»   » ಮಂಡ್ಯ ಸಂಸದೆ ರಮ್ಯಾ ಚಿತ್ರಗಳ ಮುಂದಿನ ಕಥೆ ಏನು?

ಮಂಡ್ಯ ಸಂಸದೆ ರಮ್ಯಾ ಚಿತ್ರಗಳ ಮುಂದಿನ ಕಥೆ ಏನು?

By: ಉದಯರವಿ
Subscribe to Filmibeat Kannada

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಈಗ ಸಂಸದೆ. ತಮ್ಮ ಚೊಚ್ಚಲ ಚುನಾವಣೆಯಲ್ಲೇ ಮಂಡ್ಯ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ವಿರುದ್ಧ 67,611 ಮತಗಳ ಅಂತರದಿಂದ ರಮ್ಯಾ ಗೆಲವು ಸಾಧಿಸಿದ್ದಾರೆ.

ಅವರು ಈಗ ದೆಹಲಿ ಸಂಸತ್ ಭವನಕ್ಕೆ ಸ್ಥಳಾಂತರವಾದರೆ ಅವರ ಮುಂದಿನ ಚಿತ್ರಗಳ ಗತಿ ಏನು? ಎಂಬ ಅಳುಕು ಅವರ ಅಭಿಮಾನಿಗಳು ಹಾಗೂ ಕನ್ನಡ ಚಿತ್ರೋದ್ಯಮವನ್ನು ಕಾಡುತ್ತಿದೆ. ಸದ್ಯಕ್ಕೆ ರಮ್ಯಾ ಕೈಯಲ್ಲಿ ಬಿಡಗಡೆ ಕಾಣದಿರುವ ಹಾಗೂ ನಟಿಸುತ್ತಿರುವ ತಮಿಳಿನ ಒಂದು ಚಿತ್ರವೂ ಸೇರಿದರೆ ಆರು ಚಿತ್ರಗಳಿವೆ.

ತಮಿಳಿನ ಕಾದಲ್ ಟು ಕಲ್ಯಾಣಂ ಚಿತ್ರ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಲಿದೆ. ಆದರೆ ಡೇಟ್ ಇನ್ನೂ ಪಕ್ಕಾ ಆಗಿಲ್ಲ. ಸಂಸದೆಯಾಗಿರುವ ಬಿಡುಗಡೆಯಾಗಲಿರುವ ರಮ್ಯಾ ಅಭಿನಯದ ಚೊಚ್ಚಲ ಚಿತ್ರ ಎಂಬ ಪಾತ್ರಕ್ಕೂ ಇದು ಪಾತ್ರವಾಗಲಿದೆ. ಚಿತ್ರದ ನಿರ್ಮಾಪಕರು ಇದರ ಲಾಭ ಬಿಡುವುದುಂಟೇ?

ಕೋಡಿ ರಾಮಕೃಷ್ಣ ಜೊತೆಗಿನ ಚಿತ್ರ

ಕೋಡಿ ರಾಮಕೃಷ್ಣ ನಿರ್ದೇಶನದಲ್ಲಿ ಇನ್ನೂ ಶೀರ್ಷಿಕೆ ಇಡದ ಚಿತ್ರದಲ್ಲೂ ರಮ್ಯಾ ಅಭಿನಯಿಸಲಿದ್ದಾರೆ. ಆದರೆ ಈ ಚಿತ್ರಕ್ಕೆ ಇನ್ನೂ ಟೈಟಲ್ಲೇ ಇಟ್ಟಿಲ್ಲ ಎಂದರೆ ಇನ್ನು ಕುಲಾವಿ ಎಲ್ಲಿಂದ ಬಂತು? ಮುಂದಿನ ಕಥೆ ಏನಾಗಬಹುದು ಎಂಬ ಊಹೆ ನಿಮಗೇ ಬಿಟ್ಟಿದ್ದು.

ಭಾರಿ ನಿರೀಕ್ಷೆ ಮೂಡಿಸಿರುವ ದಿಲ್ ಕಾ ರಾಜಾ

ಇನ್ನು ಡೈನಮಿಕ್ ಪ್ರಿನ್ಸ್ ಎಂದೇ ಖ್ಯಾತನಾಗಿರುವ ಪ್ರಜ್ವಲ್ ದೇವರಾಜ್ ಜೊತೆಗಿನ 'ದಿಲ್ ಕಾ ರಾಜಾ' ಚಿತ್ರದಲ್ಲೂ ರಮ್ಯಾ ಅಭಿನಯಿಸಿದ್ದಾರೆ. ಈ ಚಿತ್ರದ ಬಗ್ಗೆಯೂ ಸಾಕಷ್ಟು ನಿರೀಕ್ಷೆಗಳಿವೆ. ಸೋಮನಾಥ್‌ ಪಾಟೀಲ್‌ ಆಕ್ಷನ್ ಕಟ್ ಹೇಳಿ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಈ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿರುವ ಕಾರಣ ಬಿಡುಗಡೆಯಂತೂ ಖಂಡಿತ ಆಗಿಯೇ ಆಗುತ್ತದೆ.

