ರಾಜಮೌಳಿ ನಿರ್ದೇಶನದಲ್ಲಿ ಸೂಪರ್ ಸ್ಟಾರ್ ರಜನಿ
ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರ 150ನೇ ಚಿತ್ರಕ್ಕೆ ಬೇಕಾದರೆ ಚಿತ್ರಕತೆ ಬರೆದುಕೊಡುತ್ತೇನೆ. ಆದರೆ ನಿರ್ದೇಶನದ ಜವಾಬ್ದಾರಿಯನ್ನು ಮಾತ್ರ ನನ್ನಿಂದ ಹೊರಲು ಸಾಧ್ಯವಿಲ್ಲ ಎಂದಿದ್ದರು. ಈಗವರು ರಜನಿಕಾಂತ್ ಅವರು ಒಪ್ಪುವುದಾದರೆ ಅವರ ಚಿತ್ರ ನಿರ್ದೇಶಿಸುತ್ತೇನೆ ಎಂದಿದ್ದಾರೆ.
ರಜನಿಕಾಂತ್ ಸರ್ ನನ್ನ ಬಾಲ್ಯದ ಹೀರೋ. ಅವರ ಅದೆಷ್ಟೋ ಚಿತ್ರಗಳನ್ನು ನೋಡುತ್ತಾ ಬೆಳೆದಿದ್ದೇನೆ. ಅವರ ಚಿತ್ರವನ್ನು ನಿರ್ದೇಶಿಸಬೇಕು ಎನ್ನುವುದು ನನ್ನ ಕನಸು. ಅವರು ಎಸ್ ಎಂದರೆ ಈಗಲೇ ಅವರಿಗೆ ಹೊಂದಾಣಿಕೆಯಾಗುವ ಚಿತ್ರಕತೆಯಲ್ಲಿ ತಲ್ಲೀನನಾಗುತ್ತೇನೆ. ರಜನಿಕಾಂತ್ ಅವರ ಒಂದೇ ಒಂದು ಕರೆಗಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ ರಾಜಮೌಳಿ.
ರಾಜಮೌಳಿ ನಿರ್ದೇಶನದ ಈಗ ತಮಿಳು ಆವೃತ್ತಿ 'ನಾನ್ ಈ' ಚಿತ್ರವನ್ನು ನೋಡಿ ರಜನಿ ಸಿಕ್ಕಾಪಟ್ಟೆ ಹೊಗಳಿದ್ದಾರೆ. ರಾಜಮೌಳಿ ನಿರ್ದೇಶನಕ್ಕೆ ಶಹಬ್ಬಾಸ್ ಗಿರಿಯನ್ನೂ ಕೊಟ್ಟಿದ್ದಾರೆ. ಈ ಹಿಂದೆ 'ಮಗಧೀರ' ಚಿತ್ರದ ನೋಡಿದ ರಜನಿ ಕೂಡಲೆ ಫೋನಾಯಿಸಿ ಸೂಪರ್ ಕಣಯ್ಯ ಎಂದಿದ್ದರಂತೆ.
ಇದುವರೆಗೂ ರಾಜಮೌಳಿ ನಿರ್ದೇಶಿಸಿದ್ದು ಹತ್ತು ಚಿತ್ರಗಳು. ಎಲ್ಲವೂ ಬಾಕ್ಸಾಫೀಸಲ್ಲಿ ಸದ್ದು ಮಾಡಿದ ಚಿತ್ರಗಳೇ. ಒಂದಕ್ಕಿಂತಲೂ ಒಂದು ಭಿನ್ನವಾದ ಚಿತ್ರಗಳು. ಇನ್ನು ರಜನಿಕಾಂತ್ ಹಾಗೂ ರಾಜಮೌಳಿ ಕಾಂಬಿನೇಷನ್ ಎಂದರೆ ಊಹಿಸುವುದೂ ಅಸಾಧ್ಯ. (ಏಜೆನ್ಸೀಸ್)


Click it and Unblock the Notifications












