»   » ಹ್ಯಾಟ್ರಿಕ್ ಹೀರೋ ಶಿವಣ್ಣ ಜೊತೆ ಗೋಲ್ಡನ್ ಗರ್ಲ್ ರಮ್ಯಾ

ಹ್ಯಾಟ್ರಿಕ್ ಹೀರೋ ಶಿವಣ್ಣ ಜೊತೆ ಗೋಲ್ಡನ್ ಗರ್ಲ್ ರಮ್ಯಾ

Posted By:
Subscribe to Filmibeat Kannada

ರಮ್ಯಾ ಮತ್ತೆ ಸುದ್ದಿಯಾಗುತ್ತಿದ್ದಾರೆ. ಇತ್ತೀಚಿಗಷ್ಟೇ 'ನೀರ್ ದೋಸೆ' ಚಿತ್ರದಲ್ಲಿ ಜಗ್ಗೇಶ್ ಜೋಡಿಯಾಗಿ ನಟಿಸುವ ಸುದ್ದಿಯನ್ನು ಪಕ್ಕಾ ಮಾಡಿರುವ ರಮ್ಯಾ ಮತ್ತೊಂದು ಸುದ್ದಿಯನ್ನು ಮಾಧ್ಯಮಕ್ಕೆ ನೀಡಿದ್ದಾರೆ. ಅದು, ರಮ್ಯಾ ಸದ್ಯದಲ್ಲೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರೊಂದಿಗೆ ನಟಿಸಲಿರುವ ಸುದ್ದಿ. ಹೌದು, ಸ್ವತಃ ರಮ್ಯಾ ಈ ಮಾಹಿತಿಯನ್ನು ನೀಡಿದ್ದು ಶಿವರಾಜ್ ಕುಮಾರ್ ಜೊತೆ ತಾವು ನಟಿಸಲಿರುವುದಾಗಿ ಹೇಳಿದ್ದಾರೆ.

ಈ ಸಂಬಂಧ ಹೇಳಿಕೆ ನೀಡಿರುವ ರಮ್ಯಾ,"ಇಷ್ಟು ದಿನ ನಾನು ಹೋದಲ್ಲೆಲ್ಲಾ ಅಭಿಮಾನಿಗಳು ನೀವು ಶಿವರಾಜ್ ಕುಮಾರ್ ಅವರೊಂದಿಗೆ ನಟಿಸುವುದು ಯಾವಾಗ ಎಂದು ಕೇಳುತ್ತಿದ್ದರು. ಆದರೆ ನಾನು ಉತ್ತರಿಸಲಾಗದೇ ಮುಗುಳ್ನಗೆಗೆ ಮೊರೆಹೋಗುತ್ತಿದ್ದೆ. ಆದರೆ ಈಗ ಒಳ್ಳೆಯ ಸ್ಕ್ರಿಪ್ಟ್ ಸಿಕ್ಕಿದೆ. ನಿರ್ಮಾಪಕರಾದ ಎನ್ ಕುಮಾರ್ ಹೊಸ ಕಥೆ ಹೇಳಿದ್ದಾರೆ. ಅದು ನನಗೆ ಇಷ್ಟವಾಗಿದೆ. ಅದರಲ್ಲಿ ನಾನು ಶಿವರಾಜ್ ಕುಮಾರ್ ಅವರೊಂದಿಗೆ ಅಭಿನಯಿಸಲಿದ್ದೇನೆ" ಎಂದಿದ್ದಾರೆ.

ರಮ್ಯಾ ಬಾಯಿಂದ ಬಂದ ಈ ಮಾತನ್ನು ಕೇಳಿ ಶಿವರಾಜ್ ಕುಮಾರ್ ಹಾಗೂ ರಮ್ಯಾಗಿರುವ ಅಸಂಖ್ಯಾತ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಇಬ್ಬರನ್ನೂ ಇಷ್ಟಪಡುವ ಅದೆಷ್ಟೋ ಮಂದಿಗೆ ಇವರಿಬ್ಬರನ್ನು ತೆರೆಯಲ್ಲಿ ಜೋಡಿಯಾಗಿ ನೋಡಬೇಕೆಂಬ ಮಹಾ ಅಭಿಲಾಷೆಯಿತ್ತು. ಅದೀಗ ಈಡೇರುವ ಕಾಲ ಸನ್ನಿಹಿತವಾಗಿದೆ. ಸ್ವತಃ ರಮ್ಯಾ ಶಿವಣ್ಣರೊಂದಿಗೆ ನಟಿಸುವ ಅವಕಾಶದಿಂದ ಥ್ರಿಲ್ ಆಗಿದ್ದಾರೆ.

ಸದ್ಯಕ್ಕೆ ಪ್ರಜ್ವಲ್ ದೇವರಾಜ್ ಅಭಿನಯದ 'ದಿಲ್ ಕಾ ರಾಜಾ' ಚಿತ್ರದ ಅಂತಿಮ ಹಂತದ ಚಿತ್ರೀಕರಣದಲ್ಲಿ ಬಿಜಿಯಾಗಿರುವ ರಮ್ಯಾ, ಆ ಚಿತ್ರದ ಶೂಟಿಂಗ್ ಮುಗಿಸಿದ ನಂತರ ರಜೆಯ ಪ್ರವಾಸ ಮೇಲೆ ಹೋಗಲಿದ್ದಾರಂತೆ. ನಂತರ ಜನವರಿ 14, 2013 ಕ್ಕೆ ಪ್ರಾರಂಭವಾಗಲಿರುವ 'ಸಿದ್ಲಿಂಗು' ಖ್ಯಾತಿಯ ವಿಜಯಪ್ರಸಾದ್ ನಿರ್ದೇಶನದ 'ನೀರ್ ದೋಸೆ' ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ.

ಶಿವರಾಜ್ ಕುಮಾರ್ ಜೊತೆ ರಮ್ಯಾ ಅಭಿನಯದ ಚಿತ್ರದ ಮಹೂರ್ತ ಹಾಗೂ ಚಿತ್ರೀಕರಣ ಯಾವಾಗ ಪ್ರಾರಂಭ ಎನ್ನುವ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ಎನ್ ಕುಮಾರ್ ನಿರ್ಮಾಣದ ಈ ಚಿತ್ರದ ನಿರ್ದೇಶಕರು ಯಾರು ಎಂಬುದು ಇನ್ನೂ ಗುಟ್ಟಾಗಿಯೇ ಉಳಿದಿದೆ. ಒಟ್ಟಿನಲ್ಲಿ ಶಿವಣ್ಣರ ಜೊತೆ ಕನ್ನಡದ ಇನ್ನೊಬ್ಬ ಪ್ರತಿಭಾವಂತ ನಟಿ ರಾಧಿಕಾ ಪಂಡಿತ್ 'ಕಡ್ಡಿಪುಡಿ'ಯಲ್ಲಿ ನಟಿಸುತ್ತಿರುವ ಬೆನ್ನಲ್ಲೇ, ರಮ್ಯಾ ಕೂಡ ನಟಿಸುವುದು ಪಕ್ಕಾ ಆಗಿದೆ. (ಒನ್ ಇಂಡಿಯಾ ಕನ್ನಡ)

English summary
Golden Girl Ramya acts with Shivarajkumar lead movie, which is going to be produce by N Kumar. Ramya confirmed this news and told that finally she got the good script to act with Shivarajkumar. 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada