For Quick Alerts
  ALLOW NOTIFICATIONS  
  For Daily Alerts

  ಅಮೆರಿಕಾಗೆ ಜೊತೆಜೊತೆಯಲಿ ರಮ್ಯಾ, ಐಂದ್ರಿತಾ

  By Rajendra
  |

  ಕನ್ನಡ ಚಿತ್ರರಂಗದ ಇಬ್ಬರು ತಾರೆಗಳ ನಡುವಿನ ಶೀತಲಸಮರಕ್ಕೆ ತೆರೆಬಿದ್ದಿದೆ. ಎದುರಾಬದುರಾದರೆ ಹಾವು ಮುಂಗಿಸಿಯಂತೆ ಆಡುತ್ತಿದ್ದ ಎರಡು ಜಡೆಗಳ ನಡುವಿನ ವೈಯಕ್ತಿಕ ರಾಗದ್ವೇಷಗಳು ಪಂಚಭೂತಗಳಲ್ಲಿ ಲೀನವಾಗಿವೆ. ವಿಷಯ ಏನಪ್ಪಾ ಎಂದರೆ ಸದ್ಯದಲ್ಲೇ, ಒಂದೇ ವೇದಿಕೆಯಲ್ಲಿ ಎರಡೂ ಜಂಭದ ಕೋಳಿಗಳು ಮೈ ಕೈ ಕುಣಿಸಲಿದ್ದಾರೆ.

  ಅದು 2010ರ ಸಮಯ. ನ್ಯೂಜೆರ್ಸಿಯ ಅಕ್ಕ ಸಮ್ಮೇಳನದಲ್ಲಿ ಐಂದ್ರಿತಾ ರೇ ಇದ್ದ ಕಡೆ ಮುಖ ತಿರುಗಿಸಿಯೂ ನೋಡದೆ ಗೋಲ್ಡನ್ ಗರ್ಲ್ ರಮ್ಯಾ ರಂಪಾಟ ಮಾಡಿದ್ದರು. ಸಮ್ಮೇಳನದ ಸಾಂಸ್ಕೃತಿಕ ಸಮಿತಿಯವರು ರಮ್ಯಾ ಮನವೊಲಿಸಲು ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾಗಿ ಅಂತಿಮವಾಗಿ ರಮ್ಯಾ ನ್ಯೂಯಾರ್ಕ್‌ಗೆ ಹಾರಿದ್ದರು. ಇತ್ತ ಐಂದ್ರಿತಾ ರೇ "ಹಳೇಕಬ್ಬಿಣ ಹಳೇಪೇಪರ್..." ಹಾಡಿಗೆ ಸೊಂಟ ಬಳುಕಿಸಿದ್ದರು.

  ಈ ರಂಪಾಟಕ್ಕೆ ಮಂಗಳ ಹಾಡಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮುಂದಾದರಾದರೂ ಪ್ರಯೋಜನವಾಗಿರಲಿಲ್ಲ. "ನಿಮ್ಮ ತಗಾದೆಗಳನ್ನು ಬೆಂಗಳೂರಿನಲ್ಲಿ ಪರಿಹರಿಸಿಕೊಳ್ಳಿ. ಅಮೆರಿಕಾ ಕನ್ನಡ ಸಮ್ಮೇಳನದಲ್ಲಿ ಬೇಡ ಎಂದು ಎಷ್ಟು ಹೇಳಿದರೂ ಪ್ರಯೋಜನವಾಗಿರಲಿಲ್ಲ". ಇದೆಲ್ಲಾ ಹಳೆಯ ಕಥೆ.

  ಈಗ 2012ರ ಅಕ್ಕ ಸಮ್ಮೇಳನ ಅಮೆರಿಕದ ಅಟ್ಲಾಂಟಾದಲ್ಲಿ ನಡೆಯಲಿದೆ. ಆಗಸ್ಟ್ 31ರಿಂದ ಸೆಪ್ಟೆಂಬರ್ 2ರವರೆಗೆ ಮೂರು ದಿನಗಳ ಕಾಲ 7ನೇ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನಕ್ಕೆ ಭರ್ಜರಿ ಸಿದ್ಧತೆಗಳು ಭರದಿಂದ ಸಾಗಿವೆ. ಈ ಬಾರಿಯ ಸಮ್ಮೇಳನಕ್ಕೆ ರಮ್ಯಾ ಹಾಗೂ ಐಂದ್ರಿತಾ ರೇ ಇಬ್ಬರನ್ನೂ ಆಹ್ವಾನಿಸಲಾಗಿದೆ.

