twitter
    For Quick Alerts
    ALLOW NOTIFICATIONS  
    For Daily Alerts

    ನಿಮ್ಮ ಪಾದಗಳಿಗೆ ನಮಸ್ಕಾರ ಮಾಡುವೆ, ಹೀಗೆ ಮಾಡಬೇಡಿ: ರಾಘವೇಂದ್ರ ರಾಜ್‌ಕುಮಾರ್ ಮನವಿ

    |

    ನಟ ಪುನೀತ್ ಅಗಲಿಕೆಯ ಆಘಾತದಿಂದ ಕೆಲವು ಅಭಿಮಾನಿಗಳು ತಾವೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಭಿಮಾನಿಗಳನ್ನು ದೇವರೆಂದು ಕರೆದ ಅಣ್ಣಾವ್ರ ಮಕ್ಕಳಿಗೆ, ಕುಟುಂಬಕ್ಕೆ ಈ ಘಟನೆ ಅಪ್ಪು ಅಗಲಿಕೆಯ ನೋವನ್ನು ಇನ್ನಷ್ಟು ತೀವ್ರಗೊಳಿಸಿದೆ.

    ಇದೇ ವಿಷಯವಾಗಿ ಇಂದು ಮಾಧ್ಯಮದ ಜೊತೆ ಮಾತನಾಡಿದ ರಾಘವೇಂದ್ರ ರಾಜ್‌ಕುಮಾರ್, ''ಅಭಿಮಾನಿಗಳ ಕಾಲು ಮುಗಿಯುತ್ತೇವೆ ಯಾರೂ ಹೀಗೆ ಮಾಡಬೇಡಿ'' ಎಂದು ಮನವಿ ಮಾಡಿದರು.

    ''ನಾವೆಲ್ಲರೂ ನೋವಿನಲ್ಲಿದ್ದೇವೆ ಆ ನೋವನ್ನು ನಾವು ಇನ್ನೊಬ್ಬರಿಗೆ ಕೊಡಬಾರದು. ಪುನೀತ್ ಅಗಲಿಕೆಯಿಂದ ಮನನೊಂದು ಆತ್ಮಹತ್ಯೆ ಮಾಡುತ್ತಿರುವ ಘಟನೆಗಳು ನಡೆಯುತ್ತಿವೆ. ಈ ಸುದ್ದಿ ನಮಗೆ ಬಹಳ ಬೇಸರ ತರಿಸಿದೆ. ಒಬ್ಬರ ಹಿಂದೆ ಒಬ್ಬರು ಹೀಗೆ ಹೋಗುತ್ತಿದ್ದರೆ ಭೂಮಿ ಮೇಲೆ ಯಾರೂ ಇರುವುದಿಲ್ಲ. ನಮ್ಮ ನೋವನ್ನು ನಿಮ್ಮ ತಂದೆ-ತಾಯಿಗೆ ಕೊಡಬೇಡಿ. ಪುನೀತ್ ರಾಜ್‌ಕುಮಾರ್ ಅವರಿಗೆ ಈ ಥರಹದ ಗೌರವ ನೀವು ತೋರಿಸಬಾರದು'' ಎಂದು ರಾಘವೇಂದ್ರ ರಾಜ್‌ಕುಮಾರ್ ಕೇಳಿಕೊಂಡರು.

    ''ಪ್ರೀತಿ ವಿಶ್ವಾಸ, ಬೇರೆಯವರಿಗೆ ಸಹಾಯ ಮಾಡುವ ಗುಣ, ಅವರ ಸಿನಿಮಾಗಳು ಇಂಥಹಾ ಒಳ್ಳೆಯ ಗುಣಗಳನ್ನು ಅವರು ಬಿಟ್ಟು ಹೋಗಿದ್ದಾರೆ. ನಾವು ಅವುಗಳನ್ನು ಅನುಸರಿಸೋಣ. ಕೈ ಮುಗಿದು ಬೇಡಿಕೊಳ್ಳುತ್ತೇವೆ ಇಂಥಹಾ ನಿರ್ಣಯಗಳನ್ನು ತೆಗೆದುಕೊಳ್ಳಬೇಡಿ. ಈ ಸಾವುಗಳಿಗೆ ಪುನೀತ್ ಅವರನ್ನು ಕಾರಣರನ್ನಾಗಿ ಮಾಡಬೇಡಿ'' ಎಂದರು ರಾಘಣ್ಣ.

