»   » ಗಾಂಧಿನಗರದಲ್ಲಿ ಪ್ರಿಯಾ ಹಾಸನ್ ಹೊಸ ಇನ್ನಿಂಗ್ಸ್

ಗಾಂಧಿನಗರದಲ್ಲಿ ಪ್ರಿಯಾ ಹಾಸನ್ ಹೊಸ ಇನ್ನಿಂಗ್ಸ್

Posted By:
Subscribe to Filmibeat Kannada
ನಾಲ್ಕು ವರ್ಷಗಳ ಹಿಂದೆ ಪ್ರಿಯಾ ಹಾಸನ್ ಯಾರು ಏನು ಎತ್ತ ಎಂದು ಯಾರಿಗೂ ತಿಳಿದಿರಲಿಲ್ಲ. ಆಗಷ್ಟೇ ಆಕೆ ಗಾಂಧಿನಗರದಲ್ಲಿ ಅಂಬೆಗಾಲಿಟ್ಟಿದ್ದರು. ಸದಭಿರುಚಿಯ ಚಿತ್ರವೊಂದನ್ನು ಪ್ರೇಕ್ಷಕರಿಗೆ ನೀಡಬೇಕು ಎಂಬ ಮಹಾನ್ ಉದ್ದೇಶದಿಂದ ಆಕೆ ಬಂದಿದ್ದರು.

ಇದರ ಫಲಿತಾಂಶವೇ ಮೂರು ವರ್ಷಗಳ ಹಿಂದೆ ಬಿಡುಗಡೆಯಾದ 'ಜಂಬದ ಹುಡುಗಿ' ಚಿತ್ರ. ಈ ಚಿತ್ರದಲ್ಲಿ ಆಕೆಯದು ಟೈಟಲ್ ಪಾತ್ರ. ನೀರಿಗೆ ಇಳಿದರೆ ತಾನೆ ಚಳಿಯೇನು ಗಾಳಿಯೇನು ಎಂದು ಗೊತ್ತಾಗುವುದು. ಚಿತ್ರೋದ್ಯಮಕ್ಕೆ ಇಳಿಯುವವರೆಗೂ ಆಕೆಗೆ ಗಂಧಗಾಳಿ ಗೊತ್ತಿರಲಿಲ್ಲ.

'ಜಂಬದ ಹುಡುಗಿ' ಚಿತ್ರ ನಿರ್ಮಾಣ ಹಂತದಲ್ಲಿ ಇರುವಾಗಲೇ ವಿವಾದಕ್ಕೆ ಸಿಲುಕಿತು. ಚಿತ್ರದ ನಿರ್ದೇಶಕ ಸೀತಾರಾಂ ಕಾರಂತ್ ಚಿತ್ರವನ್ನು ಮಧ್ಯದಲ್ಲೇ ನಿಲ್ಲಿಸಿ ಹೊರನಡೆದಿದ್ದರು. ಏನು ಮಾಡಬೇಕೋ ತಿಳಿಯದ ಪರಿಸ್ಥಿತಿ ಪ್ರಿಯಾ ಹಾಸನ್ ಅವರದು.

ಅದನ್ನೇ ಸವಾಲಾಗಿ ಸ್ವೀಕರಿಸಿ ಆಕೆ ನಿರ್ದೇಶನದ ಜವಾಬ್ದಾರಿಯನ್ನು ತಾವೇ ಹೊತ್ತರು. ಚಿತ್ರ ಬಿಡುಗಡೆಯೂ ಆಯಿತು. ಬಾಕ್ಸಾಫೀಸಲ್ಲಿ ಭಾರಿ ಸೌಂಡು ಮಾಡದಿದ್ದರೂ ಉತ್ತಮ ಪ್ರತಿಕ್ರಿಯೆಗಂತೂ ಪಾತ್ರವಾಯಿತು.

ಚೊಚ್ಚಲ ಚಿತ್ರದ ಅನುಭವ 'ಬಿಂದಾಸ್ ಹುಡುಗಿ' ನಿರ್ಮಾಣಕ್ಕೆ ಸ್ಫೂರ್ತಿಯಾಯಿತು. ಈ ಬಾರಿಯೂ ಟೈಟಲ್ ಪಾತ್ರದ ಜೊತೆಗೆ ನಿರ್ದೇಶನ, ನಿರ್ಮಾಣ ಬಾಧ್ಯತೆಗಳನ್ನೂ ಸಮರ್ಥವಾಗಿ ನಿಭಾಯಿಸಿದರು.

ಈ ಬಾರಿಯೂ ಪ್ರೇಕ್ಷಕರು ಪ್ರಿಯಾ ಹಾಸನ್‌ರ ಕೈಹಿಡಿದರು. 'ಬಿಂದಾಸ್ ಹುಡುಗಿ' ಸೆಂಚುರಿ ಬಾರಿಸಿತು. ಇಷ್ಟೆಲ್ಲಾ ಕಷ್ಟನಷ್ಟಗಳನ್ನು ಅನುಭವಿಸಿ ಸಿನಿಮಾ ಮಾಡಿ ಯಶಸ್ವಿಯಾದರೂ ತಮಗೆ ಸಿಗಬೇಕಾದ ಮಾನ್ಯತೆ, ಮನ್ನಣೆ ಕಿಂಚಿತ್ತೂ ಸಿಗಲಿಲ್ಲ ಎಂಬ ನೋವು ಪ್ರಿಯಾರನ್ನು ಕಾಡುತ್ತಿತ್ತು.

ಈ ಸಿಟ್ಟು ರಾಜ್ಯ ಪ್ರಶಸ್ತಿಗಳ ಮೇಲೆ ಹೊರಳಿತು. 2010-11ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಬಾರಿ ಗೋಲ್‌ಮಾಲ್ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ಹೈಕೋರ್ಟ್ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿತ್ತು.

ಏತನ್ಮಧ್ಯೆ ಪ್ರಿಯಾ ಹಾಸನ್ ತೆಲುಗು ಚಿತ್ರವೊಂದರಲ್ಲೂ ಕಾಣಿಸಿಕೊಂಡರು. ಭಕ್ತಿ ಪ್ರಧಾನವಾದ ಆ ಚಿತ್ರದ ಹೆಸರು 'ವಾಸವಿ ವೈಭವ'. ಈಗ ಅಲ್ಲಿಂದ ಮತ್ತೆ ಸೀದಾ ಗಾಂಧಿನಗರಕ್ಕೆ ಮರಳಿದ್ದಾರೆ ಪ್ರಿಯಾ ಹಾಸನ್. ಈ ಬಾರಿ ಅವರು 'ಲೇಡಿ ಟೈಗರ್' ಆಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಹೀರೋಯಿನ್ ಓರಿಯಂಟೆಡ್ ಸಿನಿಮಾ.

ಚಿತ್ರ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿರುವ ಪ್ರಿಯಾ ಈ ಬಾರಿ ನಿರ್ದೇಶನದ ಜವಾಬ್ದಾರಿಯನ್ನು ಓಂ ಪ್ರಕಾಶ್ ರಾವ್ ಅವರ ಹೆಗಲಿಗೆ ಹಾಕಿರುವುದು ವಿಶೇಷ. ಈ ಚಿತ್ರದ ಮೂಲಕ ಪ್ರಿಯಾ ಹಾಸನ್ ಮತ್ತೊಬ್ಬ ಮಾಲಾಶ್ರೀ ಆಗುವ ಎಲ್ಲ ನಿರೀಕ್ಷೆಗಳೂ ಇವೆ. (ಏಜೆನ್ಸೀಸ್)

English summary
Actress Priya Hasan has producing another heroine-centric film titled as Lady Tiger. The movie is being directed by Om Prakash Rao. The film will also have a prominent actor as male lead.
Please Wait while comments are loading...