For Quick Alerts
  ALLOW NOTIFICATIONS  
  For Daily Alerts

  ಪೇಜಾವರ ಶ್ರೀ ಚಿಕನ್ ತಿನ್ನುವ ವಿಚಾರ: ಕ್ಷಮೆ ಕೇಳಿದ ನಾದಬ್ರಹ್ಮ ಹಂಸಲೇಖ

  |

  ನಾದ ಬ್ರಹ್ಮ, ಸಂಗೀತ ನಿರ್ದೇಶಕ ಹಂಸಲೇಖ ಇತ್ತೀಚೆಗೆ ಮೈಸೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಸಮಾನತೆ ಹಾಗೂ ಅಸ್ಪ್ರಶ್ಯತೆ ಬಗ್ಗೆ ಸಂದೇಶ ಸಾರುವ ವೇಳೆ ಪೇಜಾವರ ಶ್ರೀಗಳ ವಿಷಯವನ್ನು ಪ್ರಸ್ತಾಪಿಸಿದ್ದರು. "ಪೇಜಾವರ ಶ್ರೀಗಳು ದಲಿತರ ಮನೆಗೆ ಹೋದರು ಎಂದು ಸುದ್ದಿಯಾಗಿತ್ತು. ದಲಿತರ ಮನೆಗೆ ಹೋಗಿ ಪೇಜಾವರ ಶ್ರೀಗಳು ಅಲ್ಲಿ ಕುಳಿತಿದ್ದರಷ್ಟೆ. ಅವರು ಕೋಳಿ, ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ಅವರು ತಿನ್ನುತ್ತಿದ್ದರೇನು?" ಎಂದು ಹಂಸಲೇಖ ಪ್ರಶ್ನೆ ಮಾಡಿದ್ದರು. ಅಲ್ಲದೆ " ಬಿಳಿಗಿರಿ ರಂಗಯ್ಯ ಸೋಲಿಗರ ಮನೆಗೆ ಹೋಗಿ ಆ ಹೆಣ್ಣಿನೊಂದಿಗೆ ಸಂಸಾರ ಮಾಡುವುದರಲ್ಲಿ ಯಾವ ದೊಡ್ಡ ವಿಷಯವಿದೆ." ಎಂದಿದ್ದರು. ಇದೇ ವಿಷಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಒಳಪಟ್ಟಿತ್ತು.

  ಪೇಜಾವರ ಶ್ರೀ ಗಳ ಬಗ್ಗೆ ಹಂಸಲೇಖ ಹೇಳಿದ ಮಾತುಗಳಿಗೆ ಪರ ಹಾಗೂ ವಿರೋಧ ವ್ಯಕ್ತವಾಗುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ತನ್ನ ಹೇಳಿಕೆಯ ವಿರುದ್ಧ ಚರ್ಚೆಯಾಗುತ್ತಿದ್ದಂತೆ ನಾದಬ್ರಹ್ಮ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. "ನನಗೆ ಗೊತ್ತಿದೆ ಎಲ್ಲಾ ಮಾತುಗಳು ವೇದಿಕೆಗೆ ಅಲ್ಲ. ಅದು ಪ್ರಶಸ್ತಿ ಪುರಸ್ಕಾರ ಸಭೆ ಅದು. ಅಲ್ಲಿ ನುಡಿದರೆ ಮುತ್ತಿನ ಹಾರದಂತಿರಬೇಕಿತ್ತು. ನಾನು ಹಾಗೆಯೇ ಅಲಂಕರಿಸಬೇಕಿತ್ತು. ಅದು ತಪ್ಪು" ಎಂದು ರಾಜ್ಯದ ಜನರಲ್ಲಿ ಕ್ಷಮೆ ಕೋರಿದ್ದಾರೆ.

  'ಅಸ್ಪೃಶ್ಯತೆ ನಮ್ಮ ದೇಶಕ್ಕೆ ಅಂಟಿದ ಶಾಪ'

  ಅಸ್ಪೃಶ್ಯತೆ ನಮ್ಮ ದೇಶಕ್ಕೆ ಅಂಟಿದ ಶಾಪ. ಇದು ನನ್ನ ಮಾತಲ್ಲ. ಜಿಡ್ಡು ಕೃಷ್ಣಮೂರ್ತಿಗಳ ಸ್ಟೇಟ್ಮೆಂಟ್. ಈ ಅಸ್ಪೃಶ್ಯತೆಯ ಅನಿಷ್ಟವನ್ನು ತೊಡೆದು ಹಾಕುವುದಕ್ಕೆ ಪೇಜಾವರರಂತಹ ಎಲ್ಲಾ ಗುರು ಹಿರಿಯರು ಪ್ರಯತ್ನ ಸಂಧಾನಗಳನ್ನು ಮಾಡುತ್ತಲೇ ಇದ್ದಾರೆ. ಆ ಎಲ್ಲಾ ಪ್ರಯತ್ನ, ಸಂಧಾನಗಳ ಬಗ್ಗೆ ನನಗೆ ಅಪಾರವಾದ ಗೌರವವಿದೆ. ದಶಕಗಳ ಹಿಂದೆ ನಮ್ಮ ಕಲಾರಂಗದಲ್ಲೂ ಕೂಡ ಅಸ್ಪೃಶ್ಯತೆ ದಟ್ಟವಾಗಿತ್ತು. ಮನುಷ್ಯವಶಾತ್, ಅದು ಇಲ್ಲಿ ಕರಗಿ ಮಾಯವಾಗಿದೆ. ಭಾರತದಲ್ಲೂ ಕೂಡ ಅದು ಕರಗಿ ಮಾಯವಾಗುವ ದಿನವಿದೆ. ಈಗ ಭಾರತದಲ್ಲಿ ಅದು ನಿಧಾನವಾಗಿ ಸಂಭವಿಸುತ್ತಿದೆ. ಅದು ಶ್ರೀಘ್ರವಾಗಿ ಆಗಲಿ ಎಂದು ನಾನು ಹಾರೈಸುತ್ತೇನೆ" ಎಂದು ಹಂಸಲೇಖ ಹೇಳಿದ್ದಾರೆ.

  ನಾನು ಆಡಿದ ಕೆಲ ಮಾತು ನನ್ನ ಹೆಂಡತಿಗೆ ಹಿಡಿಸಿಲ್ಲ

  "ನಾನಾಡಿದ ಕೆಲ ಮಾತುಗಳು ನನ್ನ ಹೆಂಡತಿಗೆ ಹಿಡಿಸಿಲ್ಲ. ಪ್ರತಿಭಟಿಸಿದ್ಲು. ಆಕೆಯ ಕ್ಷಮೆ ಕೂಡ ಕೇಳಿದ್ದೇನೆ. ನಾನು ಸಂಗೀತಗಾರ. ನನಗ್ಯಾಕೆ ಈ ಟ್ರೋಲು ಇತ್ಯಾದಿಗಳು. ಕಂಟ್ರೋಲ್ ಆಗಿರೋದು ತಾನೇ ನಮ್ಮ ಕೆಲಸ. ನನಗೆ ಯಾರ ಮನಸ್ಸನ್ನು ನೋಯಿಸುವ ಇಷ್ಟವಿಲ್ಲ. ನನಗೆ ನನ್ನ ಸಂಗೀತ ಎಲ್ಲರಿಗೂ ಹೇಗೆ ಸುಖ ಕೊಡುತ್ತೋ.. ನನ್ನ ಮಾತು, ನನ್ನ ಬದುಕು ಸುಖ ಕೊಡಬೇಕು. ಇದು ನನ್ನ ಜೀವನದ ಗುರಿ. ಆದರೆ, ಎಲ್ಲಾ ಅನಿಷ್ಟಗಳನ್ನು ತೊಡೆದು ಹಾಕುವ ದಿಸೆಯಲ್ಲಿ ನನ್ನ ಪಾತ್ರವೂ ಯಾವುದಾದರೂ ಮೂಲಕವಿದ್ದರೆ, ಅದನ್ನು ಮಾಡೇ ಮಾಡುತ್ತೇನೆ." ಎಂದು ಹಂಸಲೇಖ ಹೇಳಿದ್ದಾರೆ.

  'ನಿಮ್ಮ ಮೇಲಿದ್ದ ಗೌರವ ಎಲ್ಲಾ ಹಾಳು ಮಾಡಿಕೊಂಡಿರಿ'

  ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖ ಹೇಳಿಕೆಯನ್ನು ಕೆಲವರು ಖಂಡಿಸಿದ್ದರು. "ನಿಮ್ಮ ಮೇಲಿದ್ದ ಗೌರವ ಎಲ್ಲಾ ನೀವೇ ಹಾಳು ಮಾಡಿಕೊಂಡಿರಲ್ಲ.‌ ನಾದಬ್ರಹ್ಮ ಅಂತೆಲ್ಲ ಕರೆಸ್ಕೋಳೋರು ನೀವು ಘನತೆ ಅಂತ ಒಂದಿರುತ್ತೆ ಅದನ್ಬು ಕಾಪಾಡಿಕೊಳ್ಳಬೇಕು ಅಲ್ವ? ಯತಿಗಳನ್ನು ಬೈಯೋದು ಮಹಾಪರಾಧ. ದೇವರೂ ಕ್ಷಮಿಸೋಲ್ಲ. ಕ್ಷಮೆ ಕೇಳುವ ಮನಸ್ಸಿರೋರು ಯಾಕೆ ಅಂಥ ಮಾತೆಲ್ಲ ಮಾತಾಡಬೇಕು ಸರ್? ನೀವು ನಮ್ಮ ಕರ್ನಾಟಕದ ಹೆಮ್ಮೆ ಅಂತ ಎಷ್ಟು ಗರ್ವ ಇತ್ತು ನಮಗೆಲ್ಲ ಎಲ್ಲಾ ಮಣ್ಣುಗೂಡಿಸಿದಿರಿ. ಇನ್ನು ನಿಮ್ಮ ಹಾಡುಗಳನ್ನು ಕೇಳಿದರೆ ಮನೇಲಿ ಹಿರಿಯರ ಕೈಲಿ ಉಗಿಸ್ಕೋಬೇಕು ನಾವು ಅಂಥ ಕೆಲಸ ಮಾಡಿಬಿಟ್ರಿ.. ಛೆ!! ನಾವೆಂದಾದರೂ ನಿಮ್ಮ ಜಾತಿ ಯಾವುದು ಅಂತ ಕೇಳಿದ್ದೇವಾ ಸರ್? ನಿಮ್ಮ ಪ್ರತಿಭೆಗೆ ಮನ್ನಣೆ ಕೊಟ್ಟಿದ್ವಿ. ನಿಮ್ ಅಭಿಮಾನಿಗಳ ಮನಸ್ಸು ನೋಯಿಸುವಂಥ ದುಃಸಾಹಸ ಮತ್ತೆಂದೂ ಮಾಡಬೇಡಿ‌." ಎಂದು ಕಮಂಟ್ ಮಾಡಿದ್ದಾರೆ.

  ಕ್ಷಮೆ ಕೇಳಿದ ತಕ್ಷಣ ನಿಮ್ಮ ಗೌರವ ಕಮ್ಮಿ ಆಗಿಲ್ಲ ಗುರುಗಳೆ

  ಇನ್ನೊಂದೆಡೆ ಕ್ಷಮೆ ಕೇಳಿದ ಹಂಸಲೇಖ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಬೆಂಬಲವೂ ಸಿಗುತ್ತಿದೆ. "ನೀವು ಹಾಗೂ ನಿಮ್ಮ ಧರ್ಮಪತ್ನಿಯವರು ಮಹಾನಾಯಕ ಧಾರಾವಾಹಿ ನೋಡ್ತಿದೀರಾ, ಅಂಬೇಡ್ಕರ್ ರವರ ವಿಚಾರಧಾರೆ ನಿಮ್ಮ ಮನಸಲ್ಲಿ ಇದೆ ಅನ್ನೋದನ್ನು ಸಹಿಸ್ಕೊಳೋಕೆ ಆಗ್ತಿಲ್ಲ ಬಿಡಿ ಮಹಾಗುರುಗಳೇ. ಸತ್ಯ ಮಾತಾಡಿದ್ರಿ ಎಲ್ಲರ ಆಹಾರ ಪದ್ಧತಿ ಬಗ್ಗೆ ಹಾಗೂ ಶ್ರೇಷ್ಠತೆ ಬಗ್ಗೆ ಮಾತಾಡುವಷ್ಟು ಕಳಕಳಿ ಅಸ್ಪೃಶ್ಯತೆ ಬಗ್ಗೆ ಇಲ್ಲ. ಒಬ್ಬರೇ ಒಬ್ಬರು ಇಲ್ಲಿ ಅಸ್ಪೃಶ್ಯತೆ ಬಗ್ಗೆ ಮಾತಾಡೋದಿಲ್ಲ. ಅವರಿಗೆ ನೀವು ಪೇಜಾವರಶ್ರೀಗಳ ಬಗ್ಗೆ ಮಾತಾಡಿದ್ದು ಅಷ್ಟೇ ಕಣ್ಣಿಗೆ ಕಾಣಿಸ್ತಿದೆ. ಬೇರೇನೂ ಕಾಣಿಸ್ತಿಲ್ಲ. ಕಂಗನಾ ರಾಣಾವತ್ ಪರ ಮಾತಾಡುವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಕ್ಷಮೆ ಕೇಳಿದ ತಕ್ಷಣ ನಿಮ್ಮ ಗೌರವ ಏನು ಕಡಿಮೆ ಆಗೋದಿಲ್ಲ. ನಿಮ್ಮ ದೊಡ್ಡತನ ತೋರ್ಸಿದೀರ." ಎಂದು ಹಂಸಲೇಖ ಬೆಂಬಲಕ್ಕೆ ನಿಂತಿದ್ದಾರೆ.

  English summary
  Recenly music director Dr. Hamsalekha commented about Peejawarasri and cast system in India. When this comment goes wrong Hamsalekha ask apology publicly.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X