    ಅಪ್ಪು ಪತ್ನಿ ಬಹಳ ಬೇಸರ ಮಾಡಿಕೊಂಡಿದ್ದಾರೆ: ರಾಘವೇಂದ್ರ ರಾಜ್‌ಕುಮಾರ್

    ಅಪ್ಪು ಪತ್ನಿ ಬಹಳ ಬೇಸರ ಮಾಡಿಕೊಂಡಿದ್ದಾರೆ: ರಾಘವೇಂದ್ರ ರಾಜ್‌ಕುಮಾರ್

    ''ನಮ್ಮ ಕುಟುಂಬ, ಅದು ನಿಮ್ಮದೇ ಕುಟುಂಬ. ಇಷ್ಟು ಜನರ ಸಾವಿಗೆ ಪುನೀತ್ ರಾಜ್‌ಕುಮಾರ್ ಸಾವು ಕಾರಣಾಯ್ತು ಎಂಬ ಕೆಟ್ಟ ಹೆಸರು ನಿಮ್ಮ ಕುಟುಂಬಕ್ಕೆ ಬರಬೇಕಾ? ದಯವಿಟ್ಟು ಹೀಗೆ ಮಾಡಬೇಡಿ, ಈಗಾಗಲೇ ಇರುವ ನೋವನ್ನು ಮತ್ತೆ ಹೆಚ್ಚಿಸಬೇಡಿ. ಸಾವು ಯಾವುದಕ್ಕೂ ಉತ್ತರ ಅಲ್ಲ. ಅಪ್ಪು ಪತ್ನಿ ಬಹಳ ಬೇಸರ ಮಾಡಿಕೊಂಡಿದ್ದಾರೆ, ನನ್ನ ಪತಿ ಇಂಥಹುದ್ದಕ್ಕೆ ಕಾರಣ ಆಗಿಬಿಟ್ಟರಲ್ಲ ಎಂದು ಅವರು ಬೇಸರ ತೋಡಿಕೊಂಡಿದ್ದಾರೆ'' ಎಂದರು ರಾಘವೇಂದ್ರ ರಾಜ್‌ಕುಮಾರ್.

    ನಿಮ್ಮ ಪಾದಗಳಿಗೆ ನಮಸ್ಕಾರ ಹೇಳುವೆ: ರಾಘಣ್ಣ

    ನಿಮ್ಮ ಪಾದಗಳಿಗೆ ನಮಸ್ಕಾರ ಹೇಳುವೆ: ರಾಘಣ್ಣ

    ''ಅಪ್ಪಾಜಿಯವರು ಅಭಿಮಾನಿಗಳನ್ನು ದೇವರು ಎಂದು ಕರೆದಿದ್ದಾರೆ. ದೇವರೇ ಇಂಥಹಾ ಕೆಲಸ ಮಾಡಿದರೆ ಹೇಗೆ. ಅಭಿಮಾನಿಗಳು ದಯವಿಟ್ಟು ನಿಮ್ಮ-ನಿಮ್ಮ ತಂದೆ-ತಾಯಿಯರ ಬಗ್ಗೆ ಯೋಚನೆ ಮಾಡಿ. ಚಿಕ್ಕಮಕ್ಕಳಿಗೆ ಇದು ಮಾದರಿಯಾಗುವುದಿಲ್ಲ. ತಮ್ಮನ ಹೆಂಡತಿ, ಮಕ್ಕಳು ಈಗಾಗಲೇ ನೊಂದುಕೊಂಡಿದ್ದಾರೆ. ಹೀಗೆ ಮಾಡಿದರೆ ಅದು ಅವರಿಗೆ ಇನ್ನಷ್ಟು ನೋವು ನೀಡುತ್ತದೆ. ನಿಮ್ಮ ಪಾದಗಳಿಗೆ ನಮಸ್ಕಾರ ಮಾಡುವೆ ಹೀಗೆ ಮಾಡಬೇಡಿ'' ಎಂದರು.

