»   » ಅಣ್ಣಾವ್ರ ಜೀವನ ಪುಟದ ಕಹಿ ಸತ್ಯ ಬಿಚ್ಚಿಟ್ಟ ರಾಘಣ್ಣ

ಅಣ್ಣಾವ್ರ ಜೀವನ ಪುಟದ ಕಹಿ ಸತ್ಯ ಬಿಚ್ಚಿಟ್ಟ ರಾಘಣ್ಣ

Posted By:
Subscribe to Filmibeat Kannada

ಕನ್ನಡಿಗರ ಆರಾಧ್ಯಧೈವ, ಕನ್ನಡ ಕಲಾರತ್ನ, ವರನಟ ಡಾ.ರಾಜ್ ಕುಮಾರ್ ಸ್ಮಾರಕ ಇಂದು (ನವೆಂಬರ್ 29) ಲೋಕಾರ್ಪಣೆಯಾಗಿದೆ. ಕನ್ನಡಾಭಿಮಾನಿಗಳಿಗೆ ಇಂದು ಅಕ್ಷರಶಃ ಕನ್ನಡ ಹಬ್ಬ. ಡಾ.ರಾಜ್ ಕುಮಾರ್ ಹೆಸರಲ್ಲೇ ಇಡೀ ಕನ್ನಡ ಚಿತ್ರರಂಗ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದೆ. ಇದೇ ಸಂದರ್ಭದಲ್ಲಿ ರಾಜ್ ಜೀವನ ಪುಟದ ಕಹಿ ಸತ್ಯವೊಂದು ಬೆಳಕಿಗೆ ಬಂದಿದೆ.

ವೀರಪ್ಪನ್ ಅಪಹರಣ ಪ್ರಕರಣದ ನಂತರ ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿದ್ದ ರಾಜ್ ಕುಮಾರ್ ಗೆ ಸಾಯುವ ಮನಸ್ಸಿತ್ತಾ? ರಾಜಣ್ಣ ಯಮಧರ್ಮನನ್ನ ಆಹ್ವಾನಿಸಿದ್ದರಾ? ಮಣ್ಣಲ್ಲಿ ಮಣ್ಣಾಗುವುದಕ್ಕೆ ರಾಜ್ ಹಪಹಪಿಸುತ್ತಿದ್ದರಾ? ಈ ಎಲ್ಲಾ ಪ್ರಶ್ನೆಗಳು ಮೂಡೋಕೆ ಕಾರಣ ಇಂದು ಸ್ಮಾರಕ ಲೋಕಾರ್ಪಣೆ ಸಮಾರಂಭದಲ್ಲಿ ಅಣ್ಣಾವ್ರ ಪುತ್ರ ರಾಘವೇಂದ್ರ ರಾಜ್ ಕುಮಾರ್ ಆಡಿದ ಮಾತುಗಳು. [ಅಣ್ಣಾವ್ರ ಸ್ಮಾರಕ ಅನಾವರಣದ ಅಪೂರ್ವ ಕ್ಷಣಗಳು]


ಅಪ್ಪಾಜಿಯನ್ನು ಕಳೆದುಕೊಂಡ ಆರು ವರ್ಷಗಳಲ್ಲಿ ಸ್ಮಾರಕ ಅನಾವರಣವಾಗುತ್ತಿರುವುದರ ಬಗ್ಗೆ ಭಾವುಕರಾಗಿದ್ದ ರಾಘಣ್ಣ , ಅಪ್ಪಾಜಿಯ ಕೊನೆಯ ದಿನಗಳ ಕಠೋರ ಸತ್ಯವನ್ನು ಬಯಲು ಮಾಡಿದರು.

''ಅಪ್ಪಾಜಿ ಕಾಡಿನಿಂದ ಬಂದಮೇಲೆ ಎಲ್ಲಾ ದೇವಸ್ಥಾನಗಳಿಗೆ ಹೋಗ್ಬೇಕು ಅಂದುಕೊಂಡಿದ್ದರಂತೆ. ಅದರಂತೆ ಎಷ್ಟೋ ದೇವಸ್ಥಾನಗಳಿಗೆ ಹೋಗಿಬಂದ್ರು. ಆದ್ರೆ ಮಂತ್ರಾಲಯಕ್ಕೆ ಮಾತ್ರ ಹೋಗೋಕೆ ಆಗ್ಲಿಲ್ಲ. ಗುರು ರಾಯರ ಫೋಟೋವೊಂದನ್ನ ರಜನಿಕಾಂತ್ ಕಳುಹಿಸಿಕೊಟ್ಟಿದ್ದರು. ಆಗ ರಾಯರೇ ನನ್ನ ನೋಡೋಕೆ ಬಂದಿದ್ದಾರೆ ಅಂತ ಹೇಳುತ್ತಿದ್ದರು. ಆದ್ರೆ ಅಲ್ಲಿಗೆ ಹೋಗೋಕೆ ಆಗ್ತಾನೇ ಇರ್ಲಿಲ್ಲ. ಅಮ್ಮನನ್ನೂ ತುಂಬಾ ಸಲಿ ಕೇಳ್ತಿದ್ರು-'ನನ್ನ ಕರ್ಕೊಂಡು ಹೋಗು ಮಂತ್ರಾಲಯಕ್ಕೆ'', ಅಂತ ಆದ್ರೆ ಅಲ್ಲಿ ಸೆಕ್ಯೂರಿಟಿ ಪ್ರಾಬ್ಲಂ ಆಗುತ್ತೆ ಅಂತ ತಡ ಮಾಡುತ್ತಿದ್ವಿ''.