  ಆದರೆ ಇಬ್ಬರ ನಡುವಿನ ಹಳೆಯ ರಾಗದ್ವೇಷಗಳು ಈಗ ಚದುರಿದ ಮೋಡಗಳಂತಾಗಿವೆ. ಇಬ್ಬರ ನಡುವೆ ಹಸಿಹಸಿ ಹುಲ್ಲು ಹಾಕಿದರೂ ಧಗ್ಗನೆ ಉರಿಯುವಷ್ಟು ತಾಪಮಾನ ಇತ್ತು. ಆದರೆ ಈಗ ಇವರಿಬ್ಬರ ನಡುವೆ ಒಣ ಹುಲ್ಲು ಹಾಕಿದರೂ ಚಿಗುರೊಡೆಯುವಷ್ಟು ಸ್ನೇಹ ಬಾಂಧವ್ಯವಿದೆ.

  ಕಳೆದ ಎರಡು ವರ್ಷಗಳಲ್ಲಿ ಕಾವೇರಿ ಹಾಗೂ ಡೆಲೆವರ್ ನದಿಯಲ್ಲಿ ಸಾಕಷ್ಟು ನೀರೂ ಹರಿದಿದೆ. ರಮ್ಯಾ ಮತ್ತು ಐಂದ್ರಿತಾ ನಡುವಿನ ಕೋಪತಾಪಗಳು ತಣ್ಣಗಾಗಿವೆ. ಈ ಹಳೆಯ ರಾಗದ್ವೇಷಗಳನ್ನು ಮರೆತು ಇಬ್ಬರೂ ಒಂದೇ ವೇದಿಕೆಯಲ್ಲಿ ಮನಸಾರೆ ರಂಜಿಸಲಿದ್ದಾರೆ.

  2009ರ ಮಾರ್ಚ್‌ನಲ್ಲಿ ಕನ್ನಡ ಚಿತ್ರರಂಗದ 'ಅಮೃತ ಮಹೋತ್ಸವ'ದಲ್ಲೂ ಇಬ್ಬರೂ ಒಂದಾಗಿಯೇ ಇದ್ದು ಪಕ್ಕಪಕ್ಕದಲೇ ಆಸೀನರಾಗಿದ್ದರು. ಆದರೆ ನಾಗತಿಹಳ್ಳಿ ಮೇಷ್ಟ್ರು ಮೇಲೆ ಐಂದ್ರಿತಾ ಯಾವಾಗ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೋ, ಅಂದೇ ರಮ್ಯಾ ಐಂದ್ರಿತಾರಿಂದ ಬಹುದೂರವಾಗಿದ್ದರು. ನಂತರ ಮುಸುಕಿನ ಗುದ್ದಾಟ ನಡೆದೇ ಇತ್ತು. ಆದರೀಗ ಇಬ್ಬರೂ ಮತ್ತೆ ಒಂದಾಗಿ ಮೊದಲಿನಂತೆ ಪರಮಾಪ್ತರಾಗಿದ್ದಾರೆ.

  ಈ ಬಾರಿಯ ಅಕ್ಕ ಸಮ್ಮೇಳನಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಮನಸಾರೆಯ ರೋಮ್ಯಾಂಟಿಕ್ ಜೋಡಿಯಾದ ದೂಧ್ ಪೇಡ ದಿಗಂತ್, ಐಂದ್ರಿತಾ ರೇ, ಲೂಸ್ ಮಾದ ಯೋಗೇಶ್, ಯುವ ನಟ ಯಶ್, ಪ್ರತಿಭಾವಂತ ನಟಿಯರಾದ ರಾಧಿಕಾ ಪಂಡಿತ್, ನಿಧಿ ಸುಬ್ಬಯ್ಯ, ಪ್ರಿಯಾಮಣಿ, ಹಾಸ್ಯ ನಟರಾದ ರಂಗಾಯಣ ರಘು, ಸಾಧು ಕೋಕಿಲಾ, ಸಂಗೀತ ನಿರ್ದೇಶಕರಾದ ಗುರು ಕಿರಣ್, ವಿ ಹರಿಕೃಷ್ಣ, ನೃತ್ಯ ಸಂಯೋಜಕ ಇಮ್ರಾನ್ ಮುಂತಾದವರು ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಬಾನ್ ವಾಯೇಜ್ ಇನ್ ಅಡ್ವಾನ್ಸ್. (ಒನ್ ಇಂಡಿಯಾ ಕನ್ನಡ)

  English summary
  It seems that the fight between Golden Girl Ramya and Aindrita Ray ends finally. Both stars are particiapting in 7th AKKA World Kannada Conference, Atlanta, USA. Nrupatunga Kannada Koota is hosting WKC-7 from August 31 to September 2, 2012.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X