"ಜೀವನ ಅದೆಷ್ಟೇ ಫುಲ್‌ಸ್ಟಾಪ್ ಹಾಕಲಿ,ನಾನು ಒಪ್ಪಿಕೊಳ್ಳಲ್ಲ.. ಅಲ್ಲಿಂದ್ಲೇ ಹೊಸ ವಾಕ್ಯ ಬರೀತಿನಿ"–ನಟಿ ಮೇಘನಾ ರಾಜ್
ಕನ್ನಡ ಚಿತ್ರರಂಗ ಹಿರಿಯ ಕಲಾವಿದ ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯ್ ಅವರ ಪುತ್ರಿ ಮೇಘನಾ ರಾಜ್. ಪತಿ ಚಿರಂಜೀವಿ ಸರ್ಜಾ ಅಗಲಿಕೆ ಬಳಿಕ ಮೇಘನಾ ರಾಜ್ ಮುಂದಿನ ನಡೆಯನ್ನು ಅವರ ಅಭಿಮಾನಿಗಳು ಕುತೂಹಲದಿಂದ ನೋಡುತ್ತಿದ್ದರು. ಪತಿ ಅಗಲಿದ ನೋವು, ಪುತ್ರ ರಾಯನ್ ಸರ್ಜಾ ಜವಾಬ್ದಾರಿ, ಸಿನಿಮಾ ಹಾದಿ ಎಲ್ಲವನ್ನೂ ಹೇಗೇ ನಿಭಾಯಿಸುತ್ತಾರೆ ಅನ್ನೋ? ಪ್ರಶ್ನೆ ಎದ್ದಿತ್ತು.
ಇದೇ ವೇಳೆ ಮೇಘನಾ ರಾಜ್ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡುವುದಕ್ಕೆ ನಿರ್ಧರಿಸಿದ್ದರು. ಹೊಸ ಸಿನಿಮಾ 'ತತ್ಸಮ ತದ್ಬವ' ಇತ್ತೀಚೆಗೆ ಘೋಷಣೆಯಾಗಿದೆ. ಚುರುಕಾಗಿ ಚಿತ್ರದ ಶೂಟಿಂಗ್ ಕೂಡ ನಡೆಯುತ್ತಿದೆ. ಈ ವೇಳೆ ತಮ್ಮ ಬದುಕಿನ ಹಾದಿಯನ್ನು ಮೆಲುಕು ಹಾಕಿದ್ದಾರೆ. ನಟನೆ ಮೇಲಿನ ಆಸಕ್ತಿ, ಚಿರಂಜೀವಿ ಸರ್ಜಾ ಜೊತೆ ಮದುವೆ, ಅಗಲಿಕೆ ನಂತರದ ಜೀವನ, ಪುತ್ರ ರಾಯನ್ ಸರ್ಜಾ ಬಗ್ಗೆ ಮನಬಿಚ್ಚಿದ್ದಾರೆ. ಅದರ ಝಲಕ್ ಇಲ್ಲಿದೆ.

"ನಮ್ಮಿಬ್ಬರಿಗೂ ಲವ್ ಅಟ್ ಫಸ್ಟ್ ಸೈಟ್"
ಮೇಘನಾ ರಾಜ್‌ಗೆ ಸಿನಿಮಾರಂಗ ಹೊಸತೇನಲ್ಲ. ತಂದೆ-ತಾಯಿ ಇಬ್ಬರೂ ಸಿನಿಮಾ ಕ್ಷೇತ್ರದಲ್ಲೇ ಇದ್ದಿದ್ದರಿಂದ ಚಿತ್ರರಂಗ ಹೊಸತಲ್ಲ. ಅಲ್ಲದೆ ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. "ನಾನು ನಟನೆ ಶುರು ಮಾಡಿದ್ದು ನನ್ನ 17ನೇ ವಯಸ್ಸಿಗೆ. ನನ್ನ ತಂದೆ ತಾಯಿ ಶೂಟಿಂಗ್‌ಗೆ ಹೋಗು ನೋಡುತ್ತಿದೆ. ಅವರು ಆಕ್ಟ್ ಮಾಡುವುದನ್ನು ನೋಡುತ್ತಿದೆ. ಎಲ್ಲೋ ಒಂದು ಕಡೆ ಚಿಕ್ಕದೊಂದು ಆಸೆ ಬೆಳೀತಾ ಬಂತು. ಮೊದಲ ದಿನದಿಂದಲೇ ಸಿನಿಮಾ ಮೇಲೆ ಪ್ರೀತಿ ಬಂತು. ಸಿನಿಮಾ ನನಗೆ ಎಲ್ಲವೂ ಹೌದು. ನನಗೆ ಪ್ರೀತಿ ಎರಡು ರೂಪದಲ್ಲಿ ಬಂತು. ಒಂದು ಸಿನಿಮಾ. ಇನ್ನೊಂದು ಚಿರು. ಸಿನಿಮಾ ನನಗೆ ಒಂದು ಎಮೋಷನ್. ಹಾಗೇ ಚಿರು ಇನ್ನೊಂದು ಎಮೋಷನ್." ಎಂದಿದ್ದಾರೆ ಮೇಘನಾ ರಾಜ್.
ಚಿರು ಅಗಲಿದ ಬಳಿಕ ಮೇಘನಾ ರಾಜ್‌ಗೆ ಬದುಕಾಗಿದ್ದು ಪುತ್ರ ರಾಯನ್. ಮಗನ ಲಾಲನೆ ಪಾಲನೆಯಲ್ಲಿಯೇ ಖುಷಿಯನ್ನು ಕಾಣುತ್ತಿದ್ದರು."ಇಬ್ಬರಿಗೆ ಕೂಡ ಲವ್ ಅಟ್ ಫಸ್ಟ್ ಸೈಟ್."ಅದಾದ ಬಳಿಕ 2018ನಲ್ಲಿ ನಮ್ಮ ಮದುವೆ ಆಯ್ತು. ಒಂದು ದಿನ ಎಲ್ಲವೂ ಬದಲಾಗಿ ಹೋಯ್ತು. 2020, ಆ ವರ್ಷ ನನಗೆ ಪೂರ್ಣ ವಿರಾಮ ಇಟ್ಟು ಬಿಟ್ಟಿತ್ತು. ಆದಾದ ನಂತರ ನನಗೆ ಮತ್ತೆ ಜೀವನ ಮಾಡಬೇಕು ಅನ್ನೋ ಒಂದು ಆಸಕ್ತಿ ಬಂದಿದ್ದು ರಾಯನ್‌ನಿಂದ. ರಾಯನ್ ಹುಟ್ಟಿ ಆದ ಮೇಲೆ ಎಲ್ಲವೂ ಅವನೇ." ಎನ್ನುತ್ತಾರೆ ಮೇಘನಾ ರಾಜ್.
"ಸಿನಿಮಾ ಬೇಡ.. ರಾಯನ್‌ಗೆ ತಾಯಿಯಾಗಿರೋಣ ಅಂತಿದ್ದೆ"
"ನಾನು ಒಂದು ಗಟ್ಟಿಯಾದ ನಿರ್ಧಾರ ತೆಗೆದುಕೊಂಡಿದ್ದೆ. ಸಿನಿಮಾ ಬೇಡ ನನಗೆ, ರಾಯನ್‌ಗೆ ಒಬ್ಬ ತಾಯಿಯಾಗಿ ಇದ್ದು ಬಿಡೋಣ ಅಂತಿದ್ದೆ. ಅವನಲ್ಲಿ ನನ್ನ ಭವಿಷ್ಯವನ್ನು ಕಾಣುತ್ತಿದೆ. ಹಾಗೇ ಇರೋದು ಅಂತಾನೂ ನಾನು ರೆಡಿಯಾಗಿದ್ದೆ. ವಿಧಿ ಒಂದು ರೀತಿ ತಂದೆ ತಾಯಿ ಎರಡೂ ನೀನೇ ಆಗು. ನಿನ್ನಲ್ಲಿ ಆ ಪವರ್ ಇದೆ ಅಂತ ಈ ಸಂದರ್ಭದಲ್ಲಿ ನನ್ನನ್ನು ಬಿಟ್ಟಿರೋದು ಅಂತ ನನಗೆ ಅನಿಸುತ್ತೆ." ಅನ್ನೋದು ಮೇಘನಾ ರಾಜ್ ಅಭಿಪ್ರಾಯ.

"ಚಿರು ನನಗೆ ಕೊಟ್ಟಿರೋ ಇನ್ನೊಂದು ಆಸ್ತಿ ಅಂದ್ರೆ, ನನ್ನ ಫ್ರೆಂಡ್ಸ್. ನೀನು ಒಂಟಿಯಾಗಿ ನಿಂತಿರುತ್ತೀಯಾ. ಆದರೆ, ನಿನ್ನ ಹಿಂದೆ ನನ್ನ ಸ್ನೇಹಿತರು ಯಾವಾಗಲೂ ನಿಂತಿರುತ್ತಾರೆ. ಹಿಂತಿರುಗಿ ನೋಡಿ ನಿನಗೆ ಸಪೋರ್ಟ್ ಸಿಸ್ಟಮ್ ಇರುತ್ತೆ ಅಂತ ಯಾವಾಗಲೂ ಹೇಳುತ್ತಿದ್ದರು. ನನಗೆ ಇನ್ನೇನು ಬೇಡ ಇದಿಷ್ಟು ಸಾಕು ಅನ್ನುವ ಒಂದು ಟೈಮ್‌ನಲ್ಲಿ ಸ್ಪಾರ್ಕ್ ತರ ಬಂದಿದ್ದು ನನ್ನ ಸ್ನೇಹಿತ ಪನ್ನ. ನಿನಗೋಸ್ಕರ ನೀನು ಏನು ಮಾಡಿಕೊಳ್ತೀಯಾ? ಅಂತ ಹೇಳಿದಾಗ, ನನ್ನ ಬಳಿ ಉತ್ತರ ಇರಲಿಲ್ಲ. ಪನ್ನ ಒಂದು ಪ್ರೊಡಕ್ಷನ್ ಹೌಸ್ ಶುರು ಮಾಡುತ್ತಿದ್ದಾನೆ ಅಂತ ಗೊತ್ತಿತ್ತು. ಒಂದು ಕಥೆ ಇದೆ ಕೇಳಿಸಿಕೋ ಅಂದಾಗ, ಒಂದು ಅಭಿಪ್ರಾಯ ಕೇಳುವುದಕ್ಕೆ ಹೇಳಿದ್ದಾನೆ ಅಂದುಕೊಂಡೆ. ವಿಶಾಲ್ ಹೇಳುತ್ತಿದ್ದಾಗ, ನಾನು ಆ ಮುಖ್ಯ ಪಾತ್ರವನ್ನು ತಲೆಯಲ್ಲಿ ಇಟ್ಟುಕೊಂಡು ಕಥೆಯನ್ನು ಹೇಳುತ್ತಿದೆ." ಚಿರು ಸ್ನೇಹಿತರು ಹಾಗೂ ಹೊಸ ಸಿನಿಮಾ ಬಗ್ಗೆ ಮಾತಾಡಿದ್ದಾರೆ.
"ಜೀವನ ಅದೆಷ್ಟೇ ಫುಲ್‌ಸ್ಟಾಪ್ ಹಾಕಿದ್ರೂ ಒಪ್ಪಿಕೊಳ್ಳಲ್ಲ"
"ಅದಾದ ಮೇಲೆ ಪನ್ನ ಫೋನ್ ಮಾಡಿ ಕೇಳಿದ. ಕಥೆ ಕೇಳಿದ್ಯಾ? ಏನು ಅನಿಸ್ತು? ಅಂದ. ಹೇಳಿದೆ ತುಂಬಾ ಚೆನ್ನಾಗಿದೆ. ನನಗೆ ಇಷ್ಟ ಆಯ್ತು ಅಂದೆ. ಆಗ ಅವನು ನೀನು ಈ ಸಿನಿಮಾ ಮಾಡುತ್ತೀಯಾ? ಅಂತ ಕೇಳಿದ. ಈ ಚಾಲೆಂಜ್ ಅನ್ನು ನಾನು ಒಪ್ಪಿಕೊಳ್ಳದೆ ಇದ್ದರೆ ನಾನು ಸೋತ ಹಾಗೆ. ಹೆಣ್ಣಿನಲ್ಲಿ ಮಲ್ಟಿ ಟಾಸ್ಕ್ ಮಾಡುವ ಪವರ್ ಇದೆ." ತನ್ನ ಮುಂದಿರುವ ಸವಾಲುಗಳನ್ನು ಎದುರಿಸಲು ನಿರ್ಧರಿಸಿದ್ದಾರೆ.
ತಮ್ಮ ಮುಂದೆ ಇನ್ನು ಏನೇ ಕಷ್ಟಗಳು ಎದುರಾದರೂ, ಅದೆಷ್ಟೇ ಹಿನ್ನಡೆಯಾದರೂ ಅದನ್ನು ಎದುರಿಸಿತ್ತೇ ಅನ್ನೋ ಧೃಡ ನಿರ್ಧಾರಕ್ಕೆ ಬಂದಿದ್ದಾರೆ.
"ಜೀವನ ಅದೆಷ್ಟೇ ಫುಲ್ ಸ್ಟಾಪ್ ಹಾಕೋಕೆ ಬರಲಿ.. ನಾನಂತೂ ಅದನ್ನು ಒಪ್ಪಿಕೊಳ್ಳಲ್ಲ. ಪ್ರತಿ ಬಾರಿ ಫುಲ್‌ಸ್ಟಾಪ್ ಹಾಕಿದಾಗ, ಅಲ್ಲೊಂದು ಹೊಸ ವಾಕ್ಯ ಬರೋಕೆ ಶುರು ಮಾಡುತ್ತೇನೆ. ತತ್ಸಮ ತದ್ಭವ ನನಗೆ ಫುಲ್‌ಸ್ಟಾಪ್ ಹಾಕಿದ ಬಳಿಕ ಶುರುವಾದ ಒಂದು ಹೊಸ ವಾಕ್ಯ." ಎನ್ನುತ್ತಾರೆ ಮೇಘನಾ ರಾಜ್.
More from Filmibeat