ನೀರ್ ದೋಸೆ ಕಥೆ ಏನಾಗುತ್ತದೋ ಏನೋ

ರಮ್ಯಾ ಅಭಿನಯಿಸುತ್ತಿರುವ ಇನ್ನೊಂದು ಚಿತ್ರ ನೀರ್ ದೋಸೆ. 'ಸಿದ್ಲಿಂಗು' ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್ ಅವರ ಮತ್ತೊಂದು ಚಿತ್ರವಿದು. ರಮ್ಯಾ ಈ ಚಿತ್ರದಲ್ಲಿ ಅಭಿನಯಿಸುತ್ತಾರೋ ಇಲ್ಲವೋ ಎಂಬ ಬಗ್ಗೆ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದ್ದಂತಹ ಚಿತ್ರ. ಕಡೆಗೂ ಈ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಜೊತೆ ರಮ್ಯಾ ಅಭಿನಯಿಸುವ ಮೂಲಕ ಎಲ್ಲಾ ವಿವಾದಗಳಿಗೆ ಅಂತ್ಯ ಹಾಡಿದರು. ಈಗ ರಮ್ಯಾ ಸಂಸದೆಯಾಗಿರುವ ಕಾರಣ ಮುಂದೇನಾಗುತ್ತದೋ ಏನೋ ಎಂಬ ಒಂದು ಸಣ್ಣ ಅಳುಕು ಇದ್ದೇ ಇದೆ.

ಶಿವಣ್ಣ ಜೊತೆಗಿನ ಆರ್ಯನ್ ಕಥೆ ಏನಾಗಲಿದೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ರಮ್ಯಾ ಅಭಿನಯಿಸಲಿರುವ ಮತ್ತೊಂದು ಪ್ರಾಜೆಕ್ಟ್ 'ಆರ್ಯನ್'. ಡಿ.ರಾಜೇಂದ್ರ ಬಾಬು ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ಶರತ್ ಬಾಬು, ಬುಲೆಟ್ ಪ್ರಕಾಶ್ ಮುಂತಾದವರಿದ್ದಾರೆ. ಈ ಚಿತ್ರದ ಮುಂದಿನ ಕಥೆ ಏನಾಗಲಿದೆ ಎಂಬ ಕುತೂಹಲ ಅತ್ತ ಶಿವಣ್ಣ ಇತ್ತ ರಮ್ಯಾ ಅಭಿಮಾನಿಗಳಲ್ಲಿ ಮನೆಮಾಡಿದೆ.

ದುನಿಯಾ ವಿಜಯ್ ಜೊತೆಗಿನ 'ಜಾನಿ'ಗೆ ಟೂ

'ಜಾನಿ ಮೇರೆ ನಾಮ್ ಪ್ರೀತಿ ಮೇರೆ ಕಾಮ್' ಚಿತ್ರದಲ್ಲಿ ದುನಿಯಾ ವಿಜಯ್ ಜೊತೆ ರಮ್ಯಾ ಅಭಿನಯಿಸಿದ್ದರು. ದುನಿಯಾ ವಿಜಯ್ ಹಾಗೂ ರಮ್ಯಾ ಅಭಿನಯದ ಜಾನಿ ಚಿತ್ರಕ್ಕೆ ಸಖತ್ ರೆಸ್ಪಾನ್ಸ್ ಬಂದ ಹಿನ್ನೆಲೆಯಲ್ಲಿ ಪ್ರೀತಂ ಗುಬ್ಬಿ ಭಾಗ ಎರಡಕ್ಕೆ ಕೈಹಾಕಿದ್ದರು. ಈ ಚಿತ್ರ ಇನ್ನೂ ನಿರ್ಮಾಣ ಹಂತಕ್ಕೂ ಹಿಂದಿರುವ ಕಾರಣ 'ಜಾನಿ 2' ಚಿತ್ರ ಸೆಟ್ಟೇರುವುದು ತುಂಬಾ ದೂರದ ಮಾತು.

ಡಬ್ಬದಲ್ಲೇ ಕೊಳೆಯುತ್ತಿರುವ ಚಿತ್ರ

ಹಾಗೆಯೇ ಸುದೀರ್ಘ ಸಮಯದಿಂದ ಡಬ್ಬದಲ್ಲೇ ಕುಳಿತಿರುವ 'ಭೀಮೂಸ್ ಬ್ಯಾಂಗ್ ಬ್ಯಾಂಗ್' ಚಿತ್ರವೂ ಸದ್ಯಕ್ಕೆ ಬಿಡುಗಡೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಈ ಚಿತ್ರ ನಾನಾ ಆರ್ಥಿಕ ಸಂಕಷ್ಟಗಳಿಗೆ ಸಿಲುಕಿ ಡಬದಲ್ಲೇ ಕೊಳೆಯುತ್ತಿದೆ. ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಈ ಚಿತ್ರದ ನಾಯಕ ನಟ ಉಪೇಂದ್ರ.

English summary
A newly elected Member of Parliament from Mandya constituency Multi-lingual actress Ramya, making her electoral debut, trounced JDS' C S Puttaraju in Mandya by a margin of 67,611 votes. What about her next projects in Kannada? Is her next projects shrouded in mystery?
Please Wait while comments are loading...