»   » ಕನ್ನಡ ಚಿತ್ರದಲ್ಲಿ ಮತ್ತೆ ಪ್ರೀತಿ ಜಿಂಗಾನಿಯಾ ದರ್ಶನ

ಕನ್ನಡ ಚಿತ್ರದಲ್ಲಿ ಮತ್ತೆ ಪ್ರೀತಿ ಜಿಂಗಾನಿಯಾ ದರ್ಶನ

Posted By:
Subscribe to Filmibeat Kannada
ಪ್ರೀತಿ ಜಿಂಗಾನಿಯಾ ಎಂಬ ನಟಿಯ ಹೆಸರು ಕನ್ನಡಿಗರಿಗೆ ಹೊಸದೇನಲ್ಲ. 'ಓಂಕಾರ' ಚಿತ್ರದಲ್ಲಿ ಉಪೇಂದ್ರರಿಗೆ ನಾಯಕಿಯಾಗಿ ನಟಿಸಿದ್ದ ಪ್ರೀತಿ ಜಿಂಗಾನಿಯಾ, ಕನ್ನಡಿಗರ ಗಮನವನ್ನು ಸೆಳೆದಿದ್ದರು. ಆದರೆ ಆ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಗೆಲ್ಲಲಿಲ್ಲ, ಪ್ರೀತಿ ಕನ್ನಡದಲ್ಲಿ ನೆಲೆನಿಲ್ಲಲಿಲ್ಲ.

ಆನಂತರ ಪ್ರೀತಿ ಜಿಂಗಾನಿಯಾ ಕನ್ನಡದ ಕಡೆ ಮುಖ ಮಾಡಲಿಲ್ಲ. ಕನ್ನಡದ ನಿರ್ಮಾಪಕ-ನಿರ್ದೇಶಕರು ಅವರನ್ನು ಮತ್ತೆ ಕರೆಯಲಿಲ್ಲವೋ ಅಥವಾ ಕರೆದರೂ ಪ್ರೀತಿ ಬರಲಿಲ್ಲವೋ, ಒಟ್ಟಿನಲ್ಲಿ ಕನ್ನಡ ಪ್ರೇಕ್ಷಕರಿಗೆ ಒಮ್ಮೆ ಮಾತ್ರ ಪ್ರೀತಿಯ ದರ್ಶನವಾಗಿತ್ತು. ನಂತರ ಪ್ರೀತಿ ಬಾಲಿವುಡ್, ಟಾಲಿವುಡ್ ಗಳಲ್ಲೇ ಬಿಜಿಯಾಗಿದ್ದರು.

ಆದರೆ ಈಗ ಮತ್ತೊಮ್ಮೆ ಪ್ರೀತಿಯ ದರ್ಶನವಾಗುವ ಸೌಭಾಗ್ಯ ಕನ್ನಡಿಗರಿಗೆ ಬಂದಿದೆ. ಅದು 'ಒಲವೇ ಮಂದಾರ' ಎಂಬ ಸದಭಿರುಚಿಯ ಸಿನಿಮಾ ನಿರ್ದೇಶಿಸಿ ಸ್ಯಾಂಡಲ್ ವುಡ್ ಗಮನಸೆಳೆದಿದ್ದ ನಿರ್ದೇಶಕ ಜಯತೀರ್ಥ ಅವರಿಂದ ಬಂದಿದೆ. ಇದೀಗ ಅವರು ಟೋನಿ ಎಂಬ ಚಿತ್ರವನ್ನು ನಿರ್ದೇಶಿಸಸುತ್ತಿದ್ದಾರೆ.

ಜಯತೀರ್ಥರ ಟೋನಿಗೆ ಶ್ರೀನಗರ ಕಿಟ್ಟಿ ನಾಯಕರು. ನಾಯಕಿಯಾಗಿ ಐಂದ್ರಿತಾ ರೇ ಇದ್ದಾರೆ. ಅದರಲ್ಲೊಂದು ಪುಟ್ಟ ಪಾತ್ರಕ್ಕೆ ಪ್ರೀತಿಯನ್ನು ಕರೆತಂದಿದ್ದಾರೆ ಜಯತೀರ್ಥ. ದೊಡ್ಡ ಕಂಪನಿಯೊಂದರ ಸಿಇಒ ಪಾತ್ರ ಇದಾಗಿದ್ದು ಈ ಪಾತ್ರಕ್ಕಾಗಿ ಮೂರು ದಿನಗಳ ಚಿತ್ರೀಕರಣವನ್ನೂ ಕೂಡ ಪ್ರೀತಿ ಮುಗಿಸಿದ್ದಾರೆ.

ತಮ್ಮ ಮಾದಕ ಮೈಮಾಟ ಹಾಗೂ ಬಿಂದಾಸ್ ವರ್ತನೆಯಿಂದಲೇ ಚಿತ್ರರಂಗದಲ್ಲಿ ಹೆಸರು ಸಂಪಾದಿಸಿರುವ ಪ್ರೀತಿ ಜಿಂಗಾನಿಯಾ ಪಾತ್ರಗಳ ಆಯ್ಕೆಯಲ್ಲೇ ಎಡವುತ್ತಾರೆ ಎನ್ನಲಾಗುತ್ತಿದೆ. ಈ ಅಪವಾದಕ್ಕೆ ಬರಲಿರುವ ಟೋನಿ ಚಿತ್ರ ಉತ್ತರವಾಗಬಲ್ಲದು.

ಕನ್ನಡದ ತಮ್ಮ ಎರಡನೇ ಚಿತ್ರ ಟೋನಿಯಲ್ಲಿ ಅದ್ಯಾವ ಸಂಮ್ಮೋಹನಾಸ್ತ್ರವನ್ನು ಪ್ರೀತಿ ಪ್ರಯೋಗಿಸುತ್ತಾರೋ ಕಾದು ನೋಡಬೇಕಾಗಿದೆ. ಪ್ರೀತಿ ಜಿಂಗಾನಿಯಾ ಪರಭಾಷೆ ಚಿತ್ರರಂಗದಲ್ಲೇ ಹೆಚ್ಚು ಅವಕಾಶ ಪಡೆದಿದ್ದರೂ, ಮಿಂಚಿದ್ದರೂ ಕೂಡ, ಅವರ ಹುಟ್ಟೂರು ಕನ್ನಡ ನಾಡೇ ಎಂಬುದು ತಿಳಿದಿರಲಿ.

ಮಂಗಳೂರು ಮೂಲದ ಈ ಬೆಡಗಿ ಎರಡನೇ ಬಾರಿ ಕನ್ನಡ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ನಾಯಕಿಯಾಗಿ ಅಲ್ಲದಿದ್ದರೂ ಈ ಟೋನಿ ಚಿತ್ರ ಗೆದ್ದರೆ ಪ್ರೀತಿಗೆ ಇಲ್ಲಿ ಇನ್ನೊಂದಿಷ್ಟು ಅವಕಾಶ ಸಿಗಬಹುದು. ಇಲ್ಲದಿದ್ದರೆ ಇದ್ದೇ ಇದೆಯಲ್ಲಾ ನೆರೆಭಾಷೆ, ಪರಭಾಷೆಯ ಚಿತ್ರರಂಗ. ಯಾವುದಕ್ಕೂ ಕನ್ನಡದ ಹುಡುಗಿ ಪ್ರೀತಿಯ ಮೇಲೆ ನಿಮಗೆ ಸ್ವಲ್ಪ ಪ್ರೀತಿಯಿರಲಿ...(ಒನ್ ಇಂಡಿಯಾ ಕನ್ನಡ)

English summary
Preeti Jhangiani, Karnataka based Bollywood fame actress acts again in a Kannada Movie Toni. Before this, she acted in Kannada Movie 'Omkara' with Super Star Upendra. Toni movie has Jayatheertha direction, Srinagara Kitty and Aindrita Ray in Lead Role. 
 
Please Wait while comments are loading...