For Quick Alerts
  ALLOW NOTIFICATIONS  
  For Daily Alerts

  ಗಾಲ್ಫರ್ ಅದಿತಿ ಅಶೋಕ್ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕವಿರಾಜ್

  |

  ಟೋಕಿಯೊ ಒಲಂಪಿಕ್ಸ್ 2020ರಲ್ಲಿ ಭಾರತೀಯ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ವಿಶೇಷವಾಗಿ ಮಹಿಳಾ ಅಥ್ಲೆಟ್‌ಗಳು ಸ್ಫೂರ್ತಿದಾಯಕ ಆಟದೊಂದಿಗೆ ದೇಶಕ್ಕೆ ಮಾದರಿ ಎನಿಸಿಕೊಳ್ಳುತ್ತಿದ್ದಾರೆ. ಭಾರತೀಯ ಮಹಿಳಾ ಹಾಕಿ ತಂಡ ಸೆಮಿ ಫೈನಲ್ ಪ್ರವೇಶಿಸಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಸೋಲು ಕಂಡಿತು. ಆದರೆ, ತಂಡವಾಗಿ ಉತ್ತಮ ಪ್ರದರ್ಶನ ಕೊಟ್ಟಿದ್ದಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

  ಅದೇ ರೀತಿ ಒಲಿಂಪಿಕ್ಸ್ ಗಾಲ್ಫ್ ಸ್ಪರ್ಧೆಯಲ್ಲಿ ಕರ್ನಾಟಕದ ಗಾಲ್ಫರ್ ಅದಿತಿ ಅಶೋಕ್ ಕೆಲವೇ ಅಂತರದಲ್ಲಿ ಪದಕದಿಂದ ವಂಚಿತರಾದರು. ಪದಕ ಕತ ತಪ್ಪಿದರೂ ಅದಿತಿ ಅಶೋಕ್ ಆಟ ಭಾರತೀಯರಿಗೆ ಹೆಮ್ಮೆ ತಂದಿದೆ. ಈ ಬಗ್ಗೆ ಕನ್ನಡ ಚಲನಚಿತ್ರ ಗೀತೆ ರಚನೆಕಾರ ಕವಿರಾಜ್ ಅದಿತಿ ಅಶೋಕ್‌ ಅವರನ್ನು ಅಭಿನಂದಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.

  ಒಲಂಪಿಕ್ಸ್‌ನಲ್ಲಿ ಮಹಿಳಾ ಹಾಕಿ ತಂಡ ರೋಚಕ ಆಟ: 'ಚೆಕ್ ದೇ ಇಂಡಿಯಾ 2' ಆಫರ್?ಒಲಂಪಿಕ್ಸ್‌ನಲ್ಲಿ ಮಹಿಳಾ ಹಾಕಿ ತಂಡ ರೋಚಕ ಆಟ: 'ಚೆಕ್ ದೇ ಇಂಡಿಯಾ 2' ಆಫರ್?

  ನಾಲ್ಕು ದಿನಗಳ ಕಾಲ ನಾಲ್ಕು ಸುತ್ತುಗಳಲ್ಲಿ ನಡೆದ ಒಲಿಂಪಿಕ್ಸ್ ಗಾಲ್ಫ್ ಸ್ಪರ್ಧೆಯಲ್ಲಿ ಕೊನೆಯ ಕ್ಷಣದವರೆಗೂ ಪದಕ ಗೆಲ್ಲುವ ಸಾಧ್ಯತೆಯಲ್ಲಿದ್ದ ಕರ್ನಾಟಕದ ಗಾಲ್ಫರ್ 'ಅದಿತಿ ಅಶೋಕ್' ಕೇವಲ ಒಂದೇ ಒಂದು ಸ್ಟ್ರೋಕ್ ನಿಂದ ಪದಕ ವಂಚಿತರಾಗಿದ್ದಾರೆ. ಅಂಕಗಳಿಕೆಯಲ್ಲಿ ಮೂರನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದರೂ ಎರಡನೇ ಸ್ಥಾನಕ್ಕೆ ಜಪಾನ್ ಮತ್ತು ನ್ಯೂಜಿಲ್ಯಾಂಡ್ ಆಟಗಾರ್ತಿಯರ ನಡುವೆ ಟೈ ಆದ ಕಾರಣ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಮೊದಲ ಸ್ಥಾನ ವಿಶ್ವದ ನಂಬರ್ ಒನ್ ಅಮೇರಿಕಾದ ಗಾಲ್ಫರ್ 'ನೆಲ್ಲಿ ಕೋರ್ಡಾ' ಪಾಲಾಯಿತು.

  ಇಡೀ ಪಂದ್ಯಾವಳಿಯಲ್ಲಿ, ಕೊನೆಯ ಹಂತದವರೆಗೂ ಬಹುತೇಕ ಅದಿತಿ ಎರಡನೇ ಸ್ಥಾನದಲ್ಲೇ ಮುನ್ನಡೆದಿದ್ದರು. ಇಂದು ಬೆಳಿಗ್ಗೆ ಕೊನೆ ಸುತ್ತಿನಲ್ಲಿ ಒಂದು ಹಂತದಲ್ಲಿ ಲೀಡರ್ ಕೂಡಾ ಆಗಿದ್ದರು. ವಿಶ್ವದ ಅರವತ್ತು ದೇಶಗಳ ಸ್ಪರ್ದಿಗಳ ನಡುವೆ ನಾಲ್ಕನೇ ಸ್ಥಾನ ಪಡೆದಿದ್ದು ಪ್ರಶಂಸಾರ್ಹ ಸಾಧನೆಯೇ. ಅತ್ಯಂತ ಅನುಭವಿ, ಅಗ್ರಶ್ರೇಣಿಯ, ವಿಶ್ವಚಾಂಪಿಯನ್ ಗಾಲ್ಫರ್ ಗಳ ಎದುರು ವಿಶ್ವದ 200ನೇ ಶ್ರೇಯಾಂಕದಲ್ಲಿರುವ ಈ ಪುಟ್ಟ ಹುಡುಗಿ ಸೆಣೆಸಿ ಕೂದಲೆಳೆಯಲ್ಲಿ ಪದಕ ವಂಚಿತರಾಗಿದ್ದಾರೆ. ಇನ್ನೂ 22 ವಯಸ್ಸಿನಲ್ಲೇ ಇಷ್ಟು ಅದ್ಭುತ ಪ್ರದರ್ಶನ ನೀಡಿರುವ ಇವರು ಮುಂದಿನ ದಿನಗಳಲ್ಲಿ ನಮ್ಮ ಒಕ್ಕೂಟ ರಾಷ್ಟ್ರಕ್ಕೆ, ನಮ್ಮ ನಾಡಿಗೆ ಹಲವಾರು ಹೆಮ್ಮೆಯ ಪದಕ ತರುವ ಕ್ರೀಡಾಪಟು ಆಗುವುದರಲ್ಲಿ ಅನುಮಾನವಿಲ್ಲ.

  ಪದಕ ಗೆಲ್ಲದಿದ್ದರೂ ನೀವು ಕೋಟ್ಯಂತರ ಹೃದಯ ಗೆದ್ದಿದ್ದೀರಿ: ಕೋಚ್ ಪ್ರಶಂಸೆ

  ಇದರ ಜೊತೆ ಖಂಡಿತಾ ಈ ದಿನ ಆಕೆಯ ಪ್ರದರ್ಶನ ನೋಡಿದ ಬಾಲಕ ಬಾಲಕಿಯರು ಮತ್ತು ಅವರ ಪೋಷಕರ ಕಣ್ಣಲ್ಲಿ ಒಂದು ಮಿಂಚು ಪ್ರಜ್ವಲಿಸಿ ಅವರಲ್ಲಿ ಹಲವರು ತಮ್ಮ ಸ್ಪೋರ್ಟ್ಸ್ ಕರಿಯರ್ ಆಯ್ಕೆಗಳಲ್ಲಿ ಗಾಲ್ಫ್ ಅನ್ನು ಒಂದಾಗಿ ಪರಿಗಣಿಸುವ ಸಾಧ್ಯತೆ ತೆರೆದುಕೊಳ್ಳುವಂತೆ ಮಾಡಿದ್ದಾಳೆ ಈ ಹುಡುಗಿ. ಖಂಡಿತಾ ಇದು ಮೆಡಲ್ ಪಡೆದಷ್ಟೇ ದೊಡ್ಡ ಸಾಧನೆ ಎಂದಿದ್ದಾರೆ ಕವಿರಾಜ್.

  Lyricist Kaviraj appreciate to golf player Aditi Ashok

  ಹಾಕಿ ತಂಡದ ಕುರಿತು ಜಾತಿ ನಿಂದನೆಗೆ ಕವಿರಾಜ್ ಖಂಡನೆ

  ಟೋಕಿಯೊ ಒಲಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಭಾರತೀಯ ಮಹಿಳಾ ತಂಡದಲ್ಲಿ ದಲಿತರೇ ಹೆಚ್ಚಿದ್ದ ಕಾರಣ ಸೋಲು ಕಾಣಬೇಕಾಯಿತು ಎಂದು ಕೆಲವರು ಟೀಕೆ ವ್ಯಕ್ತಪಡಿಸಿದರು ಎನ್ನುವ ಘಟನೆ ವರದಿಯಾಗಿತ್ತು. ಈ ಹೇಳಿಕೆಯನ್ನು ಖಂಡಿಸಿರುವ ಕವಿರಾಜ್ 'ಇಂತಹಾ ಹೀನ ಮನಸ್ಥಿತಿಗಳ ಹಿಂದಿರುವ ಶ್ರೇಷ್ಠತೆಯ ವ್ಯಸನದ ಮನೋರೋಗಿಗಳೇ ನಿಜವಾದ ದೇಶದ್ರೋಹಿಗಳು' ಎಂದು ಆಕ್ರೋಶಭರಿತವಾಗಿ ಪೋಸ್ಟ್ ಹಾಕಿದ್ದಾರೆ.

  ದಲಿತರೇ ಹೆಚ್ಚು ಇದ್ದುದ್ದರಿಂದ ಒಲಿಂಪಿಕ್ಸ್ ಸೆಮಿಫೈನಲ್ ಸ್ಪರ್ಧೆಯಲ್ಲಿ ಭಾರತ ಮಹಿಳಾ ಹಾಕಿ ತಂಡಕ್ಕೆ ಸೋಲಾಯಿತೆಂದು ಹರಿದ್ವಾರದಲ್ಲಿ ಪ್ರಮುಖ ಆಟಗಾತಿ ವಂದನಾ ಕಟಾರಿಯ ಮನೆಯ ಮುಂದೆ ಮೇಲ್ವರ್ಗದವರು ಎನಿಸಿಕೊಂಡವರು ಕಿಡಿಗೇಡಿ ವರ್ತನೆ ತೋರಿದ್ದಾರೆಂದು ವರದಿಯಾಗಿದೆ.

  ನಮ್ಮಲ್ಲಿ ಆಗಾಗ ಹೀಗೆ ತಮ್ಮ ಕೀಳುತನ ಪ್ರದರ್ಶಿಸುವ ಅರಿವುಗೇಡಿಗಳಿಗೆ ಇತಿಹಾಸದ ಕಿಂಚಿತ್ತೂ ಜ್ಞಾನವೇ ಇರುವುದಿಲ್ಲ. ಕಡೇ ಪಕ್ಷ ಪುರುಷರ ಹಾಕಿಯಲ್ಲಿ ಭಾರತ ಒಂದು ಕಾಲದ ಸಾರ್ವಭೌಮ. ಎಂಟು ಒಲಿಂಪಿಕ್ ಸ್ವರ್ಣ ಪದಕ ವಿಜೇತ ದೇಶ. ಆನಂತರವು ಕೂಡಾ ದೊಡ್ಡ ಸಾಧನೆ ಮಾಡದಿದ್ದರು ಹಾಕಿ ಜಗತ್ತಿನ ಒಂದು ಪ್ರಮುಖ ತಂಡವಾಗಿ on a given day ಯಾರನ್ನು ಬೇಕಾದರೂ ಸೋಲಿಸುವ ತಂಡವೇ. ಅವರು ಸೆಮಿಫೈನಲ್ ತಲುಪಿದ್ದು ಉತ್ತಮ ಸಾಧನೆಯೇ ಆದರೂ ತೀರಾ ಅನಿರೀಕ್ಷಿತವೇನಲ್ಲ. ಆದರೆ ಮಹಿಳಾ ಹಾಕಿಯಲ್ಲಿ ಭಾರತ ಈ ತನಕ ಯಾವತ್ತೂ ಲೆಕ್ಕಕ್ಕಿಲ್ಲದ ತಂಡ. ಆದರೆ ಎಲ್ಲರ ನಿರೀಕ್ಷೆಗೂ ಮೀರಿ ಒಲಿಂಪಿಕ್ ಸೆಮಿಫೈನಲ್ ತಲುಪಿದ್ದು ನಿಜವಾದ ಐತಿಹಾಸಿಕ ಸಾಧನೆ. ಈ ದುರುಳರ ಧಾಟಿಯಲ್ಲೇ ಉತ್ತರ ಕೊಡಬೇಕೆಂದರೆ ಹೆಚ್ಚು ದಲಿತ ಹುಡುಗಿಯರು ಇದ್ದುದ್ದರಿಂದಲೇ ಮೊತ್ತ ಮೊದಲ ಬಾರಿಗೆ ಇಂಥದ್ದೊಂದು ಸಾಧನೆ ಸಾಧ್ಯವಾಗಿದೆ ಅನ್ನಬಹುದಲ್ಲವೇ?.

  ಆದರೂ ನಮ್ಮ ನಾರಿ ಶಕ್ತಿಯ ಪ್ರಚಂಡ ಸಾಧನೆಗೆ ಜಾತಿಯ ಸಂಕುಚಿತ ಆವರಣ ಹಾಕುವುದು ಬೇಡ‌ ಕೀಳು ಎನ್ನುವುದು ಜಾತಿಯಿಂದಲ್ಲ, ಮನಸ್ಥಿತಿಗಳಿಂದ...ಇವರೇ, ಇಂತಹಾ ಹೀನ ಮನಸ್ಥಿತಿಗಳ ಹಿಂದಿರುವ ಶ್ರೇಷ್ಠತೆಯ ವ್ಯಸನದ ಮನೋರೋಗಿಗಳೇ ನಿಜವಾದ ದೇಶದ್ರೋಹಿಗಳು. ಥೂ.. ಧಿಕ್ಕಾರವಿರಲಿ ನಿಮ್ಮ ಕೊಳಕು ಮನಸ್ಥಿತಿಗೆ ಎಂದು ಕವಿರಾಜ್ ಖಂಡಿಸಿದ್ದಾರೆ.

  English summary
  Kannada Lyricist Kaviraj appreciate to golf player Aditi Ashok performance in tokyo olympics 2020.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X