ಮತ್ತೊಮ್ಮೆ ಶಕ್ತಿ ಪ್ರದರ್ಶನಕ್ಕೆ ಸಜ್ಜಾದ ಮಾಲಾಶ್ರೀ
ಕೆ ಮಂಜು ನಿರ್ಮಾಣದ ಚಿತ್ರದಲ್ಲಿ ಮಾಲಾಶ್ರೀ ಮತ್ತೆ ಬಣ್ಣ ಹಚ್ಚಲಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರವನ್ನು ಆನಂದ್ ಪಿ ರಾಜು ನಿರ್ದೇಶಿಸಲಿದ್ದಾರೆ. ಆಕ್ಷನ್ ಚಿತ್ರಗಳಿಗೆ ಹೆಸರಾದ ಆನಂದ್ ಪಿ ರಾಜು ಅವರ 23 ನೇ ಚಿತ್ರ ಇದಾಗಿದ್ದು ಇದರಲ್ಲಿ ಮಾಲಾಶ್ರೀ ಡಿಸಿ (ಜಿಲ್ಲಾಧಿಕಾರಿ) ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಮತ್ತೊಬ್ಬ ನಾಯಕಿಯೂ ಇರಲಿದ್ದು ಅವರು ಯಾರು ಎಂಬುದನ್ನು ಇನ್ನೂ ಗೌಪ್ಯವಾಗಿಯೇ ಇಡಲಾಗಿದೆ.
ಈ ಮೊದಲು, ಕೆ ಮಂಜು ನಿರ್ಮಾಣ ಹಾಗೂ ಇಮ್ರಾನ್ ಸರ್ದಾರಿಯಾ ನಿರ್ದೇಶನದ 'ಡವ್ ಮಾಸ್ಟರ್ಸ್' ಚಿತ್ರದಲ್ಲಿ ಮಾಲಾಶ್ರೀ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ 'ಡವ್ ಮಾಸ್ಟರ್ಸ್' ಚಿತ್ರದಲ್ಲಿ ಮೂವರಲ್ಲೊಬ್ಬ ನಾಯಕರಾಗಿದ್ದ ದಿಗಂತ್ ಚಿತ್ರದಿಂದ ಹೊರಹೋದ ಕಾರಣ ಆ ಚಿತ್ರದ ನಿರ್ಮಾಣ ಸ್ವಲ್ಪ ಮುಂದಕ್ಕೆ ಹೋಗಿದೆ. ಹೀಗಾಗಿ ಇದ್ದ ಮಾಲಾಶ್ರೀ ಕಾಲದ ಶೀಟ್ ಅನ್ನು ಈ ಚಿತ್ರಕ್ಕೆ ನಿರ್ಮಾಪಕ ಕೆ ಮಂಜು ಬಳಸಿಕೊಂಡಿದ್ದಾರೆ.
ಇನ್ನು ಮಾಲಾಶ್ರೀ ಅಭಿನಯದ ಹೆಸರಿಡದ ಈ ರಫ್ ಅಂಡ್ ಟಫ್ ಚಿತ್ರವು ಶಿವಮೊಗ್ಗ ಹಾಗೂ ಸಮಿಪದ ಹಳ್ಳಿಯೊಂದರಲ್ಲಿ ನಡೆಯಲಿದೆ. ಜಗದೀಶ್ ವಾಲಿ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಸಂಗೀತ ನಿರ್ದೇಶಕರು ಇನ್ನಷ್ಟೇ ಆಯ್ಕೆಯಾಗಬೇಕಿದೆ. ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಎಂ ಎಸ್ ರಮೇಶ್ ಮಾಡಲಿದ್ದು ನವೆಂಬರ್ ನಂತರ ಈ ಚಿತ್ರಕ್ಕೆ ಮುಹೂರ್ತ ನಡೆಯಲಿದೆ. ಒಟ್ಟಿನಲ್ಲಿ ಮಾಲಾಶ್ರೀ ಅಭಿಮಾನಿಗಳಿಗೆ ಮತ್ತೊಮ್ಮೆ ಸಂತೋಷದ ಸುದ್ದಿ ಸಿಕ್ಕಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications












