For Quick Alerts
  ALLOW NOTIFICATIONS  
  For Daily Alerts

  ಪುನೀತ್ 'ಯಾರೇ ಕೂಗಾಡಲಿ'ಗೆ ಕರ್ನಾಟಕವೇ ಕಾದಿದೆ

  By ಶ್ರೀರಾಮ್ ಭಟ್
  |

  ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರ 'ಯಾರೇ ಕೂಗಾಡಲಿ' ಶೂಟಿಂಗ್ ಹಂತದಲ್ಲಿದೆ. ಇತ್ತೀಚಿಗೆ ಬಿಡುಗಡೆಯಾಗಿ ನಿರೀಕ್ಷೆಯಷ್ಟು ಸದ್ದು ಮಾಡದೇ 'ಅಣ್ಣಾಬಾಂಡ್' ಸೈಡ್ ಗೆ ಸರಿದುಹೋಗಿದೆ. ಹೀಗಿದ್ದರೂ ಪುನೀತ್ ಅಭಿಮಾನಿ ಬಳಗ ದಿನೇದಿನೇ ಹೆಚ್ಚುತ್ತಿದೆ. ಪುನೀತ್ ಕೋಟಿ ಕೋಟಿ ಜನರ ಹೃದಯ ಗೆದ್ದು ಸಂಭ್ರಮಿಸುತ್ತಿದ್ದಾರೆ. ಇವೆಲ್ಲಕ್ಕೂ ಕಾರಣ, 'ಕನ್ನಡದ ಕೋಟ್ಯಧಿಪತಿ'.

  ಹೌದು, ಪುನೀತ್ ಆ ಕಾರ್ಯಕ್ರಮದ ಮೂಲಕ ಕೋಟ್ಯಂತರ ಜನರ ಹೃದಯ ಗೆದ್ದಿದ್ದಾರೆ. ತಮ್ಮ ಸಿನಿಮಾಗಳ ಮೂಲಕ ಕರ್ನಾಟಕದ ಸಾಕಷ್ಟು ಸಿನಿಪ್ರಿಯರನ್ನು ರಂಜಿಸಿದ್ದ ಪುನೀತ್, 'ಕೋಟ್ಯಧಿಪತಿ' ಮೂಲಕ ಕರ್ನಾಟಕದ ಮೂಲೆಮೂಲೆಯ ಬಹಳಷ್ಟು ಜನರ ಹೃದಯದೊಳಕ್ಕೆ ನೇರವಾಗಿ ತಲುಪಿದ್ದಾರೆ. ಕಾರ್ಯಕ್ರಮ ಅದೆಷ್ಟು ಜನಪ್ರಿಯವಾಗಿತ್ತೆಂದರೆ, 'ಇಷ್ಟು ಬೇಗ ಮುಗಿದು ಹೋಯ್ತೇ!?' ಎಂದು ಎಲ್ಲರೂ ಚಡಪಡಿಸುವಂತಾಗಿದೆ.

  ಹೀಗೆ ಪುನೀತ್ ಪ್ರಸಿದ್ಧಿ ಕರ್ನಾಟಕದ ತುಂಬೆಲ್ಲಾ ವ್ಯಾಪಿಸಿರುವ ಈ ಕಾಲದಲ್ಲಿ ಪುನೀತ್ ಚಿತ್ರ 'ಯಾರೇ ಕೂಗಾಡಲಿ' ಹೆಸರು ಈಗ ಎಲ್ಲರ ಬಾಯಲ್ಲಿ ನಲಿದಾಡುತ್ತಿದೆ. ಕನ್ನಡ ಸಿನಿಮಾಗಳನ್ನು ನೋಡುವ ವರ್ಗದ ಜನರೆಲ್ಲಿ ಕಾಣಸಿಗುತ್ತಾರೋ, ಅಲ್ಲೆಲ್ಲ ಪುನೀತ್ ಮುಂಬರುವ ಚಿತ್ರ 'ಯಾರೇ ಕೂಗಾಡಲಿ' ಬಗ್ಗೆ ಜನರೆಲ್ಲ ಮಾತನಾಡುವಂತಾಗಿದೆ. ಈ ಮೊದಲು 'ಪುನೀತ್ ಅಭಿಮಾನಿಗಳು' ಎಂದು ಹೇಳಬೇಕಿದ್ದ ಜಾಗದಲ್ಲಿ 'ಕರ್ನಾಟಕದ ಜನತೆ' ಎಂದು ಹೇಳಬೇಕಾಗಿದೆ ಎಂದರೆ ಅಚ್ಚರಿಯೇನಿಲ್ಲ!

  'ಕೌನ್ ಬನೇಗಾ ಕರೋಡ್ ಪತಿ' ಕಾರ್ಯಕ್ರಮವನ್ನು ಅಮಿತಾಬ್ ಬಚ್ಚನ್ ನಡೆಸಿಕೊಟ್ಟ ರೀತಿಗೆ ಇಡೀ ದೇಶ ಬೆರಗಾಗಿತ್ತು. ಅದೇ ಪ್ರೋಗ್ರಾಂ ಅನ್ನು ಕನ್ನಡದಲ್ಲಿ ಆ ರೇಂಜ್ ಗೆ ಮಾಡಲು ಪುನೀತ್ ಅವರಿಗೆ ಸಾಧ್ಯವೇ ಎಂಬುದು ಕಾರ್ಯಕ್ರಮ ಪ್ರಸಾರವಾಗುವ ಪೂರ್ವದಲ್ಲಿ ಎಲ್ಲರಲ್ಲಿರುವ ಪ್ರಶ್ನೆಯಾಗಿತ್ತು. ಆದರೆ ಕಾರ್ಯಕ್ರಮ ಮುಗಿಯುವ ಹೊತ್ತಿಗೆ ಯಾರಲ್ಲೂ ಆ ಪ್ರಶ್ನೆಯೇ ಇರಲಿಲ್ಲ. ಕಾರಣ, ಎಲ್ಲರಿಗೂ ಉತ್ತರ ಗೊತ್ತಾಗಿತ್ತು. ಅಮಿತಾಬ್ ದೇಶಮಟ್ಟದಲ್ಲಿ ಹೆಸರಾದಂತೆ ಪುನೀತ್ ಕರ್ನಾಟಕದ ತುಂಬಾ ಮನೆಮಾತಾಗಿದ್ದಾರೆ.

  'ಕನ್ನಡದ ಕೋಟ್ಯಧಿಪತಿ- 2' (ಸೀಸನ್ 2) ಪ್ರಾರಂಭವಾಗಲಿರುವುದು ಹಾಗೂ ಅದನ್ನೂ ಕೂಡ ಪುನೀತ್ ರಾಜ್ ಕುಮಾರ್ ಅವರೇ ನಡೆಸಿಕೊಡುವುದು ಪಕ್ಕಾ ಆಗಿದ್ದು, ಯಾವಾಗ ಎಂಬುದಷ್ಟೇ ನಿರ್ಧಾರವಾಗಬೇಕಿದೆ. "ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲಾ ನನ್ನ ಕುಟುಂಬದವರೇ ಆಗಿಬಿಟ್ಟಿದ್ದಾರೆ. ಅವರೆಲ್ಲರನ್ನೂ ಒಂದು ದಿನ ನಮ್ಮ ಮನೆಗೆ ಕರೆದು ಅವರೊಟ್ಟಿಗೆ ಊಟ ಮಾಡಿ ಇಡೀ ದಿನ ಅವರೊಂದಿಗೇ ಕಳೆಯುವ ಆಸೆ ನನಗಿದೆ" ಎಂಬ ಪುನೀತ್ ಮಾತು ಎಲ್ಲರ ಹೃದಯ ತಲುಪಿದೆ.

  ಒಟ್ಟಿನಲ್ಲಿ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮದ ಮೂಲಕ ಸಮಸ್ತ ಕರ್ನಾಟಕದ ಕೋಟ್ಯಂತರ ಹೃದಯಗಳನ್ನು ಗೆದ್ದಿರುವ ಪುನೀತ್ ಚಿತ್ರ 'ಯಾರೇ ಕೂಗಾಡಲಿ, ಈಗ 'ಬಹುನಿರೀಕ್ಷೆ' ಎಂಬ ಪದವನ್ನೂ ಮೀರಿ ನಿಂತಿದೆ. 'ಬಿಡುಗಡೆ ದಿನಾಂಕ ಗೊತ್ತಾದರೆ ಸಾಕು, ಚಿತ್ರಮಂದಿರವನ್ನು ಜನರೇ ಹುಡುಕಿಕೊಂಡು ಬರುತ್ತಾರೆ ಬಿಡಿ' ಎಂಬ ಮಾತು ಗಾಂಧಿನಗರದ ತುಂಬಾ 'ಗುಂಯ್' ಗುಡುತ್ತಿದೆ. ಪುನೀತ್ ಜೊತೆ ನಾಯಕರಾಗಿ 'ಹುಡುಗರು' ನಂತರ ಲೂಸ್ ಮಾದ ಯೋಗೇಶ್ ಮತ್ತೊಮ್ಮೆ ಈ ಚಿತ್ರದಲ್ಲಿ ಮಿಂಚಲಿದ್ದಾರೆ.

  ಪುನೀತ್ ಅಪ್ಪಟ ಅಭಿಮಾನಿಗಳಂತೂ ಯಾರೇ ಕೂಗಾಡಲಿ, ಪುನೀತ್ ಚಿತ್ರ ನೋಡುವುದಷ್ಟೇ ನಮ್ಮ ಗುರಿ ಎಂಬ ಮಂತ್ರ ಜಪಿಸುತ್ತಿದ್ದಾರಂತೆ. ಅಂದಹಾಗೆ, ತಮಿಳು ಚಿತ್ರ 'ಪೊರಾಲಿ' ರೀಮೇಕ್ ಈ ಚಿತ್ರವನ್ನು ಮೂಲ ಚಿತ್ರದ ನಿರ್ದೇಶಕ 'ಸಮುತ್ತಿರಕನಿ' ಅವರೇ ಕನ್ನಡದಲ್ಲೂ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪುನೀತ್ ಅವರಿಗೆ ನಾಯಕಿಯಾಗಿ 'ಜಾಕಿ' ಖ್ಯಾತಿಯ ಭಾವನಾ ನಟಿಸುತ್ತಿದ್ದರೆ ಯೋಗೇಶ್ ಜೋಡಿಯಾಗಿ 'ಲೈಫು ಇಷ್ಟೇನೆ' ಖ್ಯಾತಿಯ ಸಿಂಧು ಲೋಕನಾಥ್ ಇದ್ದಾರೆ. ಈ ಚಿತ್ರದ ಬಿಡುಗಡೆಗೆ ಕರ್ನಾಟಕವೇ ಕಾದಿದೆ.

  English summary
  Power Star Puneeth Rajkumar upcoming movie 'Yaare Koogadali' got high expectation from all over Karnataka. Because of 'Kanndada Kotyadhipthi' reality show popularity, Puneeth fans increased in unexpected numbers all over the the State. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X