twitter
    For Quick Alerts
    ALLOW NOTIFICATIONS  
    For Daily Alerts

    ಮರೆಯಾದ ಹಿರಿಯ ಚೇತನ ರಾಮನಾಥನ್ ನೆನಪು

    By Rajendra
    |

    Filmmaker S Ramanathan
    ಕನ್ನಡ ಚಿತ್ರಗಳ ಹಿರಿಯ ನಿರ್ಮಾಪಕ, ನಿರ್ದೇಶಕ ಎಸ್ ರಾಮನಾಥನ್ (83) ಅವರು ಇನ್ನು ಬರಿ ನೆನಪಷ್ಟೇ. ಕನ್ನಡದ ಹಿರಿಯ ನಟ ಎಸ್. ಶಿವರಾಂ ಅವರ ಹಿರಿಯ ಸಹೋದರ. ಅನಾರೋಗ್ಯದಿಂದ ಬಳಲುತ್ತಿದ್ದ ಈ ಹಿರಿಯ ಚೇತನ ಬುಧವಾರ (ಜ.9) ಚೆನ್ನೈನಲ್ಲಿ ಅಂತಿಮ ವಿದಾಯ ಹೇಳಿದ್ದಾರೆ.

    ಕಪ್ಪು ಬಿಳುಪು ಚಿತ್ರಗಳ ಕಾಲದಲ್ಲಿ ಕನ್ನಡ ಚಿತ್ರಗಳಿಗೆ ವಿಶಿಷ್ಟ ಸ್ಥಾನಮಾನ ತಂದುಕೊಟ್ಟ ಖ್ಯಾತಿ ರಾಮನಾಥನ್ ಅವರಿಗೆ ಸಲ್ಲುತ್ತದೆ. ವರನಟ ಡಾ.ರಾಜ್ ಕುಮಾರ್ ಅವರ 'ನಾನೊಬ್ಬ ಕಳ್ಳ' ಹಾಗೂ 'ಹೃದಯ ಸಂಗಮ' ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಬಹಳ ಚೆನ್ನಾಗಿದೆ, ಡ್ರೈವರ್ ಹನುಮಂತು ಅವರ ನಿರ್ದೇಶನದ ಇನ್ನೆರಡು ಚಿತ್ರಗಳು.

    ಪುಟ್ಟಣ್ಣ ಕಣಗಾಲ್ ಅವರಿಗೆ 'ಗೆಜ್ಜೆಪೂಜೆ'ಯಂತಹ ವಿಭಿನ್ನ ಚಿತ್ರವನ್ನು ನಿರ್ದೇಶಿಸಲು ಅವಕಾಶ ಮಾಡಿಕೊಟ್ಟ ಖ್ಯಾತಿ ರಾಮನಾಥನ್ ಅವರಿಗೆ ಸಲ್ಲುತ್ತದೆ. 'ಮದ್ರಾಸ್ ಟು ಪಾಂಡಿಚೇರಿ' ಎಂಬ ಚಿತ್ರದ ಮೂಲಕ ತಮಿಳು ಚಿತ್ರ ನಿರ್ಮಾಣಕ್ಕೂ ರಾಮನಾಥನ್ ಕೈಹಾಕಿ ಯಶಸ್ವಿಯಾದರು.

    ಸೂಪರ್ ಸ್ಟಾರ್ ರಜನಿಕಾಂತ್ ಅವರ 'ಧರ್ಮ ದೊರೈ' ಚಿತ್ರವನ್ನು ನಿರ್ಮಿಸಿದರು. ಅವರ 'ಮದ್ರಾಸ್ ಟು ಪಾಂಡಿಚೇರಿ' ಚಿತ್ರ ಹಿಂದಿಗೆ 'ಬಾಂಬೆ ಟು ಗೋವಾ' ಎಂಬ ಹೆಸರಿನಲ್ಲಿ ರೀಮೇಕ್ ಆಗಿದೆ. ಆ ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಅಭಿನಯಿಸಿದ್ದಾರೆ.

    ಅಮಿತಾಬ್ ಅವರು ರಾಮನಾಥನ್ ಅವರ ಬಗ್ಗೆ ಮಾತನಾಡುತ್ತಾ, "ನನ್ನ ನಿರ್ದೇಶಕ ರಾಮನಾಥನ್ ಅವರು ಬಾಂಬೆ ಟು ಗೋವಾ, ಮಹಾನ್, ಗಿರಫ್ ತಾರ್, ಝಮಾನತ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರ ದಿಢೀರ್ ಕಣ್ಮರೆಯಿಂದ ನನಗೇನು ಹೇಳಬೇಕೋ ತೋಚುತ್ತಿಲ್ಲ..." ಎಂದು ಕಂಬನಿ ಮಿಡಿದಿದ್ದಾರೆ.

    ರಾಮನಾಥನ್ ನಿರ್ಮಿಸಿದ್ದ 'ಗಿರಫ್ ತಾರ್' ಚಿತ್ರದಲ್ಲಿ ಅಮಿತಾಬ್ ಜೊತೆ ರಜನಿಕಾಂತ್ ಹಾಗೂ ಕಮಲ್ ಹಾಸನ್ ಅವರು ಅಭಿನಯಿಸಿದ್ದಾರೆ. ಅವರ ನಿರ್ದೇಶನದ 'ಝಮಾನತ್' ಚಿತ್ರ ಬಿಡುಗಡೆಯಾಗಿಲ್ಲ. ರಾಮನಾಥ್ ಜೊತೆಗಿನ ಅಮಿತಾಬ್ ಅವರ ಕೊನೆಯ ಚಿತ್ರವಿದು. 'ಮಹಾನ್' ಚಿತ್ರದಲ್ಲಿ ಬಿಗ್ ಬಿ ತ್ರಿಪಾತ್ರಾಭಿನಯ ಮಾಡಿದ್ದಾರೆ.

    ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಅವರಿಗೆ ರಾಮನಾಥನ್ ಆತ್ಮೀಯರು. "ಅವರ ಕಣ್ಮರೆ ಭಾರತೀಯ ಚಿತ್ರೋದ್ಯಮಕ್ಕೆ ಅದರಲ್ಲೂ ಮುಖ್ಯವಾಗಿ ದಕ್ಷಿಣ ಚಿತ್ರರಂಗಕ್ಕೆ ತುಂಬಲಾರದ ನಷ್ಟ" ಎಂದು ದ್ವಾರಕೀಶ್ ಹೇಳಿದ್ದಾರೆ. ಚಿತ್ರರಂಗದಲ್ಲಿ ಅವರು "ಸರ್ ಜಿ" ಎಂದೇ ಚಿರಪರಿಚಿತರು.

    "ಮುಂಬೈನ ಅವರ ಶಾಲಿಮಾರ್ ಹೋಟೆಲ್ ದಕ್ಷಿಣದ ನಿರ್ಮಾಪಕರು, ನಿರ್ದೇಶಕರು ಹಾಗೂ ನಟರಿಗೆ ಆಶ್ರಯ ತಾಣವಾಗಿತ್ತು. ಅವರ ಬಳಿ ಚರ್ಚಿಸಲು, ಮಾತನಾಡಲು ಹೋದವರೆಲ್ಲಾ ಇದೇ ಹೋಟೆಲ್ ನಲ್ಲಿ ಉಳಿದುಕೊಳ್ಳುತ್ತಿದ್ದರು" ಎಂದು ದ್ವಾರಕೀಶ್ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.

    "ರಾಜ್ ಕುಮಾರ್, ವಿಷ್ಣುವರ್ಧನ್, ಪುಟ್ಟಣ್ಣ ಕಣಗಾಲ್ ಅವರಷ್ಟೇ ತೂಕದ ವ್ಯಕ್ತಿತ್ವ ರಾಮನಾಥನ್ ಅವರದು. ಕನ್ನಡ ಚಿತ್ರೋದ್ಯಮದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದರು. ಬಹಳಷ್ಟು ಮಂದಿಗೆ ಅವರು ಸ್ಫೂರ್ತಿಯಾಗಿದ್ದರು" ಎಂದು ನಿರ್ಮಾಪಕ ಸೂರಪ್ಪ ಬಾಬು ಹೇಳಿದ್ದಾರೆ.

    "ಕಳೆದ ಒಂದು ವಾರದಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಕಳೆದ ಎರಡು ದಿನಗಳ ಹಿಂದೆ ಚೇತರಿಸಿಕೊಂಡಿದ್ದರು. ಅವರನ್ನು ಮನೆಗೆ ಕರೆದೊಯ್ಯಲಾಯಿತು. ಸಂಗೀತ ಕೇಳುತ್ತಲೇ ಶಾಂತಯುತವಾಗಿ ಅವರು ಇಹಲೋಕವನ್ನು ತ್ಯಜಿಸಿದರು" ಎಂದು ಅವರ ಪುತ್ರ ಸುಧಿಷ್ ತಿಳಿಸಿದ್ದಾರೆ.

    ಗುರುವಾರ (ಜ.10) ಅವರ ಅಂತ್ಯಕ್ರಿಯೆಗಳು ಚೆನ್ನೈನಲ್ಲಿ ನೆರವೇರಲಿವೆ. ರಾಮನಾಥನ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಕಂಬನಿ ಮಿಡಿದಿದೆ. ಅವರಿಗೆ ಇಬ್ಬರು ಪುತ್ರಿಯರು ಹಾಗೂ ಒಬ್ಬ ಮಗ ಸುಧಿಷ್. ಗ್ರಾಫಿಕ್ ಕಾಂಪೋಸರ್ ಆಗಿ ಸುಧಿಷ್ ಚಿತ್ರರಂಗದಲ್ಲಿ ನೆಲೆಕಂಡುಕೊಂಡಿದ್ದಾರೆ. (ಏಜೆನ್ಸೀಸ್)

    English summary
    S Ramanathan, one of the popular filmmakers of bygone era, passed away on Wednesday (January 9) in Chennai. He was 83 and survived by two daughters and son Sudhish.
    Thursday, January 10, 2013, 15:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X