    ''ಅವರ ಪ್ರೀತಿಯನ್ನು ನಮ್ಮ ಹೃದಯಕ್ಕೆ ಇಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ''

    ''ಅವರ ಪ್ರೀತಿಯನ್ನು ನಮ್ಮ ಹೃದಯಕ್ಕೆ ಇಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ''

    ಎತ್ತಿನ ಬಂಡಿಗಳಲ್ಲಿ, ಕಾಲ್ನಡಿಗೆಯಲ್ಲಿ ಅಭಿಮಾನಿಗಳು ಬರುತ್ತಿದ್ದಾರೆ ಅವರನ್ನು ನೀವು ಭೇಟಿ ಮಾಡುತ್ತಿದ್ದೀರಿ ಎಂಬ ಬಗ್ಗೆ ಪತ್ರಕರ್ತರು ರಾಘಣ್ಣನ ಪ್ರತಿಕ್ರಿಯೆ ಬಯಸಿದಾಗ, ''ಅದು ನಮ್ಮ ಜವಾಬ್ದಾರಿ, ಅಭಿಮಾನಿಗಳನ್ನು ಗೌರವಿಸಿ, ಅವರನ್ನು ಮಾತನಾಡಿಸಬೇಕು, ತಬ್ಬಿಕೊಳ್ಳಬೇಕು ನಮ್ಮ ಪ್ರೀತಿಯನ್ನು ವ್ಯಕ್ತಪಡಿಸಬೇಕು, ಅವರ ಪ್ರೀತಿಗೆ ನಾವು ನಮಸ್ಕಾರ ಹೇಳಬೇಕು, ಅವರ ಪ್ರೀತಿಯನ್ನು ನಮ್ಮ ಹೃದಯದೊಳಕ್ಕೆ ಸೇರಿಸಿಕೊಳ್ಳಬೇಕು, ಆ ಕಾರ್ಯವನ್ನು ನಾವು ಮಾಡುತ್ತಿದ್ದೇವೆ'' ಎಂದು ಅಭಿಮಾನಿಗಳ ಮೇಲೆ ದೊಡ್ಮನೆಗೆ ಇರುವ ಗೌರವವನ್ನು ಮಾತುಗಳಲ್ಲಿ ವ್ಯಕ್ತಪಡಿಸಿದರು ರಾಘಣ್ಣ.

    ಅಪ್ಪುವನ್ನು ನೋಡಲು ಜನ ಬರುತ್ತಲೇ ಇದ್ದಾರೆ: ರಾಘವೇಂದ್ರ ರಾಜ್‌ಕುಮಾರ್

    ಅಪ್ಪುವನ್ನು ನೋಡಲು ಜನ ಬರುತ್ತಲೇ ಇದ್ದಾರೆ: ರಾಘವೇಂದ್ರ ರಾಜ್‌ಕುಮಾರ್

    ''ಅಪ್ಪು ಅವರ ಸ್ಥಳಕ್ಕೆ (ಸಮಾಧಿ) ಜನ ಬರುತ್ತಲೇ ಇದ್ದಾರೆ. ಸಿನಿಮಾ ನೋಡಲು ಬರುವಂತೆ ಅಲ್ಲ, ತಂದೆ-ತಾಯಿ, ಮಕ್ಕಳು, ಮೊಮ್ಮಕ್ಕಳು, ವಯಸ್ಸಾದವರು ಹೀಗೆ ಕುಟುಂಬಗಳೇ ಬಂದು ದರ್ಶನ ಮಾಡುತ್ತಿದ್ದಾರೆ'' ಎಂದ ರಾಘಣ್ಣ, ''ಸುದ್ದಿವಾಹಿನಿಯರೂ ದಯವಿಟ್ಟು ಹೇಳಿ ಅಭಿಮಾನಿಗಳು ಹೀಗೆ ಮಾಡಬಾರದೆಂದು, ಸುಮಾರು 12 ಜನ ಸಾವಿಗೀಡಾಗಿದ್ದಾರೆ ಎಂದು ಸುದ್ದಿ ಬರುತ್ತಿದೆ. ಹೀಗೆ ಆಗಬಾರದು ನೀವು ಎಚ್ಚರ ಹೇಳಿ'' ಎಂದು ಮಾಧ್ಯಮದವರಲ್ಲಿ ಮನವಿ ಮಾಡಿದರು ರಾಘಣ್ಣ.

    English summary
    Raghavendra Rajkumar request fans to be strong. He said I will join my hands to not end your life because of Puneeth Rajkumar. Puneeth himself did not like that.
    Thursday, November 4, 2021, 16:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X