ರಾಧಿಕಾ 'ರೀ ಎಂಟ್ರಿ' ಚಿತ್ರಕ್ಕೆ ನಾಯಕರಾಗಿ ಆದಿತ್ಯ
ಈ ಮೊದಲೇ ಸುದ್ದಿಯಾದಂತೆ ಈ ಹೊಸ ಚಿತ್ರದ ನಿರ್ದೇಶಕರು ವಿಜಯಲಕ್ಷ್ಮೀ ಸಿಂಗ್. ಅವರ ಕಥೆ ರಾಧಿಕಾಗೆ ಸಂಪೂರ್ಣ ಒಪ್ಪಿಗೆಯಾಗಿದ್ದು ತಾವು ನಟಿಸುವುದಾಗಿ 'ಗ್ರೀನ್ ಸಿಗ್ನಲ್' ನೀಡಿದ್ದಾರೆ. ನಾಯಕರಾಗಿ ನಟಿಸಲಿರುವವರು ನಟ ಆದಿತ್ಯ. ರಾಧಿಕಾ ಹಾಗೂ ಆದಿತ್ಯಾ ನಟನೆಯ ಈ ಚಿತ್ರಕ್ಕೆ ಸಂಗೀತ ನೀಡಲಿರುವವವರು ಅರ್ಜುನ್ ಜನ್ಯಾ. ಸದ್ಯದ ಮಾಹಿತಿಯಂತೆ, ಇನ್ನೂ ಹೆಸರಿಡದ ಈ ಚಿತ್ರಕ್ಕೆ ಮುಹೂರ್ತ ಮುಂದಿನ ತಿಂಗಳು ನಡೆಯಲಿದೆ.
ಆಶ್ಚರ್ಯವೆಂಬಂತೆ, ರಾಧಿಕಾರ ಮೊದಲ ಇನ್ನಿಂಗ್ಸ್ ಕೊನೆಯ ಚಿತ್ರವಾದ 'ಈಶ್ವರ್' ನಾಯಕರಾಗಿ ನಟಿಸಿದ್ದೂ ಕೂಡ ಇದೇ ಆದಿತ್ಯ. ಇದೀಗ ಎರಡನೇ ಇನ್ನಿಂಗ್ಸ್ ನಲ್ಲಿ ಕೂಡ ರಾಧಿಕಾರ ಮೊದಲ ಚಿತ್ರಕ್ಕೆ ಆದಿತ್ಯರೇ ಹೀರೋ. ಅದೇನೇ ಇರಲಿ, ನಾಯಕಿ ಹಾಗೂ ತಂಗಿಯಾಗಿ ನಟಿಸಿ ಬಹಳಷ್ಟು ಕನ್ನಡ ಸಿನಿಪ್ರೇಕ್ಷಕರ ಪ್ರಶಂಸೆ ಪಡೆದಿರುವ ರಾಧಿಕಾಗೆ ಬಹಳಷ್ಟು ಅಭಿಮಾನಿಗಳಿದ್ದಾರೆ. ಅವರೆಲ್ಲರಿಗೂ, ಬಂದಿರುವ ಈ ಸುದ್ದಿ 'ಮೈಸೂರ್ ಪಾಕ್'.
ಮೊದಲ ಚಿತ್ರವಾಗಿ ರಾಧಿಕಾ 'ನೀಲ ಮೇಘ ಶ್ಯಾಮ' ಚಿತ್ರದಲ್ಲಿ ಸೃಜನ್ ಲೋಕೇಶ್ ಜೊತೆ ಬಣ್ಣಹಚ್ಚಿದ್ದರೂ ಮೊದಲಿಗೆ ಬಿಡುಗಡೆಯಾದ ರಾಧಿಕಾರ ಚಿತ್ರ ವಿಜಯರಾಘವೇಂದ್ರ ಜೊತೆ ನಟಿಸಿದ 'ನಿನಗಾಗಿ'. ನಂತರ ಬಹಳಷ್ಟು ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾಗಿದ್ದ ರಾಧಿಕಾ, ಮದುವೆ ನಂತರ ನಟನೆಯಿಂದ ದೂರ ಸರಿದಿದ್ದರು. ಇತ್ತೀಚಿಗೆ ಯಶ್-ರಮ್ಯಾ ಜೋಡಿಯ 'ಲಕ್ಕಿ' ಚಿತ್ರದ ಮೂಲಕ ನಿರ್ಮಾಪಕಿಯಾಗಿ ಪ್ರವೇಶಿಸಿದ್ದ ಅವರು ಸದ್ಯದಲ್ಲೇ ಮತ್ತೆ ನಟನೆಗೆ ಮರಳಲಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications












