»   » ಜಿಪುಣ ನನ್ನ ಗಂಡ 100 ದಿನ ಓಡಿದರೂ ನಾಯಕಿ ರವಳಿಯನ್ನು ಕೇಳೋರಿಲ್ಲ. ಬಾಲಿವುಡ್‌ನ ಬಿಳಿ ತೊಗಲಿನ ಬೊಂಬೆಗಳ ಆಮದಿನ ಬಗೆಗೆ ರವಳಿಗೆ ಕೋಪ! ಆಕೆ ಹೇಳುತ್ತಾರೆ...

ಜಿಪುಣ ನನ್ನ ಗಂಡ 100 ದಿನ ಓಡಿದರೂ ನಾಯಕಿ ರವಳಿಯನ್ನು ಕೇಳೋರಿಲ್ಲ. ಬಾಲಿವುಡ್‌ನ ಬಿಳಿ ತೊಗಲಿನ ಬೊಂಬೆಗಳ ಆಮದಿನ ಬಗೆಗೆ ರವಳಿಗೆ ಕೋಪ! ಆಕೆ ಹೇಳುತ್ತಾರೆ...

Subscribe to Filmibeat Kannada

*ಸೌಮಿತ್‌

‘ಜಿಪುಣ ನನ್ನ ಗಂಡ’ ನೂರು ದಿನ ಓಡಿದ್ದರೂ, ರವಳಿ ಎಂಬ ದಕ್ಷಿಣ ಭಾರತದ ನಟಿಯನ್ನು ಸ್ಯಾಂಡಲ್‌ವುಡ್‌ನಲ್ಲಷ್ಟೇ ಅಲ್ಲ, ಟಾಲಿವುಡ್‌ನಲ್ಲೂ ಕೇಳೋರಿಲ್ಲ. ದಕ್ಷಿಣ ಭಾರತದ ಬಹು ಭಾಷಾ ಚಿತ್ರಗಳಲ್ಲಿ ರಂಭಾ ತಳವೂರುತ್ತಿದ್ದ ಕಾಲದಲ್ಲಿ ಆಕೆಗೆ ಪೋಟಿ ಎಂಬಂತೆ ಬೆಳೆದ ರವಳಿ, ರಂಭಾ ಅವರನ್ನು ಕೊಂಚ ಹೋಲುತ್ತಾರೆ.

ಮುಖಭಾವ ಹಾಗೂ ದೇಹ ರಚನೆಯಲ್ಲೂ ರಂಭಾಗೆ ಪೋಟಿ ಎಂಬಂತೆಯೇ ಬೆಳೆದ ರವಳಿ, ನಂತರದ ದಿನಗಳ ದೇಹ ಬೆಳವಣಿಗೆಯಲ್ಲಿ ರಂಭಾಳನ್ನು ಹಿಂದೂಡಿದರು. ಪರಿಣಾಮವಾಗಿ ರವಳಿ ಚಿತ್ರರಂಗದಲ್ಲಿ ಹಿಂದಾದರು. ಅವಕಾಶಗಳ ನಿರೀಕ್ಷೆಯಲ್ಲಿರುವ ರವಳಿಗೆ ಉತ್ತರ ಭಾರತದ ನಾಯಕಿಯರನ್ನು ಇಲ್ಲಿಗೆ ಕರೆ ತರುತ್ತಿರುವ ಧೋರಣೆಯ ಬಗೆಗೆ ಕಟ್ಟಾ ವಿರೋಧ. ಈ ಹಿನ್ನೆಲೆಯಲ್ಲಿ ಅವರೊಡನೆ ನಡೆಸಿದ ಮಾತುಕತೆ ಹೀಗಿದೆ...

ಕನ್ನಡ ಸೇರಿದಂತೆ ದಕ್ಷಿಣ ಭಾರತದ ಚಿತ್ರಗಳಲ್ಲಿ ಬಾಲಿವುಡ್‌ ಹುಡುಗಿಯರು ನಟಿಸೋದನ್ನು ನೀವು ವಿರೋಧಿಸುತ್ತಿದ್ದೀರಿ. ಯಾಕೆ?
ನಮ್ಮ ನಿರ್ಮಾಪಕರು, ನಿರ್ದೇಶಕರು, ಅಷ್ಟೇ ಅಲ್ಲದೆ ಕೆಲವು ನಾಯಕರು ಈ ಬಿಳಿ ತೊಗಲು ಬೊಂಬೆಗಳನ್ನು ಅದೇಕೆ ಮೆಚ್ಚುತ್ತಿದ್ದಾರೋ ನನಗೆ ಅರ್ಥವಾಗುತ್ತಿಲ್ಲ. ನಮ್ಮಲ್ಲಿ ಚೆಂದದ ಹುಡುಗಿಯರಿದ್ದಾರೆ. ನಟನಾ ಪ್ರತಿಭೆಯೂ ಅವರಲ್ಲಿ ಇಲ್ಲದೇ ಇಲ್ಲ. ಇಂಥಾದರಲ್ಲಿ ನಾಯಕಿಯರನ್ನು ಯಾಕೆ ಆಮದು ಮಾಡಿಕೊಳ್ಳಬೇಕು? ದಕ್ಷಿಣ ಭಾರತದ ಸಂಸ್ಕೃತಿಯ ಗಂಧ- ಗಾಳಿ ಇಲ್ಲದ ಈ ಬಿಳಿ ತೊಗಲು ಬೊಂಬೆಗಳಿಂದ ಸಹಜ ನಟನೆ ಸಾಧ್ಯವೇ?

ನಿಮ್ಮ ಮಾತೃಭಾಷೆ ತೆಲುಗು. ನಾಗಾರ್ಜುನ, ಬಾಲಕೃಷ್ಣ , ಶ್ರೀಕಾಂತ್‌, ವೆಂಕಟೇಶ್‌ ಮೊದಲಾದ ಗೆಲುವಿನ ಕುದುರೆಗಳ ಜೊತೆ ಕುಣಿದ ನಿಮಗೆ ಟಾಲಿವುಡ್‌ ಬೇಡವಾಯಿತೆ ಅಥವಾ ದೂರ ತಳ್ಳಿತೆ?
ಥ್ಯಾಂಕ್ಸ್‌ ಫಾರ್‌ ಮೈ ಫೇಟ್‌! ಟಾಲಿವುಡ್‌ ಅಲ್ಲದಿದ್ದರೂ ಕನ್ನಡ, ತಮಿಳು, ಮಲಯಾಳಂನಲ್ಲಿ ಕೆಲವರಿಗಾದರೂ ನಾನು ಬೇಕಾಗಿದ್ದೇನೆ. ತೆಲುಗಿನಲ್ಲಿ ಒಂದರ ಹಿಂದೆ ಒಂದರಂತೆ ಅಷ್ಟೆಲ್ಲಾ ಹಿಟ್‌ ಸಿನಿಮಾ ಕೊಟ್ಟೆ. ಎಲ್ಲದಕ್ಕೂ ಸೈ ಅಂದೆ. ಆದರೂ ಈಗ ನಾನು ಟಾಲಿವುಡ್‌ನವರಿಗೆ ಬೇಡ. ನನ್ನ ಮಾತೃಭಾಷೆಯಲ್ಲಿ ಪಾತ್ರ ಸಿಗದಿರುವುದಕ್ಕೆ ಸಿಕ್ಕಾಪಟ್ಟೆ ಬೇಜಾರಿದೆ. ಈ ಮುಂಬಯಿಯ ಅಲಂಕಾರದ ಬೊಂಬೆಗಳಲ್ಲಿ ನನ್ನಲ್ಲಿ ಇಲ್ಲದ್ದು ಅದೇನಿದೆಯೋ ದೇವರೇ ಬಲ್ಲ !

ತೆಲುಗು ಅಲ್ಲದಿದ್ದರೇನು, ಬೇರೆ ಭಾಷೆಗಳಲ್ಲಿ ಅವಕಾಶ ಸಿಗುತ್ತಿದೆಯಲ್ಲ ?
ಅವಕಾಶವೇನೋ ಸಿಗುತ್ತಿದೆ. ಆದರೆ, ನನ್ನದಲ್ಲದ ಭಾಷೆಯ ಸಿನಿಮಾ ಮಂದಿ ದೃಷ್ಟಿಯಲ್ಲಿ ನಾನು ಸೆಕೆಂಟ್‌ ಆಪ್ಷನ್‌. ತಮ್ಮ ಭಾಷೆಯಲ್ಲೇ ನಾಯಕಿ ಸಿಗದಿದ್ದಾಗ ಅವರು ನನಗೆ ಬುಲಾವು ಕೊಡುತ್ತಾರೆ. ನಾನೇ ಮೊದಲ ಆಯ್ಕೆ ಆಗಿರುವುದಿಲ್ಲ. ಬಾಲಿವುಡ್‌ನಲ್ಲಿ ದಕ್ಷಿಣ ಭಾರತದ ನಟಿಯರನ್ನ ಹೇಗೆ ಟ್ರೀಟ್‌ ಮಾಡ್ತಾರೆ ಗೊತ್ತೆ ? ರಮ್ಯ ಕೃಷ್ಣ ಅವರನ್ನ ಕೇಳಿ, ಹೇಳ್ತಾರೆ. ಆದರೆ, ನಮ್ಮ ಸಿನಿಮಾ ಮಂದಿ ಆಮದು ಬಿಂಬೋಗಳನ್ನು ವಿವಿಐಪಿಗಳ ಥರಾ ನೋಡಿಕೊಳ್ಳುತ್ತಾರೆ. ಅದೇ ನಮ್ಮ ದೌರ್ಬಲ್ಯ.

ದಕ್ಷಿಣ ಭಾರತದ ಪ್ರೇಕ್ಷಕರು ಹೊಸ ಮುಖಗಳನ್ನು ಬಯಸುತ್ತಾರೆ ಅನಿಸೋದಿಲ್ಲವೇ?
ನಾನ್‌ ಸೆನ್ಸ್‌. ನಾಯಕಿಯರಾದರೆ ಹೊಸ ಮುಖಗಳು ಬೇಕು; ನಾಯಕರಾದರೆ ಯಾವತ್ತಿಗೂ ಫ್ರೆಷ್ಷು ಅಂತೀರಾ? ಐವತ್ತು ದಾಟಿದರೂ ನಾಯಕ ನಾಯಕನಾಗೇ ಉಳಿಯುತ್ತಾನೆ. ತನ್ನ ಮೊಮ್ಮಗಳ ವಯಸ್ಸಿಗೆ ಸರಿ ಸಮಾನಳಾದ ನಾಯಕಿ ಜೊತೆ ಕುಣಿಯುತ್ತಾನೆ. ಅದೇ ನಾಯಕಿ, ಐದಾರು ಚಿತ್ರಗಳ ನಂತರ ಬೇಡವಾಗುತ್ತಾಳೆ. ಇದರಲ್ಲಿ ಏನಾದರೂ ತರ್ಕ ಇದೆಯಾ?

ಸರಿ, ಹಾಗಾದರೆ ಬಾಲಿವುಡ್‌ ನಟಿಯರಿಗೆ ಚಾಪೆ ಹಾಸುತ್ತಿರುವುದು ಯಾಕೆ?
ಇದರ ಬಗ್ಗೆ ಭಾಷಣ ಮಾಡೊದಕ್ಕೆ ನನಗಿಷ್ಟವಿಲ್ಲ.

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada