»   » ನಿರೀಕ್ಷೆ ಮೂಡಿಸಿ ಬಿಡುಗಡೆಗೆ ಸಜ್ಜಾದ 'ನನ್ ಲೈಫಲ್ಲಿ'

ನಿರೀಕ್ಷೆ ಮೂಡಿಸಿ ಬಿಡುಗಡೆಗೆ ಸಜ್ಜಾದ 'ನನ್ ಲೈಫಲ್ಲಿ'

By: ಶ್ರೀರಾಮ್ ಭಟ್
Subscribe to Filmibeat Kannada
ಅನೀಶ್ ನಟನೆ ಹಾಗೂ ಹೊಸ ನಿರ್ದೇಶಕ ರಾಮ್ ದೀಪ್ ಸಂಗಮದ ಬರಲಿರುವ ಚಿತ್ರ ನನ್ ಲೈಫಲ್ಲಿ ಭಾರಿ ಸದ್ದು-ಸುದ್ದಿ ಮಾಡುತ್ತಿದೆ. ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ನ ಈ ಚಿತ್ರ, ಇದೇ ತಿಂಗಳು 23ಕ್ಕೆ (ಆಗಸ್ಟ್ 23, 2012) ತೆರೆಗೆ ಬರಲಿದೆ. ಹೊಸ ತಂಡದ ಪ್ರಯತ್ನವಾದರೂ ಗಾಂಧಿನಗರ ಹಾಗೂ ಪ್ರೇಕ್ಷಕರಲ್ಲಿ ಬಹಳಷ್ಟು ನಿರೀಕ್ಷೆ ಮೂಡಿಸುವಲ್ಲಿ ಸಫಲವಾಗಿದೆ.

ಸೆಟ್ಟೇರಿದ ದಿನದಿಂದಲೂ ನಿರೀಕ್ಷೆಗೆ ಕಾರಣವಾಗಿದ್ದು ಈ ಚಿತ್ರದ ಆಕರ್ಷಕ ಶಿರ್ಷಿಕೆ. ಆದರೆ ಈಗಿನ ಭಾರಿ ನಿರೀಕ್ಷೆಗೆ ಕಾರಣ, ಇತ್ತೀಚಿಗೆ ನಡೆದ ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ. ಹೌದು, ಈ ಚಿತ್ರದ ಧ್ವನಿಸುರುಳಿ ಬಿಡುಗಡೆ ಅದ್ದೂರಿಯಾಗಿ ಮಾತ್ರವಲ್ಲದೇ ಸಾಕಷ್ಟು ವಿಶಿಷ್ಠವೂ ಆಗಿತ್ತು. ಗಾಂಧಿನಗರದಲ್ಲಿ ಗಮನಸೆಳೆಯುವಲ್ಲಿ ಈ ಆಡಿಯೋ ಬಿಡುಗಡೆ ಸಮಾರಂಭ ಯಶಸ್ವಿಯಾಗಿ ಹೊಸ ಅಲೆ ಸೃಷ್ಟಿಸುವಲ್ಲಿ ಸಫಲವಾಗಿದೆ.

ಆಡಿಯೋ ಬಿಡುಗಡೆಯನ್ನು ನಟ ಗೋಲ್ಡನ್ ಸ್ಟಾರ್ ಗಣೇಶ್. ವೈಶಿಷ್ಠ್ಯತೆ ಏನೆಂದರೆ ಈ ಚಿತ್ರದ ಪ್ರತಿಯೊಂದು ಹಾಡನ್ನೂ ಒಬ್ಬೊಬ್ಬರು ಲಾಂಚ್ ಮಾಡಿದ್ದಾರೆ. ನಟರಾದ ಯಶ್, ಯೋಗೇಶ್, ಶ್ರೀನಗರ ಕಿಟ್ಟಿ, ರಮೇಶ್ ಅರವಿಂದ್ ಹಾಗೂ ನಟ, ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್. ಹೀಗೆ ಚಿತ್ರದಲ್ಲಿರುವ ಒಟ್ಟೂ ಆರು ಹಾಡುಗಳು ಸ್ಯಾಂಡಲ್ ವುಡ್ ಜನಪ್ರಿಯ ನಟರುಗಳಿಂದ ಲಾಂಚ್ ಆಗಿ ಧನ್ಯತೆ ಅನುಭವಿಸಿದೆ. ಹಾಡುಗಳಂತೂ ಕೇಳಿದಾಕ್ಷಣ ಸಂಗೀತಪ್ರಿಯರು ತಲೆದೂಗಲೇಬೇಕು ಎಂಬಂತಿದೆ.

ಇಷ್ಟೇ, ಅಲ್ಲ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ತೆಲುಗಿನ ಖ್ಯಾತ ಸ್ಟಾರ್ ಅಲ್ಲೂ ಅರ್ಜುನ್, ಈ ಚಿತ್ರದ ಕ್ಲಿಪ್ಪಿಂಗ್ಸ್ ನೋಡಿ ಸಖತ್ ಖುಷಿಯಾಗಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ ಶುಭ ಹಾರೈಸಿದ್ದಾರೆ. ಹೊಸಬರ ತಂಡದ ಮೆಚ್ಚುವಂತ ಸಾಧನೆಗೆ ಬೆನ್ನು ತಟ್ಟಿದ್ದಾರೆ. ಈ ಚಿತ್ರದ ಹಾಡುಗಳು, ದೃಶ್ಯಗಳು ಹಾಗೂ ಪ್ರಮೋಶನ್ ನೋಡಿದವರೆಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. ಕಾರಣ ಚಿತ್ರದಲ್ಲಿ ಮೂಡಿಬಂದಿರುವ ವಿಭಿನ್ನ ಕ್ರಿಯೆಟಿವಿಟಿ.

ಈಗಾಗಲೇ ಟಿವಿ ಮಾಧ್ಯಮಗಳಲ್ಲಿ ಪ್ರಚಾರಕಾರ್ಯ ಆರಂಭಿಸಿರುವ ಚಿತ್ರತಂಡ, ತಮ್ಮ ಈ ಹೊಸ ಪ್ರಯತ್ನದ ಬಗ್ಗೆ ಆತ್ಮವಿಶ್ವಾಸ ಹೊಂದಿದೆ. ನಿರ್ದೇಶಕ ರಾಮ್ ದೀಪ್, "ಇದೊಂದು ವಿಶಿಷ್ಠ ಪ್ರಯತ್ನ. ನಮ್ಮ ಈ ಚಿತ್ರವನ್ನು ಎಲ್ಲಾ ವರ್ಗದ ಪ್ರೇಕ್ಷಕರು ಮೆಚ್ಚುತ್ತಾರೆಂಬ ಆತ್ಮವಿಶ್ವಾಸ ನಮಗಿದೆ. ಚಿತ್ರದ ಮೇಕಿಂಗ್ ಅತ್ಯದ್ಭುತವಾಗಿ ಮೂಡಿಬಂದಿದೆ" ಎಂದಿದ್ದಾರೆ.

ನಿರ್ಮಾಪಕರುಗಳಾದ ನಿವೇದಿತಾ, ವೆಂಕಟೇಶ್ ಹಾಗೂ ಅನಿಲ್ ಕೂಡ ಚಿತ್ರ ಯಶಸ್ವಿಯಾಗುವ ಬಗ್ಗೆ ಭಾರಿ ಭರವಸೆ ವ್ಯಕ್ತಪಡಿಸಿದ್ದಾರೆ. ಅಂದಹಾಗೆ, ಚಿತ್ರಕಥೆ ರಚಿಸಿರುವ ಲೋಕೇಶ್, ರಾಮ್ ದೀಪ್ ಹಾಗೂ ಅನಿಲ್ ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ಸ್ ಎಂಬುದು ವಿಶೇಷ.

ನಾಯಕ ಅನೀಶ್ ಅವರಿಗೆ ನಾಯಕಿಯಾಗಿ ಸಿಂಧು ಲೋಕನಾಥ್ ಜೊತೆಯಾಗಿದ್ದಾರೆ. ದೀಲೀಪ್ ರಾಜ್, ಮಿತ್ರಾ ಹಾಗೂ ಕಾರ್ತಿಕ್, ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ಮನೋಹರ್ ಜೋಶಿ ಛಾಯಾಗ್ರಹಣ ಹಾಗೂ ಸಂತೋಷ್ ರಾಧಾಕೃಷ್ಣನ್ ಸಂಕಲನ ಚಿತ್ರಕ್ಕಿದೆ.

ನಾಗತಿಹಳ್ಳಿ ಸಿನಿಕ್ರಿಯೇಶನ್ಸ್ ಜೊತೆ ರೋಡ್ ಶೋ ಸಿನಿಮಾಸ್ ಸಂಸ್ಥೆ ಸಹ ಈ ಚಿತ್ರ ನಿರ್ಮಾಣಕ್ಕೆ ಕೈ ಜೋಡಿಸಿದೆ. ನಟರಾದ ರಮೇಶ್ ಅರವಿಂದ್ ಹಾಗೂ ಶ್ರೀನಗರ ಕಿಟ್ಟಿ, ಈ ಚಿತ್ರದ ಹಾಡೊಂದಕ್ಕೆ ಹೆಜ್ಜೆಹಾಕಿರುವುದು ಚಿತ್ರದ ಹೈಲೈಟ್ಸ್ ಗಳಲ್ಲೊಂದು.

ಇನ್ನೇನು ಬಿಡುಗಡೆ ಹಾದಿಯಲ್ಲಿರುವ ನನ್ ಲೈಫಲ್ಲಿ ಚಿತ್ರದ ಬಗ್ಗೆ ಎಲ್ಲೆಡೆ ಮಾತುಕತೆ ಪ್ರಾರಂಭವಾಗಿದೆ. ಗಾಂಧಿನಗರದಲ್ಲಿ ಕೂಡ ಎಂದಿನ ಹೊಸಬರ ಚಿತ್ರವೆಂಬ ತಾತ್ಸಾರಕ್ಕೆ ಬದಲಾಗಿ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಜಾದೂ ಮಾಡುವುದು ಖಂಡಿತ ಎಂಬ ಭರವಸೆ ಮೂಡಿದೆ.

ನನ್ ಲೈಫಲ್ಲಿ ಚಿತ್ರದ ಮೂಲಕ ಹೊಸಬರ ತಂಡ ಹೊಸ ಗೆಲುವಿನ ಚಿತ್ತಾರ ಬರೆಯಲು ಸಜ್ಜಾಗಿದೆ. ಕನ್ನಡ ಸಿನಿಪ್ರೇಕ್ಷಕರು ಉತ್ತಮ ಚಿತ್ರವನ್ನು ಎಂದೂ ತಿರಸ್ಕರಿಸಿಲ್ಲ ಎಂಬ ನಂಬಿಕೆಯೇ ನಮ್ಮ ಈ ಭರವಸೆಗೆ ಕಾರಣ ಎಂದಿದೆ ಚಿತ್ರತಂಡ. (ಒನ್ ಇಂಡಿಯಾ ಕನ್ನಡ)

English summary
Newcomer Ramdeep directed movie 'Nan Life Alli' to releases this month on 23rd August 2012. Anish Tejeshwar and Sindhu Loknath are in Lead Role. Ajanish Lokanath is the Music Director for this. Lokesh, Anil and Niveditha are the Producers. 
 
Please Wait while comments are loading...