್ಲ' ಎಂದು ಹೇಳಿ ಎದ್ದುಹೋಗಿದ್ದಾರೆ.

ಈ ಬೆಳವಣಿಗೆಗೆ ಕಾರಣವೇನು ಎಂದು ಚಂದ್ರುರನ್ನು ಕೇಳಲಾಗಿ "ಮೊದಲು ಹೇಳಿದ್ದಕ್ಕಿಂತ ಬಜೆಟ್ ಜಾಸ್ತಿಯಾಯ್ತು, ಹೀಗಾಗಿ ನಿರ್ಮಾಪಕರಿಗೆ ತಲೆ ಬಿಸಿಯಾಯ್ತು. ಬಿಟ್ಟು ಹೋದ್ರು" ಎಂದಿದ್ದಾರೆ ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಬದಲಾಗಿರುವ ಚಂದ್ರು. ಆದರೆ, ತನ್ನ ಗೆಳೆಯನೇ ಆಗಿರುವ ಮಂಜುನಾಥ್ ಅವರ ಬಾಕಿಯನ್ನೆಲ್ಲ ಚಂದ್ರು ತೀರಿಸಿದ್ದಾರಂತೆ.

ಅಷ್ಟೊಂದು ಹಣವಿಲ್ಲದ ಚಂದ್ರು ಇದಕ್ಕಾಗಿ ಫೈನಾನ್ಶಿಯರುಗಳ ಮೊರೆ ಹೋಗಿರುವುದು ಗಾಂಧಿನಗರದಲ್ಲಿ ಈಗ ಗುಟ್ಟಾಗಿ ಉಳಿದಿಲ್ಲ. ಆದರೆ ಧೈರ್ಯ ಮಾಡಿ ಚಿತ್ರವನ್ನು ಹೆಗಲ ಮೇಲೆ ಹಾಕಿಕೊಂಡಿರುವ ಚಂದ್ರು ಗುಂಡಿಗೆಗೆ ಭಲೇ ಎನ್ನುತ್ತಿದೆ ಇಡೀ ಗಾಂಧಿನಗರ. ಮುಂದೆ, 'ಗೆದ್ದರೆ ಬಂಪರ್, ಬಿದ್ದರೆ ಪಾಪರ್' ಪಾಡು ಚಂದ್ರು ಅವರದು.

ಲವ್ಲಿ ಸ್ಟಾರ್ ಪ್ರೇಮ್ ಕುಮಾರ್ ನಾಯಕತ್ವದ ಚಾರ್ ಮಿನಾರ್ ಚಿತ್ರಕ್ಕೆ ಮೇಘನಾ ಗಾಂವ್ಕರ್ ನಾಯಕಿ. 32 ದಿನಗಳ ಚಿತ್ರೀಕರಣ ಈಗಾಗಲೇ ಮುಗಿದಿದ್ದು ಈಗ ಎರಡನೇ ಹಂತದ ಚಿತ್ರೀಕರಣ ಪ್ರಾರಂಭವಾಗಿದೆ. ಆದರೆ ಈ ಮಧ್ಯೆ, ಪ್ರೇಮ್ ನಾಯಕರಾಗಿರುವ ಚಂದ್ರ ಚಿತ್ರಕ್ಕೆ ಸಮರ್ಥ್ ವೆಂಚರ್ಸ್ ಪ್ರಸಾದ್ ನಿರ್ಮಾಪಕರಾಗಿ ಬದಲಾಗಿದ್ದಾರೆ.

ಆದರೆ ಯಾವುದೇ ಬೆಳವಣಿಗೆಗೆ ನಟ ಪ್ರೇಮ್ ಕಾರಣವಲ್ಲ ಎಂದಿದ್ದಾರೆ ನಿರ್ದೇಶಕ ಚಂದ್ರು. "ಲವ್ಲಿ ಸ್ಟಾರ್ ಪ್ರೇಮ್ ರಲ್ಲಿ ನಟ ಶಿವರಾಜ್ ಕುಮಾರ್ ಗುಣಗಳಿವೆ. ನಿರ್ದೇಶಕರ ಮಾತಿಗೆ ಒಪ್ಪಿನಡೆಯುವುದು ಮಾತ್ರವಲ್ಲ, ಶಿವಣ್ಣನಂತೆ ಪ್ರೇಮ್ ಕೂಡ ವಿನಯವಂತ. ಅವರಿಗೆ ಅಹಂಕಾರವೆಂಬುದಿಲ್ಲ. ಇಡೀ ಚಿತ್ರದಲ್ಲಿ ಸಾಕಷ್ಟು ಗೆಟಪ್‌ ಗಳಿದ್ದರೂ, ಯಾವುದೇ ತಕರಾರು ಮಾಡದೇ ಎಲ್ಲಕ್ಕೂ ಬದಲಾಗಿ ಸಹಕರಿಸುತ್ತಿದ್ದಾರೆ" ಎಂದಿದ್ದಾರೆ. (ಒನ್ ಇಂಡಿಯಾ ಕನ್ನಡ)

English summary
Director R Chandru also changed as Producer for Lovely Star Prem's Kannada Movie Charminor. In a recent development, chandru's friend Manjunath left the production seat. Then, the chandru himself became the producer for it. 
 
Please Wait while comments are loading...