''ಕೊನೆಯದಾಗಿ ಹೋಗಬಹುದು ಅಂತ ಆದಾಗ ಅವರು ಬರೋಕೆ ಒಪ್ಪಲಿಲ್ಲ. ''ದೇವರು ನನ್ನ ಮೇಲೆ ಕೋಪಿಸಿಕೊಂಡಿದ್ದಾನೆ. ಅವನಿರುವ ಜಾಗಕ್ಕೆ ನನ್ನನ್ನು ಕರೆಯಿಸಿಕೊಳ್ಳುತ್ತಿದ್ದಾನೆ. ಅಲ್ಲೇ ಹೋಗಿ ನೋಡುತ್ತೀನಿ''-ಅಂತ ಅಪ್ಪಾಜಿ ಹೇಳುತ್ತಿದ್ದರು. ಅದಕ್ಕೆ ಅಮ್ಮ-''ಹಾಗೆಲ್ಲಾ ಮಾತನಾಡಬೇಡಿ'' ಅಂದ್ರೆ ಅಪ್ಪ-''ಇದನ್ನೆಲ್ಲಾ ದೇವರೇ ಮಾತನಾಡಿಸುತ್ತಿದ್ದಾನೆ'' ಅಂತ ಹೇಳುತ್ತಿದ್ದರು.'' [ವೇದಿಕೆಯಲ್ಲಿ ಚಿರಂಜೀವಿ 'ಅನುರಾಗ ಅರಳಿದಾಗ']


''ಸ್ವಲ್ಪ ದಿನಗಳ ನಂತ್ರ ಅವರಿಗೆ ಹಾರ್ಟ್ ಪ್ರಾಬ್ಲಂ ಶುರುವಾಯ್ತು. ಆಸ್ಪತ್ರೆಗೆ ಕರ್ಕೊಂಡು ಹೋದಾಗ ವೀಲ್ ಚೇರ್ ಬಿಟ್ಟು ಅವರನ್ನು ನಾವು ಎತ್ತಿಕೊಂಡು ಹೋದ್ವಿ. ಅದ್ರಿಂದ ಅವ್ರಿಗೆ ಅವತ್ತು ತುಂಬಾ ಬೇಜಾರಾಗಿಹೋಯ್ತು. ''ಬಿಡಿ, ನನ್ನ ಯಾಕೆ ಎತ್ತಿಕೊಂಡು ಹೋಗ್ತೀರಾ''-ಅಂತ ಅಪ್ಪ ಬೈದು, ನಡ್ಕೊಂಡು ಹೋದರು. ಆಮೇಲೆ ಒಳಗೆ ಕರೆದು-''ಸಾರಿ ಮಗನೆ, ನನ್ನನ್ನ ನೀವು ಹೊತ್ತುಕೊಂಡು ಬರುವ ಹಾಗೆ ಮಾಡಿಬಿಟ್ಟೆ. ಇನ್ಯಾವತ್ತು ನನ್ನನ್ನ ಹೊತ್ತುಕೊಂಡು ಬರುವ ಹಾಗೆ ಮಾಡಲ್ಲ. ಕೊನೆಯ ದಿನ ಮಾತ್ರ ನೀವು ಹೊತ್ತುಕೊಂಡು ಹೋಗ್ಬೇಕು. ಕ್ಷಮಿಸು ಕಂದ'' ಅಂತ ಅಪ್ಪಾಜಿ ಹೇಳಿದ್ರು.''

''ನಿಮ್ಮ ತಂದೆಗೂ ನೀವು ಅದನ್ನ ಮಾಡಿದ್ದೀರಾ. ನಾವು ಮಾಡಿದರೇ ಏನು ತಪ್ಪು''ಅಂತ ನಾನು ಕೇಳ್ದೆ. ಅದಕ್ಕೆ ಅವರು-''ಇಲ್ಲಾ, ನನಗೆ ತುಂಬಾ ಬೇಜಾರಾಗಿದೆ ಕಂದ'' ಅಂದರು. ಅದಾದ ಎರಡು ತಿಂಗಳು ಅವರೇ ತಮ್ಮೆಲ್ಲಾ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದರು. ಯಾರಿಗೂ ತೊಂದರೆ ಕೊಡುತ್ತಿರಲಿಲ್ಲ. ಯಾರಿಗೂ ನೋವಾಗುವಂತೆ ನಡೆದುಕೊಳ್ಳುತ್ತಿರಲಿಲ್ಲ.'' [ನಟಸಾರ್ವಭೌಮ ರಾಜ್ ಬಗ್ಗೆ ರಜನಿ ಹೀಗಂದಿದ್ಯಾಕೆ?]

''ನಾನು ಹೋಗೋಕೆ ಮುಂಚೆ, ನಿಮ್ಗೆಲ್ಲಾ ಒಳ್ಳೆ ನೆನಪುಗಳನ್ನ ಕೊಟ್ಟು ಹೋಗ್ತೀನಿ. ನಾನು ಆರೋಗ್ಯವಾಗಿರುವುದನ್ನ ನೀವು ನೆನಪಿಸಿಕೊಳ್ಳಬೇಕು. ನಾನು ನರಳುವುದನ್ನು ನೀವು ನೋಡಬಾರದು'' ಅಂತ ಅಪ್ಪಾಜಿ ಖುಷಿಖುಷಿಯಾಗಿ ಹಾಡುಹಾಡುತ್ತಾ ಎರಡು ತಿಂಗಳು ಆರಾಮಾಗಿ ಇದ್ದರು.''

''ಕೊನೆಯ ದಿನ ಕೂಡ ಯೋಗ ಮಾಡಿ, ಸ್ನಾನ ಮಾಡಿ, ಹಾಡು ಹೇಳಿ, ಸಾಯುವುದಕ್ಕೂ ಒಂದು ಗಂಟೆ ಮುಂಚೆ 'ನ್ಯಾಯವೇ ದೇವರು' ಸಿನಿಮಾ ನೋಡುತ್ತಿದ್ದರು. ಅಮ್ಮ ಆಗಷ್ಟೇ ಆಸ್ಪತ್ರೆಯಿಂದ ಬಂದಿದ್ದನ್ನ ನೋಡಿ, ಅವರು ನಡೆದುಕೊಂಡು ಬರುತ್ತಿದ್ದ ಶೈಲಿಯನ್ನು ನೋಡಿ ಆಡಿಕೊಳ್ಳುತ್ತಿದ್ದರು. ಅದಾದ ಮೇಲೆ ಹತ್ತೇ ನಿಮಿಷ. ದೇವರ ಮನೆ ಹತ್ತಿರ ಸದ್ದೇ ಇಲ್ಲದಂತೆ ಕಣ್ಮುಚ್ಚಿ ಬಿಟ್ಟಿದ್ದರು''.

Raj memorial inauguration

''ಅದಕ್ಕೂ ಎರಡು ದಿನಗಳ ಹಿಂದೆಯಷ್ಟೇ, ಅಪ್ಪ-''ಹೋಗೋದು ಹೋಗ್ತಿದ್ದೀನಿ. ಹೋಗುವ ಮುನ್ನ ಕಣ್ಣು ಕೊಟ್ಟು ಹೋಗ್ತೀನಿ.'' ಅಂತ್ಹೇಳಿದ್ರು. ಅವ್ರಿಗೆ ಸಾವಿನ ಮುನ್ಸೂಚನೆ ಇತ್ತು ಅಂತ ಕಾಣುತ್ತೆ. ಸಾಯುವ ಮುನ್ನ ಕಣ್ಣು ದಾನ ಮಾಡಿದರು.'' ಅಂತ ರಾಘವೇಂದ್ರ ರಾಜ್ ಕುಮಾರ್ ಅಣ್ಣಾವ್ರ ಕೊನೆಯ ಕ್ಷಣದ ನೆನಪುಗಳನ್ನ ಇಂದು ಬಿಚ್ಚಿಟ್ಟರು.

ದೇವರ ಮೇಲೆ ಅಪಾರ ಭಕ್ತಿ ಹೊಂದಿದ್ದ ರಾಜ್ ಗೆ ಬಹುಬೇಗ ದೇವರ ಪಾದ ಸೇರಿಕೊಳ್ಳಬೇಕು ಎನ್ನುವ ಅಭಿಲಾಶೆ ಇತ್ತೇನೋ.? ಅದಕ್ಕೆ ದೇವರು ಅಸ್ತು ಅಂದುಬಿಟ್ಟಿದ್ದಾನೆ. ಎಷ್ಟೇ ಆಗ್ಲಿ ಒಳ್ಳೆಯವರನ್ನ ದೇವರು ತನ್ನ ಬಳಿಗೆ ಬಹುಬೇಗ ಕರೆದುಕೊಳ್ಳುತ್ತಾನೆ ಅನ್ನುವ ಮಾತು ಸತ್ಯ ಅಲ್ಲವೇ. (ಫಿಲ್ಮಿಬೀಟ್ ಕನ್ನಡ)

English summary
Karnataka Matinee Idol, Karnataka Ratna Late Dr.Rajkumar memorial inauguration happened today (November 29) in a grandeur manner. Mega Star Chiranjeevi and Super Star Rajnikanth graced the event. After the inauguration Raghavendra Rajkumar, addressing the audience reveals the truth insight of Dr.Raj's mindset before his demise. Here is the detail report on Raghavendra Rajkumar's speech.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada